ಆಂಜನೇಯನ ಜನ್ಮ ಸ್ಥಳ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹಾಗೂ ಆಂಧ್ರ ಪ್ರದೇಶದ ನಡುವೆ ವಾಗ್ಯುದ್ಧಗಳೇ ನಡೆಯುತ್ತಿವೆ. ಇದೀಗ ಅನೇಕ ನಾಯಕರು ಕೊಪ್ಪಳದ ಅಂಜನಾದ್ರಿಯೇ ಆಂಜನೇಯನ ಜನ್ಮ ಸ್ಥಳವೆಂದು ದಾಖಲೆ ಬಿಡುಗಡೆಗೆ ಸಜ್ಜಾಗಿದ್ದಾರೆ.
ಕೊಪ್ಪಳ (ಏ.22): ಆಂಜನೇಯ ಜನಿಸಿದ್ದು ತಿರುಮಲದ ಅಂಜನಾದ್ರಿ ಬೆಟ್ಟದಲ್ಲಿ ಎಂದು ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್(ಟಿಟಿಡಿ)ನ ವಾದಕ್ಕೆ ಕೊಪ್ಪಳದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಹನುಮನ ಜನ್ಮಸ್ಥಾನ ಕೊಪ್ಪಳ ಜಿಲ್ಲೆಯ ಗಂಗಾವತಿ ಸಮೀಪದ ಅಂಜನಾದ್ರಿ ಬೆಟ್ಟಎಂಬುದನ್ನು ಪುಷ್ಟೀಕರಿಸುವ ದಾಖಲೆಗಳನ್ನು ಶೀಘ್ರ ಬಿಡುಗಡೆ ಮಾಡಲು ಸ್ಥಳೀಯ ಇತಿಹಾಸಕಾರರು, ಜನಪ್ರತಿನಿಧಿಗಳು ನಿರ್ಧರಿಸಿದ್ದಾರೆ.
ಈ ಸಂಬಂಧ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ಬಿಜೆಪಿ ಮುಖಂಡ ಸಂತೋಷ ಕೆಲೋಜಿ ಹಾಗೂ ಇತಿಹಾಸಕಾರ ಡಾ. ಶರಣಬಸಪ್ಪ ಕೋಲ್ಕಾರ ಅವರು ಗುರುವಾರ ಗಂಗಾವತಿಯಲ್ಲಿ ಸುದ್ದಿಗೋಷ್ಠಿಯನ್ನೂ ನಡೆಸಲಿದ್ದು, ವಿವರಣೆ ನೀಡಲಿದ್ದಾರೆ. ಈಗಾಗಲೇ ಆನೆಗೊಂದಿ ಸಮೀಪದ ಅಂಜನಾದ್ರಿ ಬೆಟ್ಟವೇ ಹನುಮ ಜನಿಸಿದ ಸ್ಥಳ ಎನ್ನುವ ಕುರಿತು ಅಗತ್ಯ ದಾಖಲೆ ಸಂಗ್ರಹಕ್ಕೆ ಮುಂದಾಗಿದ್ದು, ಶೀಘ್ರ ನಾಡಿನ ಪಂಡಿತರೊಂದಿಗೆ ಚರ್ಚಿಸಿ, ಅವುಗಳ ಬಿಡುಗಡೆಗೂ ನಿರ್ಧರಿಸಿದ್ದಾರೆ.
undefined
ಟಿಟಿಡಿಯವರು ಕೇವಲ ಪುರಾಣಗಳ ಉಲ್ಲೇಖ ಮಾಡುತ್ತಾರೆಯೇ ಹೊರತು ಭೌಗೋಳಿಕ ಹಿನ್ನೆಲೆಯ ಮಾತೇ ಆಡಿಲ್ಲ. ಕೇವಲ ಹೇಳಿಕೆಗಳನ್ನು ಒಪ್ಪಿಕೊಳ್ಳಲಾಗದು. ವೆಂಕಟಾಚಲ ಬೆಟ್ಟಕ್ಕೆ 16 ಹೆಸರುಗಳಿದ್ದವು. ಅದರಲ್ಲಿ ಅಂಜನಾದ್ರಿ ಬೆಟ್ಟಎಂಬುದೂ ಒಂದು. ಹೀಗಾಗಿ, ಹನುಮ ಜನಿಸಿದ ನಾಡು ವೆಂಕಟಾಚಲ ಬೆಟ್ಟಎನ್ನುವ ವಾದ ಹುರುಳಿಲ್ಲದ್ದು. ಅವರೇ ಹಂಪಿಯ ಪ್ರದೇಶವನ್ನೇ ಕಿಷ್ಕಿಂದಾ ಎಂದು ಒಪ್ಪಿಕೊಂಡಿದ್ದಾರೆ. ಕಿಷ್ಕಿಂದೆ ಇಲ್ಲದ ಅಂಜನಾದ್ರಿಯನ್ನು ಉಹಿಸಿಕೊಳ್ಳಲೂ ಸಾಧ್ಯವಿಲ್ಲ. ಕಿಷ್ಕಿಂದೆಯಲ್ಲಿರುವುದೇ ಅಂಜನಾದ್ರಿ. ಹೀಗಾಗಿ, ಹನುಮ ಜನಿಸಿದ ನಾಡು ಆನೆಗೊಂದಿಯ ಅಂಜನಾದ್ರಿ ಎನ್ನುತ್ತಾರೆ ಇತಿಹಾಸ ಸಂಶೋಧಕರಾದ ಡಾ. ಶರಣಬಸಪ್ಪ ಕೋಲ್ಕಾರ.
ತಿರುಮಲವೇ ಆಂಜನೇಯನ ಜನ್ಮಸ್ಥಳ: ಟಿಟಿಡಿ ಘೋಷಣೆ! ...
ಟಿಟಿಡಿಯವರು ಹೇಳಿದ್ದನ್ನು ಕೇಳಿಕೊಂಡು ಸುಮ್ಮನೆ ಕೂರಲು ಸಾಧ್ಯವಿಲ್ಲ. ಈಗಾಗಲೇ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರ ಜತೆಗೆ ಮಾತನಾಡಿದ್ದು, ನಾವೂ ಕೂಡ ಶೀಘ್ರ ದಾಖಲೆ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದಾರೆ ಕೋಲ್ಕಾರ.
ವಾಲ್ಮೀಕ ರಾಮಾಯಣವೇ ಆಧಾರಗ್ರಂಥ
ಕಾರವಾರ : ರಾಮಾಯಣಕ್ಕೆ ವಾಲ್ಮೀಕಿ ರಾಮಾಯಣವೇ ಆಧಾರಗ್ರಂಥ. ವಾಲ್ಮೀಕಿ ರಾಮಾಯಣದ ಸುಂದರಕಾಂಡದಲ್ಲೆ ಆಂಜನೇಯನ ಜನ್ಮದ ಕುರಿತು ಹೇಳಿರುವುದು ಅಧಿಕೃತ. ಬೇರೆ ಯಾರು ಏನೇ ಹೇಳಿದರೂ ನಮ್ಮ ನಂಬಿಕೆ ಅಚಲವಾದುದು. ಈಗಾಗಲೇ ಗೋಕರ್ಣದಲ್ಲಿ ಆಂಜನೇಯನ ಜನ್ಮಭೂಮಿ ಅಭಿವೃದ್ಧಿಗೆ ನಿರ್ಧರಿಸಲಾಗಿದೆ. ಆ ಪ್ರಕಾರ ಕೆಲಸವೂ ನಡೆಯುತ್ತಿದೆ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳ ಮಾಧ್ಯಮ ಕಾರ್ಯದರ್ಶಿ ಉದಯಶಂಕರ ಭಟ್ ಪ್ರತಿಕ್ರಿಯಿಸಿದ್ದಾರೆ. ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಅವರು, ಆಂಜನೇಯನ ಜನ್ಮಭೂಮಿ ಅಭಿವೃದ್ಧಿ ಕಾರ್ಯಗಳಿಗೆ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳೇ ಶ್ರೀಕಾರ ಹಾಕಿದ್ದಾರೆ. ಎಲ್ಲವೂ ಶ್ರೀಗಳ ಮಾರ್ಗದರ್ಶನದಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.