ರಾಜ್ಯದಲ್ಲಿ ಕೊರೋನಾ ಮಹಾಮಾರಿ ಉಲ್ಬಣಗೊಳ್ಳುತ್ತಿದ್ದು ಈ ನಿಟ್ಟಿನಲ್ಲಿ ಪರಿಸ್ಥಿತಿಯನ್ನು ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಿಸಬೇಕು ಎಂದು ಎಚ್ ಡಿ ದೇವೇಗೌಡ ಪತ್ರ ಬರೆದಿದ್ದಾರೆ.
ಬೆಂಗಳೂರು (ಏ.22): ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಸೋಂಕು ಉಲ್ಬಣಗೊಂಡು ಬಹುತೇಕ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಲಭ್ಯವಿರುವ ಹಾಸಿಗೆಗಳು ಸಾಕಾಗುತ್ತಿಲ್ಲವಾದ ಕಾರಣ ಪರಿಸ್ಥಿತಿಯನ್ನು ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಿಸಬೇಕು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಜೀವ ವಿಮೆ ಸೌಲಭ್ಯ ಕಲ್ಪಿಸಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಆಗ್ರಹಿಸಿದ್ದಾರೆ.
ಈ ಸಂಬಂಧ ಬುಧವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ಸೋಂಕಿನಿಂದಾಗಿ ಬಹಳಷ್ಟುಮಂದಿ ಹಲವು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯಬೇಕಾಗಿದೆ. ಸೋಂಕಿತರಲ್ಲಿ ಹಲವರಿಗೆ ವೈದ್ಯಕೀಯ ಆಕ್ಸಿಜನ್‌ಯುಕ್ತ ಹಾಸಿಗೆಗಳು ಮತ್ತು ವೆಂಟಿಲೇಟರ್‌ಗಳ ಅಗತ್ಯ ಇದೆ. ಆದರೆ, ಹೆಚ್ಚುತ್ತಿರುವ ಸೋಂಕಿನಿಂದಾಗಿ ಬಹುತೇಕ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಲಭ್ಯ ಇರುವ ಹಾಸಿಗೆಗಳು ಸಾಕಾಗುತ್ತಿಲ್ಲ. ಆದ್ದರಿಂದ ರಾಜ್ಯ ಸರ್ಕಾರ ಈ ಪರಿಸ್ಥಿತಿಯನ್ನು ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಿಸಬೇಕು. ಸಮರೋಪಾದಿಯಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚಿನ ಕೋವಿಡ್ ಹಾಸಿಗೆಗಳನ್ನು ವಿಸ್ತರಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರತಾಪ್ ಸಿಂಹಗೆ ಕೃತಜ್ಞತೆ ಹೇಳಿದ ಎಚ್‌ಡಿ ದೇವೇಗೌಡ!
ಮಾಧ್ಯಮಗಳ ಇತ್ತೀಚಿನ ವರದಿ ಪ್ರಕಾರ, ಕೊರೋನಾ ಸೋಂಕಿನ ಮೊದಲನೆ ಅಲೆಯನ್ನು ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಖರೀದಿಸಿದ ಸಾವಿರಾರು ವೆಂಟಿಲೇಟರ್‌ಗಳನ್ನು ಬಳಸದೆ ಸರ್ಕಾರಿ ಆಸ್ಪತ್ರೆಯಲ್ಲಿ ಮತ್ತು ಉಗ್ರಾಣದಲ್ಲಿ ಇಟ್ಟಿರುವುದು ತಿಳಿದು ಬಂದಿದೆ. ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ಈ ಬಗ್ಗೆ ಕಾರ್ಯೋನ್ಮುಖವಾಗಿ ಬಳಸದೇ ಇರುವ ವೆಂಟಿಲೇಟರ್‌ಗಳನ್ನು ತಜ್ಞರಿಂದ ಪರಿಶೀಲನೆ ನಡೆಸಿ ಆಸ್ಪತ್ರೆಗಳಲ್ಲಿ ಬಳಸಲು ತುರ್ತು ಕ್ರಮ ಕೈಗೊಳ್ಳಬೇಕು. ವೆಂಟಿಲೇಟರ್‌ಗಳನ್ನು ಆಸ್ಪತ್ರೆಗಳಲ್ಲಿ ನಿರ್ವಹಿಸಲು ಅಗತ್ಯವಿರುವ ನುರಿತ ತಂತ್ರಜ್ಞರುಗಳ ಕೊರತೆ ಇದ್ದು, ರಾಜ್ಯ ಸರ್ಕಾರವು ಇಂತಹ ತಂತ್ರಜ್ಞರುಗಳನ್ನು ಹೊರಗುತ್ತಿಗೆ ಸೇವೆ ಅಥವಾ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡು ಕಾರ್ಯನಿರ್ವಹಿಸಬೇಕು. ಈ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ಆರೋಗ್ಯ ಅಧಿಕಾರಿಗಳು ಮತ್ತು ಜಿಲ್ಲಾಸ್ಪತ್ರೆ ಮುಖ್ಯಾಧಿಕಾರಿಗಳಿಗೆ ನಿರ್ವಹಿಸಲು ಅಗತ್ಯ ಇರುವ ಅಧಿಕಾರವನ್ನು ತುರ್ತಾಗಿ ನೀಡಬೇಕು ಎಂದು ಹೇಳಿದ್ದಾರೆ.
ಜೀವವಿಮೆಗೆ ಒತ್ತಾಯ: ಕೊರೋನಾ ನಿಯಂತ್ರಣದಲ್ಲಿ ಮುಂಚೂಣಿಯಲ್ಲಿ ನಿಂತು ಆರೋಗ್ಯ ಕಾರ್ಯಕರ್ತರು ಸೇವೆ ಸಲ್ಲಿಸುತ್ತಿದ್ದು, ಅವರಿಗೆ ಆರ್ಥಿಕ ನೆರವು ಮತ್ತು ಜೀವ ವಿಮೆ ಒದಗಿಸಬೇಕು. ಆರೋಗ್ಯ ಕಾರ್ಯಕರ್ತರ ಪ್ರತಿಯೊಂದು ಕಾರ್ಯದಲ್ಲಿ ನಮ್ಮ ಸಹಕಾರ ಮತ್ತು ನೆರವು ಅತ್ಯಗತ್ಯ. ಕೊರೋನಾ ಮೊದಲನೇ ಅಲೆಯಲ್ಲಿ ಈ ಸೇನಾನಿಗಳು ನಿರ್ವಹಿಸಿದ ಕಾರ್ಯ ಶ್ಲಾಘನೀಯ. ಮಹಾಮಾರಿ ಸೋಂಕಿನ ವಿರುದ್ಧ ಹೋರಾಟದಲ್ಲಿ ಹಲವಾರು ಸೇನಾನಿಗಳ ತ್ಯಾಗ-ಬಲಿದಾನ ಅವಿಸ್ಮರಣೀಯ ಎಂದಿದ್ದಾರೆ.
ಕಳೆದ ವರ್ಷ ಆರೋಗ್ಯ ಕಾರ್ಯಕರ್ತರ ಭದ್ರತೆಗೆ ಜೀವ ವಿಮೆಯನ್ನು ಕೇಂದ್ರ ಸರ್ಕಾರ ಪಡೆದಿತ್ತು. ಅದರಂತೆ ಪ್ರಸ್ತುತ ಎರಡನೇ ಅಲೆಯನ್ನು ನಿಯಂತ್ರಿಸಲು ಹೋರಾಡುತ್ತಿರುವ ಆರೋಗ್ಯ ಸೇನಾನಿಗಳ ಜೀವ ಭದ್ರತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮತ್ತೊಮ್ಮೆ ಜೀವ ವಿಮೆ ಪಡೆದು ಅವರನ್ನು ಮತ್ತು ಅವರ ಅವಲಂಬಿತ ಕುಟುಂಬವನ್ನು ಕಾಪಾಡಲು ಮುಂದಾಗಬೇಕು ಎಂದು ಕೋರಿದ್ದಾರೆ.
ಖಾಸಗಿ ಆಸ್ಪತ್ರೆಯಲ್ಲಿ ಮತ್ತು ಸಣ್ಣ ನರ್ಸಿಂಗ್ ಹೋಂನಲ್ಲಿ ಕೆಲಸ ನಿರ್ವಹಿಸುವ ಆರೋಗ್ಯ ಕಾರ್ಯಕರ್ತರು ಕೊರೋನಾ ಸೋಂಕು ಹರಡುವಿಕೆ ನಿಯಂತ್ರಿಸುವಲ್ಲಿ ಭಾಗಿಯಾಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಸರ್ಕಾರದ ಜೀವವಿಮೆ ಸುರಕ್ಷತೆಯಿಂದ ಹೊರಗಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರವು ಇಂತಹ ಆರೋಗ್ಯ ಕಾರ್ಯಕರ್ತರ ಸುರಕ್ಷತೆಗೆ ಆರ್ಥಿಕ ನೆರವನ್ನು ಘೋಷಿಸಬೇಕು ಎಂದು ಗೌಡರು ತಿಳಿಸಿದ್ದಾರೆ.