ಕೊರೋನಾ ಸೋಂಕಿನಿಂದ 84 ವರ್ಷದ ವೃದ್ಧನ ಬಲಿ: ರಾಜ್ಯದಲ್ಲಿ ಮೊದಲ ಸಾವು!

Kannadaprabha News   | Kannada Prabha
Published : May 25, 2025, 06:31 AM IST
corona virus

ಸಾರಾಂಶ

ರಾಜ್ಯದಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ದೀರ್ಘಕಾಲೀನ ಅನಾರೋಗ್ಯ ಹಾಗೂ ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ 84 ವರ್ಷದ ಕೊರೋನಾ ಸೋಂಕಿತ ವೃದ್ಧರೊಬ್ಬರು ಬೆಂಗಳೂರಿನಲ್ಲಿ ಮೃತಪಟ್ಟಿದ್ದಾರೆ. 

ಬೆಂಗಳೂರು (ಮೇ.25): ರಾಜ್ಯದಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ದೀರ್ಘಕಾಲೀನ ಅನಾರೋಗ್ಯ ಹಾಗೂ ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ 84 ವರ್ಷದ ಕೊರೋನಾ ಸೋಂಕಿತ ವೃದ್ಧರೊಬ್ಬರು ಬೆಂಗಳೂರಿನಲ್ಲಿ ಮೃತಪಟ್ಟಿದ್ದಾರೆ. ಈ ಮೂಲಕ ಪ್ರಸಕ್ತ ವರ್ಷದಲ್ಲಿ ಕೊರೋನಾಗೆ ರಾಜ್ಯದಲ್ಲಿ ಮೊದಲ ಬಲಿ ಆದಂತಾಗಿದೆ. ಪ್ರಸ್ತುತ ರಾಜ್ಯದಲ್ಲಿ ಒಟ್ಟು 38 ಮಂದಿಗೆ ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಬೆಂಗಳೂರು ನಗರದಲ್ಲೇ 32 ಮಂದಿಗೆ ಸೋಂಕು ದೃಢಪಟ್ಟಿರುವುದು ಆತಂಕ ಮೂಡಿಸಿದೆ.

ತೀವ್ರ ಅನಾರೋಗ್ಯ: ಇದೀಗ ಮೃತಪಟ್ಟಿರುವ ವೃದ್ಧ ವ್ಯಕ್ತಿಗೆ ಬಹು ಅಂಗಾಂಗ ವೈಫಲ್ಯದ ಕಾಯಿಲೆ ಇತ್ತು. ಜತೆಗೆ ನ್ಯುಮೋನಿಯಾ ಸಮಸ್ಯೆಯೂ ತೀವ್ರವಾಗಿತ್ತು. ಅಲ್ಲದೆ ಅಂಗಾಂಗ ವೈಫಲ್ಯ, ಸೆಪ್ಟಿಕ್‌ ಶಾಕ್‌ ಸಮಸ್ಯೆಯಿಂದ ಬಳಲುತ್ತಿರುವ ಅವರಿಗೆ 2024ರಲ್ಲಿ ಹಿಪ್‌ ರಿಪ್ಲೇಸ್‌ಮೆಂಟ್‌ ಶಸ್ತ್ರಚಿಕಿತ್ಸೆ ನಡೆದಿತ್ತು. ಏತನ್ಮಧ್ಯೆ, 2019ರಲ್ಲಿ ಹೃದಯದ ಬೈಪಾಸ್‌ ಶಸ್ತ್ರಚಿಕಿತ್ಸೆ ನಡೆದಿತ್ತು. ಹೈಪೊಥೈರಾಯಿಡಿಸಂ, ಹೈಪರ್‌ಟೆನ್ಷನ್‌ ಸೇರಿ ವಿವಿಧ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ವೈಟ್‌ಫೀಲ್ಡ್‌ ಆಸ್ಪತ್ರೆಯೊಂದರಲ್ಲಿ ಮೇ 17ರಂದು ಮೃತಪಟ್ಟಿದ್ದಾರೆ. ಅವರು ಮೇ 13ರಂದು ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

108 ಪರೀಕ್ಷೆ 38 ಸೋಂಕು ದೃಢ: ಈವರೆಗೆ 108 ಮಂದಿಗೆ ಕೋವಿಡ್‌ ಪರೀಕ್ಷೆ ನಡೆಸಲಾಗಿದ್ದು, 38 ಮಂದಿಗೆ ಸೋಂಕು ದೃಢಪಟ್ಟಿದೆ. ಅಲ್ಲದೆ ಬೆಂಗಳೂರು ನಗರದಲ್ಲಿ 92 ಪರೀಕ್ಷೆ ನಡೆಸಿದ್ದು, 32 ಮಂದಿಗೆ ಸೋಂಕು ಇರುವುದು ಖಚಿತವಾಗಿದೆ. ಬಳ್ಳಾರಿಯಲ್ಲಿ 1, ಬೆಂಗಳೂರು ಗ್ರಾಮಾಂತರ 1, ದಕ್ಷಿಣ ಕನ್ನಡ 1, ಮೈಸೂರು 2, ವಿಜಯನಗರ 1 ಸೇರಿ ಮೇ 24ರ ವೇಳೆಗೆ ಒಟ್ಟು 38 ಸೋಂಕು ವರದಿಯಾಗಿದೆ ಎಂದು ಮೂಲಗಳು ತಿಳಿಸಿವೆ.

ಜಿನೋಮ್‌ ಸೀಕ್ವೆನ್ಸಿಂಗ್‌ಗೆ ನಿರ್ಧಾರ: ಬೆಂಗಳೂರಿನಲ್ಲಿ ಮೃತಪಟ್ಟಿರುವ 84 ವರ್ಷದ ವೃದ್ಧ ವ್ಯಕ್ತಿಗೆ ತಗುಲಿದ್ದ ಕೊರೋನಾ ಸೋಂಕು ರೂಪಾಂತರಿಯೇ ಎಂಬುದು ಖಚಿತಪಟ್ಟಿಲ್ಲ. ಹೀಗಾಗಿ ಸ್ವ್ಯಾಬ್‌ ಮಾದರಿಯನ್ನು ವೈರಾಣುವಿನ ವಂಶವಾಹಿ ರಚನೆ ಪರೀಕ್ಷೆಗೆ (ಜಿನೋಮ್‌ ಸೀಕ್ವೆನ್ಸಿಂಗ್‌ ಪರೀಕ್ಷೆ) ಒಳಪಡಿಸಲು ತೀರ್ಮಾನಿಸಲಾಗಿದೆ. ವರದಿ ಬಂದ ಬಳಿಕವಷ್ಟೇ ರೂಪಾಂತರಿ ಕೊರೋನಾದಿಂದ ಉಂಟಾಗಿರುವ ಸಾವೇ ಅಥವಾ ಅಲ್ಲವೇ ಎಂಬುದು ಖಚಿತವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌