
ಗಿರೀಶ್ ಮಾದೇನಹಳ್ಳಿ
ಬೆಂಗಳೂರು (ಮೇ.25): ನಾಡಿನ ಆರಕ್ಷಕ ಪಡೆಯ ಬಲವರ್ಧನೆಗೆ ಮುಂದಾಗಿರುವ ಪೊಲೀಸ್ ತರಬೇತಿ ವಿಭಾಗವು, ಈಗ ಐಪಿಎಸ್ ಅಧಿಕಾರಿಗಳ ಮಾದರಿಯಲ್ಲೇ ಸಬ್ ಇನ್ಸ್‌ಪೆಕ್ಟರ್ ಹಾಗೂ ಕಾನ್‌ಸ್ಟೇಬಲ್‌ಗಳಿಗೆ ‘ವೃತ್ತಿ ತರಬೇತಿ ವ್ಯವಸ್ಥೆ’ ಜಾರಿಗೊಳಿಸಿದೆ. ಅಂತೆಯೇ ಪಠ್ಯ ಕ್ರಮ ಹಾಗೂ ಹಳೇ ತರಬೇತಿ ಪದ್ಧತಿ ಪರಿಷ್ಕರಣೆ ಮಾತ್ರವಲ್ಲದೆ ಸೈಬರ್ ಅಪರಾಧಗಳು, ಪ್ರಾಥಮಿಕ ಮಾಹಿತಿ ವರದಿ (ಎಫ್‌ಐಆರ್) ದಾಖಲು, ಅಪರಾಧಗಳ ತನಿಖೆಯಲ್ಲಿ ಹೊಸ ತಾಂತ್ರಿಕತೆ ಬಳಕೆ ಹಾಗೂ ಸಿವಿಲ್ ಮತ್ತು ಸಶಸ್ತ್ರ ಮೀಸಲು ಪಡೆಯ ಕಾನ್‌ಸ್ಟೇಬಲ್‌ಗಳಿಗೆ ಹೊಸದಾಗಿ ‘ಬುನಾದಿ ತರಬೇತಿ’ ಕಾರ್ಯಕ್ರಮ ಜಾರಿಗೆ ಬಂದಿದೆ.
ಪೊಲೀಸ್ ಬಲವರ್ಧನೆ ಕೆಳಹಂತದಿಂದಲೇ ಆರಂಭವಾಗಬೇಕು ಎಂದು ತರಬೇತಿ ವ್ಯವಸ್ಥೆಗೆ ಆಧುನಿಕತೆ ಸ್ಪರ್ಶ ನೀಡಿ ಅಮೂಲಾಗ್ರ ಬದಲಾವಣೆಯನ್ನು ತರಬೇತಿ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ತಂದಿದ್ದಾರೆ. ಹೀಗಾಗಿ ಸಂಪ್ರಾದಾಯಿಕ ಬೋಧನೆ ಜತೆ ತಂತ್ರಜ್ಞಾನ ಮೇಳೈಸಿಕೊಂಡು ಖಾಕಿ ಪಡೆ ಸಜ್ಜುಗೊಳ್ಳುತ್ತಿದೆ. ಪೊಲೀಸ್ ತರಬೇತಿ ವ್ಯವಸ್ಥೆ ಕುರಿತು ಅವಲೋಕಿಸಿದಾಗ ಅನಗತ್ಯ ಕೆಲ ಬೋಧನೆಗಳಿರುವುದು ಗೊತ್ತಾಯಿತು. ಅಲ್ಲದೆ ಇಂದಿನ ಆಧುನಿಕ ಯುಗದಲ್ಲಿ ಪೊಲೀಸ್ ವ್ಯವಸ್ಥೆ ಸಹ ಬದಲಾಗಬೇಕಿದೆ. ಹೀಗಾಗಿ ಸಂಪ್ರಾದಾಯಿಕ ಬೋಧನೆ ಮತ್ತು ತರಬೇತಿ ವ್ಯವಸ್ಥೆ ಪರಿಷ್ಕರಣೆಗೆ ನಿರ್ಧರಿಸಲಾಯಿತು ಎಂದು ಅಲೋಕ್ ಕುಮಾರ್ ‘ಕನ್ನಡಪ್ರಭ’ಕ್ಕೆ ತಿಳಿಸಿದರು.
ಮೊದಲು ಪಠ್ಯ ಕ್ರಮದಲ್ಲಿ ಅನಗತ್ಯ ವಿಷಯಗಳನ್ನು ಕೈ ಬಿಡಲಾಯಿತು. ಪಠ್ಯ ಪರಿಷ್ಕರಣೆಯಿಂದ ಪಿಎಸ್ಐಗಳಿಗೆ 18 ಪತ್ರಿಕೆಗಳ ಬದಲಿಗೆ 12 ಪತ್ರಿಕೆಗಳು ಮತ್ತು ಕಾನ್‌ಸ್ಟೇಬಲ್‌ಗಳಿಗೆ ಐದು ಪತ್ರಿಕೆಗಳಿವೆ. ಅಲ್ಲದೆ ಸೈಬರ್ ಅಪರಾಧ, ತನಿಖೆಯಲ್ಲಿ ತಂತ್ರಜ್ಞಾನ ಬಳಕೆ ಹೀಗೆ ಹೊಸ ಅಪರಾಧಗಳ ಕುರಿತು ಸಹ ಬೋಧಿಸಲಾಗುತ್ತಿದೆ ಎಂದು ವಿವರಿಸಿದರು. ಅಪರಾಧ ಪ್ರಕರಣಗಳ ಶಿಕ್ಷಾ ಪ್ರಮಾಣ ಇಳಿಕೆಗೆ ಎಫ್‌ಐಆರ್ ದಾಖಲು ಪ್ರಕ್ರಿಯೆಯಲ್ಲಿ ಲೋಪ ಕೂಡ ಪ್ರಮುಖ ಕಾರಣವಾಗಿದೆ. ಹೀಗಾಗಿ ಕಾನ್‌ಸ್ಟೇಬಲ್‌ಗಳಿಗೆ ಎಫ್‌ಐಆರ್ ಹೇಗೆ ಬರೆಯಬೇಕು ಎಂಬುದನ್ನು ತಿಳಿಸಿಕೊಡಲಾಗುತ್ತಿದೆ. ಕೆಲವರಿಗೆ ಕಂಪ್ಯೂಟರ್ ಹೇಗೆ ಉಪಯೋಗಿಸಬೇಕು ಎಂಬ ಅರಿವೇ ಇರಲಿಲ್ಲ. ಹೀಗಾಗಿ ಕಂಪ್ಯೂಟರ್ ಬಳಕೆಯ ಪ್ರಾಥಮಿಕ ಹಂತದಿಂದ ಸಹ ತಾಂತ್ರಿಕತೆ ಬಗ್ಗೆ ಹೊಸ ಪಠ್ಯದಲ್ಲಿ ತಿಳಿಸಿಕೊಡಲಾಗುತ್ತಿದೆ ಎಂದು ಎಡಿಜಿಪಿ ಮಾಹಿತಿ ನೀಡಿದರು.
ಹೈದರಾಬಾದ್‌ನಲ್ಲಿ ತರಬೇತಿ: ಐಪಿಎಸ್ ಅಧಿಕಾರಿಗಳಂತೆ ಕಾನ್‌ಸ್ಟೇಬಲ್ ಹಾಗೂ ಪಿಎಸ್‌ಐಗಳನ್ನು ತಯಾರಿಗೊಳಿಸುವ ಮುನ್ನ ರಾಜ್ಯದ ಪೊಲೀಸ್ ತರಬೇತಿ ಕೇಂದ್ರದ ಮುಖ್ಯಸ್ಥರನ್ನು ಮೊದಲು ಎಡಿಜಿಪಿ ಅಲೋಕ್ ಕುಮಾರ್ ಸಿದ್ಧಗೊಳಿಸಿದರು. ಅಂತೆಯೇ ಹೈದರಾಬಾದ್‌ನಲ್ಲಿರುವ ಸರ್ದಾರ್ ವಲ್ಲಭ್ ಬಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಗೆ 10 ದಿನಗಳ ತರಬೇತಿಗೆ ಮೈಸೂರು, ಚನ್ನಪಟ್ಟಣ, ಕಲುಬರಗಿ ಹಾಗೂ ಬೆಂಗಳೂರಿನ ಥಣಿಸಂದ್ರದ ಪೊಲೀಸ್ ತರಬೇತಿ ಶಾಲೆಗಳ ಪ್ರಾಂಶುಪಾಲರನ್ನು ಎಡಿಜಿಪಿ ಕಳುಹಿಸಿದ್ದರು. ಐಪಿಎಸ್ ಅಕಾಡೆಮಿಯಲ್ಲಿ ಬೋಧನೆ ಹಾಗೂ ತರಬೇತಿ ಬಗ್ಗೆ ಮಾಹಿತಿ ಪಡೆದು ಬಂದ ಅಧಿಕಾರಿಗಳು, ಬಳಿಕ ತಮ್ಮ ತರಬೇತಿ ಕೇಂದ್ರಗಳಲ್ಲಿ ಆ ಮಾದರಿಯನ್ನು ಕಾರ್ಯರೂಪಕ್ಕಿಳಿಸಿದರು.
ಬುನಾದಿ ತರಬೇತಿಯಲ್ಲಿ ಹಳ್ಳಿಯಲ್ಲೇ ವಾಸ್ತವ್ಯ : ಮೊದಲು 9 ತಿಂಗಳು ತರಬೇತಿ ಮುಗಿದ ಬಳಿಕ ಖಾಕಿ ಸಮವಸ್ತ್ರ ಧರಿಸಿ ಠಾಣೆಗಳಲ್ಲಿ ಕಾನ್‌ಸ್ಟೇಬಲ್‌ಗಳು ವರದಿ ಮಾಡಿಕೊಳ್ಳುತ್ತಿದ್ದರು. ಆದರೀಗ ಪಿಎಸ್‌ಐಗಳಲ್ಲದೆ ಕಾನ್‌ಸ್ಟೇಬಲ್‌ಗಳಿಗೂ ಸಹ ‘ಬುನಾದಿ ತರಬೇತಿ (sandwich)’ ಜಾರಿಗೊಳಿಸಲಾಗಿದೆ ಎಂದು ಚನ್ನಪಟ್ಟಣ ತರಬೇತಿ ಕೇಂದ್ರ ಪ್ರಾಂಶುಪಾಲ ಎಂ.ಯೋಗೇಶ್ ತಿಳಿಸಿದರು. 15 ದಿನಗಳ ಈ ತರಬೇತಿಗೆ ಠಾಣೆಗಳಿಗೆ ಕಾನ್‌ಸ್ಟೇಬಲ್‌ಗಳನ್ನು ನಿಯೋಜಿಸಲಾಗುತ್ತದೆ. ಆ ಠಾಣೆಯಲ್ಲಿ ಸೆಂಟ್ರಿ, ರೈಟರ್, ಗಸ್ತು, ಹೆಲ್ಪ್ ಡೆಸ್ಕ್, ಎಫ್‌ಐಆರ್ ದಾಖಲು, ಮಹಜರ್ ಹೀಗೆ ಪ್ರತಿಯೊಂದು ವಿಭಾಗದಲ್ಲಿ ಕಾನ್‌ಸ್ಟೇಬಲ್‌ಗಳು ಕೆಲಸ ಮಾಡಬೇಕು. ರಾತ್ರಿ ಗಸ್ತಿನ ವೇಳೆ ಹಳ್ಳಿಗಳಲ್ಲೇ ವಾಸ್ತವ್ಯ ಹೂಡುವಂತೆಯೂ ಸೂಚಿಸಲಾಗಿದೆ. ಬುನಾದಿ ತರಬೇತಿ ಅವಧಿ ಬಗ್ಗೆ ಅಭಿಪ್ರಾಯ ಸಹ ಪಡೆದು ಮುಂದಿನ ಹಂತದ ತರಬೇತಿಯಲ್ಲಿ ಅಗತ್ಯವಿದ್ದರೆ ಬದಲಾವಣೆ ತರಲಾಗುತ್ತದೆ ಎಂದು ಹೇಳಿದರು.
ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವುದೇ ಕಾನ್‌ಸ್ಟೇಬಲ್‌ಗಳು. ಹೀಗಾಗಿ ಬುನಾದಿ ಸದೃಢವಾಗಿದ್ದರೆ ಮೇಲ್ಮಟ್ಟದ ವ್ಯವಸ್ಥೆ ಸುಗಮವಾಗಿ ನಡೆಯುತ್ತದೆ. ಆಧುನಿಕತೆ ತಕ್ಕಂತೆ ಬೋಧನೆ ಹಾಗೂ ತರಬೇತಿ ಪರಿಷ್ಕರಿಸಲಾಗಿದೆ.
-ಅಲೋಕ್ ಕುಮಾರ್ ಎಡಿಜಿಪಿ, ರಾಜ್ಯ ಪೊಲೀಸ್ ತರಬೇತಿ ವಿಭಾಗ
ಬುನಾದಿ ತರಬೇತಿಗೆ ಕಾನ್‌ಸ್ಟೇಬಲ್‌ಗಳಿಂದ ಉತ್ತಮ ಪ್ರತಿಕ್ರಿಯೆ ಬಂದಿದ್ದು, ವೃತ್ತಿ ತರಬೇತಿ ವ್ಯವಸ್ಥೆ ಮೇಲೆ ಪರಿಣಾಮ ಬೀರಿದೆ. ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ 18 ರಾಜ್ಯಗಳಿಂದ ಬಂದಿದ್ದ ಅಧಿಕಾರಿಗಳ ಜತೆ ತರಬೇತಿಯಲ್ಲಿ ಪಾಲ್ಗೊಂಡಿದ್ದು, ಕಲಿಕೆಗೆ ಹೊಸ ಅನುಭವ ನೀಡಿತು. ತರಬೇತಿ ವೇಳೆ ಸಮವಸ್ತ್ರ ಧರಿಸಿ ಕರ್ತವ್ಯಕ್ಕೆ ಹಾಜರಾಗುತ್ತಿರುವುದು ಕಾನ್‌ಸ್ಟೇಬಲ್‌ಗಳಿಗೆ ಹೆಮ್ಮೆ ತಂದಿದೆ.
-ಎಂ.ಯೋಗೇಶ್, ಪ್ರಾಂಶುಪಾಲ, ಚನ್ನಪಟ್ಟಣ ಪೊಲೀಸ್ ತರಬೇತಿ ಕೇಂದ್ರ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ