Amul Vs Nandini: ಅಮುಲ್‌ಗೆ ಬಿಟ್ಟಿ ಬಿಲ್ಡಪ್‌ ಕೊಟ್ಟು, ಕೆಎಂಎಫ್‌ನ ಶ್ರೇಷ್ಠತೆ, ಮೌಲ್ಯವನ್ಯಾಕೆ ಕಳೆಯುತ್ತಿದ್ದೀರಿ?

By Santosh Naik  |  First Published Apr 10, 2023, 5:52 PM IST

ಇತ್ತೀಚಿನ ಕೆಎಂಎಫ್‌ ಹಾಗೂ ಅಮುಲ್‌ ನಡುವಿನ ಫೈಟ್‌ ಗಮನಿಸಿದಾಗ ಅನಿಸುವಂಥ ಏಕೈಕ ವಿಚಾರವಿದು. ಅಮುಲ್‌ಗಿಂತಲೂ ಮುನ್ನ ಬೆಂಗಳೂರು ಹಾಗೂ ಕರ್ನಾಟಕದಲ್ಲಿ 18-19 ಮಿಲ್ಕ್‌ ಬ್ರ್ಯಾಂಡ್‌ಗಳು ಬಂದಿವೆ. ಈ ಎಲ್ಲದರ ಫೈಟ್‌ ನಡುವೆ ಕೆಎಂಎಫ್‌ ಪ್ರಾಬಲ್ಯ ಸಾಧಿಸಿದ್ದು ಅದರ ಶ್ರೇಷ್ಠತೆಗೆ ಸಾಕ್ಷಿಯಷ್ಟೇ? ಕನ್ನಡಿಗರ ಪಾಲಿಗೆ ಅಮುಲ್‌ ಇನ್ನೊಂದು ಬ್ರ್ಯಾಂಡ್‌ ಹೊರತು, ಕೆಎಂಎಫ್‌ಗೆ ಎಂದೂ ಪರ್ಯಾಯವಲ್ಲ.
 


ಬೆಂಗಳೂರು (ಏ.10): ಒಟ್ಟಾರೆ ಇತ್ತೀಚಿನ ಅಮುಲ್‌ ಹಾಗೂ ಕೆಎಂಎಫ್‌ ನಡುವಿನ ವಿವಾದವನ್ನು ತಾಳೆ ಹಾಕಿ ನೋಡುವುದಾದರೆ, ಚುನಾವಣೆ ಸಮಯದಲ್ಲಿ ವಿವಾದ ಹುಟ್ಟುಹಾಕಬೇಕಂತಲೇ ಮಾಡಿದಂತ ವಿವಾದವಿದು. ಒಟ್ಟಾರೆ ಅಮುಲ್‌ ವಿಚಾರವನ್ನು ಹುಯಿಲೆಬ್ಬಿಸಿ ಅಮುಲ್‌ ಬ್ರ್ಯಾಂಡ್‌ಗೆ ಬಿಟ್ಟಿ ಪ್ರಚಾರ ಹಾಗೂ ಬಿಲ್ಡಪ್‌ ನೀಡಿದ್ದು ನಮ್ಮಲ್ಲಿನ ಕೆಲ ಸೋಶಿಯಲ್‌ ಮೀಡಿಯಾದ ಸ್ಟಾರ್‌ಗಳು. ಕರ್ನಾಟಕ ಹಾಲು ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್‌, ಸುವರ್ಣ ನ್ಯೂಸ್‌ನ ಲೆಫ್ಟ್‌-ರೈಟ್‌-ಸೆಂಟರ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಒಂದೊಂದು ಮಾತು ಕೇಳಿದರೆ, ಕರ್ನಾಟಕದಲ್ಲಿ ಕೆಎಂಎಫ್‌ ಎನ್ನುವುದು ಎಷ್ಟು ಅಗಾಧವಾಗಿ ಬೇರೂರಿದೆ ಅನ್ನೋದಕ್ಕೆ ಸಾಕ್ಷಿ ಎನ್ನುವಂತಿತ್ತು. ಇಂಥ ಬೇರುಗಳನ್ನು ಕಿತ್ತುಹಾಕಿ ಅಲ್ಲಿ ಅಮುಲ್‌ನ ಸಸಿ ನೆಡುವುದು ಸಾಮಾನ್ಯ ಮಾತಲ್ಲ. ಅದನ್ನು ನಮ್ಮ ಜನ ಒಪ್ಪಿಕೊಳ್ಳುವುದೂ ಇಲ್ಲ. ಆದರೆ, ಸೋಶಿಯಲ್‌ ಮೀಡಿಯಾದ ಹೋರಾಟಗಾರರು ರಾಜ್ಯದಲ್ಲಿ ಅಮುಲ್‌ಗೆ ಬೇರು ಬಿಡುವ ದೊಡ್ಡ ಅವಕಾಶವನ್ನು ವಿವಾದ ಹುಟ್ಟುಹಾಕುವ ಮೂಲಕ ನೀಡಿದ್ದಾರೆ. ಬರೀ ಒಂದೂರಿನ ಗಲ್ಲಿಗೋ, ಕೆಲ ಅನ್‌ಲೈನ್‌ ಮಂದಿಗೆ ಸೀಮಿತವಾಗುತ್ತಿದ್ದ ಅಮುಲ್‌ನ ಹೆಸರು ಇಂದು ರಾಜ್ಯದ ಜನರ ಬಾಯಲ್ಲಿ, ಮಾಧ್ಯಮಗಳಲ್ಲಿ ಸುದ್ದಿಯಾಗಿರೋದಕ್ಕೆ ಇವರೇ ಕಾರಣ. ಅಮುಲ್‌ ಒಂದು ದೊಡ್ಡ ಬ್ರ್ಯಾಂಡ್‌, ಕೆಎಂಎಫ್‌ಗೆ ಅದರ ಮುಂದೆ ಸ್ಪರ್ಧೆ ಮಾಡೋಕೇ ಸಾಧ್ಯವಿಲ್ಲ.. ಇಂಥದ್ದೆಲ್ಲಾ ಪೆಡಂಭೂತವನ್ನು ಸೃಷ್ಟಿ ಮಾಡಿದ್ದೇ ಈ ಜನರು. 

ನೆನಪಿರಲಿ, ಕೆಎಂಎಫ್‌ನೊಂದಿಗೆ ಕರ್ನಾಟಕದಲ್ಲಿ ಸ್ಪರ್ಧೆಯಲ್ಲಿರೋದು ಅಮುಲ್‌ ಮಾತ್ರವೇ ಅಲ್ಲ, ಹಟ್ಸನ್‌, ದೂಡ್ಲ, ತಿರುಮಲ, ಬಹಳ ಕಾಲದಿಂದಲೂ ಇರುವ ಆರೋಕ್ಯ ಸೇರಿದಂತೆ ಸಾಕಷ್ಟು ಬ್ರ್ಯಾಂಡ್‌ಗಳಿವೆ. ಇದೆಲ್ಲದರ ನಡುವೆಯೂ ಕೆಎಂಎಫ್‌ ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯ ಸಾಧಿಸಿರೋದು, ತನ್ನ ಬ್ರ್ಯಾಂಡ್‌ ಹಾಗೂ ಗುಣಮಟ್ಟದ ಕಾರಣದಿಂದಾಗಿ. ಈಗ ಅಮುಲ್‌ ಬಂದರೆ, ಕೆಎಂಎಫ್‌ ಮುಳುಗುತ್ತದೆ ಅಂತೆಲ್ಲಾ ಕತೆ ಪುಂಗುತ್ತಿರುವವರಿಗೆ ಮುಖಕ್ಕೆ ಹೊಡೆದಂತೆ ಕೆಎಂಎಫ್‌ನ ಎಂಡಿ ಬಿಸಿ ಸತೀಶ್‌ ಮಾತನಾಡಿದ್ದಾರೆ. ಅವರ ಮಾತಲ್ಲಿ ಉಕ್ಕಿದ್ದು ಬರೀ ಹಾಲಿನ ಗುಣಮಟ್ಟವಲ್ಲ, ಇಡೀ ಕೆಎಂಎಫ್‌ನ ಶ್ರೇಷ್ಠತೆ ಹಾಗೂ ಮೌಲ್ಯ.

ಬಿ.ಸಿ ಸತೀಶ್‌ ಹೇಳಿದ್ದೇನು?
ಕರ್ನಾಟಕ ಹಾಲು ಮಹಾಮಂಡಳದಲ್ಲಿ 26 ಲಕ್ಷ ರೈತ ಸದಸ್ಯರಿದ್ದಾರೆ. 2 ಲಕ್ಷ ಕಾರ್ಮಿಕರು ವರ್ಷದ 365 ದಿನ ದಿನದ 24 ಗಂಟೆಯೂ ಕೆಲಸ ಮಾಡುತ್ತಾರೆ.ನಮ್ಮ ಗ್ರಾಹಕರು ರಾಜ್ಯ ಮಾತ್ರವಲ್ಲ, ರಾಷ್ಟ್ರ ಹಾಗೂ ವಿದೇಶದಲ್ಲೂ ಇದ್ದಾರೆ. ಒಟ್ಟಾರೆ 5 ಕೋಟಿ ಗ್ರಾಹಕರ ಮಂಡಳಿ ನಮ್ಮದು. ಕೆಎಂಎಫ್‌ಗೆ ಯಾರಿಂದಲೂ ಧಕ್ಕೆ ಬರೋಕೆ ಸಾಧ್ಯವಿಲ್ಲ. ಇದು ಮೂರು ಹಂತದಲ್ಲಿ ಬೆಳೆದಂತ ಸಹಕಾರ ಸಂಸ್ಥೆ. ಕೆಳಹಂತದಲ್ಲಿ 26 ಲಕ್ಷ ರೈತ ಸದಸ್ಯರು, 2ನೇ ಹಂತದಲ್ಲಿ 15 ಸಾವಿರ ಸಹಕಾರ ಸಂಘಗಳು ಕೊನೇ ಹಂತದಲ್ಲಿ 15 ಹಾಲು ಒಕ್ಕೂಟಗಳು ಸೇರ್ಪಟ್ಟು ಕೆಎಂಎಫ್‌ ನಿರ್ವಹಣೆ ಆಗುತ್ತದೆ. ಕೆಎಂಎಫ್‌ ವಾರ್ಷಿಕವಾಗಿ 22 ಸಾವಿರ ಕೋಟಿ ವಹಿವಾಟು ನಡೆಸುತ್ತದೆ. ಪ್ರತಿ ಒಂದು ರೂಪಾಯಿಯಲ್ಲಿ ರೈತ ಸದಸ್ಯರಿಗೆ 79-80 ಪೈಸೆಯನ್ನು ಕೆಎಂಎಫ್‌ ನೀಡುತ್ತದೆ. ಇದು ರೈತರಿಗಾಗಿ ಲಾಭ ಕೊಡುವ ಸಂಸ್ಥೆ.

ಅಮುಲ್‌ ಕರ್ನಾಟಕದಲ್ಲಿ ನಮಗೆ ಎದುರಾಳಿಯೇ ಅಲ್ಲ.ಕರ್ನಾಟಕದಲ್ಲಿ 18-19 ಖಾಸಗಿ ಬ್ರ್ಯಾಂಡ್‌ಗಳು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ. ಇಷ್ಟೆಲ್ಲಾ ಖಾಸಗಿ ಬ್ರ್ಯಾಂಡ್‌ಗಳ ನಡುವೆಯೂ ಕೆಎಂಎಫ್‌ನ ಮಾರುಕಟ್ಟೆ ಷೇರು ಶೇ.82 ರಿಂದ 84ರಷ್ಟಿದೆ. ಯಾವುದೇ ಖಾಸಗಿ ಸಂಸ್ಥೆ ಅಥವಾ ಯಾವುದೇ ಸಹಕಾರ ಸಂಘದ ಬ್ರ್ಯಾಂಡ್‌ ಬಂದರೂ ಕೆಎಂಎಫ್‌ಗೆ ಯಾವುದೇ ಧಕ್ಕೆ ಆಗೋದಿಲ್ಲ ಅನ್ನೋದಕ್ಕೆ ಇದುವೇ ಸಾಕ್ಷಿ. 

ಇನ್ನು ಆನ್‌ಲೈನ್‌ ಮಾರಾಟದ ವಿಚಾರಕ್ಕೆ ಬಂದರೆ, ಬೆಂಗಳೂರಿನಲ್ಲಿ ಅಮುಲ್‌ ಕೆಲವು ಪ್ರದೇಶಗಳಲ್ಲಿ ಆನ್‌ಲೈನ್‌ನಲ್ಲಿ ಹಾಲು ಮಾರಾಟ ಮಾಡ್ತೇವೆ ಎಂದು ಅಮುಲ್‌ ಎಂಡಿ ಹೇಳಿದ್ದಾರೆ. ಆದರೆ, ಎಲ್ಲರ ಮಾಹಿತಿಗೆ ಒಂದು ವಿಚಾರ ತಿಳಿಸಲು ಬಯಸುತ್ತೇನೆ. ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಲ್ಲಿ ಒಂದು ದಿನಕ್ಕೆ ಆನ್‌ಲೈನ್‌ನಲ್ಲಿ 2 ರಿಂದ ಎರಡೂವರೆ ಲಕ್ಷ ಲೀಟರ್‌ ಹಾಲು ಮಾರಾಟ ಮಾಡುತ್ತೇವೆ. ಆನ್‌ಲೈನ್‌ನಲ್ಲೂ ಕೆಎಂಎಫ್‌ ಅಸಾಧ್ಯ ಹಿಡಿತ ಹೊಂದಿದೆ. 18-19 ಬ್ರ್ಯಾಂಡ್‌ಗಳು ಈಗಾಗಲೇ ಇವೆ. ಇನ್ನೂ ಬೇಕಾದರೆ ಆನ್‌ಲೈನ್‌-ಆಫ್‌ಲೈನ್‌ ಇರಲಿ ದೊಡ್ಡ ಹಿಡಿತ ಕೆಎಂಎಫ್‌ದು ಇದೆ.

ಬೆಂಗಳೂರಲ್ಲಿ 33 ಲಕ್ಷ ಲೀಟರ್‌ ಹಾಲು ಮಾರಾಟವಾದರೆ, ಅದರಲ್ಲಿ ಕೆಎಂಎಫ್‌ ಪಾಲು 26 ಲಕ್ಷ ಲೀಟರ್‌ ಅನ್ನೋದಕ್ಕೆ ಹೆಮ್ಮೆ ಎನಿಸುತ್ತದೆ. 6-7 ಲಕ್ಷ ಲೀಟರ್‌ ಖಾಸಗಿ ಬ್ರ್ಯಾಂಡ್‌ಗಳ ಹಾಲು ಮಾರಾಟವಾಗುತ್ತದೆ. ಕಾಶ್ಮೀರದಿಂದ ಕರ್ನಾಟಕದವರೆಗೂ ಕೆಎಂಎಫ್‌ ಪ್ಯಾನ್‌ ಇಂಡಿಯಾ ಬ್ರ್ಯಾಂಡ್‌. ಪ್ರತಿ ತಿಂಗಳಿಗೆ ಭಾರತಕ್ಕೆ ಸೈನಿಕರಿಗೆ 1 ಕೋಟಿ ಲೀಟರ್‌ ಹಾಲನ್ನು ನೀಡುತ್ತೇವೆ. ಹತ್ತಾರು ರಾಜ್ಯಗಳಲ್ಲಿ ಕೆಎಂಎಫ್‌ ವಿಸ್ತರಣೆ ಇದೆ.

Tap to resize

Latest Videos

 

Amul Vs Nandini: ಅಮುಲ್‌ ಕಂಪನಿಯ ಏಕೈಕ ಸ್ಪರ್ಧಿ ನಂದಿನಿ ಬ್ರಾಂಡ್ ಮುಗಿಸಲು ಕೇಂದ್ರ ಸಂಚು: ಎಚ್‌ಡಿಕೆ ಸರಣಿ ಟ್ವೀಟ್

ಒಟ್ಟಾರೆ, ಇಡೀ ವಿಚಾರದಲ್ಲಿ ಅಮುಲ್‌ ಒಂದು ದೊಡ್ಡ ಬ್ರ್ಯಾಂಡ್‌. ಎಷ್ಟರ ಮಟ್ಟಿಗೆ ದೊಡ್ಡ ಬ್ರ್ಯಾಂಡ್‌ ಎಂದರೆ, ಕೆಎಂಎಫ್‌ಅನ್ನೇ ಮುಳಿಗಿಸುವಂಥ ಬ್ರ್ಯಾಂಡ್‌ ಎನ್ನುವ ಕಲ್ಪನೆಯನ್ನು ಜನರಿಗೆ ತುಂಬಿಸಲಾಗುತ್ತಿದೆ. ಆದರೆ, ಕರ್ನಾಟಕದಲ್ಲಿ ಕೆಎಂಎಫ್‌ ಈಗಾಗಲೇ ಸಾಧಿಸಿರುವ ವೈಭವವನ್ನು ಗುಜರಾತ್‌ನ ಬ್ರ್ಯಾಂಡ್‌ನ ಮುಂದೆ ಗೌಣವಾಗಿ ನೋಡುತ್ತಿದ್ದಾರೆ. ಅದೆಷ್ಟೇ ಮಾರ್ಟ್‌ಗಳು, ಬಾಸ್ಕೆಟ್‌ಗಳು ಬಂದರೂ, ನಿಮ್ಮೂರಿನ ಸಂತೆಯಲ್ಲಿ ತರಕಾರಿ ತೆಗೆದುಕೊಳ್ಳುವ ಸಂಭ್ರಮವನ್ನು ಯಾರೂ ತಪ್ಪಿಸಿಕೊಳ್ಳುವುದಿಲ್ಲ. 

ಕೆಎಂಎಫ್‌ಗೆ ಸಡ್ಡು: ರಾಜ್ಯದಲ್ಲಿ ಅಮುಲ್‌ ಹೋಮ್‌ ಡೆಲಿವರಿ!

 

click me!