ಅಂಗವೈಕಲ್ಯ ಮುಂದಿಟ್ಟು ಜಾಮೀನು ಕೇಳಿದ ಆರೋಪಿ: ಒಪ್ಪದ ಹೈಕೋರ್ಟ್‌

By Kannadaprabha News  |  First Published Apr 10, 2023, 8:16 AM IST

ವೃದ್ಧ ದಂಪತಿಯನ್ನು ಪೈಶಾಚಿಕ ರೀತಿಯಲ್ಲಿ ಕೊಲೈಗೆದು ಚಿನ್ನಾಭರಣ ದೋಚಿದ ಆರೋಪಿಯೊಬ್ಬ ಅಂಗವೈಕಲ್ಯವನ್ನೇ ಮುಂದಿಟ್ಟುಕೊಂಡು ತಾನು ಅಮಾಯಕನೆಂದು ಬಿಂಬಿಸಿ ಜಾಮೀನು ಪಡೆಯಲು ನಡೆಸಿದ ಯತ್ನಕ್ಕೆ ಹೈಕೋರ್ಟ್‌ ಕರಗದೇ ಜಾಮೀನು ನಿರಾಕರಿಸಿದೆ.


ವೆಂಕಟೇಶ್‌ ಕಲಿಪಿ

ಬೆಂಗಳೂರು (ಏ.10): ಅಂಗವಿಕಲರು ನ್ಯಾಯದಾನಕ್ಕಾಗಿ ಕೈ ಚಾಚಿದ ಸಂದರ್ಭದಲ್ಲಿ ನ್ಯಾಯಾಲಯಗಳು ಮೃದು ಧೋರಣೆ ತಾಳುವುದು ಸಾಮಾನ್ಯ. ಆದರೆ, ವೃದ್ಧ ದಂಪತಿಯನ್ನು ಪೈಶಾಚಿಕ ರೀತಿಯಲ್ಲಿ ಕೊಲೈಗೆದು ಚಿನ್ನಾಭರಣ ದೋಚಿದ ಆರೋಪಿಯೊಬ್ಬ ಅಂಗವೈಕಲ್ಯವನ್ನೇ ಮುಂದಿಟ್ಟುಕೊಂಡು ತಾನು ಅಮಾಯಕನೆಂದು ಬಿಂಬಿಸಿ ಜಾಮೀನು ಪಡೆಯಲು ನಡೆಸಿದ ಯತ್ನಕ್ಕೆ ಹೈಕೋರ್ಟ್‌ ಕರಗದೇ ಜಾಮೀನು ನಿರಾಕರಿಸಿದೆ.

Tap to resize

Latest Videos

ಅಂಗವಿಕಲನಾದ ಕಾರಣ ಕೊಲೆ ಮಾಡಲು ಸಾಧ್ಯವಿಲ್ಲ, ಹಾಗಾಗಿ ಜಾಮೀನು ನೀಡಬೇಕೆಂಬ ಆಂಧ್ರಪ್ರದೇಶದ ಹಿಂದೂಪುರ ತಾಲೂಕಿನ ಮೆಲ್ಲಾಪುರ್‌ ಕಾಲೋನಿ ನಿವಾಸಿ ನಾರಾಯಣಸ್ವಾಮಿ (48) ಕೋರಿಕೆಯನ್ನು ಸಾರಾಸಗಟಾಗಿ ಹೈಕೋರ್ಟ್‌ ತಿರಸ್ಕರಿಸಿದೆ. ಕೊಲೆಯಂತಹ ಗಂಭೀರ ಸ್ವರೂಪದ ಹಾಗೂ ಹೀನ ಅಪರಾಧ ಕೃತ್ಯ ಎಸಗಿರುವ ಸನ್ನಿವೇಶದಲ್ಲಿ ಆರೋಪಿಯ ಅಂಗವೈಕಲ್ಯ ಜಾಮೀನು ಅರ್ಜಿ ಪರಿಗಣಿಸಲು ಸಕಾರಣವಾಗುವುದಿಲ್ಲ ಎಂದು ನ್ಯಾಯಮೂರ್ತಿ ವಿ.ಶ್ರೀಷಾನಂದ ಅವರ ನ್ಯಾಯಪೀಠ, ಅಭಿಪ್ರಾಯ ವ್ಯಕ್ತಪಡಿಸಿ ಜಾಮೀನು ನಿರಾಕರಿಸಿದೆ.

‘ಪ್ರಧಾನಿ ಮೋದಿ ಜತೆ ನಾನು ತಪ್ಪಾಗಿ ನಡೆದುಕೊಂಡೆ’: ಗುಲಾಂ ನಬಿ ಆಜಾದ್‌

ಪ್ರಕರಣದ ವಿವರ: ಬಿಎಂಟಿಸಿ ನಿವೃತ್ತ ಮೆಕ್ಯಾನಿಕ್‌ ಆದ ಶಾಂತರಾಜು, ಪತ್ನಿ ಪ್ರೇಮಲತಾ ಜೊತೆಗೆ ನಗರದ ಯಲಚೇನಹಳ್ಳಿಯ ಮನೆಯಲ್ಲಿ ವಾಸವಾಗಿದ್ದರು. 2021ರ ಆ.20ರಂದು ಮನೆಯಲ್ಲಿಯೇ ಈ ವೃದ್ದ ದಂಪತಿಯ ಹತ್ಯೆ ಮತ್ತು ಚಿನ್ನಾಭರಣ ದರೋಡೆ ನಡೆದಿತ್ತು. ಕುಮಾರಸ್ವಾಮಿ ಠಾಣಾ ಪೊಲೀಸರು ತನಿಖೆಗೊಂಡು 2021ರ ಆ.23ರಂದು ಅರ್ಜಿದಾರ ನಾರಾಯಣಸ್ವಾಮಿ ಮತ್ತು ಸಹಚರ ಆರೋಪಿಗಳನ್ನು ಬಂಧಿಸಿದ್ದರು. ಅರ್ಜಿದಾರನಿಂದಲೇ ಪ್ರೇಮಲತಾ ಮೈಮೇಲಿದ್ದ 72 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿತ್ತು. ನ್ಯಾಯಾಂಗ ಬಂಧನದಲ್ಲಿರುವ ಅರ್ಜಿದಾರ ಜಾಮೀನು ಕೋರಿ ಹೈಕೋರ್ಟ್‌ ಮೊರೆ ಹೋಗಿದ್ದ.

ಅರ್ಜಿದಾರನ ಪರ ವಕೀಲರು, ನಾರಾಯಣಸ್ವಾಮಿ ಸಂಪೂರ್ಣವಾಗಿ ಅಮಾಯಕ. ಬಹುಮುಖ್ಯವಾಗಿ ಆತ ಅಂಗವಿಕಲನಾಗಿದ್ದು, ಕೊಲೆಯಂತಹ ಅಪರಾಧದಲ್ಲಿ ಭಾಗಿಯಾಗಲು ಅಸಾಧ್ಯ. ಆತನ ಪತ್ನಿ ಸಹ ಅಂಗವಿಕಲೆಯಾಗಿದ್ದು, ಹೆಣ್ಣು ಮಗು ಇದೆ. ಇಡೀ ಕುಟುಂಬದ ಪೋಷಣೆ ಹೊಣೆ ಅರ್ಜಿದಾರನ ಮೇಲಿದೆ. ಆತನ ಅನುಪಸ್ಥಿತಿಯಲ್ಲಿ ಕುಟುಂಬದವರು ಸಂಕಟ ಎದುರಿಸುತ್ತಿದ್ದಾರೆ. ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಆತನ ಪಾತ್ರದ ಬಗ್ಗೆ ಸಾಕ್ಷ್ಯಧಾರಗಳಿಲ್ಲ. ಆದ್ದರಿಂದ ಆತನನ್ನು ನ್ಯಾಯಾಂಗ ಬಂಧನದಲ್ಲಿ ಮುಂದುವರಿಸುವ ಅಗತ್ಯವಿಲ್ಲ. ಜೈಲಿನಿಂದ ಬಿಡುಗಡೆ ಮಾಡದಿದ್ದರೆ ವಿಚಾರಣಾ ಪೂರ್ವ ಅಪರಾಧಿ (ಪ್ರಿ ಟ್ರಯಲ್‌ ಕನ್ವಿಕ್ಷನ್‌) ಆಗಲಿದ್ದು, ಜಾಮೀನು ನೀಡಬೇಕೆಂದು ಕೋರಿದರು.

ಈ ವಾದ ತಿರಸ್ಕರಿಸಿದ ಹೈಕೋರ್ಟ್‌, ದೋಷಾರೋಪ ಪಟ್ಟಿಮತ್ತು ಆರೋಪಿಗಳ ಸ್ವಯಂಕೃತ ಹೇಳಿಕೆಗಳ ಪ್ರಕಾರ ಅರ್ಜಿದಾರನೇ ವೃದ್ಧ ದಂಪತಿಯ ಕೊಲೆಗೆ ಸಂಚು ರೂಪಿಸಿದ್ದ. ತಲೆದಿಂಬಿನಿಂದ ಪ್ರೇಮಲತಾಗೆ ಉಸಿರುಗಟ್ಟಿಸಿದ್ದ. ಸಹ ಆರೋಪಿಗಳು ಆಕೆಯನ್ನು ಎಳೆದೊಯ್ದು ತಲೆಯನ್ನು ಗೋಡೆಗೆ ಜಜ್ಜಿ ಕೊಲೆ ಮಾಡಿದ್ದಾರೆ. ಕರುಣೆಯಿಲ್ಲದೇ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಪರಿಣಾಮ ಶಾಂತರಾಜು ಮೃತಪಟ್ಟಿದ್ದಾರೆ ಎಂಬುದು ತಿಳಿಯುತ್ತದೆ ಎಂದು ಅಭಿಪ್ರಾಯಪಟ್ಟಿತು.

ಪ್ರೇಮಲತಾ ಮೈಮೇಲಿದ್ದ 72 ಗ್ರಾಂ ಚಿನ್ನಾಭರಣವನ್ನು ಅರ್ಜಿದಾರನಿಂದ ವಶಕ್ಕೆ ಪಡೆಯಲಾಗಿದೆ. ಚಿನ್ನಾಭರಣವು ತನಗೆ ಹೇಗೆ ಬಂತು ಎಂಬುದಕ್ಕೆ ಅರ್ಜಿದಾರನಿಂದ ಸ್ಪಷ್ಟವಿವರಣೆಯಿಲ್ಲ. ಆತ ಶ್ರೀಮಂತನೂ ಅಲ್ಲ; ಆರ್ಥಿಕ ಸ್ಥಿತಿಗತಿ ಉತ್ತಮವಾಗಿಯೂ ಇಲ್ಲ. ಅರ್ಜಿದಾರನ ಸ್ವಯಂಕೃತ ಹೇಳಿಕೆ ಆಧರಿಸಿಯೇ ಪೊಲೀಸರು ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ದೋಷಾರೋಪ ಪಟ್ಟಿಯಲ್ಲಿ ಅರ್ಜಿದಾರನ ವಿರುದ್ಧ ಬಲವಾದ ಸಾಕ್ಷ್ಯಗಳಿದೆ. ಕೊಲೆಗೂ ಅರ್ಜಿದಾರನಿಗೂ ನೇರವಾದ ಸಂಬಂಧ ಇರುವುದನ್ನು ತೋರಿಸುತ್ತದೆ ಎಂದು ಪೀಠ ತೀರ್ಮಾನಿಸಿತು.

ಬಂಡಾಯಗಾರರಿಂದ ಕಾಂಗ್ರೆಸ್ಸಿಗೆ ಈಗ ಪಕ್ಷಾಂತರ, ಪಕ್ಷೇತರ ಕಂಟಕ: ನಾಗರಾಜ ಛಬ್ಬಿ ಬಿಜೆಪಿಗೆ

ಜಾಮೀನಿಗೆ ಅಂಗವೈಕಲ್ಯ ಕಾರಣ ಸಲ್ಲ, ನ್ಯಾಯಪೀಠ: ಅರ್ಜಿದಾರ ಓರ್ವ ಅಂಗವಿಕಲ. ಅದನ್ನು ಪರಿಗಣಿಸಿ ಜಾಮೀನು ನೀಡಲು ಕೋರಲಾಗಿದೆ. ಆದರೆ, ಜಾಮೀನು ಅರ್ಜಿ ಪರಿಗಣನೆಗೆ ಅಂಗವೈಕಲ್ಯ ಅನುಕೂಲಕರ ಅಂಶವಾಗುವುದಿಲ್ಲ. ಅದೂ ಸಹ ತಲೆದಿಂಬಿನಿಂದ ಮಹಿಳೆಯನ್ನು ಉಸಿರುಗಟ್ಟಿಸಿ ಮತ್ತು ಆಕೆಯ ತಲೆಯನ್ನು ಗೋಡೆ ಹೊಡೆದು ಕೊಲೆ ಮಾಡಲಾಗಿದೆ. ಇದು ಗಂಭೀರ ಸ್ವರೂಪದ ಮತ್ತು ಹೀನಾಯ ಕೃತ್ಯ. ಇಂತಹ ಸನ್ನಿವೇಶದಲ್ಲಿ ಆರೋಪಿಯ ಅಂಗವೈಕಲ್ಯ ಪರಿಗಣಿಸಿ ಜಾಮೀನು ನೀಡಲು ಸಾಧ್ಯವಿಲ್ಲ. ಜಾಮೀನಿಗೆ ಅರ್ಜಿದಾರ ಯೋಗ್ಯನಾಗಿಲ್ಲ ಎಂದು ನ್ಯಾಯಮೂರ್ತಿಗಳು ಕಟುವಾಗಿ ನುಡಿದ್ದಾರೆ.

click me!