ಸ್ವಸಹಾಯ ಸಂಘಗಳ ಉತ್ಪನ್ನ ಮಾರಾಟಕ್ಕೆ ಇ-ವೇದಿಕೆ: ಅಮೆಜಾನ್ ಭರವಸೆ

By Suvarna NewsFirst Published Oct 7, 2020, 6:41 PM IST
Highlights

ಡಿಸಿಎಂ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಜೊತೆ ಅಮೆಜಾನ್ ಉಪಾಧ್ಯಕ್ಷರ ಸಭೆ ನಡೆಸಿದ್ದು, ಸ್ವಸಹಾಯ ಸಂಘಗಳ ಉತ್ಪನ್ನ ಮಾರಾಟಕ್ಕೆ ಇ-ವೇದಿಕೆ: ಅಮೆಜಾನ್ ಭರವಸೆ ನೀಡಿದೆ.

ಬೆಂಗಳೂರು, (ಅ.07): ರಾಜ್ಯದಲ್ಲಿ ಸ್ವಸಹಾಯ ಗುಂಪುಗಳು ಉತ್ಪಾದಿಸುತ್ತಿರುವ ಉತ್ಪನ್ನಗಳ ಇ-ಮಾರಾಟಕ್ಕೆ ಅನುಕೂಲ ಮಾಡಿಕೊಡಲಾಗುತ್ತದೆ ಎಂದು ಅಮೆಜಾನ್ ಕಂಪನಿ ಭರವಸೆ ನೀಡಿದೆ.

ಅಮೆಜಾನ್ ಕಂಪನಿ ಉಪಾಧ್ಯಕ್ಷ (ಸಾರ್ವಜನಿಕ  ಕಾರ್ಯನೀತಿ ವಿಭಾಗ) ಚೇತನ್ ಕೃಷ್ಣಸ್ವಾಮಿ ಅವರು ಮಂಗಳವಾರ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರೊಂದಿಗೆ ನಡೆಸಿದ ಸಭೆಯಲ್ಲಿ ಈ ಕುರಿತು ಪ್ರಸ್ತಾಪಿಸಲಾಯಿತು.
 
ಉಪ ಮುಖ್ಯಮಂತ್ರಿಯವರ ಮನವಿಗೆ  ಪ್ರತಿಕ್ರಿಯಿಸಿದ ಚೇತನ್ ಕೃಷ್ಣಸ್ವಾಮಿ ಅವರು, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಸ್ವಸಹಾಯ ಗುಂಪುಗಳಿಗೆ ಅಮೆಜಾನ್, ಇ- ಮಾರುಕಟ್ಟೆ ವೇದಿಕೆಯನ್ನು ಒದಗಿಸಲಿದೆ. ಈ ಕುರಿತು ಸರ್ಕಾರದ ಜತೆ ಮಾತುಕತೆ ನಡೆಸಲಾಗುವುದು ಎಂದರು.

ಕುಸುಮಾಗೆ ಕೈ ಟಿಕೆಟ್, KKR ಸರಿಪಡಿಸಿಕೊಳ್ಳುತ್ತಾ ಮಿಸ್ಟೇಕ್: ಇಲ್ಲಿದೆ ಅ.07ರ ಟಾಪ್ 10 ಸುದ್ದಿ

ರಾಜ್ಯದಲ್ಲಿ ಸುಮಾರು 1.5 ಲಕ್ಷ ಸ್ವಸಹಾಯ ಗುಂಪುಗಳು ಇವೆ. ಇವುಗಳು ವಿವಿಧ ಉತ್ಪನ್ನಗಳ ತಯಾರಿಕೆ, ಸಿದ್ಧಪಡಿಸುವಿಕೆ ಹಾಗೂ ಉತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿವೆ. ಈ ಉತ್ಪನ್ನಗಳಿಗೆ ಎಲೆಕ್ಟ್ರಾನಿಕ್ ವ್ಯಾಪಾರ ವೇದಿಕೆಗಳ ಮೂಲಕ ಮಾರಾಟಕ್ಕೆ ಅನುವು ಮಾಡಿಕೊಡುವುದು ಸೂಕ್ತ ಎಂದು ಅಶ್ವತ್ಥ ನಾರಾಯಣ ಅವರು ಅಭಿಪ್ರಾಯಪಟ್ಟರು.

ಇದೇ ವೇಳೆ ಚೇತನ್ ಕೃಷ್ಣಸ್ವಾಮಿ ಅವರು ಮಾತನಾಡಿ, ಅಮೆಜಾನ್ ಕಂಪನಿಯು ಭಾರತದಲ್ಲಿ ತನ್ನ ಕಾರ್ಯಚಟುವಟಿಕೆಯನ್ನು ವಿಸ್ತರಿಸುವ ಯೋಜನೆಗಳನ್ನು ಹೊಂದಿರುವುದಾಗಿ ತಿಳಿಸಿದರು.. ಪೂರೈಕೆ ಸರಪಳಿ, ದಾಸ್ತಾನು ಘಟಕ ಮತ್ತಿತರ ವಿಭಾಗಗಳಲ್ಲಿ ಗ್ರಾಮೀಣ ಹಾಗೂ ಸ್ಥಳೀಯ ಯುವ ಜನತೆಗೆ ಹೆಚ್ಚಿನ ಉದ್ಯೋಗ ನೀಡುವ ಉದ್ದೇಶ ಹೊಂದಿದೆ. ಜೊತೆಗೆ ಸಂಸ್ಥೆಯ ಸಿಬ್ಬಂದಿಗೆ ಕಾಲಕಾಲಕ್ಕೆ ಕೌಶಲಾಭಿವೃದ್ಧಿ ತರಬೇತಿ ನೀಡಲು ಒತ್ತು ಕೊಡಲಾಗುತ್ತದೆ ಎಂದರು.

ನಾವೀನ್ಯತೆಯನ್ನು ಪೋಷಿಸುವ, ಉದ್ಯೋಗಗಳನ್ನು ಸೃಷ್ಟಿಸುವ ಹಾಗೂ ಭಾರತದ ವ್ಯಾಪಾರಗಳನ್ನು ಜಾಗತಿಕ ಮಾರುಕಟ್ಟೆಗೆ ತಲುಪಿಸುವ ಗುರಿಯನ್ನು ಅಮೆಜಾನ್ ಕಂಪನಿ ಹೊಂದಿದೆ. 10 ಲಕ್ಷ ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ದಿಮೆಗಳನ್ನು ಡಿಜಿಟಲೀಕರಣಗೊಳಿಸುವ ಗುರಿಯನ್ನೂ ಹೊಂದಲಾಗಿದೆ. ಇದರಿಂದ 10 ಲಕ್ಷ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಜೊತೆಗೆ, ಭಾರತದ ಇ-ವಾಣಿಜ್ಯ ರಫ್ತು ಮೊತ್ತವು 2025 ರ ವೇಳೆಗೆ ಸುಮಾರು 75,000 ಕೋಟಿ ರೂಪಾಯಿಗಳಾಗಲಿದೆ ಎಂದು ತಿಳಿಸಿದರು.. 

ಮುಂದಿನ ಹಂತದಲ್ಲಿ ಆನ್ ಲೈನ್ ಮೂಲಕ ಉಪ ಮುಖ್ಯಮಂತ್ರಿಯವರ ಜೊತೆ ಬೇರೆ ಬೇರೆ ರಾಷ್ಟ್ರಗಳಲ್ಲಿ ಇರುವ ಅಮೆಜಾನ್ ಕಂಪನಿಯ ಪ್ರಮುಖ ಅಧಿಕಾರಿಗಳ ಸಭೆ ನಡೆಸುವ ಉದ್ದೇಶ ಹೊಂದಿರುವುದಾಗಿಯೂ ಚೇತನ್ ಕೃಷ್ಣಸ್ವಾಮಿ ತಿಳಿಸಿದರು.

click me!