
ಬೆಂಗಳೂರು (ಜು.11): ‘ಇದ್ದಕ್ಕಿದ್ದಂತೆ ಬೆಟ್ಟದ ಮೇಲಿಂದ ಭಯಾನಕ ಶಬ್ದ, ನೋಡ ನೋಡುತ್ತಲೇ ಉಕ್ಕಿದ ಪ್ರವಾಹದಲ್ಲಿ ಕೊಚ್ಚಿಹೋಗಲಾರಂಭಿಸಿದ ಟೆಂಟುಗಳು ಮತ್ತು ಅದರಲ್ಲಿದ್ದ ಜನ, ಕಣ್ಣೆದುರೇ ಮೂವರ ಶವ ನೋಡಿ ಭಯಭೀತರಾದೆವು, ಬೆಟ್ಟದ ಕಡೆಯಿಂದ ಚಿಮ್ಮಿ ಬರುತ್ತಿದ್ದ ಕಲ್ಲಿನ ಚೂರುಗಳಿಂದ ಪಾರಾಗಲು ಸೇನೆಯವರ ಸೂಚನೆಯಂತೆ ಸ್ಥಳದಲ್ಲಿದ್ದ ಶೌಚಾಲಯದಲ್ಲಿ ಕೂತೆವು. ಕೆಲ ಗಂಟೆಗಳ ಬಳಿಕ ಹೊರಬಂದೆವು. ಹೇಗೋ ದೇವರ ದಯೆ. ಜೀವ ಉಳಿಯಿತು.’
ಇದು, ಪವಿತ್ರ ಅಮರನಾಥ ಯಾತ್ರೆ ವೇಳೆ ಸಂಭವಿಸಿದ ಪ್ರಕೃತಿ ವಿಕೋಪವನ್ನು ಕಣ್ಣೆದುರೇ ಕಂಡು ಸಾವಿನ ದವಡೆಯಿಂದ ಪಾರಾಗಿ ಬಂದಿರುವ ಬೆಂಗಳೂರಿನ ಗೋಣಿಪುರದ ನಾಗರತ್ನಮ್ಮ (56) ಮತ್ತು ರಾಮನಗರದ ಗುರುಲಿಂಗಯ್ಯ ಎಂಬ ಯಾತ್ರಿಗಳು ನೀಡಿದ ಸಾಕ್ಷ್ಯ ಸಂಗತಿಗಳು.
ಸದ್ಯ ಯಾತ್ರಾಸ್ಥಳದಿಂದ ಸುರಕ್ಷಿತವಾಗಿ ಕಾಶ್ಮೀರ ತಲುಪಿರುವ ಅವರು ದೂರವಾಣಿ ಮೂಲಕ ‘ಕನ್ನಡಪ್ರಭ’ದೊಂದಿಗೆ ಮಾತನಾಡಿ ಜು.8ರ ಸಂಜೆ 5.30ರ ಸುಮಾರಿನಲ್ಲಿ ನಿಜಕ್ಕೂ ಏನಾಯಿತು ಎಂಬುದನ್ನು ವಿವರಿಸಿದರು.
ಮೇಘಸ್ಫೋಟಕ್ಕೆ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಮತ್ತೆ ಆರಂಭ!
ಹತ್ತಿರವೇ ಶವ ನೋಡಿದೆವು: ‘ನಾವು ದುರ್ಗಾಂಬ ಟ್ರಾವೆಲ್ಸ್ ಮೂಲಕ ಬೆಂಗಳೂರು, ರಾಮನಗರ, ಕನಕಪುರ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳ 40 ಮಂದಿ ಈ ಬಾರಿ ಅಮರನಾಥ ಯಾತ್ರೆಗೆ ತೆರಳಿದ್ದೆವು. ಜು.8ರಂದು ದರ್ಶನಕ್ಕೆ ಹೋಗಿ ಬರುವಾಗ ಕೆಲವರು ಹಿಂದೆ ಮುಂದೆ ಹೋಗಿದ್ದರು. ಈ ವೇಳೆ ನಾವಿಬ್ಬರನ್ನು ಒಳಗೊಂಡು ಸುಮಾರು ಎಂಟು ಜನ ಒಬ್ಬರಿಗೊಬ್ಬರು ಸಮೀಪದಲ್ಲೇ ಇದ್ದೆವು. ಅಮರನಾಥ ಗುಹೆಯ ಲಿಂಗ ದರ್ಶನ ಮುಗಿಸಿ ಕೆಳಗಿಳಿಯುವಾಗ ಸಂಜೆ 5.30ರ ಸುಮಾರಿಗೆ ಬೆಟ್ಟದಿಂದ ಏಕಾಏಕಿ ಭಾರೀ ಶಬ್ದ ಕೇಳಿಸಿತು. ಬೆಟ್ಟದಿಂದ ಕಲ್ಲುಗಳು ಉರುಳಿದವು. ಒಮ್ಮೆಲೇ ಪ್ರವಾಹ ಸೃಷ್ಟಿಯಾಯಿತು. ಕಣ್ಣೆದರೇ ಟೆಂಟುಗಳಲ್ಲಿದ್ದ ಜನ ಕೊಚ್ಚಿಹೋಗುತ್ತಿದ್ದರು. ಈ ಘಟನೆ ವೇಳೆ ನಮ್ಮಿಬ್ಬರನ್ನು ಬಿಟ್ಟು ಉಳಿದವರು ಚದುರಿಹೋದರು.’
‘ಓರ್ವ ಮಹಿಳೆ, ಓರ್ವ ಪುರುಷ ಮತ್ತು ಒಬ್ಬ ಹುಡುಗನ ಶವವನ್ನು ಹತ್ತರದಿಂದಲೇ ಕಂಡು ತೀವ್ರವಾಗಿ ಭಯವಾಯಿತು. ಕಲ್ಲು ಚೂರುಗಳು ನಾವಿದ್ದ ಕಡೆಗೆ ಬರುತ್ತಿದ್ದವು. ಅವುಗಳಿಂದ ರಕ್ಷಿಸಿಕೊಳ್ಳಲು ಸ್ಥಳದಲ್ಲಿದ್ದ ಸೇನಾಪಡೆಯವರು ನಮ್ಮನ್ನೂ ಒಳಗೊಂಡು ಸಾಕಷ್ಟುಜನರನ್ನು ಅಲ್ಲಿದ್ದ ಶೌಚಾಲಯದೊಳಗೆ ಹೋಗಲು ಹೇಳಿದರು. ಕೆಲ ಗಂಟೆ ಅಲ್ಲಿಯೇ ಇದ್ದು ಬಳಿಕ ಸೇನಾಪಡೆಯವರ ನೆರವಿನಿಂದ ಸುರಕ್ಷಿತ ಸ್ಥಳಕ್ಕೆ ಬಂದೆವು. ಅಲ್ಲಿಂದ ಡೋಲಿಗಳ ಮೂಲಕ ವಾಪಸಾದೆವು’ ಎಂದು ನಾಗರತ್ನಮ್ಮ ಮತ್ತು ಗುರುಲಿಂಗಯ್ಯ ಹೇಳಿದರು.
‘ಸಂಕಷ್ಟಕ್ಕೆ ಸಿಲುಕಿದ್ದ ನಮ್ಮವರ ರಕ್ಷಣೆಗಾಗಿ ಸರ್ಕಾರದ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದೆವು. ನಮ್ಮ ರಕ್ಷಣೆಗೆ ಯಾವುದೇ ನೆರವು ಸಿಗಲಿಲ್ಲ. ಕೆಲವು ರಾಜ್ಯ ಸರ್ಕಾರಗಳು ತಮ್ಮ ಜನರ ರಕ್ಷಣೆಗೆ ಏರ್‌ಲಿಫ್‌್ಟಸೌಲಭ್ಯ ಮಾಡಿದ್ದವು. ನಮ್ಮವರು ತಾವೇ ಶ್ರಮಪಟ್ಟುಕೊಂಡು ಹೊರಬರಬೇಕಾಯಿತು’ ಎಂದು ದುಬಾಂರ್‍ಬ ಟ್ರಾವೆಲ್ಸ್‌ನ ದೇವರಾಜು ಮತ್ತು ಮತ್ತೊಬ್ಬ ಯಾತ್ರಿಕ ನಿವೃತ್ತ ಪೊಲೀಸ್ ಅಧಿಕಾರಿ ಕೆ.ಕೃಷ್ಣ ಹೇಳಿದರು.
ಜಮ್ಮು ಮಾರ್ಗದಲ್ಲಿ ಅಮರನಾಥ ಯಾತ್ರೆ ರದ್ದು, ನಾಪತ್ತೆಯಾದವರು ಜೀವಂತವಿರುವ ಸಾಧ್ಯತೆ ಕ್ಷೀಣ
ರಾಜ್ಯದ 370 ಅಮರನಾಥ ಯಾತ್ರಿಗಳು ಸೇಫ್: ಪವಿತ್ರ ಅಮರನಾಥ ಯಾತ್ರೆಗೆ ರಾಜ್ಯದಿಂದ ತೆರಳಿದ್ದ 370 ಯಾತ್ರಾರ್ಥಿಗಳ ಮಾಹಿತಿಯು ರಾಜ್ಯ ವಿಕೋಪ ನಿರ್ವಹಣಾ ಕೇಂದ್ರಕ್ಕೆ (ಎಸ್‌ಇಒಸಿ) ಲಭಿಸಿದ್ದು, ಈ ಎಲ್ಲರೂ ಸುರಕ್ಷಿತವಾಗಿದ್ದಾರೆ. ಎಲ್ಲ ಯಾತ್ರಿಕರ ರಕ್ಷಣೆಗೆ ಅಗತ್ಯ ಕ್ರಮ ವಹಿಸಲಾಗುತ್ತಿದೆ’ ಎಂದು ರಾಜ್ಯ ಸರ್ಕಾರ ತಿಳಿಸಿದೆ.
‘ಜು.8ರಿಂದ 10ರವರೆಗೂ ರಾಜ್ಯ ವಿಕೋಪ ನಿರ್ವಹಣಾ ಸಹಾಯವಾಣಿಗೆ ಒಟ್ಟು 75 ಕರೆಗಳು ಬಂದಿವೆ. ಅಮರನಾಥ ಯಾತ್ರೆಗೆ ತೆರಳಿದವರ ಸಂಬಂಧಿಕರು ಕರೆ ಮಾಡಿ ತಮ್ಮ ಕುಟುಂಬದವರ ರಕ್ಷಣೆಗೆ ಕೋರಿದ್ದಾರೆ. ಇವರಿಂದ ಒಟ್ಟು 370 ಯಾತ್ರಿಗಳ ಮಾಹಿತಿ ಲಭ್ಯವಾಗಿದ್ದು, ಅವರೆಲ್ಲರನ್ನೂ ನಮ್ಮ ಕೇಂದ್ರದ ಸಿಬ್ಬಂದಿ ದೂರವಾಣಿ ಹಾಗೂ ಸ್ಥಳಿಯ ಆಡಳಿತದ ಮೂಲಕ ಸಂಪರ್ಕಿಸಿ ಅವರಿಂದ ಮಾಹಿತಿ ಪಡೆದಿದ್ದಾರೆ. ಈ ವೇಳೆ ಎಲ್ಲರೂ ಸುರಕ್ಷಿತವಾಗಿರುವುದು ತಿಳಿದು ಬಂದಿದೆ’ ಎಂದು ರಾಜ್ಯ ಕಂದಾಯ ಇಲಾಖೆಯ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ