ಇಂದೂ ಕರಾವಳಿ ಜಿಲ್ಲೆಗಳಿಗೆ ರೆಡ್‌ ಅಲರ್ಟ್‌: ಉ.ಕ, ದ.ಕ, ಉಡುಪಿಯಲ್ಲಿ ಭಾರೀ ಮಳೆ

By Kannadaprabha NewsFirst Published Jul 11, 2022, 3:00 AM IST
Highlights

*  ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌
*  ಕುಕ್ಕೆಯಲ್ಲಿ 21 ಸೆಂ.ಮೀ. ಮಳೆ
*  ಬುಧವಾರ ಮಲೆನಾಡು ಮತ್ತು ಮಲೆನಾಡಿನ ತಪ್ಪಲಿನ ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್‌’ 

ಬೆಂಗಳೂರು(ಜು.11):  ಕಳೆದೊಂದು ವಾರದಿಂದ ಕರಾವಳಿ ಮತ್ತು ಮಲೆನಾಡಿನಲ್ಲಿ ಭರ್ಜರಿಯಾಗಿ ಸುರಿಯುತ್ತಿರುವ ಮಳೆ ಸೋಮವಾರ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಆವರಿಸಿಕೊಳ್ಳಲಿದೆ. ಬೀದರ್‌, ಕಲಬುರಗಿ, ಬೆಳಗಾವಿ, ಧಾರವಾಡ, ಹಾವೇರಿ ಜಿಲ್ಲೆಯಲ್ಲಿ ಭಾರಿ ಮಳೆಯಾಗಲಿದ್ದು (11 ರಿಂದ 20 ಸೆಂ.ಮೀ) ‘ಆರೆಂಜ್‌ ಅಲರ್ಟ್‌’ ನೀಡಲಾಗಿದೆ. ಬುಧವಾರದವರೆಗೆ ರಾಜ್ಯದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ‘ಅತಿ ಭಾರಿ ಮಳೆ’ಯಾಗಲಿರುವುದರಿಂದ (20 ಸೆಂ.ಮೀಗೂ ಹೆಚ್ಚು) ‘ರೆಡ್‌ ಅಲರ್ಟ್‌’ ಮುಂದುವರೆಸಲಾಗಿದೆ.

ಕೊಡಗು, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯಲ್ಲೂಈ ಮಳೆ ಮುಂದುವರಿಯಲಿದೆ. ಹಾಸನ ಮತ್ತು ಮೈಸೂರು ಜಿಲ್ಲೆಗೆ ‘ಯೆಲ್ಲೋ ಅಲರ್ಚ್‌’ ಇರಲಿದೆ. ಮಂಗಳವಾರ ಮಳೆ ಅಬ್ಬರ ತುಸು ಕಡಿಮೆ ಆಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮಲೆನಾಡಿನ ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್‌’ ಇರಲಿದೆ. ಇದೇ ವೇಳೆ ಉತ್ತರ ಒಳನಾಡಿನಲ್ಲಿ ಮಳೆ ಇನ್ನಷ್ಟು ವ್ಯಾಪಕವಾಗಲಿದ್ದು ಹಾವೇರಿ, ಧಾರವಾಡ, ಬೆಳಗಾವಿ, ಕಲಬುರಗಿ, ಬಾಗಲಕೋಟೆ, ಕೊಪ್ಪಳ, ವಿಜಯಪುರ, ದಕ್ಷಿಣ ಒಳನಾಡಿನ ಮೈಸೂರು ಮತ್ತು ಹಾಸನ ಜಿಲ್ಲೆಗೆ ‘ಯೆಲ್ಲೋ ಅಲರ್ಟ್‌’ ಎಚ್ಚರಿಕೆ ನೀಡಲಾಗಿದೆ. ಬುಧವಾರ ಮಲೆನಾಡು ಮತ್ತು ಮಲೆನಾಡಿನ ತಪ್ಪಲಿನ ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್‌’ ಇರಲಿದೆ.

ಕಂಗಾಲಾಗಿರುವ ಕರ್ನಾಟಕದಲ್ಲಿ ಭಾರಿ ಮಳೆ ಮುನ್ಸೂಚನೆ, ಸುರಕ್ಷಿತ ಸ್ಥಳಕ್ಕೆ ತೆರಳಲು ಜನರಿಗೆ ಮನವಿ

ಕುಕ್ಕೆಯಲ್ಲಿ 21 ಸೆಂ.ಮೀ. ಮಳೆ!

ಬೆಂಗಳೂರು: ಭಾನುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ದಕ್ಷಿಣ ಕನ್ನಡದ ಸುಬ್ರಹ್ಮಣ್ಯ 21 ಸೆಂ.ಮೀ., ಮೂಲ್ಕಿ 20, ಉತ್ತರ ಕನ್ನಡದ ಕ್ಯಾಸಲ್‌ ರಾಕ್‌ 19, ದಕ್ಷಿಣ ಕನ್ನಡದ ಮೂಡುಬಿದಿರೆ, ಬೆಳ್ತಂಗಡಿ ತಲಾ 18, ಧರ್ಮಸ್ಥಳ 15, ಕೊಡಗಿನ ಭಾಗಮಂಡಲ, ಚಿಕ್ಕಮಗಳೂರಿನ ಜಯಪುರ 17, ದಕ್ಷಿಣ ಕನ್ನಡದ ಮಾಣಿ 16 ಹಾಗೂ ಚಿಕ್ಕಮಗಳೂರಿನ ಕೊಟ್ಟಿಗೆಹಾರದಲ್ಲಿ 15 ಸೆಂ.ಮೀ ಮಳೆಯಾಗಿದೆ.
 

click me!