ಪ್ರತ್ಯೇಕವಾಗಿ ವಾಸವಿದ್ದ ಪತ್ನಿಯ ಮೇಲೆ ಬಲವಂತದ ಸಂಭೋಗ, ಕಾನೂನು ಸಂಕಷ್ಟಕ್ಕೆ ಸಿಲುಕಿದ ಪತಿ! ಏನಿದು ಪ್ರಕರಣ?

Kannadaprabha News   | Kannada Prabha
Published : Apr 10, 2026, 07:27 AM IST
Karnataka High Court

ಸಾರಾಂಶ

ಪ್ರತ್ಯೇಕವಾಗಿ ವಾಸಿಸುತ್ತಿದ್ದ ಪತ್ನಿಯ ಮೇಲೆ ಬಲವಂತದ ಸಂಭೋಗ ನಡೆಸಿದ ಆರೋಪ ಎದುರಿಸುತ್ತಿರುವ ಪತಿಯ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. ಪ್ರತ್ಯೇಕಗೊಂಡ ಪತ್ನಿಯೊಂದಿಗೆ ಬಲವಂತದ ಸಂಭೋಗವು ಐಪಿಸಿ 376(ಬಿ) ಅಡಿಯಲ್ಲಿ ಅಪರಾಧವಾಗುತ್ತದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

 ಬೆಂಗಳೂರು (ಏ.10): ಪ್ರತ್ಯೇಕವಾಗಿ ವಾಸವಾಗಿದ್ದ ಪತ್ನಿ ಮೇಲೆ ಬಲವಂತವಾಗಿ ಸಂಭೋಗ ನಡೆಸಿದ ಪತಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.

ಬಲವಂತದ ಸಂಭೋಗ, ಜೀವ ಬೆದರಿಕೆ ಮತ್ತು ಮನೆಗೆ ಅತಿಕ್ರಮ ಪ್ರವೇಶ ಆರೋಪ ಮೇಲೆ ಪತ್ನಿ ನಗರದ ಹೆಬ್ಬಗೋಡಿ ಪೊಲೀಸ್‌ ಠಾಣೆಯಲ್ಲಿ ದಾಖಲಿಸಿರುವ ದೂರಿನ ಸಂಬಂಧ ತನ್ನ ವಿರುದ್ಧ ಅಧೀನ ನ್ಯಾಯಾಲಯ ನಡೆಸುತ್ತಿರುವ ವಿಚಾರಣೆ ರದ್ದುಪಡಿಸುವಂತೆ ಕೋರಿ ತಮಿಳುನಾಡಿನ ದಕ್ಷಿಣ ಮಧುರೈ ಜಿಲ್ಲೆಯ ನಿವಾಸಿ ಆರ್‌.ನಿಶಾಂತ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ವಜಾಗೊಳಿಸಿತು.

ವಿಚಾರಣೆ ವೇಳೆ ಅರ್ಜಿದಾರನ ಪರ ವಕೀಲರು, ತನ್ನ ಖಾಸಗಿ ಭಾಗದಲ್ಲಿ ಉಂಟಾದ ನೋವಿನಿಂದ ರಾತ್ರಿ ಆಸ್ಪತ್ರೆಯ ತುರ್ತು ಘಟಕಕ್ಕೆ ದಾಖಲಾಗಿ ಚಿಕಿತ್ಸೆ ಪಡೆದಿದ್ದೇನೆ ಎಂದು ಪತ್ನಿ (ದೂರುದಾರೆ) ದೂರಿನಲ್ಲಿ ತಿಳಿಸಿದ್ದಾರೆ. ಆದರೆ, ಆಸ್ಪತ್ರೆಯ ದಾಖಲಾತಿಗಳಲ್ಲಿ ಪತ್ನಿ ಹೊರರೋಗಿಗಳ ವಿಭಾಗಕ್ಕೆ ದಾಖಲಾಗಿರುವುದಾಗಿ ಉಲ್ಲೇಖವಾಗಿದೆ. ಸಂಭೋಗ ನಡೆದಿಲ್ಲ ಎಂಬುದಾಗಿ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಹೇಳುತ್ತದೆ. ಇದರಿಂದ ಪತಿಯನ್ನು ಸುಳ್ಳು ಕೇಸಿನಲ್ಲಿ ಪತ್ನಿ ಸಿಲುಕಿಸಿರುವುದು ತಿಳಿಯುತ್ತದೆ ಎಂದರು.

ದೂರುದಾರೆ ಪತ್ನಿ ಖುದ್ದು ವಾದ ಮಂಡಿಸಿ, ಘಟನೆ ನಡೆದ ದಿನ ನಾನು ಮುಂಜಾನೆ 4.40ಕ್ಕೆ ತುರ್ತು ನಿಗಾ ಘಟಕಕ್ಕೆ ದಾಖಲಾಗಿದ್ದೇನೆ. ಆ ಸಮಯದಲ್ಲಿ ಹೊರರೋಗಿ ವಿಭಾಗ ತೆರೆದಿರಲಿಲ್ಲ. ಆ ಸಮಯದಲ್ಲಿ ಸ್ತ್ರೀರೋಗತಜ್ಞೆ ಇರಲಿಲ್ಲ. ಅದಕ್ಕೆ ನೀವು ದಾಖಲಾಗಬೇಕೇ ಎಂದು ನನಗೆ ಆಸ್ಪತ್ರೆ ಸಿಬ್ಬಂದಿ ಕೇಳಿದ್ದರು. ಆ ದಾಖಲಾತಿ ಫಾರಂನಲ್ಲಿ ಆ ಸಮಯ ಉಲ್ಲೇಖವಾಗಿದೆ. ಇನ್ನೂ ಪೊಲೀಸರು ಸಂಗ್ರಹಿಸಿರುವ ಸಿಡಿಆರ್‌ಯಿಂದ ಘಟನೆ ನಡೆದಾಗ ಪತಿ ಘಟನಾ ಸ್ಥಳದಲ್ಲಿರುವುದು ದೃಢಪಟ್ಟಿದೆ ಎಂದು ತಿಳಿಸಿದರು.

ಆರೋಪಿ ಪರ ವಕೀಲರು, ಪತ್ನಿ ದಾಖಲಿಸಿರುವ ಕ್ರೌರ್ಯ ಪ್ರಕರಣ ಕುರಿತು ಮಾತುಕತೆ ನಡೆಸಲು ಪತ್ನಿಯೇ ಮನೆಗೆ ಪತಿಯನ್ನು ಕರೆದಿದ್ದರು. ಆ ವೇಳೆ ಸಂಭೋಗ ನಡೆದೇ ಇಲ್ಲ ಎಂದು ಪ್ರತಿಪಾದಿಸಿದರು.

ಪತ್ನಿಯು, 2016ರಿಂದ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದೇವೆ ಎಂದು ಪತಿ ಹೇಳುತ್ತಿದ್ದಾರೆ. ಆದರೆ, 2019ರಿಂದ ಪ್ರತ್ಯೇಕವಾಗಿ ವಾಸವಾಗಿದ್ದೇವೆ ಎಂದು ನಾನು ಹೇಳುತ್ತಿದ್ದೇನೆ. ಘಟನೆಯು 2021ರ ಅಂತ್ಯದಲ್ಲಿ ನಡೆದಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಪತಿಯ ಪರ ವಕಿಲರು, ಆರೋಪಗಳನ್ನು ಕೈ ಬಿಡಲು ಕೋರಿ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಸ್ವಾತಂತ್ರ್ಯ ಕಾಯ್ದಿರಿಸಬೇಕು ಎಂದು ಎಂದು ಕೋರಿದರು.

ಅಂತಿಮವಾಗಿ ನ್ಯಾಯಪೀಠ, ಆರೋಪಗಳನ್ನು ಕೈಬಿಡಲು ಕೋರಿ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಪತಿಗೆ ಅನುಮತಿಸಿ ಅರ್ಜಿ ವಜಾಗೊಳಿಸಿತು.

ದೂರವಿದ್ದರೂ ಯಾಕೆ ಮನೆಗೆ ಹೋದ್ರು: ನ್ಯಾಯಪೀಠ ಪ್ರಶ್ನೆ

ಆಗ ನ್ಯಾಯಮೂರ್ತಿಗಳು ಪತಿಯ ಪರ ವಕೀಲರನ್ನು ಉದ್ದೇಶಿಸಿ, ಸಂಭೋಗ ನಡೆದಿಲ್ಲ ಎಂದು ಪತಿ ಹೇಳುತ್ತಿದ್ದಾರೆ. ಆದರೆ, ವಿಚಾರಣಾ ನ್ಯಾಯಾಲಯ ವಿಚಾರಣೆ ರದ್ದತಿಗೆ ಕೋರಿದ ಈ ಅರ್ಜಿ ವಿಚಾರಣೆ ವೇಳೆ ಘಟನೆ ನಡೆದ ದಿನ ಏನೆಲ್ಲಾ ಸಂಭವಿಸಿದೆ ಎಂದು ಹೈಕೋರ್ಟ್‌ ನಿರ್ಧರಿಸಬೇಕೇ? ಈ ಕುರಿತು ವಿಚಾರಣಾ ನ್ಯಾಯಾಲಯವೇ ಸಾಕ್ಷ್ಯಧಾರಗಳ ವಿಚಾರಣೆ ನಡೆಸಿ ನಿರ್ಧರಿಸಬೇಕಲ್ಲವೇ? ಪತಿ ಮತ್ತು ಪತ್ನಿ ಪ್ರತ್ಯೇಕಗೊಂಡು ವಾಸ ಮಾಡುತ್ತಿದ್ದಾಗ, ಪತ್ನಿಯೊಂದಿಗೆ ಬಲವಂತದ ಸಂಭೋಗ ನಡೆಸಿದರೆ ಅದು ಅತ್ಯಾ೧ಚಾರ ಆಗುತ್ತದೆ ಎಂದು ಭಾರತೀಯ ದಂಡ ಸಂಹಿತೆ 376(ಬಿ) ಹೇಳುತ್ತದೆ. ಈ ಪ್ರಕರಣದಲ್ಲಿ ಪತಿ ಮತ್ತು ಪತ್ನಿ ಎರಡು ವರ್ಷ ಹಿಂದೆಯೇ ಪ್ರತ್ಯೇಕಗೊಂಡಿದ್ದಾರೆ. ಮತ್ತೇಕೆ ಪತ್ನಿ ಮನೆಗೆ ಪತಿ ಹೋದರು ಎಂದು ಪ್ರಶ್ನಿಸಿದರು.

ಕ್ರೌರ್ಯ ಅಪರಾಧ ಮತ್ತು ಜೀವನಾಂಶ ವಿಚಾರಗಳ ವಿಚಾರಣೆ ವೇಳೆ, 2016ರಲ್ಲಿಯೇ ಪತ್ನಿ ಸ್ವ-ಇಚ್ಛೆಯಿಂದ ಮನೆಬಿಟ್ಟು ಹೋಗಿದ್ದಾರೆ ಎಂಬುದಾಗಿ ಪತಿಯೇ ಹೇಳಿದ್ದಾರೆ. ಆದರೆ, ಅತ್ಯಾ೧ಚಾರ ಕೇಸ್‌ ಬಂದಾಗ ನಾವು ಜೊತೆಗೆ ಇದ್ದೇವೆ ಎಂದು ಪತಿ ಹೇಳುತ್ತಾರೆ. ಯಾವುದೇ ಕಾರಣಕ್ಕೂ ಅತ್ಯಾ೧ಚಾರ ಪ್ರಕರಣ ರದ್ದುಪಡಿಸಲಾಗದು. ದೋಷಾರೋಪಗಳನ್ನು ಕೈ ಬಿಡಲು ಕೋರಿ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ. ಇಲ್ಲವೇ ಈ ಅರ್ಜಿಯನ್ನು ಮೆರಿಟ್‌ ಮೇಲೆ ವಿಚಾರಣೆ ನಡೆಸಿ ತೀರ್ಪು ನೀಡಬೇಕೆಂದರೆ ಹೇಳಿ, ಕೂಡಲೇ ತೀರ್ಪು ಬರೆಸಲಾಗುವುದು ಎಂದು ಪತಿ ಪರ ವಕೀಲರಿಗೆ ಸೂಚಿಸಿತು.

ಬಲವಂತದ ಸೆಕ್ಸ್‌ಗೆ 7 ವರ್ಷ ಜೈಲು ಶಿಕ್ಷೆ

ಪ್ರತ್ಯೇಕವಾಗಿ ವಾಸ ಮಾಡುತ್ತಿರುವ ಪತ್ನಿ ಜೊತೆಗೆ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿದರೆ ಐಪಿಸಿ 376ಬಿ ಅಡಿಯಲ್ಲಿ ಅಪರಾಧವೆಂದು ಪರಿಗಣಿಸಲಿದ್ದು, ಕಾನೂನು ಪ್ರಕಾರ 7ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Karnataka news live: ಪ್ರತ್ಯೇಕವಾಗಿ ವಾಸವಿದ್ದ ಪತ್ನಿಯ ಮೇಲೆ ಬಲವಂತದ ಸಂಭೋಗ, ಕಾನೂನು ಸಂಕಷ್ಟಕ್ಕೆ ಸಿಲುಕಿದ ಪತಿ! ಏನಿದು ಪ್ರಕರಣ?
ಪಠ್ಯವೇ ಇಲ್ಲದೆ CBSE ಸ್ಕೂಲಲ್ಲಿ ತೃತೀಯ ಭಾಷೆ! 7 ದಿನದ ಒಳಗೆ ಕಲಿಕೆ ಆರಂಭಿಸಲು ಆದೇಶ