ಬೇಸಿಗೆ ಆರಂಭದಲ್ಲೇ ಕೆರೆಗಳು ಅರ್ಧ ಖಾಲಿ! 2268 ಕೆರೆಗಳಲ್ಲಿ ಶೇ.50 ನೀರೂ ಇಲ್ಲ!

Kannadaprabha News   | Kannada Prabha
Published : Apr 10, 2026, 06:45 AM IST
Lakes half empty as summer begins 2268 lakes record less than 50 percents water level rav

ಸಾರಾಂಶ

ರಾಜ್ಯದಲ್ಲಿ ಹೆಚ್ಚುತ್ತಿರುವ ಬೇಸಿಗೆಯ ಝಳದಿಂದಾಗಿ ಸಣ್ಣ ನೀರಾವರಿ ಇಲಾಖೆಯ 2,268 ಕೆರೆಗಳಲ್ಲಿ ಶೇ.50ಕ್ಕಿಂತ ಕಡಿಮೆ ನೀರಿದ್ದು, 166 ಕೆರೆಗಳು ಸಂಪೂರ್ಣವಾಗಿ ಬತ್ತಿಹೋಗಿವೆ. ಇದು ಗ್ರಾಮೀಣ ಭಾಗದಲ್ಲಿ ನೀರಿನ ಆತಂಕವನ್ನು ಸೃಷ್ಟಿಸಿದ್ದು, ಪ್ರಮುಖ ಜಲಾಶಯಗಳಲ್ಲೂ ನೀರಿನ ಮಟ್ಟ ಗಣನೀಯವಾಗಿ ಕುಸಿದಿದೆ.

ಗಿರೀಶ್‌ ಗರಗ

ಬೆಂಗಳೂರು: ರಾಜ್ಯದಲ್ಲಿ ಬೇಸಿಗೆಯ ಝಳ ಹೆಚ್ಚುತ್ತಿದ್ದು, ಜನ ಹೈರಾಣಾಗುವಂತಾಗಿದೆ. ಬಿಸಿಲ ಬೇಗೆಯ ಪರಿಣಾಮ ಗ್ರಾಮೀಣ ಭಾಗದ ಜಲಮೂಲವಾಗಿರುವ ಕೆರೆಗಳಲ್ಲಿನ ನೀರಿನ ಪ್ರಮಾಣವೂ ಕಡಿಮೆಯಾಗುತ್ತಿದೆ. ಮುಖ್ಯವಾಗಿ ಸಣ್ಣ ನೀರಾವರಿ ಇಲಾಖೆ ಸುಪರ್ದಿಯ ಕೆರೆಗಳ ಪೈಕಿ 2,268 ಕೆರೆಗಳಲ್ಲಿ ಶೇ.50ಕ್ಕಿಂತ ಕಡಿಮೆ ನೀರಿರುವುದು ಗ್ರಾಮೀಣ ಭಾಗದಲ್ಲಿ ಆತಂಕಕ್ಕೆ ಕಾರಣವಾಗಿದೆ.

ಈ ಬಾರಿಯ ಬೇಸಿಗೆಯಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಾಗಿದೆ. ಅದರಿಂದಾಗಿ ರಾಜ್ಯದ ಕೆರೆಗಳಲ್ಲಿನ ನೀರಿನ ಪ್ರಮಾಣದಲ್ಲಿ ಭಾರೀ ಇಳಿಕೆಯಾಗುತ್ತಿದೆ. ಸಣ್ಣ ನೀರಾವರಿ ಇಲಾಖೆ ಅಡಿ 3,788 ಕೆರೆಗಳಿವೆ. ಅವುಗಳ ನಿರ್ವಹಣೆಯನ್ನು ಇಲಾಖೆಯಿಂದ ಮಾಡಲಾಗುತ್ತಿದೆ. ಆ ಕೆರೆಗಳ ಪೈಕಿ ಮಾ. 31ಕ್ಕೆ 2,268 ಕೆರೆಗಳಲ್ಲಿ ಸಾಮರ್ಥ್ಯಕ್ಕಿಂತ ಶೇ.50ರಷ್ಟು ಕಡಿಮೆ ನೀರು ಶೇಖರಣೆಯಾಗಿದೆ. ಬಿಸಿಲ ಪ್ರಮಾಣ ಹೆಚ್ಚಿದಂತೆಲ್ಲ ಈ ಪ್ರಮಾಣ ಕಡಿಮೆಯಾಗುತ್ತಲೇ ಇದೆ. ಬಿಸಿಲು ಹೀಗೆಯೇ ಮುಂದುವರಿದರೆ ಮೇ ತಿಂಗಳ ವೇಳೆಗೆ ನೀರಿನ ಪ್ರಮಾಣ ಭಾರೀ ಪ್ರಮಾಣದಲ್ಲಿ ಇಳಿಕೆಯಾಗುವ ಲಕ್ಷಣಗಳಿವೆ. ಮತ್ತೆ ಮಳೆಗಾಲ ಆರಂಭವಾಗುವವರೆಗೆ ನೀರಿಗಾಗಿ ಕೆರೆಗಳನ್ನು ನಂಬಿಕೊಂಡಿರುವ ಗ್ರಾಮಗಳ ಜನ ಸಮಸ್ಯೆ ಎದುರಿಸಬೇಕಾಗುತ್ತದೆ.

166 ಖಾಲಿ, 165 ಸಂಪೂರ್ಣ ಭರ್ತಿ:

ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ 3,788 ಕೆರೆಗಳಿದ್ದು, ಅವುಗಳಲ್ಲಿ 109.91 ಟಿಎಂಸಿ ಅಡಿಗಳಷ್ಟು ನೀರು ಸಂಗ್ರಹವಾಗುತ್ತದೆ. ಆ ಕೆರೆಗಳ ಪೈಕಿ ಮಾ.31ಕ್ಕೆ 166 ಕೆರೆಗಳಲ್ಲಿ ಒಂದೂ ಹನಿ ನೀರಿಲ್ಲದೆ ಒಣಗಿಹೋಗಿವೆ. ಅದರಲ್ಲಿ ಬೆಳಗಾವಿ ಜಿಲ್ಲೆಯ 291 ಕೆರೆಗಳ ಪೈಕಿ 69, ತುಮಕೂರು ಜಿಲ್ಲೆಯ ವ್ಯಾಪ್ತಿಯ 426 ಕೆರೆಗಳಲ್ಲಿ 61 ಕೆರೆಗಳಲ್ಲಿ ಒಂದು ಹನಿಯೂ ನೀರಿಲ್ಲದೆ ಖಾಲಿಯಾಗಿವೆ. ಉಳಿದಂತೆ ಬೀದರ್ ಜಿಲ್ಲೆಯಲ್ಲಿ 20, ಬಳ್ಳಾರಿಯಲ್ಲಿ 8, ಚಾಮರಾಜನಗರದಲ್ಲಿ 4, ಮಂಡ್ಯ, ಹಾವೇರಿ ಜಿಲ್ಲೆಗಳಲ್ಲಿ ತಲಾ 2 ಕೆರೆಗಳಲ್ಲಿ ನೀರಿಲ್ಲದಂತಾಗಿದೆ.

ಇನ್ನು, 959 ಕೆರೆಗಳಲ್ಲಿ ಶೇ.30ಕ್ಕಿಂತ ನೀರು ಸಂಗ್ರಹವಾಗಿದೆ. ಹಾಗೆಯೇ, 1,143 ಕೆರೆಗಳಲ್ಲಿ ಶೇ. 31ರಿಂದ 50ರಷ್ಟು, 1,355 ಕೆರೆಗಳಲ್ಲಿ ಶೇ.51ರಿಂದ 99 ನೀರು ತುಂಬಿದೆ. ಇನ್ನು, ಬೇಸಿಗೆ ಕಾಲದಲ್ಲೂ 165 ಕೆರೆಗಳು ಸಂಪೂರ್ಣ ಭರ್ತಿಯಾಗಿವೆ. ಅಲ್ಲದೆ, ಒಟ್ಟು ಕೆರೆಗಳು 109.91 ಟಿಎಂಸಿ ಅಡಿಗಳಷ್ಟು ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಸದ್ಯ 50.97 ಟಿಎಂಸಿ ಅಡಿಗಳಷ್ಟು ಮಾತ್ರ ನೀರು ಸಂಗ್ರಹವಾಗಿದೆ.

ಜಲಾಶಯಗಳೂ ಖಾಲಿ:

ಕೆರೆಗಳು ಮಾತ್ರವಲ್ಲದೆ ರಾಜ್ಯದ ಜಲಾಶಯಗಳಲ್ಲೂ ನೀರಿನ ಸಂಗ್ರಹ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. ರಾಜ್ಯದ ಪ್ರಮುಖ 22 ಜಲಾಶಯಗಳಲ್ಲಿ ಸದ್ಯ 138.04 ಟಿಎಂಸಿ ಅಡಿಗಳಷ್ಟು ನೀರಿದ್ದು, ಒಟ್ಟು ಶೇ. 25.94ರಷ್ಟು ಮಾತ್ರ ಭರ್ತಿಯಾಗಿವೆ. ಆದರೆ, ಕಳೆದೆರಡು ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸಂಗ್ರಹವಾಗಿರುವ ನೀರಿನ ಪ್ರಮಾಣ ತುಸು ಹೆಚ್ಚಿದೆ. 2025ರ ಏ.9ರಂದು ಜಲಾಶಯಗಳಲ್ಲಿ 127.55 ಟಿಎಂಸಿ ಅಡಿಗಳಷ್ಟು ಹಾಗೂ 2024ರ ಏ.9ರಂದು 74.75 ಟಿಎಂಸಿ ಅಡಿಗಳಷ್ಟು ನೀರು ಸಂಗ್ರಹವಾಗಿತ್ತು.

ಬೆಂಗಳೂರಿಗೆ ನೀರಿನ ಅಭಾವವಿಲ್ಲ?

ಕೆಆರ್‌ಎಸ್‌ನ ಒಟ್ಟು ನೀರು ಶೇಖರಣೆ ಸಾಮರ್ಥ್ಯ 49.45 ಟಿಎಂಸಿ ಅಡಿಗಳಷ್ಟಿದ್ದು, ಮಾ. 9ರಂದು 25.33 ಟಿಎಂಸಿ ಅಡಿಗಳಷ್ಟು ನೀರು ಸಂಗ್ರಹವಾಗಿದೆ. ಅದರಲ್ಲಿ ಡೆಡ್‌ ಸ್ಟೋರೇಜ್‌ ಹೊರತುಪಡಿಸಿ 16.96 ಟಿಎಂಸಿ ಅಡಿಗಳಷ್ಟು ನೀರು ಬಳಸಬಹುದಾಗಿದೆ. ಇನ್ನು, ಬೆಂಗಳೂರಿಗೆ ಪ್ರತಿದಿನ 1450 ಎಂಎಲ್‌ಡಿ ನೀರನ್ನು ಕಾವೇರಿ ನದಿಯಿಂದ ಪೂರೈಸಲಾಗುತ್ತಿದ್ದು, ಅದರಂತೆ ಮೇ ಅಂತ್ಯದವರೆಗೆ ಅಂದಾಜು 3ರಿಂದ 4 ಟಿಎಂಸಿ ಅಡಿಗಳಷ್ಟು ನೀರು ಬೇಕಾಗಲಿದೆ. ಸದ್ಯ ಕೆಆರ್‌ಎಸ್‌ನಲ್ಲಿನ ನೀರಿನ ಶೇಖರಣೆ ಗಮನಿಸಿದರೆ ಬೆಂಗಳೂರಿಗೆ ಈ ಬಾರಿ ನೀರಿನ ಕೊರತೆ ಉಂಟಾಗುವುದಿಲ್ಲ ಎಂದು ಅಂದಾಜಿಸಲಾಗುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Priyank Kharge challenges RSS: ವಿಷ ಸರ್ಪಕ್ಕೆ ಹಾಲೆರೆಯಲು ಸಾಧ್ಯವೇ?: ಆರೆಸ್ಸೆಸ್‌ ಪ್ರಿಯಾಂಕ್‌ ಖರ್ಗೆ ಸವಾಲೇನು?
2027ರಿಂದ ಪಿಯು ಮಕ್ಳಿಗೆ ಮುದ್ರಿತ ಅಂಕಪಟ್ಟಿ ಸಿಗದು! - ಡಿಜಿಟಲ್‌ ಅಂಕಪಟ್ಟಿ ಮಾತ್ರ ವಿತರಣೆ: ಮಧು