ಆಗಸ್ಟ್ ಮೊದಲ ದಿನವೇ ಮೈಸೂರಿಗೆ ಪ್ರಧಾನಿ ಮೋದಿ! ಸಮಯ, ಸ್ಥಳ, ವಿಶೇಷತೆ ಸಂಪೂರ್ಣ ವಿವರ ಇಲ್ಲಿದೆ

Kannadaprabha News   | Kannada Prabha
Published : Jul 29, 2026, 07:51 AM IST
All preparations in place for PM Modi s visit to Mysuru on August 1 rav

ಸಾರಾಂಶ

ಸ್ವಾಮಿ ವಿವೇಕಾನಂದರು ಮೈಸೂರಿನಲ್ಲಿ ವಾಸ್ತವ್ಯ ಹೂಡಿದ್ದ ನಾರಾಯಣಶಾಸ್ತ್ರಿ ರಸ್ತೆಯಲ್ಲಿ ಶ್ರೀರಾಮಕೃಷ್ಣ ಆಶ್ರಮವು ವಿವೇಕ ಸ್ಮಾರಕ ಹೆಸರಿನಲ್ಲಿ ನಿರ್ಮಿಸಿರುವ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಆ.1ರಂದು ಉದ್ಘಾಟಿಸುವರು.

ಮೈಸೂರು ಜು.29): ಸ್ವಾಮಿ ವಿವೇಕಾನಂದರು ಮೈಸೂರಿನಲ್ಲಿ ವಾಸ್ತವ್ಯ ಹೂಡಿದ್ದ ನಾರಾಯಣಶಾಸ್ತ್ರಿ ರಸ್ತೆಯಲ್ಲಿ ಶ್ರೀರಾಮಕೃಷ್ಣ ಆಶ್ರಮವು ವಿವೇಕ ಸ್ಮಾರಕ ಹೆಸರಿನಲ್ಲಿ ನಿರ್ಮಿಸಿರುವ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಆ.1ರಂದು ಉದ್ಘಾಟಿಸುವರು.

ಅಂದು ಮಧ್ಯಾಹ್ನ 3.30ಕ್ಕೆ ಸ್ಮಾರಕಕ್ಕೆ ಆಗಮಿಸಲಿರುವ ಅವರು ಸ್ಮಾರಕ ಲೋಕಾರ್ಪಣೆಗೊಳಿಸಿ, ಬಿಲ್ವ ಸಸಿಯನ್ನು ನೆಡುವರು. ಬಳಿಕ ವಿವೇಕಾನಂದರು ತಂಗಿದ್ದ ಕೊಠಡಿಯನ್ನು ವೀಕ್ಷಿಸಿ, ವಿವಿಧ ಛಾಯಾಚಿತ್ರಗಳು, ಪತ್ರಗಳ ಪ್ರದರ್ಶನ ವೀಕ್ಷಿಸುವರು. ಅಲ್ಲದೆ ಸ್ಮಾರಕ ಆವರಣದಲ್ಲಿನ ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಪುಷ್ಪಾರ್ಚನೆ ನೆರವೇರಿಸುವರು ಎಂದು ಶ್ರೀರಾಮಕೃಷ್ಣ ಆಶ್ರಮದ ಶ್ರೀ ಮುಕ್ತಿದಾನಂದಜಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಧಾನಿ ಅವರು ಆಸಕ್ತಿ ಇದ್ದರೆ ಕೆಲಕಾಲ ಧ್ಯಾನ ಮಾಡಲು ಅವಕಾಶವಿದೆ. ಅವರಿಗೆ ಶಿಲ್ಪಿ ಅರುಣ್‌ ಯೋಗಿರಾಜ್‌ ಅವರು ನಿರ್ಮಿಸಿರುವ ವಿವೇಕಾನಂದರ ಪ್ರತಿಮೆಯನ್ನು ಒಳಗೊಂಡ ಸ್ಮರಣಿಕೆ, ಮೈಸೂರಿನ ಸಾಂಪ್ರದಾಯಿಕ ವಸ್ತುಗಳನ್ನು ನೀಡಿ ಸನ್ಮಾನಿಸುವುದಾಗಿ ಅವರು ತಿಳಿಸಿದರು.

ಮೂರನೇ ಮಹಡಿಯಲ್ಲಿ ಶ್ರೀರಾಮಕೃಷ್ಣರು, ಶಾರದಾದೇವಿ ಮತ್ತು ವಿವೇಕಾನಂದರ ಭಾವಚಿತ್ರದ ಮುಂದೆ ಪ್ರಾರ್ಥನೆ ಸಲ್ಲಿಸುವರು. ಆಂಫಿ ಥಿಯೇಟರ್‌ನಲ್ಲಿ ಕುಳಿತು ವಿವೇಕಾನಂದರು ಮತ್ತು ಮೈಸೂರಿನ ಸಂಬಂಧ ಕುರಿತ 3 ನಿಮಿಷಗಳ ಒಂದು ಸಾಕ್ಷ್ಯಚಿತ್ರ ವೀಕ್ಷಿಸುವರು ಎಂದು ಅವರು ಹೇಳಿದರು.

ಬಳಿಕ ಯಾದವಗಿರಿಯ ಶ್ರೀರಾಮಕೃಷ್ಣ ಆಶ್ರಮದ ಪ್ರಾರ್ಥನಾ ಸ್ಥಳಕ್ಕೆ ಭೇಟಿ ನೀಡಿ ರಾಮಕೃಷ್ಣರಿಗೆ ಆರತಿ ವೀಕ್ಷಿಸಿ, ಪುಷ್ಪಾರ್ಚನೆ ನೆರವೇರಿಸುವರು. ನಂತರ ಆಶ್ರಮದ ಎದುರಿನ ಶ್ರೀರಾಮಕೃಷ್ಣ ವಿದ್ಯಾಶಾಲೆಗೆ ಸಂಜೆ 4.25ಕ್ಕೆ ಭೇಟಿ ನೀಡಿ, ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶಿಲಾನ್ಯಾಸ ನೆರವೇರಿಸುವರು. ಬೇಲೂರು ಮಠದ 98 ವರ್ಷದ ಜ್ಞಾನವೃದ್ಧರಾದ ಗೌತಮಾನಂದಜಿ ಅವರ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.

ಈ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋತ್‌, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕ ಕೆ.ಹರೀಶ್‌ಗೌಡ ಪಾಲ್ಗೊಳ್ಳುವರು. ಮೈಸೂರಿನ ರಾಮಕೃಷ್ಣ ಆಶ್ರಮದ ಶತಮಾನ ಕುರಿತಾದ ಸಾಕ್ಷ್ಯಚಿತ್ರ ಪ್ರದರ್ಶನದ ಬಳಿಕ ಅವರು ಸುಮಾರು 30 ನಿಮಿಷ ಮಾತನಾಡುವರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸುಮಾರು 150 ಮಂದಿ ಗಣ್ಯರು, 100 ರಿಂದ 120 ಮಂದಿ ಸಾಧುಗಳು, ವಿದ್ಯಾರ್ಥಿಗಳು, ಪೋಷಕರು, ಸಾರ್ವಜನಿಕರು ಸೇರಿ ಸುಮಾರು 6 ಸಾವಿರ ಮಂದಿಗೆ ಪಾಸ್‌ ವಿತರಣೆ. ಸಾರ್ವಜನಿಕರು ಶಿಸ್ತು ಮತ್ತು ಸುರಕ್ಷತೆ ದೃಷ್ಟಿಯಿಂದ ನಮ್ಮೊಂದಿಗೆ ಸಹಕರಿಸುವಂತೆ ಮುಕ್ತಿದಾನಂದಜಿ ಕೋರಿದರು.

ಅಂದು ಸಂಜೆ 7ರಿಂದ 8.50 ರವರೆಗೆ ವಿವೇಕ ಸ್ಮಾರಕ - ಸ್ಮೃತಿ ಸಂಸ್ಮರಣೆ ಕಾರ್ಯಕ್ರಮವು ಸ್ಮಾರಕದ ಆಂಪಿಥಿಯೇಟರ್‌ನಲ್ಲಿ ನಡೆಯಲಿದ್ದು, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯವಹಿಸುವರು. ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಆ.2ರಂದು ಮುಂಜಾನೆ 6.30 ರಿಂದ 7.30 ರವರೆಗೆ ಉಷಾಕೀರ್ತನೆ ಮತ್ತು ಧ್ಯಾನ ನಡೆಯಲಿದೆ. ಬೆಳಗ್ಗೆ 8ಕ್ಕೆ ಶಿವಮಂದಿರದಲ್ಲಿ ಪೂಜೆ ಇರುತ್ತದೆ. ಅಂದು ಬೆಳಗ್ಗೆ 9.30ಕ್ಕೆ ಕೃತಜ್ಞತಾ ಸಮರ್ಪಣೆ ಕಾರ್ಯಕ್ರಮ ನಡೆಯಲಿದ್ದು, ಆದಿಚುಂಚನಗಿರಿ ಮಠದ ಡಾ। ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯವಹಿಸುವರು. ಮಾಜಿ ಸಚಿವ ಎಚ್‌.ಕೆ.ಪಾಟೀಲ್‌ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು.

ಮಧ್ಯಾಹ್ನ 3 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಅವಧೂತ ದತ್ತಪೀಠದ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಸಾನ್ನಿಧ್ಯವಹಿಸಲಿದ್ದು, ನವ ದೆಹಲಿಯ ರಾಮಕೃಷ್ಣ ಮಿಷನ್‌ನ ಸ್ವಾಮಿ ಸರ್ವಲೋಕಾನಂದಜಿ ಗೌರವ ಅತಿಥಿಯಾಗಿ ಪಾಲ್ಗೊಳ್ಳುವರು. ಸಂಜೆ 6.30ಕ್ಕೆ ಗಾಯಕ ಜಗದೀಶ್‌ ಡಿ.ಕುರ್ತಕೋಟಿ ಮತ್ತು ಸಂಗಡಿಗರಿಂದ ಶಿವ ಡಮರು - ವಿವೇಕ ಗಾನಾಮೃತ ನಡೆಯಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಆಶ್ರಮದ ಪ್ರತಿನಿಧಿ ಶ್ರೀ ಯುಕ್ತೇಶಾನಂದಜಿ, ಶ್ರೀರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಕೇಂದ್ರದ ಮಹಾಮೇಧಾನಂದಜಿ ಇದ್ದರು.

ಮುಂದಿನ ಗುರಿ

ವಿವೇಕ ಸ್ಮಾರಕದಲ್ಲಿ ಮುಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದಲು ವಿದ್ಯಾರ್ಥಿಗಳಿಗಾಗಿ ಪುಸ್ತಕಗಳ ವ್ಯವಸ್ಥೆ ಮಾಡಲಾಗುವುದು. ಇದಕ್ಕಾಗಿ ಕಡಿಮೆ ಶುಲ್ಕದೊಡನೆ ನೋಂದಾಯಿಸಿಕೊಳ್ಳಲಾಗುತ್ತದೆ. ಜೊತೆಗೆ ಪಠ್ಯಕ್ರಮದಲ್ಲಿ ಇಲ್ಲದ, ವ್ಯಕ್ತಿತ್ವ ವಿಕಸನಕ್ಕೆ ಬೇಕಾದ ಅಲ್ಪಾವಧಿ ತರಗತಿ ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

-ಸ್ವಾಮಿ ಮುಕ್ತಿದಾನಂದಜಿ, ಅಧ್ಯಕ್ಷರು, ಶ್ರೀರಾಮಕೃಷ್ಣ ಆಶ್ರಮ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಕ್ರಮ ಬಾಂಗ್ಲಾದೇಶಿಯರ ಮಾಹಿತಿ ನೀಡಿದವರ ವಿರುದ್ಧವೇ ದೂರು! ಪೊಲೀಸರ ನಡೆ, ಸರ್ಕಾರದ ಓಲೈಕೆ ವಿರುದ್ಧ ಹೈ ಗರಂ
International Tiger Day: ವ್ಯಾಘ್ರನ ರಕ್ಷಣೆಯ ಅನಿವಾರ್ಯತೆ ಇಂದು ಹುಲಿ ಸಂರಕ್ಷಣಾ ದಿನ