International Tiger Day: ವ್ಯಾಘ್ರನ ರಕ್ಷಣೆಯ ಅನಿವಾರ್ಯತೆ ಇಂದು ಹುಲಿ ಸಂರಕ್ಷಣಾ ದಿನ

Published : Jul 29, 2026, 07:19 AM IST
International Tiger Day

ಸಾರಾಂಶ

ಪ್ರಶಾಂತ ಕೆ.ಪಿ. ಡೆಪ್ಯೂಟಿ ನ್ಯೂಸ್‌ ಎಡಿಟರ್‌, ಕನ್ನಡಪ್ರಭ:  ಹುಲಿ ಸಂರಕ್ಷಣೆಯು ಪರಿಸರ ಸಮತೋಲನಕ್ಕೆ ಅತ್ಯಗತ್ಯವಾಗಿದೆ. ಭಾರತದಲ್ಲಿ ಯಶಸ್ವಿ ಸಂರಕ್ಷಣಾ ಕ್ರಮಗಳಿಂದ ಹುಲಿಗಳ ಸಂಖ್ಯೆ ಹೆಚ್ಚಾಗಿದ್ದರೂ, ಅವುಗಳ ವಾಸಸ್ಥಾನವಾದ ಕಾಡುಗಳು ಕುಗ್ಗುತ್ತಿರುವುದು ಮಾನವ-ವನ್ಯಜೀವಿ ಸಂಘರ್ಷದಂತಹ ಹೊಸ ಸವಾಲುಗಳನ್ನು ಸೃಷ್ಟಿಸಿದೆ.

ಪ್ರಶಾಂತ ಕೆ.ಪಿ. ಡೆಪ್ಯೂಟಿ ನ್ಯೂಸ್‌ ಎಡಿಟರ್‌, ಕನ್ನಡಪ್ರಭ

ಹುಲಿ ರಕ್ಷಣೆ ಏಕೆ ಅಗತ್ಯ? ಹುಲಿ ಕೇವಲ ಒಂದು ಪ್ರಾಣಿ ಮಾತ್ರವಲ್ಲ. ಅದು ಇಡೀ ಪರಿಸರ ವ್ಯವಸ್ಥೆಯನ್ನು ಸುವ್ಯವಸ್ಥೆಯಲ್ಲಿ ಇಡುವ ಪ್ರಕೃತಿಯ ಪ್ರಮುಖ ಭಾಗ. ಕಾಡಿನಲ್ಲಿ ಕೇವಲ ಸಸ್ಯಾಹಾರ ಸೇವಿಸುವ ಪ್ರಾಣಿಗಳ ಸಂಖ್ಯೆ ಹೆಚ್ಚಾದರೆ ಅವುಗಳು ಹುಲ್ಲನ್ನು ಪೂರ್ತಿ ತಿಂದು ಮುಗಿಸುತ್ತವೆ. ಹುಲ್ಲು ಖಾಲಿ ಆದಾಗ ಮಣ್ಣಿನ ಸವಕಳಿ ಆರಂಭವಾಗುತ್ತದೆ. ಅವುಗಳ ಸಂಖ್ಯೆ ಹೆಚ್ಚಾದರೆ ಪ್ರಕೃತಿಯ ಸಮತೋಲನ ತಪ್ಪುತ್ತದೆ. ಈ ಸಸ್ಯಾಹಾರಿ ಪ್ರಾಣಿಗಳನ್ನು ಬೇಟೆ ಆಡುವ ಮೂಲಕ ಹುಲಿಯು ಪರಿಸರ ಸಮತೋಲನವನ್ನು ಕಾಪಾಡುತ್ತದೆ. ಅಷ್ಟಕ್ಕೇ ಮುಗಿಯುವುದಿಲ್ಲ ಹುಲಿಯ ಮಹತ್ವ. ಹುಲಿಯೊಂದು ಕಾಡಲ್ಲಿ ಆರೋಗ್ಯವಾಗಿ ಇದ್ದರೆ ಇಡೀ ಅರಣ್ಯ, ಇತರ ಪ್ರಾಣಿಗಳು ಆರೋಗ್ಯವಾಗಿ ಇವೆ ಎಂದರ್ಥ.

ಭಾರತ, ಕರ್ನಾಟಕದಲ್ಲಿ ಹುಲಿ ಸಂರಕ್ಷಣೆ ಭಾರತವು ಒಂದು ಕಾಲದಲ್ಲಿ ಹುಲಿಗಳ ಆವಾಸ ಸ್ಥಾನವಾಗಿತ್ತು. ಬ್ರಿಟಿಷರು, ಭಾರತೀಯ ರಾಜರು ತಮ್ಮ ಶೋಕಿಗಾಗಿ ಹುಲಿ ಬೇಟೆ ಆಡುವ ಚಟದಿಂದಾಗಿ ಅವುಗಳ ಸಂತತಿ ನಶಿಸಿತ್ತು. ವ್ಯಾಘ್ರನ ಬೇಟೆ ಆಡುವುದು ಒಂದು ಕಾಲದಲ್ಲಿ ಪ್ರತಿಷ್ಠೆಯ ಸಂಕೇತವಾಗಿತ್ತು. ಇದರಿಂದಾಗಿ ಇಡೀ ಪ್ರಪಂಚದಲ್ಲಿ ಶೇಕಡ 90 ರಷ್ಟು ಹುಲಿಗಳು ನಶಿಸಿ ಹೋದವು. ಹಲವು ತಳಿಗಳು ಭೂಮಿಯ ಮೇಲಿಂದಲೇ ಕಣ್ಮರೆ ಆದವು. ಕೊನೆಗೂ ಎಚ್ಚೆತ್ತ ಸರ್ಕಾರ ಹುಲಿಗಳ ಸಂರಕ್ಷಣೆಗೆ ಕಾಯ್ದೆ, ಮೀಸಲು ಅರಣ್ಯಗಳನ್ನು ಘೋಷಿಸುವ ಮೂಲಕ ಹುಲಿಗಳ ಸಂರಕ್ಷಣೆಯಲ್ಲಿ ವಿಶ್ವಕ್ಕೆ ಭಾರತ ಮಾದರಿ ಆಗಿದೆ. ಕರ್ನಾಟಕದ ಬಂಡೀಪುರ, ನಾಗರಹೊಳೆ, ಭದ್ರಾ, ಬಿಳಿಗಿರಿರಂಗನ ಬೆಟ್ಟ, ಕಾಳಿ ಅರಣ್ಯಗಳನ್ನು ಹುಲಿ ರಕ್ಷಣೆಗಾಗಿ ಮೀಸಲಿಟ್ಟಿದೆ.

ಹುಲಿ ಹೆಚ್ಚುತ್ತಿವೆ, ಆದರೆ ಕಾಡು? ಭಾರತದಲ್ಲಿ ವಿಶ್ವದಲ್ಲಿಯೇ ಇಂದು ಹುಲಿಗಳ ಸಂಖ್ಯೆ ಹೆಚ್ಚಿದೆ. ವಿಶ್ವದ ಶೇ.70 ಹುಲಿಗಳಿಗೆ ಆಶ್ರಯ ತಾಣವಾಗಿದೆ. ಭಾರತದಲ್ಲಿ 2006ರಲ್ಲಿ 1411ರಷ್ಟು ಹುಲಿಗಳು ಇದ್ದವು. 2 ದಶಕಗಳಲ್ಲಿ ಅವುಗಳ ಸಂಖ್ಯೆ 3622ಕ್ಕೆ ಹೆಚ್ಚಾಗಿದೆ. ಕರ್ನಾಟಕದಲ್ಲಿ 563 ಹುಲಿಗಳಿದ್ದು, (2006ರಲ್ಲಿ 290) ದೇಶದಲ್ಲಿಯೇ 2ನೇ ಸ್ಥಾನದಲ್ಲಿದೆ. ಮಧ್ಯಪ್ರದೇಶದಲ್ಲಿ 785 ಹುಲಿಗಳಿದ್ದು (2006ರಲ್ಲಿ 300) ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಹುಲಿಗಳ ಸಂಖ್ಯೆ ಹೆಚ್ಚುತ್ತಿರುವುದು ಸಂತೋಷದ ಸಂಗತಿಯೇ ಆಗಿದ್ದರೂ ಅವುಗಳಿಗೆ ಬೇಕಾದ ಆಹಾರ, ಆಶ್ರಯ, ನೀರು ಲಭ್ಯತೆಯೂ ಮುಖ್ಯವಾಗುತ್ತದೆ. ಆದರೆ ಒಟ್ಟಾರೆ ಕಾಡಿನ ಪ್ರಮಾಣ ಮಾತ್ರ ಇಡೀ ದೇಶದಲ್ಲಿ ಅಷ್ಟೇ ಇದೆ. ಭಾರತದಲ್ಲಿ 84,487 ಚದರ ಕಿಲೋ ಮೀಟರ್, ಕರ್ನಾಟಕದಲ್ಲಿ 5406 ಚದರ ಕಿ.ಮೀ. ಹುಲಿ ಸಂರಕ್ಷಣಾ ಅಭಯಾರಣ್ಯವಿದೆ. ಆದರೆ ಹುಲಿಗಳ ಸಂಖ್ಯೆ ಹೆಚ್ಚಾದಂತೆ ಅವುಗಳಿಗೆ ಬೇಕಾದ ಅರಣ್ಯ ಹೆಚ್ಚಳ ಆಗಿಲ್ಲ. ಇದರಿಂದಾಗಿ ಸಾಧಾರಣ ಒಂದು ಹುಲಿ 60 ಚ.ಕಿ.ಮೀ.ನಿಂದ 100 ಚ.ಕಿ.ಮೀ. ವ್ಯಾಪ್ತಿಯಲ್ಲಿ ತಮ್ಮ ಗಡಿಯನ್ನು ಗುರುತಿಸಿಕೊಳ್ಳುತ್ತವೆ. ಆದರೆ ಜಾಗ ಅಲಭ್ಯದಿಂದಾಗಿ ಗಡಿ 15ರಿಂದ 35 ಚ.ಕಿ.ಮೀ.ಗೆ ಕುಸಿದಿದೆ. ಹುಲಿಗಳು ಸಾಮಾನ್ಯವಾಗಿ ಏಕಾಂಗಿ ಆಗಿರಲು ಇಷ್ಟ ಪಡುತ್ತವೆ. ಆದರೆ ಅವುಗಳಿಗೆ ಕಾಡಿನ ವ್ಯಾಪ್ತಿ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಸಿಗುತ್ತಿಲ್ಲ.

ಹುಲಿ ದಿನಾಚರಣೆ ಮಹತ್ವ ನಿರಂತರ ಬೇಟೆಯಿಂದಾಗಿ ಕುಸಿದ ಹುಲಿಗಳ ಸಂಖ್ಯೆಯನ್ನು ಮತ್ತೆ ಹೆಚ್ಚಿಸುವ ಉದ್ದೇಶದಿಂದ ವಿಶ್ವದಲ್ಲಿ ಹುಲಿಗಳು ವಾಸವಾಗಿರುವ ದೇಶಗಳು ಎಲ್ಲವೂ ಒಟ್ಟಾಗಿ 2010ರಲ್ಲಿ ರಷ್ಯಾದ ಸೇಂಟ್‌ ಪೀಟರ್ಸ್‌ಬರ್ಗ್‌ನಲ್ಲಿ ಸಮಾವೇಶ ಆಯೋಜಿಸಿದ್ದವು. ಇಲ್ಲಿ ಹುಲಿಗಳ ಆವಾಸ ಸ್ಥಾನವನ್ನು ಕಾಪಾಡುವ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಯಿತು. ಭಾರತ, ರಷ್ಯಾ, ಇಂಡೋನೇಷ್ಯಾ, ಭೂತನ್‌, ನೇಪಾಳ, ಬಾಂಗ್ಲಾದೇಶ, ಥೈಲ್ಯಾಂಡ್, ಚೀನಾ, ಮ್ಯಾನ್‌ಮಾರ್‌ ದೇಶಗಳು ಹುಲಿಗಳ ಆವಾಸ ಸ್ಥಾನವಾಗಿರುವ ಪ್ರಮುಖ ರಾಷ್ಟ್ರಗಳಾಗಿವೆ. ಕಾಂಬೋಡಿಯಾ, ವಿಯೇಟ್ನಾಮ್‌ ದೇಶಗಳಲ್ಲಿಯೂ ಹುಲಿಗಳಿವೆ. ಆದರೆ ಅವುಗಳ ಸಂಖ್ಯೆ ನಿಖರವಾಗಿಲ್ಲ.

ಹುಲಿ ವಿಶೇಷತೆಗಳು

ಬೆಕ್ಕಿನ ಜಾತಿಗೆ ಸೇರಿದ ಹುಲಿಗಳು ದೊಡ್ಡ ಗಾತ್ರದ್ದಾಗಿವೆ. ಹುಲಿಗಳು ಒಂದಕ್ಕೊಂದು ವಿಭಿನ್ನವಾಗಿರುತ್ತವೆ. ಅವುಗಳ ಪಾದಗಳ ಮುದ್ರೆ, ಮೈ ಮೇಲಿನ ಕಪ್ಪು ಗೆರೆಗಳು ಸಂಪೂರ್ಣ ಬೇರೆ ಬೇರೆ ಆಗಿರುತ್ತದೆ. ಇವುಗಳಿಂದಲೇ 300 ಕೇಜಿವರೆಗೂ ತೂಗುತ್ತವೆ. ಭಾರತದ ಹುಲಿಗಳು 135 ಕೇಜಿಯಿಂದ 250 ಕೇಜಿವರೆಗೂ ತೂಗುತ್ತವೆ. ಭಾರತದ ಹುಲಿಗಳು ಬೆಂಗಾಲ್ ಟೈಗರ್ಸ್‌ ತಳಿಗೆ ಸೇರಿವೆ. ಸೈಬೀರಿಯನ್‌ ಹುಲಿಗಳು ದೊಡ್ಡ ಹುಲಿಗಳಾಗಿವೆ. ಹುಲಿಗೆ ಕಂಟಕವಾದ ಸಂಗತಿಗಳು ಮಾನವನ ಹಸ್ತಕ್ಷೇಪವು ಹುಲಿಗಳಿಗೆ ದೊಡ್ಡ ಕಂಟಕವಾಗಿದೆ. ಒಂದೆಡೆ ಎಷ್ಟೇ ಜಾಗೃತಿ ಮೂಡಿಸಿದರೂ ನಶಿಸುತ್ತಿರುವ ಕಾಡಿನಿಂದಾಗಿ ಹುಲಿಗಳಿಗೆ ಆಹಾರದ ಕೊರತೆ ಎದುರಾಗಿದೆ. ಬಿಗಿ ಕಾನೂನು ಜಾರಿಗೆ ತಂದರೂ ಹುಲಿಗಳನ್ನು ಅವುಗಳ ಉಗುರು, ಚರ್ಮಕ್ಕಾಗಿ ಕಳ್ಳ ಬೇಟೆ ನಡೆಯುತ್ತಲೇ ಇದೆ. ಇತ್ತೀಚೆಗೆ ಕರ್ನಾಟಕದ ಚಾಮರಾಜನಗರದಲ್ಲಿ ಜಾನುವಾರುಗಳನ್ನು ಹುಲಿಗಳು ಕೊಲ್ಲುತ್ತಿವೆ ಎಂದು ವಿಷವಿಕ್ಕಿ ಕೊಂದ ಘಟನೆಗಳೂ ನಡೆದಿವೆ. ಅಲ್ಲದೆ ಅರಣ್ಯದಲ್ಲಿ ಕೇವಲ ಒಂದೇ ರೀತಿಯ ಮರಗಳನ್ನು ಬೆಳೆಸುವ ಪ್ರವೃತ್ತಿಯಿಂದಾಗಿ ಆಹಾರ ಕೊರತೆಯಿಂದ ಬೇರೆ ಪ್ರಾಣಿಗಳ ಸಂತತಿ ಬೆಳೆಯುತ್ತಿಲ್ಲ. ಇದರಿಂದಾಗಿ ಹುಲಿಗಳಿಗೆ ಪ್ರಕೃತಿ ಸಹಜವಾಗಿ ಸಿಗುವ ಆಹಾರಕ್ಕೂ ಹೊಡೆತ ಬಿದ್ದಿದೆ. ಅಲ್ಲದೆ ಮಾನವನ ಅತೀಯಾದ ಆಸೆಯಿಂದ ಕಾಡಿಗೆ ಬೆಂಕಿ ಹಚ್ಚುವುದರಿಂದಲೂ ಹುಲಿಗಳ ಸಹಜ ವಾಸ ಸ್ಥಾನಕ್ಕೆ ಧಕ್ಕೆ ಆಗಿದೆ.

ನಮ್ಮ ಜವಾಬ್ದಾರಿಗಳು

ಹುಲಿಗಳನ್ನು ಪ್ರಕೃತಿಯ ಸಮತೋಲನ ಕಾಪಾಡುವ ಉದ್ದೇಶಕ್ಕಾಗಿ ರಕ್ಷಿಸಬೇಕಿದೆ. ಕಾಡಂಚಿನ ಗ್ರಾಮಗಳು, ಕೃಷಿ ಪ್ರದೇಶಗಳಿಗೆ ಹುಲಿಗಳು ಬರದಂತೆ ತಡೆಯುವುದು, ಕಾಡಿನಲ್ಲಿಯೇ ಅವುಗಳಿಗೆ ಸೂಕ್ತ ಆಹಾರ ಲಭ್ಯವಾಗುವಂತೆ ನಿಗಾ ವಕಹಿಸುವುದು ಇಂದಿನ ಅತೀ ದೊಡ್ಡ ಸವಾಲಾಗಿದೆ. ಇದಕ್ಕಾಗಿ ಕೃಷಿಕರನ್ನು ಒಟ್ಟಾಗಿಸಿ ಜಾಗೃತಿ ಮೂಡಿಸುವುದು, ಜಾನುವಾರುಗಳನ್ನು ಹುಲಿಗಳು ಬೇಟಿ ಆಡಿದ ಸಂದರ್ಭದಲ್ಲಿ ತಕ್ಷಣವೇ ಸರ್ಕಾರ ಸ್ಪಂದಿಸುವುದು, ಕಾಡನ್ನು ಮತ್ತಷ್ಟು ಸಮೃದ್ಧವಾಗಿ ಬೆಳೆಸುವುದು ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ಕಟ್ಟುನಿಟ್ಟಾಗಿ ಮುತುವರ್ಜಿಯಿಂದ ಜಾರಿಗೆ ತಂದರೆ ಹುಲಿಗಳ ಸಂತತಿ ಮತ್ತಷ್ಟು ಹೆಚ್ಚಾಗಿ ಹುಲಿಗಳು ಮತ್ತೆ ಗತವೈಭವದ ದಿನಗಳನ್ನು ಕಾಣುವುದರಲ್ಲಿ ಅನುಮಾನವಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Karnataka News Live: International Tiger Day - ವ್ಯಾಘ್ರನ ರಕ್ಷಣೆಯ ಅನಿವಾರ್ಯತೆ ಇಂದು ಹುಲಿ ಸಂರಕ್ಷಣಾ ದಿನ
ಎಸ್‌ಐಆರ್‌ ಅವಧಿ ವಿಸ್ತರಣೆ ಕೋರಿ ಅರ್ಜಿ ವಿಚಾರಣೆಗೆ ಒಪ್ಪದ ಕೋರ್ಟ್‌! PIL ಅರ್ಜಿ ಸಲ್ಲಿಸಿದ್ದು ಯಾರು? ನ್ಯಾಯಾಲಯದ ತೀರ್ಪು ಏನು?