
ಬೆಂಗಳೂರು (ಜು.29): ಬಾಂಗ್ಲಾದೇಶದ ಅಕ್ರಮ ವಲಸಿಗರ ದೂರು ಆಧರಿಸಿ ನಗರದ ವೈದ್ಯರು ಹಾಗೂ ಸಾಮಾಜಿಕ ಕಾರ್ಯಕರೊಬ್ಬರ ವಿರುದ್ಧ ಹಲ್ಲೆ ಹಾಗೂ ಜೀವ ಬೆದರಿಕೆ ಸೇರಿದಂತೆ ಇನ್ನಿತರ ಆರೋಪಗಳ ಮೇಲೆ ಎರಡು ಎಫ್ಐಆರ್ ದಾಖಲಿಸಿದ ಪೊಲೀಸರ ನಡೆಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್ ಪೊಲೀಸರ ನಡೆ ನಿಜಕ್ಕೂ ರಾಷ್ಟ್ರದ ಭದ್ರತೆ ಮತ್ತು ಹಿತಾಸಕ್ತಿಗೆ ಬೆದರಿಕೆಯಾಗಿದ್ದು, ಸರ್ಕಾರ ಅಕ್ರಮ ವಲಸಿಗರಿಗೆ ಸಹಕರಿಸುವ ಮತ್ತು ಓಲೈಕೆ ಮಾಡುವುದನ್ನು ನಿಲ್ಲಿಸಬೇಕು ಎಂದು ಖಡಕ್ ಆಗಿ ನುಡಿದಿದೆ.
ಬೆಂಗಳೂರು ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ದೇಶದ ಪ್ರಜೆಗಳನ್ನು ತೋರಿಸಿದ ಅವರು ನೀಡಿದ ದೂರು ಸ್ವೀಕರಿಸಿ ತಮ್ಮ ವಿರುದ್ಧ ಪೊಲೀಸರು ದಾಖಲಿಸಿರುವ ಎಫ್ಐಆರ್ ರದ್ದುಪಡಿಸಬೇಕು ಎಂದು ಕೋರಿ ವೈದ್ಯ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಮಲ್ಲಸಂದ್ರದ ಟಿ.ನಾಗೇಂದ್ರಪ್ಪ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠವು ಪೊಲೀಸರ ಮತ್ತು ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ಅರ್ಜಿದಾರರ ವಿರುದ್ಧದ ಪೊಲೀಸರು ದಾಖಲಿಸಿರುವ ಪ್ರತ್ಯೇಕ ಎರಡು ಎಫ್ಐಆರ್ ಗಳಿಗೆ ಮುಂದಿನ ವಿಚಾರಣೆವರೆಗೆ ತಡೆಯಾಜ್ಞೆ ನೀಡಿದ ಪೀಠ, ಅರ್ಜಿಯಲ್ಲಿ ವಿದೇಶಿಯರ ಪ್ರಾದೇಶಿಕ ನೋಂದಣಿ ಅಧಿಕಾರಿ (ಎಫ್ ಆರ್ ಆರ್ ಒ) ಅವರನ್ನು ಪ್ರತಿವಾದಿ ಮಾಡಿತು. ಹಾಗೆಯೇ, ಪ್ರಕರಣ ಕುರಿತು ಸಂಪೂರ್ಣ ಮಾಹಿತಿ ಒದಗಿಸುವಂತೆ ಪೊಲೀಸರು ಹಾಗೂ ಸರ್ಕಾರಕ್ಕೆ ಸೂಚನೆ ನೀಡಿ ಅರ್ಜಿಗಳ ವಿಚಾರಣೆಯನ್ನು ಆ.6ಕ್ಕೆ ಮುಂದೂಡಿತು.
ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರು, ಪ್ರಕರಣದಲ್ಲಿ ದೂರುದಾರರಾಗಿರುವ ಬೆಂಗಳೂರಿನ ಹೊಸಸಿದ್ದಾಪುರದಲ್ಲಿ ನೆಲೆಸಿರುವ ಬಾಂಗ್ಲಾ ದೇಶದ ಪ್ರಜೆ ನಸ್ರೀನಾ ಅವರನ್ನು ತೋರಿಸಿದ್ದರು. ದೂರುದಾರರು ನಗರದಲ್ಲಿ ಕಳೆದ 15 ವರ್ಷಗಳಿಂದ ಅಕ್ರಮವಾಗಿ ನೆಲೆಸಿದ್ದಾರೆ. ಆದರೆ, ಅರ್ಜಿದಾರರು ಜು.22ರಂದು ಬೆಳಗ್ಗೆ 11.30ಕ್ಕೆ ಮಾಹಿತಿ ನೀಡಿದ ನಂತರ, ದೂರುದಾರರ ಬಗ್ಗೆ ತನಿಖಾಧಿಕಾರಿಯು ಎಫ್ಆರ್ ಆರ್ ಒಗೆ ಪತ್ರ ಬರೆಯುತ್ತಾರೆ. ಅದಾದ ಕೇವಲ 15 ನಿಮಿಷಗಳಲ್ಲಿಯೇ ಬಾಂಗ್ಲಾ ಪ್ರಜೆಗಳು ನೀಡಿದ ದೂರು ದಾಖಲಿಸಿಕೊಂಡು ಹಲ್ಲೆ ಆರೋಪದ ಮೇಲೆ ಎಫ್ಐಆರ್ ದಾಖಲಿಸಿ ಅರ್ಜಿದಾರರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಮರುದಿನ ಅವರು ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಕೊಡತಿ ಗ್ರಾಮದ ಕಾರ್ಮಿಕರ ಗುಡಿಸಲಿನಲ್ಲಿದ್ದ ಬಾಂಗ್ಲಾ ನಿವಾಸಿ ಮೊಹಮ್ಮದ್ ಶೈದುಲ್ಲಾ ಇಸ್ಲಾಂ ನೀಡಿದ ದೂರು ಆಧರಿಸಿ ವರ್ತೂರು ಠಾಣಾ ಪೊಲೀಸರು ಮತ್ತೊಂದು ದೂರು ದಾಖಲಿಸಿದ್ದಾರೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಪೊಲೀಸರ ಪರ ಹಾಜರಿದ್ದ ಸರ್ಕಾರಿ ಅಭಿಯೋಜಕರನ್ನು ಉದ್ದೇಶಿಸಿ ಪ್ರತಿಕ್ರಿಯಿಸಿದ ಪೀಠ, ಅಕ್ರಮ ವಲಸಿಗರನ್ನು ದೇಶದಿಂದ ಹೊರಹಾಕಿ ಎಂದು ನ್ಯಾಯಾಲಯ ನಿರ್ದೇಶಿಸುತ್ತಿದ್ದರೆ, ಪೊಲೀಸರು ಮಾತ್ರ ಅಕ್ರಮ ವಲಸಿಗರ ದೂರು ಸ್ವೀಕರಿಸಿ ನಮ್ಮ ದೇಶದ ಪ್ರಜೆಗಳ ಮೇಲೆ ದೂರು ಎಫ್ಐಆರ್ ದಾಖಲಿಸಿದ್ದೀರಲ್ವಾ ಎಂದು ಖಾರವಾಗಿ ಪ್ರಶ್ನಿಸಿದರು.
ಸರ್ಕಾರಿ ಅಭಿಯೋಜಕರು, ದೂರುದಾರರ ಮೇಲೆ ಅರ್ಜಿದಾರರು ಹಲ್ಲೆ ನಡೆಸಿದ್ದಾರೆ ಎಂಬ ಕಾರಣಕ್ಕೆ ದೂರು ದಾಖಲಿಸಲಾಗಿದೆ. ಬಾಂಗ್ಲಾ ಪ್ರಜೆ ಎಂದು ತಿಳಿದ ಕೂಡಲೇ ದೂರುದಾರರನ್ನು ವಿದೇಶಿಯರ ನೋಂದಣಿ ಅಧಿಕಾರಿ ಎದುರು ಹಾಜರುಪಡಿಸಲಾಯಿತು ಎಂದು ತಿಳಿಸಿದರು.
ಅದಕ್ಕೆ ನ್ಯಾಯಮೂರ್ತಿಗಳು ಹೊಡೆದಿದ್ದಾರೆಂದು ಸುಳ್ಳು ಹೇಳುತ್ತಾರೆ. ಅವರು ಹೇಳಿದ್ದಾರೆಂದು ದೂರು ದಾಖಲಿಸುತ್ತೀರಾ? ಮಾರ್ಗಸೂಚಿಗಳ ಅನುಸಾರ ಅಕ್ರಮ ವಲಸಿಗರನ್ನು ದೇಶದಿಂದ ಹೊರಹಾಕಬೇಕಿದೆ. ಆದರೆ, ಅವರು ನೀಡಿದ ದೂರನ್ನು ಪೊಲೀಸರು ದಾಖಲಿಸಿಕೊಂಡು ಇಲ್ಲೇ ನೆಲೆಸಲು ಅವಕಾಶ ಕಲ್ಪಿಸುತ್ತಿದ್ದೀರಿ. ಅವರು ನೀಡಿದ ದೂರು ಹೇಗೆ ತಾನೆ ಸ್ವೀಕರಿಸಲು ಸಾಧ್ಯ? ಇದರಿಂದಲೇ ಅಕ್ರಮ ವಲಸಿಗರು ನಮ್ಮ ದೇಶದಲ್ಲಿ ನೆಲೆಸುತ್ತಿದ್ದಾರೆ. ಸರ್ಕಾರ ಈ ರೀತಿ ಸಹಕರಿಸುತ್ತಿರುವುದರಿಂದಲೇ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಖಾರವಾಗಿ ನುಡಿದರು.
ಎಫ್ಐಆರ್ ಅವರು ಕೂಡಲೇ ದೂರುದಾರರನ್ನು ದೇಶದಿಂದ ಗಡಿಪಾರು ಮಾಡುವುದಕ್ಕೆ ಕ್ರಮ ಜರುಗಿಸಬೇಕಲ್ಲವೇ?15 ನಿಮಿಷದಲ್ಲೇ ಅರ್ಜಿದಾರರ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ. ಇದು ಪ್ರತಿ ದೂರು ದಾಖಲಿಸುವುದಲ್ಲದೇ ಮತ್ತೇನು? ಈ ಸಣ್ಣ ವಿಚಾರ ತನಿಖಾಧಿಕಾರಿಗೆ ಗೊತ್ತಾಗುವುದಿಲ್ಲವೇ? ತನಿಖಾಧಿಕಾರಿ ಎಫ್ಆರ್ ಆರ್ ಒಗೆ ಬರೆದ ಪತ್ರದಲ್ಲಿ ದೂರುದಾರ ಬಾಂಗ್ಲಾ ಪ್ರಜೆ ಮೇಲೆ ಅರ್ಜಿದಾರರ ಹಲ್ಲೆ ಮಾಡಿದ್ದಾರೆ ಎಂದು ಒಂದಕ್ಷರವೂ ಉಲ್ಲೇಖಿಸಿಲ್ಲ. ಸರ್ಕಾರ ಹೀಗೆ ಸಹಕಾರ ನೀಡಿದರೆ, ಅಕ್ರಮ ವಲಸಿಗರ ಪ್ರಮಾಣ ನಾಯಿಕೊಡೆಯಂತೆ ಬೆಳೆಯುತ್ತದೆ. ಇದು ರಾಷ್ಟ್ರದ ಭದ್ರತೆಗೆ ಬೆದರಿಕೆ ಹಾಗೂ ಇಡೀ ಸಮಾಜಕ್ಕೆ ಅಪಾಯವಾಗಲಿದೆ. ಇಂತಹುದಕ್ಕೆ ವ್ಯವಸ್ಥೆ ಸಹಕರಿಸಬಾರದು. ಕಾನೂನು ದುರ್ಬಳಕೆಗೆ ಇದಕ್ಕಿಂತ ಅತ್ಯುತ್ತಮ ಉದಾಹರಣೆ ಮತ್ತೊಂದಿಲ್ಲ. ದೂರುದಾರರನ್ನು ಗಡಿಪಾರು ಮಾಡಲು ಎಫ್ಆರ್ ಆರ್ ಒಗೆ ನಿರ್ದೇಶನ ನೀಡಲಾಗುವುದು ಎಂದು ನುಡಿದರು.
ಸರ್ಕಾರಿ ಅಭಿಯೋಜಕರು ಉತ್ತರಿಸಿ, ಹಲ್ಲೆ ನಡೆಸಿರುವುದಾಗಿ ದೂರುದಾರರು ದೂರು ನೀಡಿದ್ದರಿಂದ ಎಫ್ಐಆರ್ ದಾಖಲಿಸಲಾಗಿದೆ ಅಷ್ಟೆ. ದೂರುದಾರರನ್ನು ಪೊಲೀಸರು ಸಮರ್ಥಿಸಿಕೊಳ್ಳುತ್ತಿಲ್ಲ ಎಂದರು.
ಆಗ ನ್ಯಾಯಮೂರ್ತಿಗಳು, ಹಲ್ಲೆ ಮಾಡಿದ್ದಕ್ಕೆ ದೂರುದಾರರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತೆ? ಗಾಯಗಳಿಲ್ಲ, ಆಸ್ಪತ್ರೆಗೆ ದಾಖಲಿಸಿಲ್ಲ. ದೂರು ನೀಡಿದರೆ ಮಾತ್ರಕ್ಕೆ ಏನೊಂದು ಪರಿಶೀಲನೆ ನಡೆಸದೆ ಈ ದೇಶದ ಪ್ರಜೆ ಮೇಲೆ ಎಫ್ಐಆರ್ ದಾಖಲಿಸಿರುವ ಪೊಲೀಸರ ನಡೆ ನಿಜಕ್ಕೂ ದೇಶದ ಹಿತಾಸಕ್ತಿಗೆ ವಿರುದ್ಧವಾಗಿದೆ. ಇಂತಹ ಓಲೈಕೆಯನ್ನು ನಿಲ್ಲಿಸಬೇಕು ಎಂದರು.
ಬೆಂಗಳೂರಿನ ಹೊಸಸಿದ್ದಾಪುರದಲ್ಲಿ ನೆಲೆಸಿರುವ ಬಾಂಗ್ಲಾ ದೇಶದ ಪ್ರಜೆ ನಸ್ರೀನಾ ಮತ್ತು ಕೊಡತಿ ಗ್ರಾಮದ ಕಾರ್ಮಿಕರ ಗುಡಿಸಲಿನಲ್ಲಿ ವಾಸವಿರುವ ಮೊಹಮ್ಮದ್ ಶೈದುಲ್ಲಾ ಇಸ್ಲಾಂ ಎಂಬುವವರು ನೀಡಿದ ದೂರು ಆಧರಿಸಿ ಕ್ರಮವಾಗಿ ಬೆಳ್ಳಂದೂರು ಮತ್ತು ವರ್ತೂರು ಠಾಣಾ ಪೊಲೀಸರು, ಮಹಿಳೆಯ ಗೌರವಕ್ಕೆ ಧಕ್ಕೆ ತಂದ, ಹಲ್ಲೆ ನಡೆಸಿದ, ಜೀವ ಬೆದರಿಕೆ ಹಾಕಿರುವುದು ಸೇರಿದಂತೆ ಇನ್ನಿತರ ಆರೋಪಗಳ ಮೇಲೆ ಅರ್ಜಿದಾರರ ಮೇಲೆ ಪ್ರತ್ಯೇಕ ಎರಡು ಎಫ್ಐಆರ್ ದಾಖಲಿಸಿದ್ದರು. ಅವುಗಳನ್ನು ರದ್ದುಪಡಿಸುವಂತೆ ಕೋರಿ ನಾಗೇಂದ್ರಪ್ಪ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ