
ಬೆಂಗಳೂರು (ಅ.9): ಮನುಸ್ಮೃತಿ, ಸನಾತನ ಧರ್ಮದ ಹೆಸರಿನಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಮೇಲೆಯೇ ಶೂ ಎಸೆದಿರುವ ಕೃತ್ಯವನ್ನು ಯಾರೂ ಸಹಿಸಲು ಸಾಧ್ಯವಿಲ್ಲ. ಕೂಡಲೇ ತಪ್ಪು ಮಾಡಿದ ವ್ಯಕ್ತಿ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.
ಘಟನೆ ಬಗ್ಗೆ ಅಗತ್ಯ ಪ್ರತಿರೋಧ ರಾಜಕೀಯ ಕ್ಷೇತ್ರ ಹಾಗೂ ನ್ಯಾಯಾಂಗ ಕ್ಷೇತ್ರದಿಂದ ವ್ಯಕ್ತವಾಗಿಲ್ಲ. ಇದನ್ನು ದುಃಖದಿಂದಲೇ ಹೇಳುತ್ತಿದ್ದೇನೆ. ಪ್ರಧಾನಿ ಮೋದಿ ತಡವಾಗಿಯಾದರೂ ಈ ದುಷ್ಕೃತ್ಯ ಖಂಡಿಸಿರುವುದು ಸ್ವಾಗತಾರ್ಹ. ಶೋಷಿತ ಸಮುದಾಯದ ಒಬ್ಬ ಮುಖ್ಯ ನ್ಯಾಯಮೂರ್ತಿಯ ಸ್ಥಿತಿಯೇ ಹೀಗಾದರೆ ಸಣ್ಣ ಸಮುದಾಯದವರನ್ನು ಸರ್ಕಾರ ಹೇಗೆ ನಡೆಸಿಕೊಳ್ಳುತ್ತದೆ ಎಂಬುದು ಗೊತ್ತಾಗುತ್ತಿದೆ ಎಂದು ಕಿಡಿ ಕಾರಿದ್ದಾರೆ. ಇದರ ಜತೆಗೆ ಶಾಂತಿ ಭಂಗ ಮಾಡುವವರ ಮೇಲೆ ಕ್ರಮವೂ ಆಗಬೇಕು ಎಂದು ಆಗ್ರಹ ಮಾಡಿದರು.
ಇದನ್ನೂ ಓದಿ: ಮಹಿಳಾ ಉದ್ಯೋಗಿಗಳಿಗೆ 1 ದಿನ ಋುತು ಚಕ್ರ ರಜೆ? ಇಂದು ಸಂಪುಟ ಸಭೆಯಲ್ಲಿ ನಿರ್ಧಾರ ಸಾಧ್ಯತೆ
ಅವರು, ವಕೀಲನ ಕೃತ್ಯವನ್ನು ರಾಜಕೀಯನಾಯಕರು, ವಕೀಲರು, ಬಾರ್ ಅಸೋಸಿಯೇಷನ್ ನಿರೀಕ್ಷಿತ ಪ್ರಮಾಣದಲ್ಲಿ ವಿರೋಧಿಸಿಲ್ಲ. ಮುಖ್ಯ ನ್ಯಾಯಮೂರ್ತಿಗಳಿಗೆ ಈ ರೀತಿ ಅವಮಾನ ಮಾಡಿದರೆ ಒಪ್ಪಬೇಕಾ? ಇಂತಹ ಕೃತ್ಯ ನಡೆಸುತ್ತಿರುವ ಸಂಘ ಸಂಸ್ಥೆಗಳ ವಿರುದ್ಧವೂ ಕ್ರಮ ಆಗಬೇಕು ಎಂದು ಒತ್ತಾಯ ಮಾಡಿದರು.
ಧರ್ಮದ ಹೆಸರು ತೆಗೆದುಕೊಂಡು ಶೂ ಎಸೆಯಲಾಗಿದೆ. ಘಟನೆ ನಡೆದ ತಕ್ಷಣ ನಾನು, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಖಂಡನೆ ಮಾಡಿದ್ದೇವೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 78 ವರ್ಷವಾದರೂ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಧರ್ಮದ ವಿಚಾರಧಾರೆಯಲ್ಲಿ ಅವಮಾನಿಸುತ್ತಾರೆ. ಈ ಬಗ್ಗೆ ಕೇಂದ್ರ ಕಠಿಣ ಕ್ರಮ ಕೈಗೊಳ್ಳಬೇಕಲ್ಲವೇ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಓಸಿ - ಸಿಸಿ ಇಲ್ಲದ ಕಟ್ಟಡಕ್ಕೆ ನೆರವಾಗಲು ಸುಗ್ರೀವಾಜ್ಞೆ?: ಇಂದು ಸಂಪುಟ ಸಭೆ ಮಹತ್ವದ ನಿರ್ಧಾರ?
ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ ವಾಲ್ಮೀಕಿ ಸಮಾಜದ ವ್ಯಕ್ತಿಗೆ ಕಳ್ಳ ಎಂದು ಗುಂಪು ಹಲ್ಲೆ ಮಾಡಿ ದೌರ್ಜನ್ಯ ಮಾಡಿದ್ದಾರೆ. ವ್ಯಕ್ತಿ ಕಳ್ಳನಾದರೆ ಪೊಲೀಸರಿದ್ದಾರೆ ಪ್ರಕರಣ ದಾಖಲಿಸಿ ಬಂಧಿಸುತ್ತಾರೆ. ಜನರೇ ಹಲ್ಲೆ ನಡೆಸುವುದು ಕಾನೂನು ವ್ಯವಸ್ಥೆಗೆ ಸಾಕ್ಷಿ. ಸಣ್ಣ ಪುಟ್ಟ ಸಮುದಾಯಗಳ ಸಮಸ್ಯೆಗಳ ಬಗ್ಗೆ ನಾವು ಹೋರಾಟ ಮಾಡಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಕಿಡಿ ಕಾರಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ