ಇಂದಿರಾಗಾಂಧಿ ಬದಲು ಸೋನಿಯಾ ಗಾಂಧಿ ಶ್ರದ್ಧಾಂಜಲಿ ಹೇಳಿದ ಖರ್ಗೆ!

By Suvarna NewsFirst Published Oct 31, 2024, 3:15 PM IST
Highlights

ಕೆಪಿಸಿಸಿ ಕಚೇರಿಯಲ್ಲಿ ಇಂದು ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಅವರ ಪುಣ್ಯಸ್ಮರಣೆ ಹಾಗೂ ಮಾಜಿ ಉಪಪ್ರಧಾನಿ ಶ್ರೀ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜಯಂತಿ ಕಾರ್ಯಕ್ರಮದಲ್ಲಿ  ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತೆ ಎಡವಟ್ಟು ಮಾಡಿಕೊಂಡಿದ್ದಾರೆ.

ಬೆಂಗಳೂರು (ಅ.31): ಕೆಪಿಸಿಸಿ ಕಚೇರಿಯಲ್ಲಿ ಇಂದು ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಅವರ ಪುಣ್ಯಸ್ಮರಣೆ ಹಾಗೂ ಮಾಜಿ ಉಪಪ್ರಧಾನಿ ಶ್ರೀ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜಯಂತಿ ಕಾರ್ಯಕ್ರಮದಲ್ಲಿ  ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತೆ ಎಡವಟ್ಟು ಮಾಡಿಕೊಂಡಿದ್ದಾರೆ.

ಭಾರತದ ಇಬ್ಬರು ಮಹಾನ್ ಚೇತನಗಳಿಗೆ ಗೌರವ ನಮನ ಸಲ್ಲಿಸಿ ಮಾತನಾಡಿದ ಖರ್ಗೆ ಅವರು ಮಾತಿನ  ಭರದಲ್ಲಿ ಇಂದಿರಾಗಾಂಧಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು ಎನ್ನುವ ಬದಲು ಬಾಯ್ತಪ್ಪಿನಿಂದ ಸೋನಿಯಾ ಗಾಂಧಿ ಎಂದು ಹೇಳಿದರು. ತಪ್ಪಿನ ಅರಿವಾಗಿ ಕೂಡಲೇ ಸಾರಿ ಕೇಳಿ, ಇಂದಿರಾಗಾಂಧಿ ಅವರಿಗೆ ಶ್ರದ್ಧಾಂಜಲಿ ಎಂದರು. ,

Latest Videos

ಇಬ್ಬರು ಮಹಾಪುರುಷರು ನಮಗೆ ಪ್ರೇರಣೆ:

ಶ್ರೀಮತಿ ಇಂದಿರಾಗಾಂಧಿ, ಸರ್ದಾರ್ ವಲ್ಲಭಭಾಯಿ ಪಟೇಲ್ ಈ ಇಬ್ಬರು ಮಹಾಪುರುಷರು ನಮಗೆ ಪ್ರೇರಣೆ. ಮಹಾಚೇತನಗಳಿಂದ ಪ್ರೇರಣೆ ಪಡೆಯಲು ನಾವಿಲ್ಲಿ ಸೇರಿದ್ದೇವೆ ಎಂದರು. ಇದೇ ವೇಳೆ  ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ತಿಳಿಸಿದರು.

ಸರ್ದಾರ್ ವಲ್ಲಭಭಾಯಿ ಪಟೇಲ್ ಜವಾಹರಲಾಲ್ ಅವರ ಜೊತೆ ಗಟ್ಟಿಯಾಗಿ ನಿಂತ ನಾಯಕ. ಹೈದ್ರಾಬಾದ್ ಕರ್ನಾಟಕಕ್ಕೆ ಲೇಟ್ ಆಗಿ ನಮಗೆ ಸ್ವಾತಂತ್ರ್ಯ ಸಿಕ್ತು. ವಲ್ಲಭಭಾಯಿ ಪಟೇಲ್ ಅವರು ಒಗ್ಗೂಡಿಸುವುದಕ್ಕೆ ಪ್ರಯತ್ನ ಪಟ್ಟರು. ಆ ಒಗ್ಗಟ್ಟನ್ನ ಕಾಪಾಡುವುದಕ್ಕೆ ಇಂದಿರಾಗಾಂಧಿ, ಸೋನಿಯಾಗಾಂಧಿ , ರಾಹುಲ್ ಗಾಂಧಿ ಪ್ರಾಣ ಕೊಟ್ಟರು ಎನ್ನುವ ಮೂಲಕ ಎಡವಟ್ಟಿನ ಮೇಲೆ ಎಡವಟ್ಟು ಮಾಡಿಕೊಂಡರು. ಬಳಿಕ ಸಾವರಿಸಿಕೊಂಡು ದಿನ ಹೇಳಿ ಹೇಳಿ ಈ ರೀತಿ ಆಗ್ತಾ ಇದೆ, ಮೀಡಿಯಾದವ್ರು ಇದನ್ನ ನೀವು ಹೈಲೈಟ್ ಮಾಡಬೇಡಿ ಎಂದು ಮನವಿ ಮಾಡಿದರು. 

ಶಕ್ತಿ ಯೋಜನೆ ಪರಿಷ್ಕರಣೆ: ಡಿ.ಕೆ. ಶಿವಕುಮಾರ್ ಯೂಟರ್ನ್, ಸಾರಿಗೆ ಸಚಿವ ಗರಂ!

ನಾನು ಮಾತನಾಡಿದ ಮೇಲೆ ಯಾರೂ ಮಾತನಾಡಬೇಡಿ:

ನಾನು ಮಾತನಾಡಿದ ಮೇಲೆ ಯಾರೂ ಮಾತನಾಡುವಂತಿಲ್ಲ ಎಂದು ಸಭೆ ಆಯೋಜಕರಿಗೆ ಖರ್ಗೆ ಸೂಚಿಸಿದರು. ಇದಕ್ಕೂ ಮೊದಲು ವೀರಪ್ಪ ಮೊಯ್ಲಿ ಮಾತನಾಡಿದ್ರು, ಬಳಿಕ ಸಿಎಂ ಸಿದ್ದರಾಮಯ್ಯ ಮಾತನಾಡಿದ್ರು. ನಂತರ ಡಿಸಿಎಂ ಡಿಕೆ ಶಿವಕುಮಾರ ಮಾತನಾಡ್ತಾರೆ ಎಂದು ಸಂಸದ ಜಿಸಿ ಚಂದ್ರಶೇಖರ್ ಹೇಳಿದರು. ಈ ವೇಳೆ ಎಐಸಿಸಿ ಅಧ್ಯಕ್ಷರು ಮಾತನಾಡಲಿ ಬಳಿಕ ಮಾತನಾಡ್ತೇನೆ ಎಂದ ಡಿಕೆ ಶಿವಕುಮಾರ.  ಆದರೆ ಭಾಷಣ ಆರಂಭಿಸುವ ಮುನ್ನ ನಾನು ಮಾತನಾಡಿದ ಮೇಲೆ ಯಾರೂ ಮಾತನಾಡುವಂತಿಲ್ಲ ಎಂದು ಖರ್ಗೆ ಸೂಚಿಸಿದ್ದರು. ಅಷ್ಟಾದರೂ ಖರ್ಗೆ ಭಾಷಣ ಬಳಿಕ ಡಿಕೆ ಶಿವಕುಮಾರ ಮಾತು ಶುರು ಮಾಡಿದರು.

ಹರಿಯಾಣ ಸೋಲು, ಇವಿಎಂ ಬಗ್ಗೆ ಅನುಮಾನ:

ಹರಿಯಾಣ ಚುನಾವಣಾ ಫಲಿತಾಂಶ ವಿಚಾರ ಪ್ರಸ್ತಾಪಿಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು ಖರ್ಗೆ ಅವರು, ಹರಿಯಾಣದಲ್ಲಿ ನಾವು ಹೇಗೆ ಸೋತಿದ್ದೇವೆ? ಇವರು ರಾತ್ರೋರಾತ್ರಿ ಏನು ಬೇಕೋ ಮಾಡಿಕೊಂಡ್ರು. 66 ಸ್ಥಾನದಲ್ಲಿದ್ದ ನಾವು ಒಂದೇ ಗಂಟೆಯಲ್ಲಿ ಏಕಾಏಕಿ 33 ಸ್ಥಾನಕ್ಕೆ ಕುಸಿದೆವು. ಇದು ಹೇಗೆ ಸಾಧ್ಯ ಆಯ್ತು?  ಎಂದು ಪ್ರಶ್ನಿಸಿದರು ಮುಂದುವರಿದು,  ಇವ್ರಿಗೆ ಹೇಗೆ ಬೇಕೋ ಹಾಗೇ ಇವಿಎಂ ಪ್ರೋಗ್ರಾಂ ‌ಬಳಸ್ತಾರೆ. ಆಮೇಲೆ ಹೇಳ್ತಾರೆ ನೀವು ಗೆದ್ದಾಗ ಇವಿಎಂ ಬಗ್ಗೆ ಹೇಳಲ್ಲ. ಸೋತಾಗ ಇವಿಎಂ ಬಗ್ಗೆ ಹೇಳ್ತಿರಾ ಅಂತ. ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದಾಗ, ತೆಲಂಗಾಣದಲ್ಲಿ ಗೆದ್ದಾಗ ಇವಿಎಂ ಮಾತನಾಡಲ್ಲ ಅಂತಾರೆ ಅರೇ ಇವಿಎಂ ಪ್ರೋಗ್ರಾಂ ಮಾಡೋರೇ ನೀವೇ ಅಲ್ವೇ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.

ಇವಿಎಂ ಹ್ಯಾಕ್ ಮಾಡಬಹುದು ಅಂತಾ ಎಲಾನ್ ಮಸ್ಕ್‌ ಕೂಡ ಹೇಳಿದ್ರು. ಹ್ಯಾಕ್ ಮಾಡದೇ ಇರುವ ಯಾವುದೇ ಎಲೆಕ್ಟ್ರಾನಿಕ್ ಉಪಕರಣ ಇಲ್ಲ ಅಂತ ಹೇಳಿದ್ರು. ಇವಿಎಂ ಹುಟ್ಟಿಸಿದವರೇ ಅದನ್ನ ಹ್ಯಾಕ್ ಮಾಡಬಹುದು ಅಂತಾ ಹೇಳಿದ್ರು. ಇದೇ ಕಾರಣಕ್ಕೆ ಪ್ರಪಂಚದ ಬಹುತೇಕ ದೇಶಗಳು ಬ್ಯಾಲೆಟ್ ನಲ್ಲಿ  ಚುನಾವಣೆ ನಡೆಸ್ತಾರೆ. ಅಮೆರಿಕ, ಆಸ್ಟ್ರೇಲಿಯಾ, ಜರ್ಮನಿ, ಜಪಾನ್ ಸೇರಿ ಅನೇಕ ದೇಶಗಳು ಇವಿಎಂ ಬಳಸೋದಿಲ್ಲ. ಆದರೆ ನಮ್ಮಲ್ಲಿ ಬಳಕೆ ಮಾಡ್ತಾರೆ. ನೇರವಾಗೇ ಇವಿಎಂ ಮೂಲಕ ಬಿಜೆಪಿ ಚುನಾವಣೆ ಗೆಲ್ತಿದೆ ಎಂದು ಆರೋಪಿಸಿದರು.

ದಲಿತರ ಮೇಲೆ ಅನ್ಯಾಯ:

ಇವತ್ತು ದೇಶಾದ್ಯಂತ ದಲಿತರ ಮೇಲೆ ಅನ್ಯಾಯ ಆಗ್ತಿದೆ. ಅದರ ಬಗ್ಗೆ ಒಂದೂ ಮಾತು ಹೇಳಲ್ಲ. ಮಹಾರಾಷ್ಟ್ರದಲ್ಲಿ ಹೊಡೆಸುವ ಕೆಲಸ ಮಾಡ್ತಿದ್ದಾರೆ. ಎಲ್ಲಾ ಕಡೆ ಅವರದ್ದೇ ಅಧಿಕಾರ. ಪ್ರತಿಯೊಂದರಲ್ಲೂ ರಾಜಕಾರಣ ಮಾಡ್ತಿದ್ದಾರೆ. ಇಂತವರನ್ನು ನಂಬಿದರೆ ದೇಶ ಪ್ರಗತಿ ಸಾಧಿಸುವುದಿಲ್ಲ, ದೇಶ ಒಗ್ಗೂಡಲ್ಲ. ಪ್ರತಿಯೊಂದರಲ್ಲೂ ನನ್ನದೇ ನಡೆಯಬೇಕು ಇದು ಅವರ ಅವರ ಧೋರಣೆ ಎಂದು ಪ್ರಧಾನಿ ಮೋದಿ ‌ವಿರುದ್ಧ ವಾಗ್ದಾಳಿ ನಡೆಸಿದರು.

ನನ್ನನ್ನು ಸಂಪುಟದಿಂದ ಕಿತ್ತೊಗೆಯಲು ಸಾಧ್ಯವಿಲ್ಲ: ಸಚಿವ ಜಮೀರ್ ಅಹ್ಮದ್ ಖಾನ್

ರಾಜ್ಯ ರಾಜಕಾರಣದಲ್ಲಿ ಕೈ ಹಾಕೊಲ್ಲ:

ನಾನು ಇಲ್ಲಿಗೆ ಬಂದಿರೋದು ರಾಜ್ಯ ರಾಜಕಾರಣದಲ್ಲಿ ಕೈಹಾಕಲು ಅಲ್ಲ. ಏನೇ ಕೇಳಿದ್ರೂ ಸ್ಟೇಟ್ ನವರನ್ನ ಕೇಳಿ ಅಂತ ಹೇಳ್ತೆನೆ. ನಾನೇನಾದರೂ ಮಾತನಾಡಿದ್ರೆ ದೊಡ್ಡದಾಗುತ್ತದೆ. ರಾಷ್ಟ್ರಮಟ್ಟದಲ್ಲಿ ದೊಡ್ಡ ಸುದ್ದಿಯಾಗಿಬಿಡುತ್ತೆ. ಅದಕ್ಕೆ ನಾನು ಏನೂ‌ ಮಾತನಾಡಲ್ಲ. ಇಲ್ಲಿನ ಸಮಸ್ಯೆಗಳು ನೀವೇ ಬಗೆಹರಿಸಿಕೊಳ್ಳಬೇಕು. ಸಿಎಂ ಡಿಸಿಎಂ ನಾಯಕರಿಗೆ ಹಿತವಚನ ನೀಡಿದ ಖರ್ಗೆ, ಎಲ್ಲರೂ ಒಗ್ಗಟ್ಟಿನಿಂದ ಇದ್ದರೆ ಮಾತ್ರ ಪಕ್ಷಕ್ಕೆ ನಮಗೂ ಒಳ್ಳೆಯದಾಗೋದು. ಸಿದ್ದರಾಮಯ್ಯ ಅವರ ಹತ್ರ ಬರ್ತಾರೆ ಅಣಾ ನೀನೇ ಎಲ್ಲ ನಿನ್ನ ಬಿಟ್ರೆ ಯಾರಣ್ಣ ಅಂತಾರೆ. ಡಿಕೆ ಶಿವಕುಮಾರ್ ಬಳಿ ಬರ್ತಾರೆ ನಿನ್ನ ಬಿಟ್ರೆ ಯಾರಣ್ಣ ಅಂತಾರೆ. ಅದಕ್ಕೆ ನೀವು ಒಗ್ಗಟ್ಟಾಗಿ ಇರಿ. ನೀವು ಬುದ್ದಿವಂತರು ಇದ್ದೀರಿ ಒಗ್ಗಟ್ಟಿನಿಂದ ಇರಬೇಕು. ಬೆಲ್ಲ ಇರುವ ತನಕ ಇರುವೆಗಳು ಇರ್ತವೆ. ನಿಮಗೂ ಇದರ ಅನುಭವ ಆಗಿರಬೇಕು ಅಲ್ವಾ ಎಂದು ಪ್ರಶ್ನಿಸಿದರು.

ಗ್ಯಾರಂಟಿ ಬಗ್ಗೆ ನೀನೇನೋ ಹೇಳಿದ್ಯಲ್ಲಪ್ಪ? ಡಿಕೆಶಿ ವಿರುದ್ಧ ಖರ್ಗೆ ಅಸಮಾಧಾನ

ಗ್ಯಾರಂಟಿ ಬಗ್ಗೆ ನೀನೇನೋ ಹೇಳಿದ್ಯಲ್ಲಪ್ಪ? ಒಂದು ಗ್ಯಾರಂಟಿ ನಿಲ್ಲಿಸ್ತಾರೆ ಅಂತ ಪೇಪರ್ ನಲ್ಲಿ ಬಂದಿದೆ ಎಂದು ಪಕ್ಕದಲ್ಲಿದ್ದ ಡಿಕೆ ಶಿವಕುಮಾರ ಕಡೆ ತಿರುಗಿ ಕೇಳಿದರು. ಈ ವೇಳೆ ಡಿಕೆ ಶಿವಕುಮಾರ, 'ನಾನು ಹೇಳಿಲ್ಲ' ಎಂದು ಕೈಸನ್ನೆ ಮಾಡಿದ ಡಿಕೆ ಶಿವಕುಮಾರ. ಮತ್ತೆ 'ನೀನು ಪೇಪರ್ ನೋಡಿಲ್ಲೇನಪ್ಪ, ಪೇಪರ್‌ನಲ್ಲಿ ನೀನು ಹೇಳಿರೋದು ಅಂತ ಬಂದಿದೆ.' ಎಂದು ಖರ್ಗೆ ಪ್ರಶ್ನಿಸಿದರು. ಈ ವೇಳೆ ಮಧ್ಯೆ ಪ್ರವೇಶಿಸಿದ ಸಿಎಂ ಸಿದ್ದರಾಮಯ್ಯ ಅವರು, 'ಇಲ್ಲಾ ಪರಿಷ್ಕರಣೆ ಮಾಡಬೇಕು' ಅಂತ ಬಂದಿದೆ ಎಂದರು. 'ಪರಿಷ್ಕರಣೆ ಮಾಡ್ತೇವೆ' ಅಂದ್ರೆ ಡೌಟು ಕ್ಲಿಯರ್ ಆಯ್ತಲ್ಲ ಅದನ್ನೇ ಹೇಳ್ತಿರೋದು ಎಂದ ಖರ್ಗೆ.

click me!