ಪಂಚರಾಜ್ಯ ಚುನಾವಣೆಯಲ್ಲಿ ಹೀನಾಯವಾಗಿ ಸೋತೊಡನೆ ಶುರುವಾಗಿದೆ ಭಾರತ್ ತೋಡೊ!

By Kannadaprabha NewsFirst Published Dec 4, 2023, 6:05 AM IST
Highlights

ಕಾಂಗ್ರೆಸ್‌ ಸಂಸದ ಕಾರ್ತಿ ಚಿದಂಬರಂ ಮಾಡಿಈ ಚುನಾವಣೆಗಳ ನಂತರ, ಉತ್ತರ-ದಕ್ಷಿಣವಾಗಿ ಭಾರತವನ್ನು ಒಡೆಯುವ ದುಸ್ಸಾಹಸಕ್ಕೆ ಕೈಹಾಕಿರುವುದು ಕಾಣಿಸುತ್ತಿದೆ. ಭಾರತವನ್ನು ಸಂಪೂರ್ಣವಾಗಿ ಅರಿಯದವರು ಮಾತ್ರ ಇಂತಹ ಕಾರ್ಯಕ್ಕೆ ಕೈಹಾಕಬಲ್ಲರು. ಹೀಗೆ ಒಡೆಯುವ ಕಾಂಗ್ರೆಸ್‌ನ ನೀತಿ ಬ್ರಿಟಿಷರ ಬಳುವಳಿ. ದೇಶ ವಿಭಜನೆಯಲ್ಲೇ ಇದರ ಬೀಜವಿದೆ.ದ ‘ದಿ ಸೌತ್‌’ ಟ್ವೀಟ್‌ನ ಮರ್ಮವೇನು? 

- ಚಕ್ರವರ್ತಿ ಸೂಲಿಬೆಲೆ, ಚಿಂತಕ

ಗೆಲುವನ್ನು ಸಂಭ್ರಮಿಸುವುದು ಕಷ್ಟವಲ್ಲ, ಸೋಲನ್ನು ಜೀರ್ಣಿಸಿಕೊಳ್ಳೋದು ನಿಜಕ್ಕೂ ಕಷ್ಟ. ಸೋಲಿನಲ್ಲಿ ತಾಳ್ಮೆಯನ್ನು, ಗೆಲುವಿನಲ್ಲಿ ಸಮಚಿತ್ತವನ್ನೂ ತೋರಬಲ್ಲ ನಾಯಕ ಸಿಗೋದು ಸುಲಭವಲ್ಲ. ಬಹುಶಃ ಕಾಂಗ್ರೆಸ್ಸು ಕಲಿಯಬೇಕಾದ ಬಲುದೊಡ್ಡ ಪಾಠ ಇದು. ನಿರಂತರ ಗೆಲುವುಗಳನ್ನೇ ಸವಿಯುತ್ತ ಬಂದಿರುವ ಮೋದಿ ಬಿಹಾರದ ಸೋಲನ್ನು ಸ್ವೀಕರಿಸಿದ ರೀತಿ ನೆನಪಿರಬೇಕಲ್ಲ! ತೀರಾ ಇತ್ತೀಚೆಗೆ ಅಪಾರ ಶ್ರಮ ಹಾಕಿದ ನಂತರವೂ ಕರ್ನಾಟಕದ ಚುನಾವಣೆ ಕಳೆದುಕೊಂಡಾಗ ಮೋದಿ ಅದೆಷ್ಟು ಶಾಂತವಾಗಿದ್ದರು ಗೊತ್ತಲ್ಲ. ಕಾಂಗ್ರೆಸ್ಸಿಗೆ ಹಾಗಾಗುವುದಿಲ್ಲ. ಗೆಲುವಿನಲ್ಲಿ ವಿಪರೀತವಾಗಿ ಬೀಗಿದರೆ, ಸೋಲನ್ನು ಮತ್ತೊಬ್ಬರ ತಲೆಗೆ ಕಟ್ಟಿ ಅಂತರಂಗದೊಳಗೆ ಅಡಗಿ ಕುಳಿತಿರುವ ಸಿದ್ಧಾಂತಕ್ಕೆ ರೆಕ್ಕೆ-ಪುಕ್ಕ ಕಟ್ಟಿ ಹಾರಿಬಿಡುತ್ತಾರೆ.

Latest Videos

ಹೌದು. ನಿನ್ನೆಯ ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ನಂತರ ಜನರ ಆದೇಶವನ್ನು ತಲೆಬಾಗಿ ಸ್ವೀಕರಿಸಬೇಕಿದ್ದ ಕಾಂಗ್ರೆಸ್ಸು ಉತ್ತರ ಮತ್ತು ದಕ್ಷಿಣ ಭಾರತಗಳನ್ನು ಒಡೆಯುವ ಮಾತಾಡಿದೆ. ಸುದೀರ್ಘ ಕಾಲ ಕೇಂದ್ರದ ಮಂತ್ರಿಗಿರಿಯನ್ನು ಅನುಭವಿಸಿದ ಕಾಂಗ್ರೆಸ್ಸಿನ ಪಿ.ಚಿದಂಬರಂ ಮಗ ಕಾರ್ತಿ ಚಿದಂಬರಂ ತನ್ನೊಂದು ಟ್ವೀಟ್‌ನಲ್ಲಿ ತೆಲಂಗಾಣದ ಗೆಲುವನ್ನು ಸಂಭ್ರಮಿಸಿ ‘ದಿ ಸೌಥ್’ ಎಂದಿದ್ದಾರೆ. ಅರ್ಥ ಬಲು ಸ್ಪಷ್ಟ. ದಕ್ಷಿಣ ಭಾರತದ ಜನ ಬಿಜೆಪಿಯನ್ನು ತಿರಸ್ಕರಿಸಿ ಕಾಂಗ್ರೆಸ್ಸನ್ನು ಆಯ್ದುಕೊಂಡಿದ್ದಾರೆ ಅಂತ. ಈ ಹಿಂದೆ ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದಾಗ ಭಾರತದ ಭೂಪಟದಲ್ಲಿ ದಕ್ಷಿಣ ಭಾರತವನ್ನೇ ಪ್ರತ್ಯೇಕ ಬಣ್ಣದಿಂದ ಗುರುತಿಸಿ ‘ಸೌಥ್ ರಿಜೆಕ್ಟ್ಸ್‌ ಬಿಜೆಪಿ’ ಎಂಬ ಬರಹದೊಂದಿಗೆ ಹಂಚಿಕೊಂಡಿದ್ದರು. ಯಾವುದನ್ನೇ ಆಗಲಿ ತುಂಡರಿಸುವ ಚಾಳಿ ಕಾಂಗ್ರೆಸ್ಸಿಗೆ ಈಗಿನದ್ದಲ್ಲ.

ಪಂಚ ರಾಜ್ಯ ಚುನಾವಣಾ ಫಲಿತಾಂಶ ಕುತೂಹಲ, ನಿಜವಾಗುತ್ತಾ ಮತಗಟ್ಟೆ ಸಮೀಕ್ಷೆ ವರದಿ?

 

ದೇಶ ವಿಭಜನೆಯಿಂದಲೇ ಆರಂಭ

ಸ್ವಾತಂತ್ರ್ಯದ ಹೊಸ್ತಿಲಲ್ಲಿ ಎಲ್ಲರ ವಿರೋಧದ ನಡುವೆಯೂ ಹಿಂದೂಸ್ತಾನ-ಪಾಕಿಸ್ತಾನವೆಂಬ ಎರಡು ರಾಷ್ಟ್ರಕ್ಕೆ ಮುದ್ರೆಯೊತ್ತಿದವರು ಯಾರು? ಭಾಷೆಯ ಗಲಾಟೆ ತಮಿಳುನಾಡನ್ನು ಕಾಡ್ಗಿಚ್ಚಿನಂತೆ ಆವರಿಸುತ್ತಿದ್ದಾಗ ಅದನ್ನು ನಂದಿಸೋದು ಬಿಟ್ಟು ಹೆಚ್ಚು ಉರಿವಂತೆ ಮಾಡಿದ್ದು ಯಾರು? ಇವೆಲ್ಲ ಹಳೆಯದ್ದೆನಿಸಿದರೆ ‘ಭಾರತ್ ತೇರೆ ತುಕ್ಡೆ ಹೋಂಗೇ’ ಘೋಷಣೆ ಜೆಎನ್‌ಯುನಲ್ಲಿ ಮೊಳಗುವಾಗ ಅದಕ್ಕೆ ಬೆಂಬಲ ಘೋಷಿಸಿ ಜೊತೆ ನಿಂತವರೆಲ್ಲ ಯಾರು? ಗಮನಿಸಿ ನೋಡಿದರೆ ಬ್ರಿಟಿಷರ ಇಂದಿನ ವಾರಸುದಾರರು ಇವರೇ. ಅವರೂ ಒಡೆದು ಆಳಿದರು, ಇವರೂ ಕೂಡ! ಇನ್ನೂ ಅಚ್ಚರಿ ಎಂದರೆ ಯಾವ ಯಾವ ಎಳೆಯನ್ನು ಹಿಡಿದು ಅವರು ನಮ್ಮನ್ನು ತುಂಡರಿಸಿದರೋ ಅದೇ ಹಾದಿಯಲ್ಲಿ ಈ ಮಂದಿಯೂ ನಡೆದಿದ್ದಾರೆ. ನೆನಪು ಮಾಡಿಕೊಳ್ಳಿ. ೨೦೧೯ರ ಚುನಾವಣೆಯ ವೇಳೆಗೆ ನಾಮ ಬಳಿದುಕೊಂಡು ಮಹಾದೇವನ ಭಕ್ತನಾಗಿ ತಿರುಗಾಡುತ್ತಿದ್ದ ರಾಹುಲ್‌ ಗಾಂಧಿ ಈ ಚುನಾವಣೆಯ ಹೊತ್ತಲ್ಲಿ ಸನಾತನ ಧರ್ಮವನ್ನು ಹೀಗಳೆವ, ಅದನ್ನು ನಾಶಗೈಯ್ಯುವ ಮಾತುಗಳನ್ನು ಶಾಂತವಾಗಿ ಬೆಂಬಲಿಸಿದರು. ಸ್ವತಃ ತಾವೇ ಹಿಂದೂಯಿಸಂ ಮತ್ತು ಹಿಂದುತ್ವಗಳು ಬೇರೆ ಎನ್ನುವ ತೃತೀಯ ದರ್ಜೆಯ ಚಿಂತನೆಯನ್ನು ಹರಿಬಿಟ್ಟು ಜನರನ್ನು ತಪ್ಪುದಾರಿಗೆ ಎಳೆಯಲೆತ್ನಿಸಿದರು. ಇದಾದ ಕೆಲವೇ ದಿನಗಳಲ್ಲಿ ‘ಡಿಸ್ಮಾಂಟ್ಲಿಂಗ್ ದ ಗ್ಲೋಬಲ್ ಹಿಂದುತ್ವ’ ಎನ್ನುವ ಜಾಗತಿಕ ಮಟ್ಟದ ವಿಚಾರ ಸಂಕಿರಣವೂ ನಡೆಯಿತು. ಅಂದರೆ ಭಾರತವನ್ನು ತುಂಡರಿಸಬೇಕೆನ್ನುವ ಜಾಗತಿಕ ಷಡ್ಯಂತ್ರದ ಭಾಗವಾಗಿ ಕಾಂಗ್ರೆಸ್ ಕೆಲಸ ಮಾಡುತ್ತಿದೆಯೇ?

ಜಾತಿಗಣತಿಯೆಂಬ ಒಡಕಿನ ಧ್ವನಿ

ಪಂಚರಾಜ್ಯಗಳ ಚುನಾವಣೆಗೆ ಜಾತಿಗಣತಿಯ ವಿಚಾರವನ್ನು ಮುಖ್ಯ ವಿಷಯವಾಗಿಟ್ಟುಕೊಂಡಿತಲ್ಲ ಕಾಂಗ್ರೆಸ್ಸು ಅದು ಒಡಕಿನ ದನಿಗೆ ಇಂಬುಕೊಡುವ ಉದ್ದೇಶವೇ ಅಲ್ಲವೇನು? ಪ್ರತಿ ಭಾಷಣದಲ್ಲೂ ಒಬಿಸಿಯ ವಿಚಾರವನ್ನೆತ್ತಿ ಮೀಸಲಾತಿಯಲ್ಲಿ ಅವರಿಗೆ ಮೋಸವಾಗಿದೆ ಎಂಬುದನ್ನು ಹೇಳುವ ಅಗತ್ಯವಾದರೂ ಏನು? ಸುದೀರ್ಘ ೭೫ ವರ್ಷಗಳ ಪ್ರಯಾಸದ ನಂತರ ಜಾತಿಯ ಗೋಡೆಯನ್ನು ಕೆಡವಿ ಮುಂದೋಡುವ ಪ್ರಯತ್ನದಲ್ಲಿರುವ ಭಾರತವನ್ನು ಹಿಂದಕ್ಕೆಳೆದು ಮಜಾ ನೋಡುವುದೇ ಅಲ್ಲವೇ? ಯಾರದ್ದಿದು ಆಲೋಚನೆ? ಭಾರತವನ್ನು ಶಾಶ್ವತ ಗುಲಾಮವನ್ನಾಗಿಸುವ ಮನೋಗತ ಹೊಂದಿದ್ದ ಬ್ರಿಟಿಷರದ್ದಲ್ಲವೇ? ಕಾಂಗ್ರೆಸ್ಸು ಅವರದ್ದೇ ಮುಂದುವರಿದ ಭಾಗವಾ? ಕರ್ನಾಟಕ ಚುನಾವಣೆಯ ಹೊತ್ತಲ್ಲಿ ಸೌಹಾರ್ದತೆಯಿಂದ ಕೂಡಿದ್ದ ಲಿಂಗಾಯತ-ವೀರಶೈವರ ನಡುವೆ ಬಲುದೊಡ್ಡ ಕಂದಕವನ್ನು ಉಂಟುಮಾಡಿದ್ದು ಇಂಥದ್ದೇ ಕೊಳೆತ ಆಲೋಚನೆಯಿಂದಲೇ.

ಉತ್ತರ-ದಕ್ಷಿಣ ಬೇರೆ ಅಲ್ಲವೇ ಅಲ್ಲ

ಈಗ ಈ ಚುನಾವಣೆಗಳ ನಂತರ, ಉತ್ತರ-ದಕ್ಷಿಣವಾಗಿ ಭಾರತವನ್ನು ಒಡೆಯುವ ದುಸ್ಸಾಹಸಕ್ಕೆ ಕೈ ಹಾಕಿರುವುದು ದೃಗ್ಗೋಚರವಾಗಿದೆ. ಭಾರತವನ್ನು ಸಂಪೂರ್ಣವಾಗಿ ಅರಿಯದ ಮೂರ್ಖರ ಸರದಾರರು ಮಾತ್ರ ಇಂತಹ ಕಾರ್ಯಕ್ಕೆ ಕೈ ಹಾಕಬಲ್ಲರು. ಅಲ್ಲದೇ ಮತ್ತೇನು? ಕಾಶಿಯ ವಿಶ್ವನಾಥನ ದರ್ಶನ ಪಡೆದವ ರಾಮೇಶ್ವರಕ್ಕೆ ಬಂದು ಗಂಗಾಭಿಷೇಕ ಮಾಡಿದ ನಂತರವೇ ಯಾತ್ರೆ ಸಂಪೂರ್ಣವಾಗುತ್ತದೆ ಎನ್ನುವ ನಂಬಿಕೆ ಇರುವ ರಾಷ್ಟ್ರದಲ್ಲಿ ಉತ್ತರ ಯಾವುದು? ದಕ್ಷಿಣ ಯಾವುದು? ದೇಶದ ಉದ್ದಗಲಕ್ಕೂ ಹಬ್ಬಿಕೊಂಡಿರುವ ಶಕ್ತಿಪೀಠಗಳ ಕುರಿತ ಜ್ಞಾನ ಇದ್ದವ ಭಾರತವನ್ನು ಜೋಡಿಸುವ ನಮ್ಮ ಹಿರಿಯರ ಪ್ರಯತ್ನದ ಕುರಿತು ಹೆಮ್ಮೆ ಪಡದಿರಲಾರ. ರಾಮ ಅಯೋಧ್ಯೆಯವನಿರಬಹುದು, ಆದರೆ ಸೀತೆಯೊಂದಿಗೆ ಅವನನ್ನು ಕೂಡಿಸಲು ಕಾರಣವಾದ ಆಂಜನೇಯ ನಮ್ಮವ. ಹೇಗೆ ಬೇರೆ ಮಾಡುವಿರಿ? ದಕ್ಷಿಣದ ಮೂರು ಆಚಾರ್ಯರನ್ನು ಉತ್ತರದ ಮಂದಿಯೂ ಶಾಂತವಾಗಿ ಅನುಸರಿಸುತ್ತಾರಲ್ಲ, ವಿಭಜನೆಯ ಗೆರೆ ಎಲ್ಲಿದೆ? ‘ಭಾರತ್ ಜೋಡೋ’ ಸುಖಾಸುಮ್ಮನೆ ನಡೆದರೆ-ಓಡಿದರೆ ಆಗುವಂಥದ್ದಲ್ಲ. ಅದು ಭಾರತದೊಂದಿಗೆ ತಾದಾತ್ಮ್ಯ ಹೊಂದುವುದರಿಂದ ಸಾಧ್ಯವಾಗುವಂಥದ್ದು! ಇಷ್ಟಕ್ಕೂ ಆಕ್ರಮಣಕಾರಿಗಳಾಗಿ ಬಂದ ಆರ್ಯರು ದ್ರಾವಿಡರನ್ನು ಓಡಿಸಿ ಉತ್ತರ ಭಾರತವನ್ನು ತಮ್ಮದಾಗಿಸಿಕೊಂಡರೆಂದು ಬೂಸಿ ಬಿಟ್ಟವರು ಇಂಗ್ಲಿಷರು. ಈ ವಾದ ವೈಜ್ಞಾನಿಕ ನೆಲೆಕಟ್ಟಿನ ಮೇಲೆ ಸುಳ್ಳೆಂದು ಸಾಬೀತಾದ ಮೇಲೂ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಾದಿಯಾಗಿ ಉತ್ತರ-ದಕ್ಷಿಣ ಭೇದದ ಸಮರ್ಥಕರೆಲ್ಲ ಮತ್ತೆ ಮತ್ತೆ ಉರು ಹೊಡೆದಿದ್ದನ್ನು ಒಪ್ಪಿಸುತ್ತಲೇ ಬಂದಿದ್ದಾರೆ.

ಚಿದಂಬರಂ ಎಲ್ಲಿಗೆ ಮಂತ್ರಿಯಾಗಿದ್ದರು?

ಹೋಗಲಿ ಕಾಂಗ್ರೆಸ್ಸಿನ ಪೂರ್ಣ ಹೆಸರೇನು ಗೊತ್ತೇ? ಭಾರತ ರಾಷ್ಟ್ರೀಯ ಕಾಂಗ್ರೆಸ್ಸು ಅಂತಲೇ. ಅವರ ‘ರಾಷ್ಟ್ರೀಯ’ದಲ್ಲಿ ಉತ್ತರ ಭಾರತ ಇಲ್ಲವೇನು? ಚಿದಂಬರಂ ಮತ್ತೆ ಮತ್ತೆ ಕೇಂದ್ರ ಮಂತ್ರಿಯಾಗಿ ದೆಹಲಿಯಲ್ಲಿ ಅಧಿಕಾರ ಅನುಭವಿಸಿದರಲ್ಲ; ಆಗ ಉತ್ತರ-ದಕ್ಷಿಣ ಒಂದೇ ಆಗಿತ್ತಾ? ಉತ್ತರ ಭಾರತದ ಇಂದ್ರಾಣಿ ಮುಖರ್ಜಿಯ ಐಎನ್‌ಎಕ್ಸ್ ಮೀಡಿಯಾದಲ್ಲಿ ಮಾರಿಷಸ್‌ನ ಬೋಗಸ್ ಕಂಪನಿಯ ಮೂಲಕ ಹಣ ಹೂಡಿ ದುಡ್ಡು ಗಳಿಸುವಾಗ ಉತ್ತರ-ದಕ್ಷಿಣ, ದೇಶ-ವಿದೇಶ ಯಾವ ವಿಭಾಗವೂ ಇವರಿಗೆ ಇರಲಿಲ್ಲ. ಈಗ ಸೋತೊಡನೆ ಎಲ್ಲವೂ ತಲೆಗೆ ಬರಲಾರಂಭಿಸಿದೆ.

ತೆಲಂಗಾಣ ಚುನಾವಣೆ -2023 ವಿಐಪಿ ಅಭ್ಯರ್ಥಿಗಳು ಯಾರಾರು ಇಲ್ಲಿದೆ ನೋಡಿ ಮಾಹಿತಿ..

ದಕ್ಷಿಣ ಬಿಜೆಪಿಯನ್ನು ತಿರಸ್ಕರಿಸಿದೆ ಎನ್ನುವಲ್ಲಿ ಉತ್ತರ ಕಾಂಗ್ರೆಸ್ಸನ್ನು ತಿರಸ್ಕರಿಸಿದೆ ಎಂಬ ಸಾಲು ಅಡಗಿದೆ ಎಂಬುದನ್ನು ಮರೆಯುವಂತಿಲ್ಲ. ಅಷ್ಟೇ ಅಲ್ಲ, ಸದ್ಯಕ್ಕೆ ಸಂಸದರ ವಿಚಾರದಲ್ಲಿ ದಕ್ಷಿಣದಲ್ಲಿ ಹೆಚ್ಚು ಸ್ಥಾನ ಬಿಜೆಪಿಗೇ! ಅಂದಹಾಗೆ ಕರ್ನಾಟಕದಲ್ಲಿ ಬಿಜೆಪಿಗೆ ಮತ ಗಳಿಕೆಯಲ್ಲಿ ಹೆಚ್ಚು ವ್ಯತ್ಯಾಸವಾಗಿಲ್ಲ ಮತ್ತು ತೆಲಂಗಾಣದಲ್ಲಿ ಕಳೆದ ಬಾರಿಗಿಂತ ಎರಡು ಪಟ್ಟು ಹೆಚ್ಚು ಮತಗಳಿಕೆಯಾಗಿದೆ. ತಮಿಳುನಾಡಿನಲ್ಲಿ ಅಣ್ಣಾಮಲೈ ವಿರೋಧಿಗಳು ನಿಂತ ನೆಲ ಕಸಿಯುತ್ತಿದ್ದಾರೆ. ಯಾವ ದಿಕ್ಕಿನಿಂದ ನೋಡಿದರೂ ಕಾಂಗ್ರೆಸ್ಸಿನ ಆಲೋಚನೆಯಲ್ಲಿ ಹುಳುಕಿದೆ ಎಂಬುದು ಎಂಥವನಿಗೂ ಗೊತ್ತಾಗುತ್ತೆ. ಒಂದಂತೂ ನೆನಪಿಡಿ. ಕಾಂಗ್ರೆಸ್ ಇರುತ್ತೋ, ಮುಗಿದೇ ಹೋಗುತ್ತೋ ದೇವರೇ ಬಲ್ಲ. ಆದರೆ ಕಾರ್ತಿ ಚಿದಂಬರಂ ನಂತರವೂ ಭಾರತ ಮಾತ್ರ ಹೀಗೆಯೇ ಇರುತ್ತದೆ. ಸಮರ್ಥರ ಕೈಲೇ ಇದ್ದರೆ ಇದಕ್ಕಿಂತಲೂ ವಿಸ್ತಾರವಾಗಿ, ಸೌಹಾರ್ದವಾಗಿ, ಜಗತ್ತಿಗೆ ಗುರುವಾಗಿ ಸುಂದರವಾಗಿ ಬದುಕಿರುತ್ತದೆ!

click me!