
ಬೆಂಗಳೂರು (ಡಿ.3): ರಾಜ್ಯದ ರೈತರಿಗೆ ನೀಡಬೇಕಾದ ಬರ ಪರಿಹಾರದ ಮೊತ್ತವನ್ನು ಸರ್ಕಾರ ಬಾಕಿ ಇರಿಸಿಕೊಂಡಿದೆ. ಈ ನಿಟ್ಟಿನಲ್ಲಿ ರೈತರು ಮಾಡುತ್ತಿರುವ ಮನವಿಗೆ ಸರ್ಕಾರ ಇನ್ನೂ ಕ್ಯಾರೇ ಎನ್ನುತ್ತಿಲ್ಲ. ಇದರ ನಡುವೆ ರಜೌರಿ ಎನ್‌ಕೌಂಟರ್‌ನಲ್ಲಿ ಹುತಾತ್ಮರಾದ ಕರ್ನಾಟಕದ ಸೈನಿಕ ಕ್ಯಾಪ್ಟನ್ ಎಂವಿ ಪ್ರಾಂಜಲ್ ಅವರ ಕುಟುಂಬಕ್ಕೆ ಸರ್ಕಾರ 50 ಲಕ್ಷ ರೂಪಾಯಿ ಘೋಷಣೆ ಮಾಡಿತ್ತು. ಈ ಹಣವನ್ನೂ ಕೂಡ ಸರ್ಕಾರ ಬಿಡುಗಡೆ ಮಾಡಿಲ್ಲ. ಈಗ ರಾಜ್ಯದ ಮಾಧ್ಯಮ ಸಂಸ್ಥೆಗಳಿಗೂ ಸರ್ಕಾರ ಹಣ ಬಾಕಿ ಇರಿಸಿಕೊಂಡಿರುವ ಮಾಹಿತಿ ಬಹಿರಂಗವಾಗಿದೆ. ಸರ್ಕಾರ ಅಧಿಕಾರಕ್ಕೆ ಬಂದ 6 ತಿಂಗಳಲ್ಲಿಯೇ ರಾಜ್ಯದ ವಿವಿಧ ಪತ್ರಿಕೆಗಳು ಹಾಗೂ ಸುದ್ದಿವಾಹಿನಿಗಳಿಗೆ ಸರ್ಕಾರ ಬರೋಬ್ಬರಿ 140 ಕೋಟಿ ರೂಪಾಯಿ ಹಣವನ್ನು ಬಾಕಿ ಇರಿಸಿಕೊಂಡಿದೆ. ಈ ಹಣವನ್ನು ಬಿಡುಗಡೆ ಮಾಡುವಂತೆ ಸ್ವತಃ ಸರ್ಕಾರದ ಕೃಷಿ ಸಚಿವ ಎನ್ ಚೆಲುವರಾಯಸ್ವಾಮಿ ಸಿಎಂ ಸಿದ್ಧರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಸಿಎಂಗೆ ಬರೆದಿರುವ ಪತ್ರದಲ್ಲಿ , 'ಜಿಲ್ಲಾ, ಪ್ರಾದೇಶಿಕ ಮತ್ತು ರಾಜ್ಯ ಮಟ್ಟದ ಪತ್ರಿಕೆಗಳು, ಸುದ್ದಿವಾಹಿನಿಗಳಿಗೆ ನೀಡಲಾಗಿರುವ ಜಾಹೀರಾತು ಬಾಬ್ತು ಬಾಕಿ 140 ಕೋಟಿ ರೂಪಾಯಿ ಆಗಿದೆ. ಇಷ್ಟು ಬೃಹತ್ ಮೊತ್ತದ ಬಾಕಿಯಿಂದಾಗಿ ಮಾಧ್ಯಮ ಸಂಸ್ಥೆಗಳು ತುಂಬಾ ಸಂಕಷ್ಟಕ್ಕೆ ಸಿಲುಕಿವೆ ಎಂದು ಸಂಪಾದಕರು, ಪತ್ರಕರ್ತರ ಸಂಘಟನೆಗಳು ನನ್ನ ಬಳಿ ನಿವೇದಿಸಿಕೊಂಡಿವೆ. ಅಂತೆಯೇ ಆದಷ್ಟು ಜರೂರಾಗಿ ಜಾಹೀರಾತು ಬಾಬ್ತು ಬಾಕಿ ಮೊತ್ತ 140 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿಸಿಕೊಟ್ಟು ಮಾಧ್ಯಮ ಸಂಸ್ಥೆಗಳು ನೆರವಿಗೆ ನಿಲ್ಲುವಂತೆಯೂ ಸಂಘಟನೆಗಳು ಮನವಿ ಮಾಡಿರುತ್ತವೆ. ಆದ್ದರಿಂದ ವಾರ್ತಾ ಇಲಾಖೆಗೆ ಶೀಘ್ರವೇ 140 ಕೋಟಿ ರೂಪಾಯಿಗಳ ಅನುದಾನವನ್ನು ಬಿಡುಗಡೆ ಮಾಡುವ ಮೂಲಕ ಮಾಧ್ಯಮ ಸಂಸ್ಥೆಗಳ ನೆರವಿಗೆ ನಿಲ್ಲಬೇಕೆಂದು ಕೋರಿದೆ' ಎಂದು ಎನ್ ಚೆಲುವರಾಯಸ್ವಾಮಿ ಅಧಿಕೃತ ಲೆಟರ್‌ಹೆಡ್‌ನಿಂದ ಸಿಎಂಗೆ ಪತ್ರ ಬರೆದಿದ್ದಾರೆ.
ಹುತಾತ್ಮ ಸೈನಿಕನಿಗೆ ಪರಿಹಾರ ನೀಡೋಕು ಸರ್ಕಾರದ ಬಳಿ ಹಣವಿಲ್ಲವೇ?
ರೈತರಿಗೆ ಬರ ಪರಿಹಾರ ಕೊಡಲು ದುಡ್ಡಿಲ್ಲ, ಆದ್ರೆ ಶಾಸಕರ ಬರ್ತಡೇಲಿ ಹಣದ ಮಳೆಯನ್ನೇ ಸುರಿಸಲಾಗ್ತಿದೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ