'ಯಾವುದೇ ಕಾರಣಕ್ಕೂ ರಾಜೀನಾಮೆ ವಾಪಸ್‌ ಪಡೆಯಲ್ಲ'

By Kannadaprabha NewsFirst Published Nov 4, 2020, 7:16 AM IST
Highlights

ಯಾವುದೇ ಕಾರಣಕ್ಕೂ ನಾನು ಕೊಟ್ಟ ರಾಜೀನಾಮೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಯಾವುದೇ ಒತ್ತಡಕ್ಕೂ ನಾನು ಮಣಿಯುವುದಿಲ್ಲ ಎಂದು ಅಧಿಕಾರಿಯೋರ್ವರು ಹೇಳಿದ್ದಾರೆ. 

ಬೆಂಗಳೂರು (ನ.04): ತಮ್ಮ ರಾಜೀನಾಮೆಯನ್ನು ಅಂಗೀಕರಿಸುವಂತೆ ಬುಧವಾರ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಲು ಅರಣ್ಯ ಘಟಕದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ಎಡಿಜಿಪಿ) ಎಸ್‌.ಎ.ರವೀಂದ್ರನಾಥ್‌ ನಿರ್ಧರಿಸಿದ್ದಾರೆ. ಈ ಸಂಬಂಧ ಮಂಗಳವಾರ  ಮಾತನಾಡಿದ ರವೀಂದ್ರನಾಥ್‌, ನನಗೆ ಅನ್ಯಾಯವಾಗಿದೆ. ಪ್ರತಿ ಹಂತದಲ್ಲೂ ನನಗೆ ಕೆಲವರು ಕಿರುಕುಳ ನೀಡುತ್ತಿದ್ದಾರೆ. ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ಹಿಂಪಡೆಯಲ್ಲ ಎಂದು ಸ್ಪಷ್ಟಪಡಿಸಿದರು.

ನನ್ನ ವೃತ್ತಿ ಬದುಕಿನಲ್ಲಿ ತುಂಬಾ ಸಂಕಷ್ಟದ ದಿನಗಳನ್ನು ಎದುರಿಸಿದ್ದೇನೆ. ಇದರಿಂದ ಬೇಸತ್ತು ಎಡಿಜಿಪಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದೇನೆ. ಕಳೆದ ನಾಲ್ಕೈದು ವರ್ಷಗಳಿಂದ ನಾನು ಮಾಡದ ತಪ್ಪಿಗೆ ಕೆಲವರ ಸಂಚಿನಿಂದ ಒಂದಿಲ್ಲೊಂದು ಸಮಸ್ಯೆಗಳು ಕಾಡುತ್ತಿವೆ. ಈಗ ಸೇವಾ ಹಿರಿತನವಿದ್ದರೂ ಮುಂಬಡ್ತಿ ನೀಡಿಕೆಗೂ ಕೂಡಾ ಅಡ್ಡಿಯಾಗಿದೆ. ನನಗಿಂತ ಕಿರಿಯ ಅಧಿಕಾರಿಗೆ ಮುಂಬಡ್ತಿ ಕೊಡಲಾಗಿದೆ. ಇದೆಲ್ಲವನ್ನು ಹೇಗೆ ಸಹಿಸಲು ಸಾಧ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪೊಲೀಸ್ ಇಲಾಖೆಯಲ್ಲಿ ಬಂಡಾಯ ಸ್ಫೋಟ; ಎಡಿಜಿಪಿ ರವಿಂದ್ರನಾಥ್ ರಾಜೀನಾಮೆ

ನನಗಾಗಿರುವ ಅನ್ಯಾಯವನ್ನು ಪ್ರತಿಭಟಿಸಿ ಸರ್ಕಾರಿ ಹುದ್ದೆಗೆ ವಿದಾಯ ಹೇಳಿದ್ದೇನೆ‡. ರಾಜೀನಾಮೆ ಹಿಂಪಡೆಯುವಂತೆ ಡಿಜಿಪಿ ಪ್ರವೀಣ್‌ ಸೂದ್‌ ಅವರು ಸೂಚಿಸಿದ್ದಾರೆ. ಆದರೆ ರಾಜೀನಾಮೆ ಹಿಂಪಡೆಯಲು ಮನಸ್ಸು ಒಪ್ಪುತ್ತಿಲ್ಲ. ಹೀಗಾಗಿ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ವಿಜಯ್‌ ಭಾಸ್ಕರ್‌ ಅವರನ್ನು ಬುಧವಾರ ಬೆಳಗ್ಗೆ ಭೇಟಿಯಾಗಿ ರಾಜೀನಾಮೆ ಅಂಗೀಕರಿಸುವಂತೆ ಒತ್ತಾಯಿಸುತ್ತೇನೆ. ಮುಖ್ಯಕಾರ್ಯದರ್ಶಿಗಳ ಸ್ಪಂದನೆ ನೋಡಿ ಮುಂದಿನ ಹೆಜ್ಜೆ ಇಡುತ್ತೇನೆ ಎಂದು ತಿಳಿಸಿದರು.

click me!