ರಾಜ್ಯದಲ್ಲೂ ಲವ್‌ ಜಿಹಾದ್‌ ವಿರುದ್ಧ ಕಾಯ್ದೆ?: ಸರ್ಕಾರದ ಗಂಭೀರ ಚಿಂತನೆ!

By Kannadaprabha NewsFirst Published Nov 4, 2020, 4:36 AM IST
Highlights

ರಾಜ್ಯದಲ್ಲೂ ಲವ್‌ ಜಿಹಾದ್‌ ವಿರುದ್ಧ ಕಾಯ್ದೆ?| ಉ.ಪ್ರ., ಮ.ಪ್ರ., ಹರಾರ‍ಯಣ ರೀತಿ ಕಾನೂನು| ಸರ್ಕಾರ ಚಿಂತನೆ: ಗೃಹ ಸಚಿವ ಬೊಮ್ಮಾಯಿ

 ಬೆಂಗಳೂರು(ನ.04): ‘ಲವ್‌ ಜಿಹಾದ್‌’ಗೆ ಕಡಿವಾಣ ಹಾಕಲು ಬಿಜೆಪಿ ನೇತೃತ್ವದ ವಿವಿಧ ರಾಜ್ಯಗಳು ಮುಂದಾಗುತ್ತಿರುವ ಬೆನ್ನಲ್ಲೇ ಕರ್ನಾಟಕದ ಬಿಜೆಪಿ ಸರ್ಕಾರವೂ ಇಂಥದ್ದೊಂದು ಕ್ರಮಕ್ಕೆ ಗಂಭೀರ ಚಿಂತನೆ ನಡೆಸಿದೆ.

ಇದೊಂದು ಸಾಮಾಜಿಕ ಪಿಡುಗಾಗಿದ್ದು, ಇದಕ್ಕೆ ಕಾನೂನಿನ ಕವಚದ ಅಗತ್ಯವಿದೆ ಎಂದು ಖುದ್ದು ರಾಜ್ಯದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಕನ್ನಡ-ಸಂಸ್ಕೃತಿ, ಪ್ರವಾಸೋದ್ಯಮ ಸಚಿವರೂ ಆಗಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರೂ ಇದಕ್ಕೆ ಪೂರಕವಾದ ಹೇಳಿಕೆ ನೀಡಿದ್ದಾರೆ. ಅಲಹಾಬಾದ್‌ ಕೋರ್ಟ್‌ ಆದೇಶದಲ್ಲಿ ಉಲ್ಲೇಖವಾಗಿರುವ ಅಂಶಗಳನ್ನು ಪರಿಗಣಿಸಿ ಕರ್ನಾಟಕದಲ್ಲೂ ವಿವಾಹ ಕಾರಣಕ್ಕಾಗಿ ಧಾರ್ಮಿಕ ಮತಾಂತರ ತಡೆಯಲು ಕಾನೂನು ರೂಪಿಸಲಾಗುವುದು ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಅಧ್ಯಯನ ನಡೆಸುತ್ತೇವೆ:

ಮಂಗಳವಾರ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಸಚಿವ ಬೊಮ್ಮಾಯಿ, ಲವ್‌ ಜಿಹಾದ್‌ಗೆ ಸಂಬಂಧಿಸಿದಂತೆ ಹೊಸ ಕಾನೂನು ರೂಪಿಸುವುದಾಗಿ ಉತ್ತರ ಪ್ರದೇಶ, ಹರ್ಯಾಣ ಮತ್ತು ಮಧ್ಯಪ್ರದೇಶ ರಾಜ್ಯಗಳ ಸರ್ಕಾರಗಳು ಈಗಾಗಲೇ ಹೇಳಿಕೆ ನೀಡಿವೆ. ಆ ರಾಜ್ಯಗಳಲ್ಲಿ ಯಾವ ರೀತಿ ಕಾನೂನು ರೂಪಿಸುತ್ತಾರೆ, ಆ ಕಾನೂನಿನಲ್ಲಿ ಏನೆಲ್ಲ ಅಂಶಗಳಿರುತ್ತವೆ ಎಂಬುದರ ಬಗ್ಗೆ ನಾವು ಕೂಡ ಅಧ್ಯಯನ ಮಾಡುತ್ತೇವೆ ಎಂದು ತಿಳಿಸಿದರು.

ಅಲ್ಲದೆ, ಆ ರಾಜ್ಯಗಳು ಕಾನೂನನ್ನು ಹೇಗೆ ಜಾರಿಗೊಳಿಸುತ್ತವೆ ಎಂಬುದನ್ನು ಗಮನಿಸುತ್ತೇವೆ. ಜೊತೆಗೆ ನಮ್ಮ ಕಾನೂನು ತಜ್ಞರೊಂದಿಗೂ ಕಾನೂನು ರೂಪಿಸುವ ಬಗ್ಗೆ ಸಮಾಲೋಚನೆ ನಡೆಸಿದ ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಈಗಾಗಲೇ ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶ, ಹರ್ಯಾಣ ಮತ್ತು ಮಧ್ಯಪ್ರದೇಶ ರಾಜ್ಯಗಳು ಲವ್‌ ಜಿಹಾದ್‌ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿರುವುದರಿಂದ ಕರ್ನಾಟಕ ಬಿಜೆಪಿಯಲ್ಲೂ ಈ ಬಗ್ಗೆ ಚರ್ಚೆ ಆರಂಭವಾಗಿದೆ. ಗುರುವಾರ ಮಂಗಳೂರಿನಲ್ಲಿ ನಡೆಯುವ ಪಕ್ಷದ ರಾಜ್ಯ ಘಟಕದ ವಿಶೇಷ ಸಭೆಯಲ್ಲೂ ಈ ವಿಷಯ ಪ್ರಸ್ತಾಪವಾಗುವ ಸಾಧ್ಯತೆÜಯಿದ್ದು, ಸರ್ಕಾರಕ್ಕೆ ಶಿಫಾರಸು ಮಾಡುವ ಅಥವಾ ಒತ್ತಾಯ ಮಾಡುವ ಸಂಭವವಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದಲ್ಲೂ ಕಾನೂನು:

ಕರ್ನಾಟಕದಲ್ಲೂ ಲವ್‌ ಜಿಹಾದ್‌ ನಿಯಂತ್ರಿಸಲು ಕಾನೂನು ತರಲಾಗುವುದು ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ.

ಜಿಹಾದಿಗಳು ನಮ್ಮ ಸಹೋದರಿಯರ ಘನತೆಗೆ ಧಕ್ಕೆ ತರುತ್ತಿರುವಾಗ ನಾವು ಮೌನವಾಗಿರಲು ಸಾಧ್ಯವಿಲ್ಲ. ಅಲಹಾಬಾದ್‌ ಹೈಕೋರ್ಟ್‌ ಆದೇಶದಲ್ಲಿ ಪ್ರಸ್ತಾಪಿಸಿರುವ ಅಂಶಗಳ ಆಧಾರದ ಮೇಲೆ ಕರ್ನಾಟಕದಲ್ಲೂ ವಿವಾಹ ಕಾರಣಕ್ಕಾಗಿ ಧಾರ್ಮಿಕ ಮತಾಂತರ ನಡೆಯುವುದನ್ನು ತಡೆಗಟ್ಟಲು ಕಾನೂನು ರೂಪಿಸಲಾಗುವುದು. ಈ ರೀತಿಯ ಮತಾಂತರ ಪ್ರಕ್ರಿಯೆಯಲ್ಲಿ ಒಳಗೊಂಡವರು ಕಠಿಣ ಶಿಕ್ಷೆ ಅನುಭವಿಸುವಂತಾಗಬೇಕು ಎಂದು ಅವರು ಟ್ವೀಟ್‌ ಮೂಲಕ ತೀಕ್ಷ$್ಣವಾಗಿ ತಿಳಿಸಿದ್ದಾರೆ.

click me!