
ಬೆಂಗಳೂರು (ಆ.11): ನಟ ಪ್ರಕಾಶ್ ರಾಜ್ ಮತದಾರರ ಗುರುತಿನ ಚೀಟಿ (ವೋಟರ್ ಐಡಿ) ಬೆಂಗಳೂರಿನಲ್ಲಿ ರದ್ದಾಗಿದೆ ಎಂಬ ವಿಷಯ ಬೆಳಕಿಗೆ ಬಂದಿದೆ. ಈ ಕುರಿತು ಸ್ವತಃ ನಟ ಪ್ರಕಾಶ್ ರಾಜ್ ಅವರೇ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದನ್ನು ಹಂಚಿಕೊಳ್ಳುವ ಮೂಲಕ ಚುನಾವಣಾ ಆಯೋಗದ ನಡೆಗೆ ತೀವ್ರ ಆಕ್ರೋಶ ಹಾಗೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಎಸ್‌ಐಆರ್ (SIR) ನೆಪದಲ್ಲಿ ಸುಮಾರು 65 ಲಕ್ಷ ಜನರ ಮತಗಳನ್ನು ಡಿಲೀಟ್ ಮಾಡಲಾಗಿದೆ. ಈ ರೀತಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲಾದ ದುರದೃಷ್ಟಕರ ಮತದಾರರಲ್ಲಿ ನಾನು ಕೂಡ ಒಬ್ಬನಾಗಿದ್ದೇನೆ ಎಂದು ಪ್ರಕಾಶ್ ರಾಜ್ ವಿಡಿಯೋದಲ್ಲಿ ಹೇಳಿದ್ದಾರೆ.
ವಿಡಿಯೋದಲ್ಲಿ ಮಾತನಾಡಿರುವ ಪ್ರಕಾಶ್ ರಾಜ್, 'ನಾನು ಹುಟ್ಟಿ, ಬೆಳೆದ ಕ್ಷೇತ್ರದಿಂದಲೇ ನನ್ನ ಮತವನ್ನು ತೆಗೆದುಹಾಕಲಾಗಿದೆ. ನಾನು ಇಲ್ಲೇ ಶಾಲಾ-ಕಾಲೇಜುಗಳನ್ನು ಈದಿದ್ದೇನೆ, ನಟನಾ ಶಾಲೆಗಳಿಗೆ ಹೋಗಿದ್ದೇನೆ. ಸಿನಿಮಾ ಆರಂಭಿಕ ಜೀವನ ಕಳೆದಿದ್ದೇನೆ. ಜೊತೆಗೆ ಇದೇ ಕ್ಷೇತ್ರದಿಂದ ನಾನು ಕಳೆದ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ. ಆದರೂ ಸಹ ಮತದಾರರ ಪಟ್ಟಿಯಿಂದ ನನ್ನ ಹೆಸರನ್ನು ಕೈಬಿಡಲಾಗಿದೆ. ಇದು ಜೋಕ್ ಅಲ್ಲದೆ ಮತ್ತೇನು?' ಎಂದು ಪ್ರಶ್ನಿಸಿದ್ದಾರೆ.
ಸಾರ್ವಜನಿಕರ ಹಕ್ಕುಗಳನ್ನು ಕಸಿಯುವ ರೀತಿಯಲ್ಲಿ ಈ ರೀತಿ ಏಕಾಏಕಿ ಲಕ್ಷಾಂತರ ಮತಗಳನ್ನು ಡಿಲೀಟ್ ಮಾಡಿರುವುದು ಸರಿಯಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಪ್ರತಿಯೊಬ್ಬ ನಾಗರಿಕನ ಹಕ್ಕು. ಇಂತಹ ಗಂಭೀರ ತಪ್ಪುಗಳು ಹೇಗೆ ಸಾಧ್ಯ ಎಂದು ನಟ ಪ್ರಕಾಶ್ ರಾಜ್ ವಿಡಿಯೋ ಮೂಲಕ ಚುನಾವಣಾ ಆಯೋಗ ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ತಾರಟೆಗೆ ತೆಗೆದುಕೊಂಡಿದ್ದಾರೆ. ಪ್ರಸ್ತುತ ಪ್ರಕಾಶ್ ರಾಜ್ ಅಭಿಯಾನದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಪರ-ವಿರೋಧ ಚರ್ಚೆಗೆ ಗ್ರಾಸವಾಗಿದೆ.
ಎಸ್‌ಐಆರ್ ಪಟ್ಟಿಯನ್ನು ಪರಿಶೀಲನೆ ಮಾಡುವಾಗ ಎಲ್ಲರಿಂದಲೂ ಅರ್ಜಿ ತುಂಬಿಸಿಕೊಳ್ಳುತ್ತಾರೆ. ಆದರೆ, ಅರ್ಜಿ ಭರ್ತಿ ಮಾಡದ ಹಾಗೂ ಹಳೆಯ ಪಟ್ಟಿಯಲ್ಲಿ ಹೆಸರಿಲ್ಲದವರ ಹೆಸರನ್ನು ಕೈಬಿಡಲಾಗುತ್ತದೆ. ಹೀಗೆ ಕೈಬಿಟ್ಟ ಹೆಸರಿನಲ್ಲಿ ಪ್ರಕಾಶ್ ರಾಜ್ ಹೆಸರೂ ಇರಬಹುದು. ಹೆಸರು ಕೈಬಿಟ್ಟು ಹೋದವರು ಅರ್ಜಿ ಸಲ್ಲಿಕೆ ಮೂಲಕ ಪುನಃ ಹೆಸರನ್ನು ಸೇರ್ಪಡೆ ಮಾಡಿಸಿಕೊಳ್ಳಬಹುದು. ಈಗಾಗಲೇ ನಾಲ್ಕೈದು ವೋಟರ್ ಐಡಿಗಳು ಇದ್ದಾವೆ ಎಂಬ ಆರೋಪ ಕೇಳಿ ಬಂದಿತ್ತು. ಇದೀಗ ವೋಟರ್ ಐಡಿ ಡಿಲೀಟ್ ಎಂದು ಹೇಳುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ