
ಕನ್ನಡಪ್ರಭ ವಾರ್ತೆ ಬೆಂಗಳೂರು
ನಟ ದರ್ಶನ್ ಆರೋಪಿಯಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತನ್ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಲು ಕೋರಿ 14ನೇ ಆರೋಪಿ ಪ್ರದೋಷ್ ಸಲ್ಲಿಸಿರುವ ಅರ್ಜಿ ವಿರುದ್ಧ ವಾದ ಮಂಡಿಸಲು ಸಹ ಆರೋಪಿಗಳಿಗೆ ಹಕ್ಕಿಲ್ಲ ಎಂದು ನಗರದ 59ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ಆದೇಶಿಸಿದೆ. ನ್ಯಾಯಾಲಯದ ಈ ಆದೇಶದಿಂದ ದರ್ಶನ್ ಮತ್ತು ಇತರೆ ಆರೋಪಿಗಳಿಗೆ ತೀವ್ರ ಹಿನ್ನಡೆಯಾಗಿದೆ.
ಪ್ರಕರಣದಲ್ಲಿ ಕ್ಷಮಾದಾನ ನೀಡಬೇಕು ಹಾಗೂ ತಮ್ಮನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಬೇಕು ಎಂದು ಕೋರಿ ದರ್ಶನ್ ಆಪ್ತ ಪ್ರದೋಷ್ ಅರ್ಜಿ ಸಲ್ಲಿಸಿದ್ದು ಈ ಅರ್ಜಿಯ ವಿಚಾರಣಾ ಪ್ರಕ್ರಿಯೆಯಲ್ಲಿ ತಮ್ಮ ವಾದ ಆಲಿಸಬೇಕು ಎಂದು ದರ್ಶನ್ ಸೇರಿ ಇತರೆ ಆರೋಪಿಗಳು ಮನವಿ ಮಾಡಿದ್ದರು.
ಕಾಮಾಕ್ಷಿಪಾಳ್ಯ ಠಾಣೆ ತನಿಖಾಧಿಕಾರಿಗಳ ಪರ ವಿಶೇಷ ಸರ್ಕಾರಿ ಅಭಿಯೋಜಕ ಪಿ.ಪ್ರಸನ್ನಕುಮಾರ್, ಪ್ರದೋಷ್ ಅರ್ಜಿಯನ್ನು ಒಪ್ಪಬೇಕು. ಈ ಅರ್ಜಿ ಸಂಬಂಧ ಸಹ ಆರೋಪಿಗಳ ವಾದ ಆಲಿಸುವ ಅಗತ್ಯವಿಲ್ಲ ಎಂದು ವಾದಿಸಿದ್ದರು. ಈ ವಾದ-ಪ್ರತಿವಾದ ಆಲಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಾಧೀಶೆ ಸುಜಾತಾ ಎಂ.ಸಾಂಬ್ರಾಣಿ ಅವರು ಸೋಮವಾರ ಪ್ರಕಟಿಸಿದ್ದಾರೆ.
ಪ್ರಕರಣದಲ್ಲಿ ತನ್ನನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಲು ಕೋರಿ ಪ್ರದೋಷ್ ಸಲ್ಲಿಸಿರುವ ಅರ್ಜಿ ಸಂಬಂಧ ತಮ್ಮ ವಾದ ಮಂಡಿಸುವ ಹಕ್ಕು ಸಹಆರೋಪಿಗಳಿಗೆ ಇಲ್ಲ. ಹಾಗಾಗಿ ಪ್ರದೋಷ್ ಅರ್ಜಿ ಸಂಬಂಧ ವಾದ ಮಂಡನೆಗೆ ಅನುಮತಿ ನೀಡಬೇಕೆಂಬ ದರ್ಶನ್ ಹಾಗೂ ಇತರೆ ಆರೋಪಿಗಳ ಮನವಿ ತಿರಸ್ಕರಿಸಲಾಗಿದೆ. ಈ ಆದೇಶ ಆರೋಪಿಗಳ ಅನುಮತಿ ಕೋರಿರುವುದಕ್ಕೆ ಮಾತ್ರ ಸೀಮಿತವಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.
ಅಲ್ಲದೆ, ಕ್ಷಮಾದಾನ ಕೋರಿ ಮತ್ತು ಮಾಫಿ ಸಾಕ್ಷಿಯಾಗಿ ಪರಿಗಣಿಸಲು ಕೋರಿ ದರ್ಶನ್ ಸ್ನೇಹಿತ ಹಾಗೂ ಸ್ಟೋನಿ ಬ್ರೂಕ್ ಮಾಲೀಕರೂ ಆದ ಪ್ರಕರಣದ 10ನೇ ಆರೋಪಿ ವಿನಯ್ ಮತ್ತು 14ನೇ ಆರೋಪಿ ಪ್ರದೋಷ್ ಸಲ್ಲಿಸಿರುವ ಅರ್ಜಿಯನ್ನು ಮೆರಿಟ್ ಆಧಾರದಲ್ಲಿ ಮಂಗಳವಾರ ವಿಚಾರಣೆ ನಡೆಸುವುದಾಗಿ ನ್ಯಾಯಪೀಠ ತಿಳಿಸಿದೆ.
ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) 306 ಮತ್ತು 307 ಅನ್ನು ಜಂಟಿಯಾಗಿ ಓದಿದಾಗ, ಕ್ಷಮಾದಾನ ಮನವಿ ವಿಚಾರಣೆಯು ಕ್ಷಮಾದಾನ ಕೋರಿದ ವ್ಯಕ್ತಿ, ಪ್ರಾಸಿಕ್ಯೂಷನ್ (ಸರ್ಕಾರ) ಮತ್ತು ನ್ಯಾಯಾಲಯದ ಮಧ್ಯೆ ನಡೆಯುತ್ತವೆ. ಆ ವಿಚಾರಣಾ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಸಹ-ಆರೋಪಿಗೂ ಭಾಗವಹಿಸುವ ಅಥವಾ ವಿಚಾರಣೆಗೆ ಒಳಗಾಗುವ ಹಕ್ಕು ಇಲ್ಲ. ಕ್ಷಮಾದಾನದ ಪ್ರಕ್ರಿಯೆ ಸಹ-ಆರೋಪಿಯ ವಿರುದ್ಧದ ಟ್ರಯಲ್‌ಗೆ (ವಿಚಾರಣೆ) ಸಮವಾಗಿರುವುದಿಲ್ಲ. ಆರೋಪಿಗೆ ಕ್ಷಮಾದಾನ ನೀಡಬೇಕೇ ಅಥವಾ ಬೇಡವೇ ಎಂಬುದನ್ನು ಪರಿಗಣಿಸುವ ಹಂತದಲ್ಲಿ ನ್ಯಾಯಾಲಯ ಪ್ರಕರಣದ ಸಂದರ್ಭವನ್ನು ಪರಿಶೀಲಿಸಬೇಕಾಗುತ್ತದೆ. ಕ್ಷಮಾದಾನ ಕೋರಿರುವ ಆರೋಪಿ ನಿಜವಾಗಿಯೂ ಪ್ರಜ್ಞಾಪೂರ್ವಕವಾಗಿ ಸಂಪೂರ್ಣ ಸತ್ಯ ಬಹಿರಂಪಡಿಸುತ್ತಾನೆಯೇ ಎಂಬುದನ್ನು ನ್ಯಾಯಾಲಯ ಪರಿಗಣಿಸಬೇಕಾಗುತ್ತದೆ. ಹಾಗಾಗಿ, ಈ ಹಂತದಲ್ಲಿ ನ್ಯಾಯಾಲಯ ಇತರೆ ಆರೋಪಿಗಳ ಅಪರಾಧ ಅಥವಾ ಮುಗ್ಧತೆಯ ಬಗ್ಗೆ ತೀರ್ಪು ನೀಡುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನನಗೆ ಕ್ಷಮಾದಾನ ನೀಡಬೇಕು. ರೇಣುಕಾಸ್ವಾಮಿ ಮೊಬೈಲ್‌ನಲ್ಲಿದ್ದ ಮೆಸೇಜ್‌ಗಳನ್ನು ಓದಿದ್ದು ಬಿಟ್ಟರೆ ಯಾವುದೇ ಅಪರಾಧ ಕೃತ್ಯವನ್ನು ನಾನು ಎಸಗಿಲ್ಲ. ರೇಣುಕಾಸ್ವಾಮಿ ಹಲ್ಲೆ ನಡೆಸುತ್ತಿದ್ದ ದರ್ಶನ್ ಅವರನ್ನು ನಾನೇ ತಡೆದೆ. ಹೀಗೆ ಹಲ್ಲೆ ಮಾಡಿದರೆ ರೇಣುಕಾಸ್ವಾಮಿ ಸಾವನ್ನಪ್ಪುತ್ತಾನೆ. ಹೊಡೆಯುವುದನ್ನು ನಿಲ್ಲಿಸಿ ಎಂದು ಹೇಳಿದ್ದೆ. ರೇಣುಕಾಸ್ವಾಮಿ ಸಾವನ್ನಪ್ಪಿದ ನಂತರ ಸಹಾಯ ಮಾಡುವಂತೆ ನನಗೆ ದರ್ಶನ್ ಕೋರಿದ್ದರು. ಸಹಾಯ ಮಾಡದೆ ಹೋದರೆ ಗನ್‌ನಿಂದ ಸುಟ್ಟು ಸಾಯಿಸುತ್ತೇನೆ ಎಂದು ಬೆದರಿಕೆ ಹಾಕಿದರು. ಇದರಿಂದ ದರ್ಶನ್ ಗೆ ನಾನು ಸಹಾಯ ಮಾಡಿದೆ.
ಕೊಲೆ ನಂತರ ಮೃತದೇಹವನ್ನು ಬಿಸಾಡಲು ಮತ್ತು ಪೊಲೀಸರ ಮುಂದೆ ಕೆಲ ಆರೋಪಿಗಳನ್ನು ಶರಣಾಗಿಸುವ ವಿಚಾರದಲ್ಲಿ ನಾನು ಮಾತುಕತೆ ನಡೆಸಿದೆ. ಆದ್ದರಿಂದ ನನ್ನನ್ನು ಕ್ಷಮಿಸಿ ಮಾಫಿ ಸಾಕ್ಷಿಯಾಗಿ ಪರಿಗಣಿಸಬೇಕು. ಪ್ರಕರಣದ ಎಲ್ಲ ಸಂಗತಿಯನ್ನು ಬಹಿರಂಗಪಡಿಸುತ್ತೇನೆ ಎಂದು ಕೋರಿ ಆ.5ರಂದು ಪ್ರದೋಷ್ ಅರ್ಜಿ ಸಲ್ಲಿಸಿದ್ದರು. 10ನೇ ಆರೋಪಿ ವಿನಯ್ ಸಹ ಮಾಫಿ ಸಾಕ್ಷಿಯಾಗಿಸಲು ಪ್ರತ್ಯೇಕ ಅರ್ಜಿ ಸಲ್ಲಿಸಿದ್ದಾರೆ.
ಪ್ರಕರಣದ ಆರೋಪಿಯಾಗಿರುವ ವ್ಯಕ್ತಿಯೊಬ್ಬ ತಾನು ಮಾಫಿ ಸಾಕ್ಷಿಯಾಗಿ ಎಲ್ಲಾ ಮಾಹಿತಿ ನೀಡಲು ಸಿದ್ಧ ಎಂದು ನ್ಯಾಯಾಲಯಕ್ಕೆ ಮನವಿ ಮಾಡುತ್ತಾನೆ. ಅದನ್ನು ನ್ಯಾಯಾಲಯ ಮಾನ್ಯ ಮಾಡಿದರೆ, ಆತನನ್ನು ಪ್ರಕರಣದ ಪ್ರಮುಖ ಸಾಕ್ಷಿಯಾಗಿ ಪರಿಗಣಿಸಲಾಗುತ್ತದೆ. ಜೊತೆಗೆ ಆತನನ್ನು ಆರೋಪಿ ಸ್ಥಾನದಿಂದ ಕೈಬಿಟ್ಟು ಕೇವಲ ಸಾಕ್ಷಿ ಎಂದು ಪರಿಗಣಿಸುತ್ತದೆ. ಪ್ರಕರಣದಲ್ಲಿ ಆತನಿಗೆ ಶಿಕ್ಷೆ ನೀಡಬೇಕೋ ಬೇಡವೋ ಎಂಬುದನ್ನು ನ್ಯಾಯಾಲಯ ನಿರ್ಧರಿಸುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ