ಲಂಚ ಕೇಳಿದರೆ ಮುಲಾಜಿಲ್ಲದೆ ಕ್ರಮ: ಡಿ.ಕೆ.ಶಿವಕುಮಾರ್‌

Published : Jan 06, 2024, 04:29 AM IST
ಲಂಚ ಕೇಳಿದರೆ ಮುಲಾಜಿಲ್ಲದೆ ಕ್ರಮ: ಡಿ.ಕೆ.ಶಿವಕುಮಾರ್‌

ಸಾರಾಂಶ

ಸಚಿವರು- ಶಾಸಕರು, ಪೊಲೀಸರು, ಕಂದಾಯ ಅಧಿಕಾರಿಗಳ ಸೇರಿದಂತೆ ಯಾರ ಹೆಸರಿನಲ್ಲಿ ಹಣ ಕೇಳಿದರೂ ದೂರು ಕೊಡಿ. ಅವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ ಎಂದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ 

ಬೆಂಗಳೂರು(ಜ.06):  ಯಾರೇ ಲಂಚ ಕೇಳಿದರೂ ನಿರ್ದಾಕ್ಷಿಣ್ಯವಾಗಿ ದೂರು ಕೊಡಿ, ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಯಲಹಂಕ, ಬ್ಯಾಟರಾಯನಪುರ, ದಾಸರಹಳ್ಳಿ ವಿಧಾನಸೌಧ ಕ್ಷೇತ್ರಗಳನ್ನು ಒಟ್ಟು ಸೇರಿಸಿ ಯಲಹಂಕದಲ್ಲಿ ಶುಕ್ರವಾರ ನಡೆದ ‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಚಿವರು- ಶಾಸಕರು, ಪೊಲೀಸರು, ಕಂದಾಯ ಅಧಿಕಾರಿಗಳ ಸೇರಿದಂತೆ ಯಾರ ಹೆಸರಿನಲ್ಲಿ ಹಣ ಕೇಳಿದರೂ ದೂರು ಕೊಡಿ. ಅವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ ಎಂದರು.

ಅಧಿಕಾರಿಗಳು ಗೌರವ ನೀಡದಿದ್ದಾಗ, ಲಂಚ ಕೇಳಿ ಹಿಂಸೆ ಕೊಟ್ಟಾಗ ಜನಸಾಮಾನ್ಯರು ರಾಜಕಾರಣಿಗಳ ಬಳಿ ಬರುತ್ತಾರೆ. ಇತ್ತೀಚಿಗೆ ಈ ರೀತಿಯ ದೂರುಗಳ ಸಂಖ್ಯೆ ಹೆಚ್ಚಾಗುತ್ತಿವೆ. ಈ ಸಮಸ್ಯೆ ತಪ್ಪಿಸುವ ಉದ್ದೇಶದಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ ಎಂದು ತಿಳಿಸಿದರು.

ಮನೆ ಬಾಗಿಲಿಗೆ ಬಂದ ಸರ್ಕಾರಕ್ಕೆ ಸಾವಿರಾರು ದೂರುಗಳ ಸುರಿಮಳೆ: ನೋಡಲ್ ಅಧಿಕಾರಿ ನಿಯೋಜಿಸಿದ ಡಿಸಿಎಂ ಡಿಕೆ. ಶಿವಕುಮಾರ್

ಪ್ರತಿನಿತ್ಯ ಜನ ನಮ್ಮ ಮನೆ ಬಾಗಿಲಿಗೆ ತಮ್ಮ ಸಮಸ್ಯೆ ಹೊತ್ತುಕೊಂಡು ಬರುತ್ತಿದ್ದಾರೆ. ಇದನ್ನು ತಪ್ಪಿಸಲು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಪೊಲೀಸ್ ಸೇರಿದಂತೆ ಸುಮಾರು 300 ಅಧಿಕಾರಿಗಳು ನಿಮ್ಮ ಸೇವೆಗೆ ಬಂದಿದ್ದೇವೆ. ಜನರ ಅಹವಾಲುಗಳನ್ನು ಕಾನೂನು ಚೌಕಟ್ಟಿನಲ್ಲಿ ಪರಿಹಾರ ನೀಡುತ್ತೇವೆ. ಒಂದು ವೇಳೆ ಪರಿಹಾರ ನೀಡಲು ಆಗದಿದ್ದರೆ, ಯಾವ ಕಾರಣಕ್ಕೆ ಪರಿಹಾರ ನೀಡಲು ಆಗುವುದಿಲ್ಲ ಎಂಬ ಕಾರಣವನ್ನು ತಿಳಿಸುತ್ತೇವೆ ಎಂದರು.

ಬೆಂಗಳೂರು ಯೋಜಿತ ನಗರವಲ್ಲ. ಇಲ್ಲಿರುವ ಹವಾಮಾನ, ಶಿಕ್ಷಣ, ಆರೋಗ್ಯ ಸೌಲಭ್ಯದಿಂದ ಬೆಂಗಳೂರಿಗೆ ಬಂದವರು ವಾಪಸ್ ಹೋಗುವುದಿಲ್ಲ. ಹೀಗಾಗಿ ಬೆಂಗಳೂರಿನ ನಿರ್ವಹಣೆ ಬಹಳ ಮುಖ್ಯವಾಗಿದೆ. ನಗರದಲ್ಲಿ ಸ್ವಯಂ ತೆರಿಗೆ ವ್ಯವಸ್ಥೆ ಇದ್ದು, ಸರಿಯಾದ ಲೆಕ್ಕದಲ್ಲಿ ತೆರಿಗೆ ಪಾವತಿ ಮಾಡುತ್ತಿಲ್ಲ. ಹೀಗಾಗಿ ಸಮೀಕ್ಷೆ ಮಾಡುತ್ತಿದ್ದೇವೆ. ತೆರಿಗೆ ಪಾವತಿ ಮಾಡದಿದ್ದರೆ ರಸ್ತೆ ಮಾಡುವುದು, ನೀರು ನೀಡುವುದು ಹೇಗೆ? ಎಂದು ಪ್ರಶ್ನಿಸಿದರು.

ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ಅಭಿವೃದ್ಧಿ ಹಾಗೂ ಜನರ ಅಹವಾಲುಗಳು ಜತೆ, ಜತೆಗೆ ಸಾಗಬೇಕಿದೆ. ಜನರ ಸಮಸ್ಯೆಗಳನ್ನು ಪರಿಹರಿಸದೆ ಸರ್ಕಾರ ಯಶಸ್ವಿಯಾಗಿ ನಡೆದಿದೆ ಎಂದು ಹೇಳಲು ಸಾಧ್ಯವಿಲ್ಲ. ಜನರ ಅಹವಾಲು ಪರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಮಹತ್ವಾಕಾಂಕ್ಷಿ ಉದ್ದೇಶವನ್ನಿಟ್ಟು ಈ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.

ಯಲಹಂಕ ಶಾಸಕ ವಿಶ್ವನಾಥ್, ದಾಸರಹಳ್ಳಿ ಶಾಸಕ ಎಸ್.ಮುನಿರಾಜು, ವಿಧಾನ ಪರಿಷತ್ ಸದಸ್ಯ ಎಂ.ಆರ್.ಸೀತಾರಾಮ್, ರಾಜ್ಯಸಭಾ ಮಾಜಿ ಸದಸ್ಯ ರಾಜೀವ್ ಗೌಡ, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಉಪಸ್ಥಿತರಿದ್ದರು.

ಅರ್ಜಿ ವಿಲೇವಾರಿಗೆ ಪ್ರತ್ಯೇಕ ತಂಡ ರಚನೆ

ಸಾರ್ವಜನಿಕರಿಂದ ಸಲ್ಲಿಕೆಯಾದ ಅರ್ಜಿಗಳ ವಿಲೇವಾರಿಗೆ ಅಧಿಕಾರಿಗಳ ನೇತೃತ್ವದಲ್ಲಿ ಪ್ರತ್ಯೇಕ ತಂಡ ರಚನೆ ಮಾಡುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು. ಯಲಹಂಕದಲ್ಲಿ ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮಾರು 2600ಕ್ಕೂ ಅಧಿಕ ಅಹವಾಲುಗಳು ಸಲ್ಲಿಕೆಯಾಗಿವೆ. ಅರ್ಜಿಗಳನ್ನು ವಿಂಗಡಿಸಿ ತ್ವರಿತ ವಿಲೇವಾರಿಗೆ ವಾರ್ಡ್ ಮಟ್ಟದ ಅಧಿಕಾರಿಗಳಿಗೆ ಸಮಯ ನಿಗದಿ ಮಾಡುತ್ತೇವೆ. ಅರ್ಜಿ ಸಲ್ಲಿಸಿರುವ ಪ್ರತಿಯೊಬ್ಬರ ದೂರವಾಣಿ ಸಂಖ್ಯೆ ಪಡೆದಿದ್ದೇವೆ. ಎಲ್ಲಾ ದೂರುಗಳನ್ನು ಬಗೆಹರಿಸಲು ಪ್ರತ್ಯೇಕ ತಂಡ ಮಾಡುತ್ತೇವೆ ಎಂದರು.

ನಿವೇಶನ, ರಸ್ತೆ ಮುಚ್ಚಿರುವ ಬಗ್ಗೆ ದೂರಿನ ಹಿನ್ನೆಲೆಯಲ್ಲಿ ಸ್ಥಳೀಯ ಅಧಿಕಾರಿಗಳು ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿ ಪರಿಹಾರ ನೀಡಲು ಮಾರ್ಗದರ್ಶನ ನೀಡಿದ್ದೇನೆ. ಈ ಕಾರ್ಯಕ್ರಮಗಳು ಮುಗಿದ ನಂತರ ಅಧಿಕಾರಿಗಳ ಜತೆಗೆ ಮತ್ತೊಂದು ಸುತ್ತಿನ ಸಭೆ ಮಾಡಿ ಜನರ ಸಮಸ್ಯೆಗೆ ಹೇಗೆ ಪರಿಹಾರ ನೀಡಬೇಕು ಎಂದು ಚರ್ಚಿಸುತ್ತೇವೆ ಎಂದು ತಿಳಿಸಿದರು.

ಕಂದಾಯ ಇಲಾಖೆ, ಪಾಲಿಕೆಗೆ ಸಂಬಂಧಿಸಿದ ದೂರುಗಳು ಹೆಚ್ಚಾಗಿದ್ದು, ಖಾತೆ ವಿಚಾರವಾಗಿಯೂ ದೂರುಗಳು ಬಂದಿವೆ. ಮನೆಗಳು ಬೇಕು ಎಂಬ ಬೇಡಿಕೆ ಕೂಡ ಹೆಚ್ಚಾಗಿದ್ದು, ಉಚಿತವಾಗಿ ಮನೆ ನೀಡಲು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಕ್ಕೆ ಅವಕಾಶ ಇಲ್ಲ. ಇವರಿಗೆ ಕಡಿಮೆ ದರದಲ್ಲಿ ಮನೆ ನೀಡಲಾಗುತ್ತಿದ್ದು, ವಸತಿ ಇಲಾಖೆ ಜತೆ ಚರ್ಚೆ ಮಾಡಿ ಎಷ್ಟು ವಿನಾಯಿತಿ ನೀಡಬಹುದೋ ಅಷ್ಟು ನೀಡುತ್ತೇವೆ ಎಂದು ಹೇಳಿದರು.

ಇನ್ನು ಪಾಲಿಕೆಗೆ ತೆರಿಗೆ ಕಟ್ಟದವರಿಗೆ ದಂಡದ ಪ್ರಮಾಣ ಹೆಚ್ಚಾಗಿದೆ ಎಂಬ ಅರ್ಜಿಗಳಿವೆ. ಸಣ್ಣ ಮನೆಗಳಿಗೆ ನೆರವು ನೀಡಲು ಅಧಿಕಾರಿಗಳ ಜತೆ ಚರ್ಚೆ ಮಾಡಿ ಕಾನೂನಿನಲ್ಲಿ ಎಷ್ಟು ಅವಕಾಶ ಇದೆ ಎಂದು ನೋಡುತ್ತೇವೆ ಎಂದು ತಿಳಿಸಿದರು.

ಏಜೆಂಟರನ್ನು ದೂರ ಇಡಬೇಕು

ಜನ ಕಂದಾಯ ನಿವೇಶನ, ಜಮೀನು ಕಳೆದುಕೊಂಡಿದ್ದು, ಇಂತಹವರನ್ನು ದಾರಿ ತಪ್ಪಿಸುವ ಕೆಲಸ ಆಗುತ್ತಿದೆ. ಈ ಜನರಿಗೆ ಕಾನೂನು ವ್ಯಾಪ್ತಿಯಲ್ಲಿ ಎಷ್ಟು ಸಹಾಯ ಮಾಡಲು ಸಾಧ್ಯವೋ ಅಷ್ಟು ಮಾಡುತ್ತೇವೆ. ಏಜೆಂಟರನ್ನು ದೂರ ಇಡಬೇಕು, ಅವರ ಬಗ್ಗೆ ಅರಿವು ಮೂಡಿಸಬೇಕು ಎಂಬ ಉದ್ದೇಶದಿಂದಲೇ ಈ ಕಾರ್ಯಕ್ರಮ ರೂಪಿಸಿ ನಾನು ಇಲ್ಲಿಗೆ ಬಂದಿದ್ದೇನೆ ಎಂದು ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಎಚ್‌ಡಿಕೆಗೆ ಒಳ್ಳೆಯದಾಗಲಿ: ಡಿಕೆಶಿ

ಕರ ಸೇವಕರ ಬಂಧನದ ಕುರಿತ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಡಿ.ಕೆ.ಶಿವಕುಮಾರ್‌, ಈಗಷ್ಟೇ ಅವರು ಬಿಜೆಪಿ ಜತೆ ಎನ್‌ಡಿಎ ಮೈತ್ರಿಕೂಟಕ್ಕೆ ಹೋಗಿದ್ದಾರೆ. ಅವರು ಕರಸೇವಕರ ಬಗ್ಗೆ ಮಾತಾನಾಡುತ್ತಿದ್ದು ಅವರಿಗೆ ಒಳ್ಳೆಯದಾಗಲಿ. ಇವರು ಕೂಡ ಸೇವೆ ಮಾಡಲಿ ಎಂದು ತಿಳಿಸಿದರು.

ಡಿಕೆಶಿಯನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿ ಪ್ರಯತ್ನಿಸುತ್ತಿರುವುದು ನೂರಕ್ಕೆ ನೂರರಷ್ಟು ಸತ್ಯ: ಸಚಿವ ತಂಗಡಗಿ

ಇನ್ನು ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ಸರ್ಕಾರವನ್ನು ಸೋಲಿಸುತ್ತೇವೆ ಎಂಬ ದೇವೇಗೌಡರ ಹೇಳಿಕೆಗೆ ಪ್ರಕ್ರಿಯೆ ನೀಡಿದ ಅವರು ಬಹಳ ಸಂತೋಷ. ಅವರಿಗೆ ಒಳ್ಳೆಯದಾಗಲಿ. ಅವರು ಆರೋಗ್ಯವಂತರಾಗಿರಲಿ ಎಂದು ಹಾರೈಸಿದರು.

ನಗರದ ಎಲ್ಲೆಂದರಲ್ಲಿ ಕಸ ತಂದು ಸುರಿಯುತ್ತಾರೆ. ಬೆಂಗಳೂರಿನ ಸ್ವಚ್ಛತೆ ಕಾಪಾಡಲು ಕ್ಯಾಮೆರಾ ಅಳವಡಿಸುತ್ತಿದ್ದೇವೆ. ಈ ರೀತಿ ಕಸ ಸುರಿಯುವವರ ವಿರುದ್ಧ ಕೇಸ್ ದಾಖಲಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗಡೀಪಾರು ಸಂಕಷ್ಟದಲ್ಲಿ Mahesh Shetty Timarodi: ಎಸಿ ಕೋರ್ಟ್‌ಗೆ ಹಾಜರಾಗುವ ಮುನ್ನ ಮಹಾಲಿಂಗೇಶ್ವರ ದೇಗುಲದಲ್ಲಿ ಪ್ರಾರ್ಥನೆ
ಸಿನಿಮಾ ರಿಲೀಸ್‌ಗೂ ಮುನ್ನವೇ ಜೈಲಲ್ಲಿ ಡೆವಿಲ್ ರೂಪ ತಾಳಿದ ದರ್ಶನ್; ಸಹ ಕೈದಿಗಳಿಗೆ ಕಾಲಿನಿಂದ ಒದ್ದು ದುರಹಂಕಾರ!