ಬಗೆದಷ್ಟು ಸಿಗುತ್ತಿದೆ ಕೋಟಿ ಕೋಟಿ ಸಂಪತ್ತು

By Web DeskFirst Published Oct 6, 2018, 8:16 AM IST
Highlights

ಇದೇ ಮೊದಲ ಬಾರಿ ‘ಕಂಡು-ಕೇಳರಿಯದ’ ದಾಳಿ ನಡೆಸಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಎಂಜಿನಿಯರ್‌ ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ (ಕೆಐಎಡಿಬಿ) ಅಧಿಕಾರಿಯೊಬ್ಬರ ಮೇಲೆ ಶುಕ್ರವಾರ ದಾಳಿ ನಡೆಸಿದ ಅದು, ಆದಾಯಕ್ಕಿಂತಲೂ ಮಿಗಿಲಾಗಿ ಸಂಪಾದಿಸಲಾಗಿತ್ತು ಎನ್ನಲಾದ ಕೋಟ್ಯಂತರ ರುಪಾಯಿ ಮೌಲ್ಯದ ಆಸ್ತಿಪಾಸ್ತಿಯನ್ನು ಪತ್ತೆ ಮಾಡಿದೆ.

ಬೆಂಗಳೂರು :  ಸಿದ್ದರಾಮಯ್ಯ ಅವಧಿಯಲ್ಲಿ ರಚನೆಯಾದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ), ಸ್ಥಾಪನೆಯಾದ ನಂತರ ಇದೇ ಮೊದಲ ಬಾರಿ ‘ಕಂಡು-ಕೇಳರಿಯದ’ ದಾಳಿ ನಡೆಸಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಎಂಜಿನಿಯರ್‌ ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ (ಕೆಐಎಡಿಬಿ) ಅಧಿಕಾರಿಯೊಬ್ಬರ ಮೇಲೆ ಶುಕ್ರವಾರ ದಾಳಿ ನಡೆಸಿದ ಅದು, ಆದಾಯಕ್ಕಿಂತಲೂ ಮಿಗಿಲಾಗಿ ಸಂಪಾದಿಸಲಾಗಿತ್ತು ಎನ್ನಲಾದ ಕೋಟ್ಯಂತರ ರುಪಾಯಿ ಮೌಲ್ಯದ ಆಸ್ತಿಪಾಸ್ತಿಯನ್ನು ಪತ್ತೆ ಮಾಡಿದೆ.

ಬಿಡಿಎ ಎಂಜಿನಿಯರ್‌ ಆಫೀಸರ್‌-5 ಎನ್‌.ಜಿ.ಗೌಡಯ್ಯ ಮತ್ತು ಕೆಐಎಡಿಬಿಯ ಮುಖ್ಯ ಅಭಿವೃದ್ಧಿ ಅಧಿಕಾರಿ ಟಿ.ಆರ್‌.ಸ್ವಾಮಿ ಅವರೇ ದಾಳಿಗೊಳಗಾದವರು. ಇವರಿಗೆ ಸೇರಿದ 8 ಸ್ಥಳಗಳ ಮೇಲೆ ಎಸಿಬಿ ಅಧಿಕಾರಿಗಳು ಶುಕ್ರವಾರ ಬೆಳಗ್ಗೆಯಿಂದ ಸಂಜೆಯವರೆಗೂ ದಾಳಿ ನಡೆಸಿದ್ದಾರೆ. ಇವರಿಗೇ ಸಂಬಂಧಿಸಿದ ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ಗೌಡಯ್ಯ ಅವರ ಸೋದರ, ಗುತ್ತಿಗೆದಾರ ರಾಮಲಿಂಗೇಗೌಡ ಅವರ ಆಸ್ತಿ ಮೇಲೂ ದಾಳಿ ನಡೆದಿದ್ದು, ಅವರ ಹೆಸರಲ್ಲಿಯೇ 500 ಕೋಟಿ ರು. ಆಸ್ತಿ ಇರಬಹುದು ಎಂಬ ಮಾಹಿತಿ ಲಭಿಸಿದೆ.

ಕಾರ್ಯಾಚರಣೆ ವೇಳೆ ‘ಭ್ರಷ್ಟ’ ಅಧಿಕಾರಿಗಳಿಗೆ ಸೇರಿದೆ ಎನ್ನಲಾದ ಸಂಪತ್ತನ್ನು ಕಂಡ ಎಸಿಬಿ ಅಧಿಕಾರಿಗಳೇ ದಂಗಾಗಿದ್ದಾರೆ. ಸ್ವಾಮಿ ನಿವಾಸದಲ್ಲಿ 4.5 ಕೋಟಿ ರು. ನಗದು ಪತ್ತೆಯಾದರೆ, ಗೌಡಯ್ಯ ನಿವಾಸದಲ್ಲಿ 75 ಲಕ್ಷ ರು. ಪತ್ತೆಯಾಗಿದೆ. ರಚನೆಯಾದ ಬಳಿಕ ಇದೇ ಮೊದಲ ಬಾರಿಗೆ ಎಸಿಬಿ, 5 ಕೋಟಿ ರು.ಗಿಂತ ಹೆಚ್ಚು ನಗದು ಪತ್ತೆ ಹಚ್ಚಿದೆ. ಅಲ್ಲದೆ, ಎಸಿಬಿ ನಡೆಸಿದ ದಾಳಿಯ ವೇಳೆ ಒಬ್ಬ ಅಧಿಕಾರಿಯ ಬಳಿಯೇ 4.5 ಕೋಟಿ ರು. ನಗದು ಸಿಕ್ಕಿದ್ದು ಇದೇ ಮೊದಲು ಎಂದು ಮೂಲಗಳು ಹೇಳಿವೆ.

ಎಣಿಸಲಾಗದಷ್ಟುನಗದನ್ನು ಕಂಡ ಅಧಿಕಾರಿಗಳು ನೋಟು ಎಣಿಕೆಯ ಯಂತ್ರವನ್ನು ತಂದು ಎಣಿಸಬೇಕಾಯಿತು. 40 ಸಿಬ್ಬಂದಿಯ ತಂಡವು ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು.

ಹಣದ ಚೀಲ ಬಿಸಾಕಿದ ಸ್ವಾಮಿ!:  ಕೆಐಎಡಿಬಿ ಅಧಿಕಾರಿ ಟಿ.ಆರ್‌. ಸ್ವಾಮಿ ಅವರು ನಗರದ ಮಲ್ಲೇಶ್ವರದ ಗ್ರೀನ್ಸ್‌ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ನಲ್ಲಿ ಕುಟುಂಬದ ಜತೆ ನೆಲೆಸಿದ್ದರು. ಎಸಿಬಿ ಅಧಿಕಾರಿಗಳ ಕಾರ್ಯಾಚರಣೆಗೆ ಬೆದರಿದ 14ನೇ ಮಹಡಿಯಿಂದ ಕೋಟ್ಯಂತರ ರು. ನಗದು ಮತ್ತು ಆಸ್ತಿ ದಾಖಲೆ ಇರುವ ದಾಖಲೆಗಳಿರುವ ಬ್ಯಾಗ್‌ ಬಿಸಾಕಿದ್ದಾರೆ. 2ನೇ ಮಹಡಿಯ ಪೈಪ್‌ನಲ್ಲಿ ಚೀಲವು ಸಿಲುಕಿಕೊಂಡಿರುವುದನ್ನು ಗಮನಿಸಿ ತಕ್ಷಣ ಎಚ್ಚೆತ್ತ ಅಧಿಕಾರಿಗಳು ಅದನ್ನು ಪರಿಶೀಲಿಸಿದಾಗ ನಗದು, ದಾಖಲೆಗಳಿರುವುದು ಪತ್ತೆಯಾಗಿದೆ. ಅವರು ಅದನ್ನು ವಶಕ್ಕೆ ಪಡೆದುಕೊಂಡು ತನಿಖೆ ಕೈಗೊಂಡಿದ್ದಾರೆ.

ಖನಿಜ ಭವನದಲ್ಲಿನ ಕೆಐಎಡಿಬಿ ಕಚೇರಿಯಲ್ಲಿ ಮುಖ್ಯ ಅಭಿವೃದ್ಧಿ ಅಧಿಕಾರಿಯಾಗಿರುವ ಟಿ.ಆರ್‌.ಸ್ವಾಮಿ, ತಮ್ಮ ಕುಟುಂಬಸ್ಥರ ಮತ್ತು ಸಂಬಂಧಿಕರ ಹೆಸರಲ್ಲಿ 8 ಮನೆ, 10 ನಿವೇಶನಗಳು, ವಿವಿಧೆಡೆ 10 ಎಕರೆ ಕೃಷಿ ಜಮೀನು, 1.6 ಕೆ.ಜಿ. ಚಿನ್ನ, 3 ಕಾರು, 4.52 ಕೋಟಿ ರು. ನಗದು ಹೊಂದಿರುವುದು ಪತ್ತೆಯಾಗಿದೆ. ಜಪ್ತಿಯಾಗಿರುವ ನಗದಿನಲ್ಲಿ 2 ಸಾವಿರ ರು. ಮತ್ತು 500 ರು. ಮುಖಬೆಲೆಯ ನೋಟುಗಳು ಅಧಿಕವಾಗಿವೆ. ನೋಟು ಎಣಿಕೆಯ ಯಂತ್ರದ ಮೂಲಕ ನಗದನ್ನು ಎಣಿಕೆ ಮಾಡಲಾಗಿದೆ.

ಗೌಡಯ್ಯ ಬಳಿ ಭಾರಿ ಆಸ್ತಿ:

ಬಿಡಿಎನಲ್ಲಿ ಎಂಜಿನಿಯರ್‌ ಆಫೀಸರ್‌-5 ಎನ್‌.ಜಿ.ಗೌಡಯ್ಯ ಅವರ ಬೆಂಗಳೂರಿನ ಬಸವೇಶ್ವರ ನಿವಾಸ, ಬಿಡಿಎ ಕಚೇರಿ ಸೇರಿದಂತೆ ತುಮಕೂರಿನ ಸಂಬಂಧಿಕರ ಮನೆಯ ಮೇಲೆ ದಾಳಿ ನಡೆಸಲಾಗಿದೆ.

ಈ ಸಂದರ್ಭದಲ್ಲಿ ಗೌಡಯ್ಯ ಮತ್ತವರ ಕುಟುಂಬಸ್ಥರ ಹೆಸರಲ್ಲಿ ಎರಡು ಮನೆ, 8 ನಿವೇಶನಗಳು, 14 ಅಪಾರ್ಟ್‌ಮೆಂಟ್‌ಗಳು, 3 ಕೆ.ಜಿ.ಚಿನ್ನ, 10 ಕೆ.ಜಿ. ಬೆಳ್ಳಿ, ಮೂರು ಕಾರುಗಳು, 75 ಲಕ್ಷ ರು. ನಗದು, ವಿವಿಧ ಬ್ಯಾಂಕ್‌ಗಳಲ್ಲಿ 30 ಲಕ್ಷ ರು. ಠೇವಣಿ ಪತ್ತೆಯಾಗಿವೆ. ಇದಲ್ಲದೇ, ಮಾವನ ಮನೆಯಲ್ಲಿ 4.5 ಕೆ.ಜಿ ಚಿನ್ನಾಭರಣ ಪತ್ತೆಯಾಗಿದೆ ಎಂದು ಎಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ ರಾತ್ರಿ ವೇಳೆ ಪರಿಶೀಲನೆ ಮಾಡಿದಾಗ ಇನ್ನೂ ಅತ್ಯಧಿಕ ಪ್ರಮಾಣದ ಹಣ ಹಾಗೂ ಆಸ್ಯ ಪತ್ರ ಚಿನ್ನಾಭರಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ತುಮಕೂರಿನ ಗುಬ್ಬಿಯಲ್ಲಿನ ಗೌಡಯ್ಯನ ಸಹೋದರ ರಾಮಲಿಂಗೇಗೌಡನ ನಿವಾಸದ ಮೇಲೂ ದಾಳಿ ನಡೆಸಿರುವ ಅಧಿಕಾರಿಗಳು ನಗ-ನಾಣ್ಯ ಮತ್ತು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ರಾಮಲಿಂಗೇಗೌಡ ಗುತ್ತಿಗೆದಾರನಾಗಿದ್ದು, ಬಿಡಿಎ ಸೇರಿದಂತೆ ಇಲಾಖೆಯ ಕಾರ್ಯಗಳನ್ನು ಗುತ್ತಿಗೆ ಪಡೆದುಕೊಳ್ಳುತ್ತಿದ್ದರು ಎಂದು ಹೇಳಲಾಗಿದೆ.

ರಾಮಲಿಂಗೇಗೌಡ ಹೆಸರಿನಲ್ಲಿಯೇ 500 ಕೋಟಿ ರು. ಆಸ್ತಿ ಗಳಿಕೆ ಮಾಡಿರುವ ಬಗ್ಗೆ ಮಾಹಿತಿ ಇದ್ದು, ಈ ನಿಟ್ಟಿನಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ. 

ಒಟ್ಟು ಎಷ್ಟುಆಸ್ತಿ? ಪರಿಶೀಲನೆ ಬಳಿಕ ಮಾಹಿತಿ

ಇಬ್ಬರು ಅಧಿಕಾರಿಗಳ ಆಸ್ತಿ-ಪಾಸ್ತಿ ಮತ್ತು ನಗದಿನ ಮೂಲದ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ. ದಾಖಲೆಗಳನ್ನು ಪರಿಶೀಲನೆ ನಡೆಸಲಾಗುತ್ತಿದ್ದು, ಬಳಿಕವಷ್ಟೇ ನಿಖರವಾದ ಮಾಹಿತಿ ಲಭ್ಯವಾಗಲಿದೆ ಎಂದು ಹೇಳಿದ್ದಾರೆ.

ದಾಳಿಯ ಹೈಲೈಟ್ಸ್‌

- ಕಾರ್‌ನಲ್ಲಿ ಕೋಟಿ ಕೋಟಿ ರು. ಮೌಲ್ಯದ ಆಸ್ತಿ ದಾಖಲೆಗಳು

- ದಾಳಿಗೆ ಬೆದರಿ 14ನೇ ಮಹಡಿಯಿಂದ ಕೋಟ್ಯಂತರ ರು. ನಗದು ಬಿಸಾಡಿದ ಸ್ವಾಮಿ!

- ಮನೆಯಲ್ಲೇ ಇತ್ತು ಕೆ.ಜಿ.ಗಟ್ಟಲೇ ಚಿನ್ನಾಭರಣ

- ಈ ಅಧಿಕಾರಿಗಳಿಗೆ ಐಷಾರಾಮಿ ಕಾರುಗಳ ಶೋಕಿ

- ಸ್ವಾಮಿ ಮನೆಯಲ್ಲೇ ಬಚ್ಚಿಡಲಾಗಿತ್ತು 4.5 ಕೋಟಿ ರು.

- ಗೌಡಯ್ಯ ಮನೆಯಲ್ಲಿತ್ತು 75 ಲಕ್ಷ ರು. ನಗದು

- ಗೌಡಯ್ಯ ಸೋದರ ರಾಮಲಿಂಗೇಗೌಡ ಹೆಸರಲ್ಲಿ 500 ಕೋಟಿ ರು. ಆಸ್ತಿ?

click me!