ಒಳ್ಳೆ ಮುಹೂರ್ತದಲ್ಲಿ ಕಾಂಗ್ರೆಸ್‌ ಸೇರುತ್ತೇನೆ ಎಂದ ಮುಖಂಡ

By Web DeskFirst Published Oct 6, 2018, 7:20 AM IST
Highlights

ಶೀಘ್ರದಲ್ಲೇ ಒಳ್ಳೆ ಮುಹೂರ್ತವನ್ನು ನೋಡಿ ಕಾಂಗ್ರೆಸ್ ಸೇರ್ಪಡೆಯಾಗುತ್ತೇನೆ ಎಂದು ಇದೀಗ ಮುಖಂಡ ಬಹಿರಂಗವಾಗಿ ತಿಳಿಸಿದ್ದಾರೆ. ಈ ಮೂಲಕ ಕೆಪಿಜೆಪಿ ಬಿಡುವ ಬಗ್ಗೆ ಅರಣ್ಯ ಸಚಿವ ಶಂಕರ್ ತಿಳಿಸಿದ್ದಾರೆ. 

ಮೈಸೂರು: ಒಳ್ಳೆಯ ಮುಹೂರ್ತ ನೋಡಿ ನಾನು ಅಧಿಕೃತವಾಗಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗುತ್ತೇನೆ ಎಂದು ಅರಣ್ಯ ಸಚಿವ ಆರ್‌.ಶಂಕರ್‌ ತಿಳಿಸಿದ್ದಾರೆ.

ಹಾವೇರಿ ಜಿಲ್ಲೆ ರಾಣೆಬೆನ್ನೂರು ಕ್ಷೇತ್ರದಿಂದ ಕೆಪಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೊದಲ ಪ್ರಯತ್ನದಲ್ಲೇ ಶಾಸಕರಾಗಿದ್ದೂ ಅಲ್ಲದೆ, ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾದ ಆರ್‌.ಶಂಕರ್‌ ಅವರಿಗೆ ಕಾಂಗ್ರೆಸ್‌ಗೆ ಸೇರಲು ಆ ಪಕ್ಷದಿಂದ ಒತ್ತಡವಿತ್ತು. ಆದರೆ, ಮೈತ್ರಿ ಸರ್ಕಾರದ ಆಯಸ್ಸಿನ ಬಗ್ಗೆ ಅನುಮಾನ ಹೊಂದಿರುವ ಶಂಕರ್‌ ಕಾಂಗ್ರೆಸ್‌ ಸೇರಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿತ್ತು. ಇದೀಗ ಶಂಕರ್‌ ಒಳ್ಳೆಯ ದಿನ ನೋಡಿ ಕಾಂಗ್ರೆಸ್‌ ಸೇರುತ್ತೇನೆ ಎನ್ನುವ ಮೂಲಕ ಇರುವ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

ಬಿಜೆಪಿ ಸೇರಲ್ಲ: ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಚಿವ ಸಂಪುಟದಲ್ಲೇ ಇರುತ್ತೇನೆ. ಸಂಪುಟ ವಿಸ್ತರಣೆ ಹಾಗೂ ಖಾತೆ ಬದಲಾವಣೆ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಆ ಬಗ್ಗೆ ವರಿಷ್ಠರು ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ. ಆದರೆ, ನಾನು ಸಚಿವನಾಗಿಯೇ ಮುಂದುವರಿಯಲಿದ್ದೇನೆ ಎಂದು ತಿಳಿಸಿದರು.

ನಾನು ಬಿಜೆಪಿ ಸೇರುತ್ತೇನೆ ಎಂಬುದು ಮಾಧ್ಯಮಗಳ ಸೃಷ್ಟಿ. ಯಾವುದೇ ಕಾರಣಕ್ಕೂ ನಾನು ಬಿಜೆಪಿಗೆ ಹೋಗಲ್ಲ. ಕಾಂಗ್ರೆಸ್‌, ಜೆಡಿಎಸ್‌ ನೇತೃತ್ವದ ಮೈತ್ರಿ ಸರ್ಕಾರದ ಸಚಿವ ಸಂಪುಟದಲ್ಲಿಯೇ ಇರುತ್ತೇನೆ. ಮಾಧ್ಯಮಗಳಿಂದಾಗಿ ಕೆಲವು ಗೊಂದಲಗಳು ಉಂಟಾಗಿವೆ. ಆ ರೀತಿ ಗೊಂದಲ ಆಗಬಾರದೆಂದೇ ನಾನು ಕಾಂಗ್ರೆಸ್‌ ಸೇರಲು ನಿರ್ಧರಿಸಿದ್ದೇನೆ ಎಂದು ತಿಳಿಸಿದರು.

click me!