ಕಲಬುರಗಿ: ಡೆಮೋ ರೈಲು ಹಳಿ ಮೇಲೆ ಕಳಚಿ ಬಿತ್ತು ಭಾರೀ ಗಾತ್ರದ ಬಂಡೆ!

By Kannadaprabha News  |  First Published Jun 12, 2023, 8:32 PM IST

ಮೂರು ಕಿಲೋ ಮೀಟರ್‌ ಉದ್ದವಿರುವ ಮರಗುತ್ತಿ ಸುರಂಗ ಮಾರ್ಗದಲ್ಲಿ ಬಂಡೆಗಲ್ಲೊಂದು ಕಳಚಿ ಹಳಿ ಮೇಲೆಯೇ ಬಿದ್ದಾಗ, ಬಂಡೆ ಬಿದ್ದ ಸದ್ದಿನಿಂದ ಜಾಗೃತಗೊಂಡ ಚಾಲಕ ತಕ್ಷಣ ರೈಲಿನ ವೇಗ ತಗ್ಗಿಸುವ ಮೂಲಕ ಕಲಬುರಗಿ- ಬೀದರ್‌ ರೈಲು ಮಾರ್ಗದಲ್ಲಿನ ಸುರಂಗದಲ್ಲಿ ನಡೆಯಬಹುದಾಗಿದ್ದ ರೈಲು ಅವಘಡ ತಪ್ಪಿದಂತಾಗಿದೆ.


ಕಲಬುರಗಿ (ಜೂ.12) ಮೂರು ಕಿಲೋ ಮೀಟರ್‌ ಉದ್ದವಿರುವ ಮರಗುತ್ತಿ ಸುರಂಗ ಮಾರ್ಗದಲ್ಲಿ ಬಂಡೆಗಲ್ಲೊಂದು ಕಳಚಿ ಹಳಿ ಮೇಲೆಯೇ ಬಿದ್ದಾಗ, ಬಂಡೆ ಬಿದ್ದ ಸದ್ದಿನಿಂದ ಜಾಗೃತಗೊಂಡ ಚಾಲಕ ತಕ್ಷಣ ರೈಲಿನ ವೇಗ ತಗ್ಗಿಸುವ ಮೂಲಕ ಕಲಬುರಗಿ- ಬೀದರ್‌ ರೈಲು ಮಾರ್ಗದಲ್ಲಿನ ಸುರಂಗದಲ್ಲಿ ನಡೆಯಬಹುದಾಗಿದ್ದ ರೈಲು ಅವಘಡ ತಪ್ಪಿದಂತಾಗಿದೆ.

ಈ ಘಟನೆ ಸಂಭವಿಸಿದ್ದರಿಂದ ಭಯಭೀತರಾದ ಪ್ರಯಾಣಿಕರು ರೈಲಿನಿಂದ ಇಳಿದು ತಕ್ಷಣ ಹೋಗೋದೆಲ್ಲಿಗೆ ಎಂದು ತಿಳಿಯದೆ ಪರದಾಡಿದರು. ಈ ಘಟನೆಯಿಂದಾಗಿ ಕಲಬುರಗಿ- ಬೀದರ್‌ ನಡುವಿನ ರೈಲು ಸಂಚಾರ 2 ಗಂಟೆಗೂ ಹೆಚ್ಚು ಅವಧಿ ಸ್ಥಗಿತಗೊಂಡಿತ್ತು.

Latest Videos

undefined

ಮರಗುತ್ತಿ ಸುರಂಗ(Margutti tunnel)ದಲ್ಲಿನ ರೈಲು ಹಳಿ ಮೇಲೆಯೇ ಕಳಚಿ ಬಿದ್ದಿದ್ದ ಬಾರಿ ಗಾತ್ರದ ಬಂಡೆಗಲ್ಲನ್ನು ಒಡೆದು ಹಳಿಯ ಮೇಲಿನಿಂದ ಕಲ್ಲಿನ ಚೂರುಗಳನ್ನೆಲ್ಲ ಸ್ವಚ್ಚಗಳಿಸಿದ ನಂತರವಷ್ಟೇ ಈ ಮಾರ್ಗದಲ್ಲಿನ ರೈಲು ಸಂಚಾರ ಪುನಃ ಆರಂಭವಾಯ್ತು.

 

ಒಡಿಶಾ ರೈಲು ದುರಂತ: ಗುರುತೇ ಸಿಗದೆ ಅನಾಥವಾದ 83 ಶವ; ಕೃತಕ ಬುದ್ಧಿಮತ್ತೆ ಬಳಸಿ ಮೃತರ ಗುರುತು ಪತ್ತೆಗೆ ಯತ್ನ

ಚಲಿಸುತ್ತಿದ್ದ ರೈಲಿನ ಮುಂದೆಯೇ ಕಳಚಿ ಬಿದ್ದ ಬಂಡೆ!:

ಸೋಮವಾರ ಬೆಳಗ್ಗೆ 7.30ಕ್ಕೆ ಬೀದರ್‌ ನಗರದಿದ ಹೊರಟ ಬೀದರ್‌- ಕಲಬುರಗಿ ಡೆಮೋ ರೈಲು ಬೆಳಗಿನ 9 ಗಂಟೆಗೆ ಮರಗುತ್ತಿ ಸುರಂಗ ಮಾರ್ಗ ತಲುಪಿತ್ತು. ಸುರಂಗ ಮಾರ್ಗದಲ್ಲಿ ರೈಲು ಅದಾಗಲೇ 1 ಕಿಮೀ ನಷ್ಟುಒಳಗೆ ಚಲಿಸಿತ್ತು. ಹೀಗೆ ರೈಲು ಸಂಚರಿಸುವಾಗಲೇ ಸುರಂಗದ ಮೇಲಿಂದ ಬಂಡೆ ಒಂದು ಕಳಚಿ ಹಳಿ ಮೇಲೆ ಬಿದ್ದಿದೆ.

ಭಾರಿ ಗಾತ್ರದ ಕಲ್ಲು ಉರುಳಿ ಬಿದ್ದ ಪರಿಣಾಮವಾಗಿ ಆ ಕಲ್ಲು ನೇರವಾಗಿ ಓಡುವ ರೈಲಿಗೇ (ರೈಲಿನ ಫುಟ್‌ಬೋರ್ಡ್‌) ತಾಕಿದೆ. ಇದರಿದಾಗಿ ರೈಲನ್ನು ಚಾಲಕ ಕಲ್ಲು ಬಿದ್ದ ಸ್ಥಳದಲ್ಲೇ ಬ್ರೆಕ್‌ ಹಾಕಿ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾನೆ. ಚಾಲಕನ ಸಮಯಪ್ರಜ್ಞೆಯಿಂದಾಗಿ ರೈಲಲ್ಲಿರುವ ಪ್ರಯಾಣಿಕರಿಗೆ ಯಾರಿಗೂ ಯಾವುದೇ ಅಪಾಯಗಳಗಿಲ್ಲ.

ಭಾರಿ ಅನಾಹುತ ತಪ್ಪಿತು ಎಂದು ನಿಟ್ಟುಸಿರು ಬಿಡುತ್ತ ಪ್ರಯಾಣಿಕರಲ್ಲಿ ಶೇ.60ರಷ್ಟುಮಂದಿ ಸುರಂಗದಲ್ಲೇ ರೈಲಿನಿಂದ ಇಳಿದು 1 ಕಿಮೀ ನಡೆದುಕೊಂಡು ಬಂದು ಖಾಸಗಿ ವಾಹನಗಳ ಮೂಲಕ ಕಮಲಾಪುರ ಸೇರಿದರೆ, ಉಳಿದವರು ಬಂಡೆಗಲ್ಲು ಒಡೆದು ಮಾರ್ಗ ಸಂಚಾರಮುಕ್ತಗೊಳಿಸುವವರೆಗೂ ಸುರಂಗದಲ್ಲೇ ರೈಲಲ್ಲಿದ್ದು ನಂತರ ಪ್ರಯಾಣ ಬೆಳೆಸಿದ್ದಾರೆ.

ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ. ಆದರೆ, ಕಲ್ಲು ಉರುಳಿ ಬಿದ್ದ ಪರಿಣಾಮ ಕಲ್ಲು ರೈಲಿಗೆ ತಾಗಿ ಟನಲ್‌ನಲ್ಲೇ ರೈಲು ನಿಂತಿದ್ದು, ಪ್ರಯಾಣಿಕರು ಭಯದಲ್ಲಿ ಬೆಚ್ಚಿ ಬಿದ್ರು. ನಾವೆಲ್ಲರೂ ಬಂಡೆಗಲ್ಲು ಹೇಗೆ ಬಿತ್ತು ಎಂದು ಮೇಲೆ ನೋಡುವಷ್ಟರಲ್ಲೇ ಸುರಂಗದಲ್ಲಿ ಮೇಲೆ ಅಳವಡಿಸಲಾಗಿದ್ದ ಜಾಳಿಯಿಂದಲೇ ಕಲ್ಲು ಕಳಚಿ ಹಳಿ ಮೇಲೆ ಬಿದ್ದಿರೋದು ಕಂಡಿತು ಎಂದು ರೈಲಿನಲ್ಲಿದ್ದ ಪ್ರಯಾಣಿಕರೊಬ್ಬರು ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ. ಹಳಿ ಮೇಲೆ ಬಿದ್ದ ಬಂಡೆ ಒಡೆದು ತೆಗೆದ ನಂತರವಷ್ಟೇ ಸದರಿ ಡೆಮೋ ರೈಲು ಬೆಳಗಿನ 11.20ಕ್ಕೆ ಸುರಂಗದಿಂದ ಚಲಿಸಿ ಕಲಬುರಗಿಯತ್ತ ಸಾಗಿತು ಎಂದು ಗೊತ್ತಾಗಿದೆ.

ಬಂಡೆ ಕಳಚಿ ಬಿದ್ದದ್ದು ಹೇಗೆ?:

ಕಲಬುರಗಿ- ಬೀದರ್‌ 126 ಕಿಮೀ ರೈಲು ಮಾರ್ಗದಲ್ಲಿ ಮರಗುತ್ತಿ ಸುರಂಗ ಮಹತ್ವದ್ದಾಗಿದೆ. 3 ಕಿಮೀ ಉದ್ದದ ಈ ಮಾರ್ಗ ತನ್ನ ನಿಮಾರ್ಣದೊದಿಗೇ ರೈಲ್ವೇ ಇಂಜಿನಿಯರಿಂಗ್‌ ಕೌಶಲ್ಯಕ್ಕೆ ಸವಾಲೊಡ್ಡಿತ್ತು. ಉದುರಿ ಬೀಳುವ ಸಡಿಲ ಮಣ್ಣಿರುವ ದಿಬ್ಬ ಇದಾಗಿದ್ದರಿಂದ ರೇಲ್ವೆಯವರು ಇಲ್ಲಿ ವಿನೂತನ ತಂತ್ರಜ್ಞಾನ ಬಳಸಿ ಸುರಂಗ ನಿರ್ಮಿಸಿದ್ದರು.

ಯಾವುದೇ ಹಂತದಲ್ಲಿ ಸುರಂಗದಲ್ಲಿ ಮೇಲಿನಿಂದ ಕಲ್ಲು, ಮಣ್ಣು ಬೀಳಬಾರದು ಎಂದು ಎಚ್ಚರಿಕೆಯ ಕ್ರಮವಾಗಿ 3 ಕಿಮೀ ಉದ್ದ ಸುರಂಗ ಮಾರ್ಗಕ್ಕೆಲ್ಲ ಬಲೆ ಹಾಕಿ ಬಂದೋಬಸ್‌್ತ ಕೂಡಾ ಮಾಡಿದ್ದಾರೆ. ಬಲೆಯುದ್ದಕ್ಕೂ ಸಿಮೆಂಟ್‌ ಲೇಪನ ಸಹ ಮಾಡಲಾಗಿದೆಯಾದರೂ ಇದು ಕಾಮಗಾರಿ ಅಷ್ಟೊಂದು ಗಟ್ಟಿಮುಟ್ಟಾಗದೆ ಅಷ್ಟಕ್ಕಷ್ಟೆಆಗಿರೋದರಿಂದಲೇ ಬಂಡೆಗಲ್ಲುಗಳು, ಮಣ್ಣಿನ ರಾಶಿ ಆಗಾಗ ಸುರಂಗದಲ್ಲಿ ಕಳಚಿ ಹಳಿ ಮೇಲೆ ಬಿದ್ದು ರೈಲು ಸಂಚಾರಕ್ಕೆ ಸಂಚಕಾರ ತಂದೊಡ್ಡುತ್ತಿದೆ.

ಒಡಿಶಾ ರೈಲು ಅಪಘಾತದಲ್ಲಿ ಜೀವ ಉಳಿದರೂ, ವಾಪಸ್‌ ಮನೆಗೆ ಬರುವ ಮೊದಲೇ ಪ್ರಾಣ ಹೋಯ್ತು

ರೇಲ್ವೆ ಇಲಾಖೆ ಎಚ್ಚೆತ್ತುಕೊಳ್ಳಲಿ

ಕಳಪೆ ಕಾಮಗಾರಿಯಾಗಿರೋದರಿಂದಲೇ ಕಲ್ಲು ಕಳಚಿ ಬಿದ್ದಿದೆ. ಪೂರ್ತಿ ಸುರಂಗ ಮಾರ್ಗದಲ್ಲಿ ಕಬ್ಬಿಣದ ರಾಡ್‌ ಬಳಸಿ, ಆರ್‌ಸಿಸಿ ಮೂಲಕ ಗಟ್ಟಿಗೊಳಿಸುವ ಕೆಲಸವಾಗಬೇಕು. ಮಳೆಗಾಲದಲ್ಲಿ ಸುರಂಗಮಾರ್ಗ ಬಳಸಬೇಕಾದರೆ ಇಂತಹ ಕೆಲಸವಾಗಲೇಬೇಕು. ಮಳೆಗಾಲದಲ್ಲಿ ಸುರಂಗ ಮಾರ್ಗದ ತುದಿಗೆ, ಗುಡ್ಡದ ಮೇಲಿನ ಕಲ್ಲುಗಳು ಜಾರಿ ಹಳ್ಳಿಯ ಮೇಲೆ ಬೀಳುವ ಅಪಾಯಗಳು ಇವೆ, ರೇಲ್ವೆ ಇಲಾಖೆ ಅಧಿಕಾರಿಗಳು ಈ ಘಟನೆಯಿಂದ ಎಚ್ಚೆತ್ತುಕೊಳ್ಳಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.

click me!