
ಬೆಂಗಳೂರು (ಅ.18) : ಆಟವಾಡುತ್ತಿದ್ದ ಮೂರು ವರ್ಷದ ಬಾಲಕ ಆಯತಪ್ಪಿ ರಾಜಕಾಲುವೆಗೆ ಬಿದ್ದು ಕೊಚ್ಚಿ ಹೋಗಿರುವ ಘಟನೆ ವರ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪಶ್ಚಿಮ ಬಂಗಾಳ ಮೂಲದ ವಿನೋದ್ ಎಂಬುವವರ ಪುತ್ರ ಕಬೀರ್(3) ರಾಜ ಕಾಲುವೆಯಲ್ಲಿ ಕೊಚ್ಚಿ ಹೋದ ಬಾಲಕ. ವರ್ತೂರಿನ ಶೋಭಾ ಗ್ರೀನ್ ಅಪಾರ್ಚ್‌ಮೆಂಟ್ ಎದುರಿನ ಕಾರ್ಮಿಕರ ಶೆಡ್ ಹಿಂಭಾಗದ ರಾಜ ಕಾಲುವೆ ಬಳಿ ಭಾನುವಾರ ಸಂಜೆ 4ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Bengaluru: ಡೆಡ್ಲಿ ರಸ್ತೆಗುಂಡಿಯಿಂದ ಮತ್ತೊಂದು ಅವಘಡ
ಇಲ್ಲಿನ ಕಾರ್ಮಿಕರ ಶೆಡ್‌ನಲ್ಲಿ ವಿನೋದ್ ಕುಟುಂಬ ವಾಸವಾಗಿದೆ. ವಿನೋದ್ ಆನ್‌ಲೈನ್ ಫುಡ್ ಡೆಲವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ. ಸಂಜೆ 4ರ ಸುಮಾರಿಗೆ ಇಬ್ಬರು ಬಾಲಕರು ಕಾರ್ಮಿಕರ ಶೆಡ್ ಹಿಂಭಾಗದ ರಾಜಕಾಲುವೆ ಬಳಿ ಆಟವಾಡುತ್ತಿದ್ದರು. ಈ ವೇಳೆ ಕಬೀರ್ ಆಯತಪ್ಪಿ ರಾಜಕಾಲುವೆಗೆ ಬಿದ್ದಿದ್ದಾನೆ. ಕಳೆದ ಎರಡು-ಮೂರು ದಿನಗಳಿಂದ ಜೋರು ಮಳೆ ಸುರಿದ ಪರಿಣಾಮ ರಾಜಕಾಲುವೆಯಲ್ಲಿ ನೀರಿನ ಹರಿವು ಜೋರಾಗಿತ್ತು. ಹೀಗಾಗಿ ಕಬೀರ್ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ.
ಇದನ್ನು ನೋಡಿದ ಮತ್ತೊಬ್ಬ ಬಾಲಕ, ಕಾರ್ಮಿಕರ ಶೆಡ್ ಬಳಿ ಓಡಿ ಬಂದಿದ್ದಾನೆ. ಈ ವೇಳೆ ಬಾಲಕ ಗಾಬರಿಗೊಂಡಿದ್ದನ್ನು ನೋಡಿದ ಸ್ಥಳೀಯರು, ಬಾಲಕನನ್ನು ಪ್ರಶ್ನಿಸಲು ಮುಂದಾಗಿದ್ದಾರೆ. ಆದರೆ, ಆ ಬಾಲಕನಿಗೆ ಸರಿಯಾಗಿ ಮಾತು ಬಂದಿಲ್ಲ. ಆದರೆ, ರಾಜ ಕಾಲುವೆಯತ್ತ ಕೈ ತೋರಿಸಿದ್ದಾನೆ. ಈ ವೇಳೆ ಅನುಮಾನಗೊಂಡು ರಾಜಕಾಲುವೆ ಬಳಿ ಹೋದಾಗ, ಈ ಬಾಲಕನೊಂದಿಗೆ ಆಟವಾಡುತ್ತಿದ್ದ ಕಬೀರ್ ರಾಜಕಾಲುವೆಗೆ ಬಿದ್ದು ಕೊಚ್ಚಿ ಹೋಗಿರುವುದು ಗೊತ್ತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊಂಬೆ ಬಿದ್ದು ಚಾಲಕ ಮೃತಪಟ್ಟರೂ ವಿಮೆ ಹಣ ಕೊಡ್ಬೇಕು: ಹೈಕೋರ್ಟ್
ಕೂಡಲೇ ಸ್ಥಳೀಯರು ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಬಾಲಕನ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದರು. ಸಂಜೆ 6.30ರ ಸುಮಾರಿಗೆ ಕತ್ತಲೆ ಆವರಿಸಿದ್ದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಿದರು. ಸೋಮವಾರ ಮುಂಜಾನೆಯಿಂದಲೇ ಬಾಲಕನ ಪತ್ತೆಗೆ ರಾಜಕಾಲುವೆಯಲ್ಲಿ ಕಾರ್ಯಾಚರಣೆ ಮುಂದುವರೆದಿದೆ. ಆದರೆ, ಈವರೆಗೂ ಬಾಲಕನ ಸುಳಿವು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ