ಇಂದು ಹಟ್ಟಿ ಚಿನ್ನದ ಗಣಿಗೆ 76ರ ಸಂಭ್ರಮ!
ದೇಶದಲ್ಲಿಯೇ ಏಕೈಕ ಚಿನ್ನದ ಗಣಿಯಾಗಿದೆ ಹಟ್ಟಿ
ರಾಯಚೂರು ಜಿಲ್ಲೆ ಲಿಂಗಸೂಗೂರು ತಾ. ಹಟ್ಟಿ ಗ್ರಾಮದಲ್ಲಿನ ಚಿನ್ನದ ಗಣಿ
ದೇಶದಲ್ಲೇ ಅಧಿಕ ಚಿನ್ನ ಉತ್ಪಾದನೆ ಮಾಡುವ ಹಟ್ಟಿ ಚಿನ್ನದ ಗಣಿ
ವರದಿ : ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್, ರಾಯಚೂರು
ರಾಯಚೂರು, (ಜುಲೈ.08): ಜಿಲ್ಲೆ ಲಿಂಗಸೂಗೂರು ತಾಲೂಕಿನ ಹಟ್ಟಿ ದೇಶದ ಏಕೈಕ ಚಿನ್ನದ ಗಣಿಯಾಗಿದೆ. ನೂರಾರು ಅಡಿ ಆಳದಲ್ಲಿರುವ ಚಿನ್ನದ ಅದಿರು ಹೊರತೆಗೆದು ಸಂಸ್ಕರಿಸಿ ಅಪ್ಪಟ ಚಿನ್ನ ತೆಗೆಯುವ ಗಣಿಗೆ ಈಗ 76ರ ಸಂಭ್ರಮ.
ಹಟ್ಟಿ ಚಿನ್ನದ ಗಣಿಗೆ ಇದೆ ಮೂರು ಕಾಲಘಟ್ಟದ ಇತಿಹಾಸ
ಚಕ್ರವರ್ತಿ ಅಶೋಕನ ಕಾಲದ ಪೂರ್ವದಿಂದಲ್ಲೂ ಹಟ್ಟಿಯಲ್ಲಿ ಚಿನ್ನದ ಗಣಿಗಾರಿಕೆ ನಡೆದಿರುವ ಬಗ್ಗೆ ಹತ್ತಾರು ಪುರಾವೆಗಳು ಸಿಕ್ಕಿವೆ. ಹೀಗಾಗಿ ಇದು ಮೊದಲನೆಯ ಘಟ್ಟವಾಗಿದ್ರೆ, ಎರಡನೆಯದ್ದು ಬ್ರಿಟಿಷರ ಕಾಲ (1882ರಿಂದ1920ರವರೆಗೆ) ಹೈದ್ರಾಬಾದ್ ನಿಜಾಮರ ಮಾಲೀಕತ್ವದ ಡೆಕ್ಕನ್ ಗೋಲ್ಡ್ ನ ಮೈನ್ಸ್ ಆಗಿತ್ತು. ತಾಂತ್ರಿಕ ಕಾರಣದಿಂದಾಗಿ 1920ರಲ್ಲಿ ಹಟ್ಟಿ ಚಿನ್ನದ ಗಣಿ ಮುಚ್ಚಲಾಗಿತ್ತು. ಆ ಬಳಿಕ ಮತ್ತೆ 1937ರಲ್ಲಿ ಹೈದ್ರಾಬಾದ್ ನಿಜಾಮ್ ನ ಸರ್ಕಾರ ಪುನ: ಹಟ್ಟಿ ಚಿನ್ನದ ಗಣಿ ಆರಂಭಿಸುತ್ತಾನೆ.
undefined
ದೇಶದಲ್ಲೇ ಅತೀ ಹೆಚ್ಚು ಬಂಗಾರ ಉತ್ಪಾದನೆಯಾಗೋದು ಕರ್ನಾಟಕದಲ್ಲೇ: ಹಟ್ಟಿ ಚಿನ್ನದ ಗಣಿಗಿದೆ ರೋಚಕ ಇತಿಹಾಸ..!
ಮೂರನೆಯ ಘಟ್ಟ ಅಂದ್ರೆ ಜುಲೈ 8, 1947 ಆಗ ಹೈದ್ರಾಬಾದ್ ಗೋಲ್ಡ್ ಮೈನ್ಸ್ ಕಂಪನಿ ನಿಯಮಿತ ಆಯ್ತು. ಇದನ್ನು ಹಟ್ಟಿ ಚಿನ್ನದ ಕಂಪನಿಯ ಗಣಿಗಾರಿಕೆ ಆಧುನಿಕ ಕಾಲ ಎಂದು ಗುರುತಿಸಲಾಗಿದೆ. ಹೈದರಾಬಾದ್ ನಿಜಾಮರ ಆಡಳಿತ ಕಾಲದಲ್ಲಿ ಹಟ್ಟಿ ಸುತ್ತಮುತ್ತ ಚಿನ್ನದ ನಿಕ್ಷೇಪಗಳ ಶೋಧನೆಗಾಗಿ ಇಂಗ್ಲೆಂಡ್‌ನ ಮನ್ ಎಂಬ ಲೋಹ ತಜ್ಞರು ಸಮೀಕ್ಷೆ ನಡೆಸಿದ್ದರು. ಹಟ್ಟಿ ಸುತ್ತಮುತ್ತಲಿನ ಭೂಮಿಯಲ್ಲಿ ಚಿನ್ನಕ್ಕಾಗಿ ಶೋಧನೆ ನಡೆಸಿದ್ದವರು. ನಮ್ಮ ದೇಶಿ ತಜ್ಞರೇ ಹೊರತು ವಿದೇಶಿಯರಲ್ಲ ಎಂಬುದನ್ನು ಮನ್ ಅವರೇ ಅಧ್ಯಯನದ ಮೂಲಕ ಬಹಿರಂಗ ಪಡಿಸಿದ್ದಾರೆ. ಅವರ ಅಭಿಪ್ರಾಯಕ್ಕೆ ಇಲ್ಲಿರುವ ಅನೇಕ ಬಾವಿಗಳೇ ಪುರಾವೆ ಎಂದು ಅವರು ಹೇಳಿದ್ದಾರೆ. ಎರಡು ಸಾವಿರ ವರ್ಷಗಳ ಹಿಂದೆ ಇಲ್ಲಿ ಗಣಿಗಾರಿಕೆ ಚಟುವಟಿಕೆಗಳು ನಡೆದಿದ್ದವು. ಎಂಬುದಕ್ಕೆ ಹಟ್ಟಿ ಗಣಿ ಕಂಪನಿಯಲ್ಲಿ ದಾಖಲೆಗಳಿವೆ. ಆಗ ಗಣಿಗಾರಿಕೆಗೆ ಬಳಸಲಾಗುತ್ತಿದ್ದ ಮರದ ದಿಮ್ಮಿ, ಕಟ್ಟಿಗೆ ಮತ್ತಿತರ ಪರಿಕರಗಳು ಹಟ್ಟಿ ಗಣಿ ಕಂಪನಿಯ ಸಂಗ್ರಹಾಲಯದಲ್ಲಿವೆ.
ಪ್ರಾಚೀನ ಕಾಲದ ಜನರಿಗೂ ಚಿನ್ನದ ಗಣಿ ತಂತ್ರಜ್ಞಾನ ಗೊತ್ತಿತ್ತು!
ಹಟ್ಟಿ ಪ್ರದೇಶದಲ್ಲಿ ಪ್ರಾಚೀನ ಕಾಲದ ಜನರು ಬೆಂಕಿ ಹಾಕಿ ಕಾವು ಕೊಟ್ಟು ಗಣಿ ಮಾಡುವ ತಂತ್ರವನ್ನು ನಮ್ಮ ಪ್ರಾಚೀನರು ರೂಢಿಸಿಕೊಂಡಿದ್ದರು. ಹಟ್ಟಿ ಗಣಿಗಳಲ್ಲಿ ಚಿನ್ನಭರಿತ ಬೆಣಚುಕಲ್ಲಿನ ಸ್ತರದಲ್ಲಿ ಪ್ರಾಚೀನರು 195 ಮೀ.ವರೆಗೆ ಗಣಿಗಾರಿಕೆ ಮಾಡಿದ್ದಾರೆ. ಇದು ಜಗತ್ತಿಗೇ ಹಳೆಯ ದಾಖಲೆ. ಹಟ್ಟಿ ಭಾಗದ ಸುತ್ತಮುತ್ತಲಲ್ಲಿ ಮುನ್ನೂರು ಪುರಾತನ ಚಿನ್ನದ ಗಣಿಗಳು ಪತ್ತೆಯಾಗಿವೆ. ಗಣಿಗಳಲ್ಲಿ ಬಳಸಿದ ಕಬ್ಬಿಣ, ಕಲ್ಲಿನ ಪೀಠ, ನೀರನ್ನು ಎತ್ತಲು ಬಳಸುತ್ತಿದ್ದ ಮಡಕೆಯ ಚೂರು ಭೂಮಿ ಉತ್ಖನನ ವೇಳೆ ಪತ್ತೆಯಾಗಿವೆ.
ಇನ್ನೂ ಗಣಿ ತಂತ್ರಜ್ಞಾನ ಬಲ್ಲ ಈ ಮಂದಿಯಾರೆಂದು ಈವರೆಗೂ ನಿಖರವಾಗಿ ಇಂದಿಗೂ ತಿಳಿದಿಲ್ಲ. ಗಣಿಯ ಆಳದಲ್ಲಿ ಗಣಿ ಕುಸಿದು ಬೀಳದಂತೆ ಜಾಲಿ ಮರದ ಕಂಬಗಳ ಆಸರೆ ಕೊಟ್ಟಿರುವುದು ಗಣಿ ತಂತ್ರಜ್ಞಾನದಲ್ಲಿ ಅವರಿಗಿದ್ದ ಪರಿಣತಿ ತಿಳಿದು ಬರುತ್ತೆ.. ಹಳೆಯ ಗಣಿಗಾರಿಕೆಯಲ್ಲಿ ಕಂಡು ಬರುವ ಮರದ ಕಾರ್ಬನ್ ಡೇಟಿಂಗ್ ಸುಮಾರು 1900 ವರ್ಷಗಳಷ್ಟು ಹಳೆಯದಾಗಿದೆ. ಆದರೆ, ಚಿನ್ನವನ್ನು ಸಂಸ್ಕರಿಸಲು ಅವರು ಈಗ ಗ್ರಾಮೀಣ ಪ್ರದೇಶಗಳಲ್ಲಿ ಮಸಾಲೆಗಳನ್ನು ತಯಾರಿಸಲು ಬಳಸುವಂತಹ ರುಬ್ಬು ಕಲ್ಲನ್ನು ಬಳಸುತ್ತಿದ್ದರು. ಹಟ್ಟಿಯಲ್ಲಿ ಪುರಾತನ ಗಣಿಗಾರಿಕೆ ಜತೆಗೆ 1890 ರಿಂದ 1920ರ ನಡುವೆ ಚಿನ್ನದ ಗಣಿಗಾರಿಕೆ ಇತ್ತು. ಆಗ ಚಿನ್ನದ ಹತ್ತು ಗ್ರಾಂಗೆ ಬೆಲೆ ಸುಮಾರು 18 ರೂ. ಆಗಿತ್ತು. ಈ ಅವಧಿಯಲ್ಲಿ ಮುಖ್ಯ ಗಣಿ ಸುಮಾರು 1100ಮೀ. ಆಳ ಹೊಂದಿತ್ತು. ತಾಂತ್ರಿಕ ತೊಂದರೆಗಳು ಮತ್ತು ಹಣದ ಕೊರತೆಯಿಂದಾಗಿ ಗಣಿಗಾರಿಕೆಯನ್ನು 1920ರಲ್ಲಿ ಮುಚ್ಚಲಾಯಿತು. ಮತ್ತೆ ಹೈದರಾಬಾದ್ 1937ರಲ್ಲಿ ನಿಜಾಮನ ಸರ್ಕಾರವು ಹಟ್ಟಿ ಚಿನ್ನದ ಗಣಿಯನ್ನು ಪುನಃ ಆರಂಭಿಸಿದರು .
ಹಟ್ಟಿಯಲ್ಲಿ ಚಿನ್ನಕ್ಕಾಗಿ ಮೂರು ಕಡೆ ಗಣಿಗಾರಿಕೆ ನಡೆಯುತ್ತೆ:
ಹಟ್ಟಿ ಗಣಿಯಲ್ಲಿ ಬಂಗಾರ ಸಿಗುತ್ತೆ ಅಂತ ಎಲ್ಲರಿಗೂ ಗೊತ್ತು. ಆದ್ರೆ ಹಟ್ಟಿಯಲ್ಲಿ ಮೂರು ಗಣಿಗಳು ಇರುವುದು ಕೆಲವರಿಗೆ ಮಾತ್ರ ಗೊತ್ತು.
1) ವಿಲೇಜ್ ಶಾಫ್ಟ್
2) ಸೆಂಟ್ರಲ್ ಶಾಫ್ಟ್
3) ಮಲ್ಲಪ್ಪ ಶಾಫ್ಟ್ ಹೀಗೆ ಇವುಗಳನ್ನು (ಶಾಫ್ಟ್ ಎಂದರೆ ಗಣಿಗಾರಿಕೆ ನಡೆಯುವ ಸ್ಥಳ ಎಂದು ಅರ್ಥ) ಈ ಮೂರು ಸ್ಥಳಗಳಿಗೂ ಶತಮಾನದ ಇತಿಹಾಸವಿದೆ. ಸದ್ಯ ವಿಲೇಜ್ ಶಾಫ್ಟ್ ನಲ್ಲಿ ಗಣಿಗಾರಿಕೆ ಚಟುವಟಿಕೆಗಳು ಕಡಿಮೆ. ಮಲ್ಲಪ್ಪ ಹಾಗೂ ಸೆಂಟ್ರಲ್ ಶಾಫ್ಟ್‌ಗಳಲ್ಲಿ ಈಗ ಹೆಚ್ಚು ಚಿನ್ನ ಉತ್ಪಾದನೆಯಾಗುತ್ತಿದೆ. ರಾಜ್ಯ ಸರ್ಕಾರಿ ಒಡೆತನದ ಹಟ್ಟಿ ಗಣಿ ಈಗಾಗಲೇ 2800 ಅಡಿ ಆಳಕ್ಕೆ ತಲುಪಿದೆ.
ನಿತ್ಯ ಹಟ್ಟಿ ಚಿನ್ನದ ಗಣಿಯಲ್ಲಿ 8 ಕೆಜಿ ಚಿನ್ನ ಉತ್ಪಾದನೆ
1956ರಲ್ಲಿ ಅಂದಿನ ಮೈಸೂರು ಸರ್ಕಾರ ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತವೆಂದು ನಾಮಕರಣ ಮಾಡಿತ್ತು. ಅಂದಿನಿಂದ ಇಂದಿನವರೆಗೂ ನಿತ್ಯವೂ ಹಟ್ಟಿ ಚಿನ್ನದ ಗಣಿಯಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಪ್ರತಿ ದಿನ 2,000 ಟನ್‌ಗೂ ಅಧಿಕ ಚಿನ್ನದ ಅದಿರು ಹೊರ ತೆಗೆಯಲಾಗುತ್ತಿದೆ. ಈ ಅದಿರು ಸಂಸ್ಕರಣೆಗೊಂಡು ನಿತ್ಯ 8ಕೆಜಿಗೂ ಅಧಿಕ ಚಿನ್ನ ಉತ್ಪಾದನೆ ಮಾಡಲಾಗುತ್ತಿದೆ.
ಹಟ್ಟಿ ಸುತ್ತಿನ ಎರಡು ಪ್ರದೇಶದಲ್ಲಿಯೂ ಚಿನ್ನದ ಗಣಿಗಾರಿಕೆ
ಕೇವಲ ಹಟ್ಟಿ ಅಲ್ಲದೆ ಹಟ್ಟಿ ಗಣಿ ಬಳಿ ಇರುವ ‘ಊಟಿ’ಯಲ್ಲಿ ತೆರೆದ ಗಣಿಯಿಂದ ಮತ್ತು ಹೀರಾಬುದ್ದಿನ್ನಿ ಗಣಿಯಿಂದ ನಿತ್ಯ 300 ಟನ್ ಅದಿರನ್ನು ಹೊರ ತೆಗೆದು ಬಂಗಾರ ಸಂಸ್ಕರಿಸಲಾಗುತ್ತಿದೆ.
ಹಟ್ಟಿಯಲ್ಲಿ 901 ಮೀಟರ್ ಆಳದಲ್ಲಿ ಚಿನ್ನದ ಗಣಿಗಾರಿಕೆ:
ಈಗ ಇಡೀ ದೇಶದಲ್ಲಿ ಚಿನ್ನಕ್ಕೆ ಬೇಡಿಕೆ ಹೆಚ್ಚಾಗಿದೆ. ಬೇಡಿಕೆ ಅನುಗುಣವಾಗಿ ಹಟ್ಟಿಯಲ್ಲಿ ಗಣಿಗಾರಿಕೆಯೂ ಹೆಚ್ಚು ಆಳವಾಗಿ ನಡೆಯುತ್ತಿದೆ. ಆಳಕ್ಕೆ ಹೋದಂತೆ ಚಿನ್ನದ ಪ್ರಮಾಣ ಹೆಚ್ಚಾಗಿರುವ ಅದಿರು ಪತ್ತೆ ಆಗುತ್ತಿದೆ. ಹೀಗಾಗಿ ಕಾರ್ಮಿಕರು ನಿತ್ಯವೂ ತಮ್ಮ ಪ್ರಾಣದ ಹಂಗು ತೊರೆದು 901 ಮೀಟರ್ ಭೂಗರ್ಭದಲ್ಲಿ ಹೋಗಿ ಚಿನ್ನದ ಗಣಿಗಾರಿಕೆ ಮಾಡುತ್ತಿದ್ದಾರೆ. ಹಟ್ಟಿ ಗಣಿಯಲ್ಲಿ ಒಟ್ಟು 28 ಲೆವೆಲ್ ಗಳು ಇವೆ ( ಒಂದು ಲೆವೆಲ್ ಅಂದ್ರೆ - 30 ಮೀಟರ್ ಆಳ) ಹೀಗೆ ಆಳಕ್ಕೆ ಇಳಿದು ಚಿನ್ನದ ಉತ್ಪಾದನೆ ನಡೆದಿದೆ.
ಒಟ್ಟಿನಲ್ಲಿ ಜುಲೈ 8 , 1947 ರಿಂದ ನಿರಂತರವಾಗಿ ಹಟ್ಟಿಯಲ್ಲಿ ಚಿನ್ನ ಉತ್ಪಾದನೆ ನಡೆಯುತ್ತಿದೆ. ಸದ್ಯ 3845 ಕಾರ್ಮಿಕರು ಹಾಗೂ ನೌಕರರಿಂದ ದಿನಕ್ಕೆ 8 ಕೆಜಿ ಚಿನ್ನದ ಉತ್ಪಾದನೆ ಆಗುತ್ತಿದೆ.1930ರಲ್ಲಿ ಹಟ್ಟಿ ಕೇವಲ 60-80 ಗುಡಿಸಲು ಮತ್ತು ಸಣ್ಣ ಪುಟ್ಟ ಮನೆಗಳನ್ನು ಹೊಂದಿರುವ ಗ್ರಾಮವಾಗಿತ್ತು. ಇಂದು 40 ಸಾವಿರಕ್ಕೂ ಅಧಿಕ ಜನರು ಹಟ್ಟಿ ಗ್ರಾಮದಲ್ಲಿ ವಾಸವಾಗಿದ್ದಾರೆ. ನೂರಾರು ಜನರಿಗೆ ಹಟ್ಟಿ ಕಂಪನಿ ಆಶ್ರಯ ನೀಡಿದೆ ಎನ್ನಬಹುದು.