NCC Unit: ರಾಜ್ಯದಲ್ಲಿ 75 ಹೊಸ ಎನ್‌ಸಿಸಿ ಯುನಿಟ್‌: ಸಿಎಂ ಬೊಮ್ಮಾಯಿ

By Kannadaprabha NewsFirst Published Jan 24, 2022, 7:08 AM IST
Highlights

*  7500 ಹೊಸ ಕೆಡೆಟ್‌ಗಳಿಗೆ ಅವಕಾಶ
*  ನೇತಾಜಿ ಜನ್ಮದಿನೋತ್ಸವದಲ್ಲಿ ಘೋಷಣೆ
*  ಸ್ವಾತಂತ್ರ್ಯದ 75ನೇ ವರ್ಷಕ್ಕೆ ಕೊಡುಗೆ
 

ಬೆಂಗಳೂರು(ಜ.24):  ದೇಶದ ಸ್ವಾತಂತ್ರೋತ್ಸವದ(Independence Day) 75ನೇ ವರ್ಷಾಚರಣೆಯ ಸಂದರ್ಭದಲ್ಲಿ ಎನ್‌ಸಿಸಿಯ(NCC) 75 ಯುನಿಟ್‌ಗಳನ್ನು ಹೊಸದಾಗಿ ಆರಂಭಿಸಿ 7,500 ಹೊಸ ಕೆಡೆಟ್‌ಗಳಿಗೆ ಅವಕಾಶ ನೀಡಲು ತೀರ್ಮಾನಿಸಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಹೇಳಿದ್ದಾರೆ. ನೇತಾಜಿ ಸುಭಾಷ್‌ ಚಂದ್ರ ಬೋಸ್‌(Subhas Chandra Bose) ಅವರ 125ನೇ ಜನ್ಮದಿನಾಚರಣೆ ಅಂಗವಾಗಿ ಜಕ್ಕೂರಿನ ಸರ್ಕಾರಿ ವೈಮಾನಿಕ ತರಬೇತಿ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ 75 ನೇತಾಜಿ ಅಮೃತ ಎನ್‌ಸಿಸಿ ಘಟಕ, ನವೀಕೃತ ಸರ್ಕಾರಿ ವೈಮಾನಿಕ ತರಬೇತಿ ಶಾಲೆ, 75 ಪೈಲಟ್‌ಗಳ ತರಬೇತಿಗೆ ಚಾಲನೆ, ಹೆಲಿಟೂರಿಸಂ, ಸಿದ್ದಿ ಕ್ರೀಡಾಪಟುಗಳ ತರಬೇತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.

ಎನ್‌ಸಿಸಿ ಸೇರಲು ವಿದ್ಯಾರ್ಥಿಗಳನ್ನು(Students) ಉತ್ತೇಜಿಸಲು ಸರ್ಕಾರ ಈ ತೀರ್ಮಾನಕ್ಕೆ ಬಂದಿದೆ. 7,500 ವಿದ್ಯಾರ್ಥಿಗಳಿಗೆ ತಲಾ 12 ಸಾವಿರ ರು. ವೆಚ್ಚವಾಗಲಿದ್ದು, ರಾಜ್ಯ ಸರ್ಕಾರವೇ(Government of Karnataka) ಭರಿಸಲಿದೆ. ಶಾಲೆಗಳಲ್ಲಿ 44 ಸಾವಿರ ಕೆಡೆಟ್‌ಗಳಿದ್ದು ಇವರನ್ನು ಕಾಲೇಜ್‌ಗಳ ಜೊತೆ ವಿಲೀನಗೊಳಿಸಿ ಕೆಡೆಟ್‌ಗಳ ಸಂಖ್ಯೆಯನ್ನು 50 ಸಾವಿರಕ್ಕೆ ಏರಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಆದರೆ ಇದಕ್ಕೆ ರಕ್ಷಣಾ ಇಲಾಖೆ(Department of Defense) ಅನುಮತಿ ಬೇಕಿದೆ ಎಂದು ಹೇಳಿದರು.

Netaji Birth Anniversary ವಿಧಾನಸೌಧ ಮುಂದಕ್ಕೆ ಬೋಸ್ ಪ್ರತಿಮೆ ಶಿಫ್ಟ್‌, ವರ್ಷವಿಡೀ ನೇತಾಜಿ ಸ್ಮರಣೆ

ಕ್ರೀಡೆ, ಸಾಹಸ, ಒಲಿಂಪಿಕ್ಸ್‌ಗೆ ಸಿದ್ಧತೆ ಮಾಡಲು 4 ವರ್ಷಗಳ ಕಾಲ ದತ್ತು ಪಡೆಯುವ ಕಾರ್ಯಕ್ರಮವನ್ನು ಇಲಾಖೆ ಸ್ವಂತ ಶಕ್ತಿಯಿಂದ ಮಾಡಿರುವುದು ಶ್ಲಾಘನೀಯ. ನಿಂತು ಹೋಗಿದ್ದ ಸರ್ಕಾರಿ ಫ್ಲೈಯಿಂಗ್‌ ಶಾಲೆ(Government Flying School) ಪುನರಾರಂಭ ಮಾಡಿರುವುದು ಕಿರೀಟಪ್ರಾಯವಾಗಿದೆ. 100 ಜನರಿಗೆ ತರಬೇತಿ ನೀಡುವ ತೀರ್ಮಾನ ಮಾಡಲಾಗಿದ್ದು ಟ್ವಿನ್‌ ಇಂಜಿನ್‌ ವಿಮಾನವನ್ನೂ ಇಲ್ಲಿ ತರಲಾಗಿದೆ. ಪೂರ್ಣಪ್ರಮಾಣದ ರನ್‌ವೇ ಪ್ರಾರಂಭಿಸುವ ಬಗ್ಗೆ ಮುಂದಿನ ದಿನಗಳಲ್ಲಿ ಪರಿಶೀಲಿಸಿ, ಸ್ಥಳದ ವ್ಯವಸ್ಥೆಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.

ಮಹಿಳಾ ಸ್ವರಕ್ಷಣೆಗೆ(Women's Self-Defense) ಪೊಲೀಸ್‌(Police) ಇಲಾಖೆಯೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ. ಮಹಿಳಾ ಸ್ವಯಂ ರಕ್ಷಣೆ ಶಾಲಾ ಕಾಲೇಜುಗಳಲ್ಲಿಯೂ ಹಮ್ಮಿಕೊಳ್ಳಬೇಕು. ಇದು ಜ್ಞಾನದ ಶತಮಾನ, ಅವಕಾಶಗಳ ಶತಮಾನವಾಗಿದ್ದು, ಅವುಗಳ ಉಪಯೋಗವನ್ನು ಪಡೆದು ಎಲ್ಲ ರಂಗಗಳಲ್ಲಿಯೂ ಮುಂದೆ ಬರಬೇಕು ಎಂದು ಹೇಳಿದರು.

ಜ.23 ಕೂಡ ಇನ್ನು ಮಹತ್ವದ ದಿನ - ರಾಜೀವ್‌:

ಟ್ವಿನ್‌ ಇಂಜಿನ್‌ ವಿಮಾನಕ್ಕೆ ಚಾಲನೆ ನೀಡಿ ಮಾತನಾಡಿದ ಕೇಂದ್ರದ ಕೌಶಲ್ಯಾಭಿವೃದ್ದಿ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌(Rajeev Chandrasekhar), ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಭಾರತದ ಇತಿಹಾಸದ ಅತ್ಯಂತ ಸಾಹಸಿ, ಧೈರ್ಯವಂತ ವ್ಯಕ್ತಿ. ಅವರ ಯೋಚನೆ ಮತ್ತು ದೃಷ್ಟಿಕೋನ ಇಂದಿಗೂ ಪ್ರಸ್ತುತ. ಜನವರಿ 26, ಆಗಸ್ಟ್‌ 15ರಂತೆ ಮುಂದಿನ ದಿನಗಳಲ್ಲಿ ಜನವರಿ 23 ಕೂಡ ದೇಶದ ಅತ್ಯಂತ ಮಹತ್ವದ ದಿನವಾಗಿ ರೂಪುಗೊಳ್ಳಲಿದೆ ಎಂದು ಹೇಳಿದರು.

ಗ್ರಾಮೀಣರಿಗೆ ಅನುಕೂಲ- ಗೌಡ:

ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾರಾಯಣ ಗೌಡ ಮಾತನಾಡಿ, ಸರ್ಕಾರಿ ವೈಮಾನಿಕ ತರಬೇತಿ ಶಾಲೆ ಆರಂಭಿಸುವುದರಿಂದ ಗ್ರಾಮೀಣ ಪ್ರತಿಭೆಗಳಿಗೆ ಅನುಕೂಲ ಆಗಲಿದೆ. 6 ತಿಂಗಳಲ್ಲೇ ಕಾಮಗಾರಿ ಪೂರ್ಣಗೊಳಿಸಿ ಕಾರ್ಯಾರಂಭ ಮಾಡಲಾಗಿದೆ. ಪ್ರತಿ ವರ್ಷ ನೂರು ಪೈಲಟ್‌ಗಳ ತರಬೇತಿ ನೀಡುವ ಗುರಿ ಹೊಂದಿದ್ದೇವೆ. ಈ ಮೂಲಕ ಐತಿಹಾಸಿಕವಾದ ಸರ್ಕಾರಿ ವೈಮಾನಿಕ ತರಬೇತಿ ಶಾಲೆಯ ಗತ ವೈಭವ ಮರಳಲಿದೆ ಎಂದು ತಿಳಿಸಿದರು.

Subhash Chandra Bose ನೇತಾಜಿ ಆಜಾದ್ ಹಿಂದ್ ಫೌಜ್‌ನಿಂದ ಭಾರತಕ್ಕೆ ಸ್ವಾತಂತ್ರ್ಯ, ಗಾಂಧಿಯಿಂದಲ್ಲ, ಬೋಸ್ ಸಂಬಂಧಿ!

ಎರಡು ಕೋಟಿ ರೂ. ವೆಚ್ಚದಲ್ಲಿ 874 ಮೀ. ರನ್‌ ವೇ ಉನ್ನತೀಕರಿಸಲಾಗಿದೆ. ಶಾಲೆಯಲ್ಲಿದ್ದ ಐದು ಸಿಂಗಲ್‌ ಎಂಜಿನ್‌ ವಿಮಾನಗಳನ್ನು ದುರಸ್ತಿಗೊಳಿಸಿ, ತರಬೇತಿಗೆ ಸಿದ್ಧಪಡಿಸಲಾಗಿದೆ. 5 ಕೋಟಿ ವೆಚ್ಚದಲ್ಲಿ ಟ್ವಿನ್‌ ಎಂಜಿನ್‌ ಖರೀದಿಸಲಾಗಿದೆ. ಜಕ್ಕೂರು ವೈಮಾನಿಕ ತರಬೇತಿ ಶಾಲೆಯಲ್ಲಿ ಈಗಾಗಲೇ 40 ವಿದ್ಯಾರ್ಥಿಗಳಿದ್ದು, ಹೊಸ ಬ್ಯಾಚ್‌ಗೆ 35 ಅರ್ಜಿಗಳು ಬಂದಿವೆ. ಮುಂದಿನ ವಾರದಿಂದ ತರಬೇತಿ ಆರಂಭವಾಗಲಿವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಚಿವರಾದ ಡಾ.ಸಿ. ಎನ್‌ ಅಶ್ವತ್ಥ ನಾರಾಯಣ, ಬಿ. ಸಿ. ನಾಗೇಶ್‌, ಶಾಸಕ ಕೃಷ್ಣ ಭೈರೇಗೌಡ, ವಿಧಾನ ಪರಿಷತ್‌ ಸದಸ್ಯ ಗೋವಿಂದರಾಜು,ಹಿರಿಯ ಅಧಿಕಾರಿಗಳಾದ ಕುಮಾರ ನಾಯ್ಕ್‌, ಶಾಲಿನಿ ರಜನೀಶ್‌ ಉಪಸ್ಥಿತರಿದ್ದರು.
 

click me!