Love Marriage: ಸಪ್ತಪದಿ ತುಳಿದ 58 ವರ್ಷದ ವೃದ್ಧೆ, 68 ವರ್ಷದ ವೃದ್ಧ

Published : Dec 03, 2021, 11:15 PM IST
Love Marriage: ಸಪ್ತಪದಿ ತುಳಿದ 58 ವರ್ಷದ ವೃದ್ಧೆ, 68 ವರ್ಷದ ವೃದ್ಧ

ಸಾರಾಂಶ

* 65ನೇ ವಯಸ್ಸಿನಲ್ಲಿ ಸಿಕ್ಕ ಕನಸಿನ ರಾಣಿ * 58  ವರ್ಷದ ಜಯಮ್ಮರನ್ನು ವರಿಸಿದ ಚಿಕ್ಕಣ್ಣ * ಮೇಲುಕೋಟೆಯಲ್ಲಿ ನಡೆದ ಅಪರೂಪದ ಮದುವೆ

ಮಂಡ್ಯ, (ಡಿ.03): ಪ್ರೀತಿ ಕುರುಡು ಅಂತಾರೆ. ಅದೇ ರೀತಿ ಪ್ರೀತಿ (Love) ಮಾಡುವುದಕ್ಕೆ ವಯಸ್ಸಿನ ಅಂತರವಿಲ್ಲ ಎನ್ನುವವರೂ ಇದ್ದಾರೆ. 58 ವರ್ಷದ ವೃದ್ಧೆ 68 ವರ್ಷದ ವೃದ್ಧನನ್ನು ಮದುವೆಯಾಗಿರುವುದು ಇದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ. 

ತಾನು ಪ್ರೇಮಿಸಿದ ಪ್ರಿಯತಮೆ ಸಿಗಲಿಲ್ಲವೆಂದು ಬ್ರಹ್ಮಚಾರಿಯಾಗಿಯೇ ಉಳಿದಿದ್ದ ಪ್ರೇಮಿಗೆ 65ನೇ ವರ್ಷಕ್ಕೆ ತನ್ನ ಕನಸಿನ ರಾಣಿ ಸಿಕ್ಕಿದ್ದಾಳೆ. ಈ ಇಳಿ ವಯಸ್ಸಿನಲ್ಲೂ ಇವರಿಬ್ಬರ ಪ್ರೀತಿ ಚಿಗುರೊಡೆದು ಹೊಸ ಜೀವನಕ್ಕೆ ನಾಂದಿ ಹಾಡಿದೆ. 

Mandya: 30 ವರ್ಷಗಳ ಪ್ರೀತಿ, 65 ರ ಇಳಿವಯಸ್ಸಿನಲ್ಲಿ ದಾಂಪತ್ಯಕ್ಕೆ ಕಾಲಿಟ್ಟ ಜೋಡಿ!

ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ ಈ ಅಮರ ಪ್ರೇಮಿಗಳು ವಿವಾಹವಾಗುವುದರೊಂದಿಗೆ (Marriage) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೇಲುಕೋಟೆಯ ಯತಿರಾಜದಾಸರ ಗುರುಪೀಠದಲ್ಲಿ ಶ್ರೀನಿವಾಸ ನರಸಿಂಹನ್ ಗುರೂಜಿ ಸಮ್ಮುಖದಲ್ಲಿ ಜಯಮ್ಮರನ್ನು ತಮ್ಮ ಬಾಳಸಂಗಾತಿಯನ್ನಾಗಿ ಚಿಕ್ಕಣ್ಣ ಸ್ವೀಕರಿಸಿದರು. 

Mandya: 30 ವರ್ಷಗಳ ಪ್ರೀತಿ, 65 ರ ಇಳಿವಯಸ್ಸಿನಲ್ಲಿ ದಾಂಪತ್ಯಕ್ಕೆ ಕಾಲಿಟ್ಟ ಜೋಡಿ!

ಇವರ ವಿವಾಹದಲ್ಲಿ ಕೆಲವೇ ಕುಟುಂಬಸ್ಥರು ಮಾತ್ರ ಹಾಜರಿದ್ದರು. ಮೈಸೂರಿನ ಹೆಬ್ಬಾಳದ ಚಿಕ್ಕಣ್ಣ ತನ್ನ ಸೋದರತ್ತೆಯ ಮಗಳಾದ ಜಯಮ್ಮ ಅವರನ್ನು ಯೌವ್ವನ ಕಾಲದಲ್ಲೇ ಪ್ರೀತಿಸುತ್ತಿದ್ದರು. ತಮ್ಮ ಪ್ರೀತಿಯನ್ನು ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ. ಜಯಮ್ಮ ಬೇರೊಬ್ಬರನ್ನು ವಿವಾಹವಾದ ಬಳಿಕ ಬೇಸರಗೊಂಡ ಚಿಕ್ಕಣ್ಣ ಮದುವೆಯಾಗದೆ ಬ್ರಹ್ಮಚಾರಿಯಾಗಿಯೇ ಜೀವನ ನಡೆಸುತ್ತಿದ್ದರು.

ಬೇರೊಬ್ಬರನ್ನು ಮದುವೆಯಾಗಿದ್ದ ಜಯಮ್ಮ ದಾಂಪತ್ಯ ಜೀವನ ಸುಖಕರವಾಗಿರಲಿಲ್ಲ. ಸಾಂಸಾರಿಕ ಕಲಹದಿಂದ ಜಯಮ್ಮ ಪತಿಯಿಂದ ದೂರವಾಗಿದ್ದರು. ಜಯಮ್ಮನವರಿಗೆ ಒಬ್ಬ ಮಗನಿದ್ದು ಆತ ಸಾರಿಗೆ ಸಂಸ್ಥೆಯಲ್ಲಿ ಮೆಕ್ಯಾನಿಕ್ ಆಗಿದ್ದಾನೆ. 

ಪತಿಯಿಂದ ದೂರವಾಗಿ ತವರು ಸೇರಿದ್ದರು. ಅಲ್ಲಿ ಮತ್ತೆ ಹಳೆಯ ಪ್ರೇಮಿ ಚಿಕ್ಕಣ್ಣನ ಭೇಟಿಯಾಯಿತು. ಮತ್ತೆ ಇಬ್ಬರ ನಡುವೆ ಪ್ರೀತಿ ಅರಳಿತು. ಇಬ್ಬರ ವಯಸ್ಸು ಮಾಗಿದ್ದರೂ ಅವರ ಪ್ರೇಮಕ್ಕೆ ಮುಪ್ಪಾಗಿರಲಿಲ್ಲ. ಸಮಾಜಕ್ಕೆ ಹೆದರದೆ ಇಬ್ಬರೂ ಮದುವೆಯಾಗಲು ನಿರ್ಧರಿಸಿದರು. ಅದರಂತೆ ಮೇಲುಕೋಟೆಗೆ ಆಗಮಿಸಿ ಶಾಸ್ತ್ರೋಕ್ತವಾಗಿ ಮದುವೆಯಾದರು. ಸಂಧ್ಯಾಕಾಲದಲ್ಲೂ ಅವರಲ್ಲಿರುವ ಜೀವನೋತ್ಸಾಹ ಎಲ್ಲರನ್ನೂ ನಾಚಿಸುವಂತಿತ್ತು.

ಮೂಲತಃ ಹಾಸನ ಜಿಲ್ಲೆ ಹೊಳೆನರಸೀಪುರ ಗ್ರಾಮದ ಚಿಕ್ಕಣ್ಣ ಸದ್ಯ ಮೈಸೂರಿನಲ್ಲಿ ಕೂಲಿ ಮಾಡಿಕೊಂಡು ಬದುಕು ಸಾಗಿಸುತ್ತಿದ್ದಾರೆ. ತನ್ನ ಅತ್ತೆ ಮಗಳಾದ ಜಯಮ್ಮಳನ್ನು ಪ್ರೀತಿಸುತ್ತಿದ್ದ ಅವರು, ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಚಿಕ್ಕಣ್ಣ ಕೂಲಿ ಮಾಡುತ್ತಾರೆ ಎಂಬ ಕಾರಣಕ್ಕೆ ಜಯಮ್ಮರ ಮನೆಯವರು ಮದುವೆಗೆ ನಿರಾಕರಿಸಿ, ಬೇರೊಬ್ಬರ ಜೊತೆಗೆ ಮದುವೆ ಮಾಡಿದ್ದರು.

ಜಯಮ್ಮರಿಗೆ ಮದುವೆಯಾಗಿ 3 ದಶಕಗಳೇ ಕಳೆದಿದ್ದು ಒಬ್ಬ ಮಗನಿದ್ದಾನೆ. ತನ್ನ ಗಂಡ ಹಾಗೂ ಮಗನ ಜೊತೆಯಲ್ಲಿ ಮೈಸೂರಿನಲ್ಲಿದ್ದರು ಜಯಮ್ಮ. ಈ ನಡುವೆ ಜಯಮ್ಮರ ಕುಟುಂಬದಲ್ಲಿ ಬಿರುಕು ಮೂಡಿತ್ತು. ಇತ್ತ ಚಿಕ್ಕಣ್ಣ ಆಕೆಯ ನೆನಪಿನಲ್ಲೇ ದಿನ ದೂಡುತ್ತಿದ್ದ. ಅತ್ತ ತನ್ನ ಗಂಡನ ಜೊತೆಗೆ ಸೌಹಾರ್ದಯುತ ಬದುಕು ಸಾಗಿಸಲಾಗದ ಜಯಮ್ಮ ತನ್ನ ಕೊನೆಯ ದಿನಗಳನ್ನು ಚಿಕ್ಕಣ್ಣರ ಜೊತೆಗೆ ಕಳೆಯಲು ನಿರ್ಧರಿಸಿದ್ದರು.

ಚಿಕ್ಕಣ್ಣರ ಮನೆ ದೇವರು ಮೇಲುಕೋಟೆಯ ಶ್ರೀಚೆಲುವನಾರಾಯಣಸ್ವಾಮಿ. ಹೀಗಾಗಿ ಅಲ್ಲೇ ಮದುವೆಯಾಗಲು ನಿರ್ಧರಿಸಿದ್ದರು. ಅದರಂತೆ ಗುರುವಾರ (ಡಿ.2) ಮೇಲುಕೋಟೆಗೆ ಬಂದ ಚಿಕ್ಕಣ್ಣ ಹಾಗೂ ಜಯಮ್ಮ ಇಬ್ಬರೂ ಇಲ್ಲಿನ ಯತಿರಾಜ ದಾಸರ ಗುರುಪೀಠದಲ್ಲಿ ಮದುವೆಯಾಗಿದ್ದಾರೆ. 

ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್
ಹೌದು..ಈ ಇಳಿವಯಸ್ಸಿನಲ್ಲಿ ಮದುವೆಯಾಗಿರುವುದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಈ ಜೋಡಿ ತುಂಬಾ ಟ್ರೋಲ್ ಆಗುತ್ತಿದೆ.ವೃದ್ಧರ ಮದುವೆ ಬಗ್ಗೆ ಮಜವಾಗಿ ಟ್ರೋಲ್ ಮಾಡುತ್ತಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡಿಕೆಸು ಹೆಸರಿನಲ್ಲಿ ಕೋಟ್ಯಂತರ ವಂಚನೆ ಪ್ರಕರಣ.. 'ಬಂಗಾರಿ' ಕೇಸ್‌ನಲ್ಲಿ ನಟ ಧರ್ಮಗೆ ಧ್ವನಿ ಪರೀಕ್ಷೆ?
ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ