* ಪ್ರತಿ ಆರು ಅಥವಾ ಒಂಬತ್ತು ತಿಂಗಳಿಗೆ ರೂಪಾಂತರ ಹೊಂದುವ ಕೊರೋನಾ ವೈರಾಣು
* ಡೆಲ್ಟಾಗಿಂತ ವೇಗವಾಗಿ ಹರಡುವ ಒಮಿಕ್ರೋನ್
* ಸೋಂಕು ಹೆಚ್ಚಾಗುವ ಸಾಧ್ಯತೆ
ಬೆಂಗಳೂರು(ಡಿ.03): ವಿಶ್ವ ಆರೋಗ್ಯ ಸಂಸ್ಥೆಯು(World Health Organization) ಅತಿ ವೇಗವಾಗಿ ಹರಡುವ ಕೊರೋನಾ ತಳಿ ಎಂದು ಆತಂಕ ವ್ಯಕ್ತ ಪಡಿಸಿರುವ ಒಮಿಕ್ರೋನ್(Omicron) ಸೋಂಕು ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ವರದಿಯಾಗಿದೆ. ಒಮಿಕ್ರೋನ್ ವೇಗವಾಗಿ ಹರಡುವ ಲಕ್ಷಣ ಹೊಂದಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ(Karnataka) ಮೂರನೇ ಅಲೆ ಶುರುವಾಗಲಿದೆಯೇ ಎಂಬ ಭೀತಿ ಉಂಟಾಗಿದೆ.
ರಾಜ್ಯದಲ್ಲಿ ಡೆಲ್ಟಾ ಪ್ಲಸ್‌ನಿಂದಾಗಿ(Delta Plus) ಅಕ್ಟೋಬರ್ ಅಥವಾ ಸೆಪ್ಟೆಂಬರ್‌ನಲ್ಲಿ ಮೂರಲೇ ಅಲೆ ಉಂಟಾಗಬಹುದು ಎಂಬ ಭೀತಿ ಇತ್ತು. ಆದರೆ, ಡೆಲ್ಟಾ ಪ್ಲಸ್ ರಾಜ್ಯದ ಮೇಲೆ ಅಷ್ಟು ಗಂಭೀರ ಪರಿಣಾಮ ಬೀರಲಿಲ್ಲ. ನೆರೆಯ ಕೇರಳ(Kerala) ಹಾಗೂ ಮಹಾರಾಷ್ಟ್ರದಲ್ಲಿ(Maharashtra) ಪ್ರಕರಣಗಳು ಏರಿಕೆಯಾದರೂ ರಾಜ್ಯದಲ್ಲಿ ಏರಿಕೆಯಾಗಿರಲಿಲ್ಲ. ಇದೀಗ ರೂಪಾಂತರಿ ಒಮಿಕ್ರೋನ್ ಸೋಂಕು ವರದಿಯಾಗಿರುವುದರಿಂದಾಗಿ ಹಾಗೂ ಯಾವುದೇ ಪ್ರವಾಸದ ಇತಿಹಾಸ ಇಲ್ಲದ ವ್ಯಕ್ತಿಯಲ್ಲೂ ದೃಢಪಟ್ಟಿರುವುದರಿಂದ ಸೋಂಕು ತೀವ್ರವಾಗಿ ಹರಡುವ ಆತಂಕ ಎದುರಾಗಿದೆ.
undefined
Omicron Cases: ಬೆಂಗ್ಳೂರಿನ 482 ಜನರ ಮೇಲೆ ನಿಗಾ: ಒಂದೇ ದಿನ 200+ ಸೋಂಕಿತ ಕೇಸ್
ಸೋಂಕು ದೃಢಪಟ್ಟಿರುವ ಇಬ್ಬರೂ ಎರಡೂ ಡೋಸ್ ಲಸಿಕೆ(Vaccine) ಪಡೆದಿದ್ದರು. ಹೀಗಿದ್ದರೂ ಸೋಂಕು ಹರಡಿರುವುದರಿಂದ ಒಂದು ವೇಳೆ ಸೋಂಕು ತೀವ್ರವಾಗಿ ಹರಡಿದರೆ ಮೂರನೇ ಅಲೆಗೆ ಒಮಿಕ್ರೋನ್ ಸೋಂಕೇ ಕಾರಣವಾಗ ಬಹುದು ಎಂದು ತಜ್ಞರು(Experts) ಅಭಿಪ್ರಾಯಪಟ್ಟಿದ್ದಾರೆ.
ವೈರಾಣು ರೂಪಾಂತರ:
ಕೊರೋನಾ(Coronavirus) ವೈರಾಣು ಪ್ರತಿ ಆರು ಅಥವಾ ಒಂಬತ್ತು ತಿಂಗಳಿಗೆ ರೂಪಾಂತರ ಹೊಂದುತ್ತದೆ. ಇದು ವೈರಾಣುವಿನ ಸಹಜ ಗುಣವಾಗಿದ್ದು, ಈ ಹಿಂದೆ ಅಲ್ಫಾ, ಬೀಟಾ, ಡೆಲ್ಟಾ, ಡೆಲ್ಟಾ ಪ್ಲಸ್, ಕಾಪ ಮತ್ತು ಈಟ ಆಗಿ ರೂಪಾಂತರ ಹೊಂದಿತ್ತು. ಈ ಪೈಕಿ ಎರಡನೇ ಅಲೆಯಲ್ಲಿ ಡೆಲ್ಟಾ ಜನರನ್ನು ತೀವ್ರವಾಗಿ ಬಾಧಿಸಿತ್ತು. ಈಗ ಒಮಿಕ್ರೋನ್ ಬಂದಿದೆ. ಇದರಲ್ಲಿ ವಿಶೇಷತೆ ಏನೂ ಇಲ್ಲ. ಇದು ತೀವ್ರವಾಗಿಲ್ಲವಾದರೂ, ಡೆಲ್ಟಾಗಿಂತ ವೇಗವಾಗಿ ಹರಡುತ್ತದೆ. ಇದರಿಂದ ಸೋಂಕು ಹೆಚ್ಚಾಗುವ ಸಾಧ್ಯತೆ ಇದೆ. ಹಾಗಾಗಿ ಜನರು ಜಾಗೃತೆ ವಹಿಸಬೇಕು ಎಂದು ತಜ್ಞರು ಎಚ್ಚರಿಸಿದ್ದಾರೆ.
ಒಮಿಕ್ರೋನ್ ಕರ್ನಾಟಕದಲ್ಲಿ ಈಗಾಗಲೇ ಹಬ್ಬಿದೆಯಾ?:
ಒಮಿಕ್ರೋನ್ ವಿದೇಶದಿಂದಲೇ(Foreign) ಬರಬೇಕು ಎಂದೇನೂ ಇಲ್ಲ. ನಮ್ಮಲ್ಲೇ ರೂಪಾಂತರ ಆಗಿಯೂ ಇರಬಹುದು. ಹೀಗಾಗಿ ರಾಜ್ಯದಲ್ಲಿ ಒಮಿಕ್ರೋನ್ ಹರಡುವ ಸಾಧ್ಯತೆಯಿದ್ದು, ಕೊರೋನಾ ಲಸಿಕೆಯ ಮೂರನೇ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಇದು ಸಕಾಲ ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸದಸ್ಯ ಡಾ. ಮಂಜುನಾಥ್(Dr Manjunath) ಹೇಳಿದ್ದಾರೆ.
Covid 19 Variant: ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್ ದ್ವಿಗುಣ: ಒಮಿಕ್ರೋನ್‌ಗೆ ಯುವಜನತೆಯೇ ಟಾರ್ಗೆಟ್?
ರಾಜ್ಯದಲ್ಲಿ ಪತ್ತೆಯಾಗಿರುವ ಒಂದು ಪ್ರಕರಣದಲ್ಲಿ ಸೋಂಕಿತನಿಗೆ ಟ್ರಾವೆಲ್ ಹಿಸ್ಟರಿ(Travel History) ಇದೆ. ಮತ್ತೊಂದು ಪ್ರಕರಣದಲ್ಲಿ ಟ್ರಾವೆಲ್ ಹಿಸ್ಟರಿ ಇಲ್ಲ. ಟ್ರಾವೆಲ್ ಹಿಸ್ಟರಿ ಇಲ್ಲದಿರುವ ಪ್ರಕರಣ ಪತ್ತೆಯಾಗುವುದರೊಂದಿಗೆ ರಾಜ್ಯದಲ್ಲಿ ಈಗಾಗಲೇ ಒಮಿಕ್ರೋನ್ ಹರಡಿದೆ ಎಂಬುದು ಸಾಬೀತಾಗಿದೆ. ಒಂದು ದೇಶದಲ್ಲಿ(India) ಪತ್ತೆಯಾದ ತಳಿ ಮತ್ತೊಂದು ದೇಶದಲ್ಲಿ ಇರುವುದು ಸಹಜ ಎಂದರು.
ಕೊರೋನಾ ವೈರಸ್ ಪ್ರತಿ ಆರು, ಒಂಬತ್ತು ತಿಂಗಳಿಗೆ ರೂಪ ಬದಲಾಯಿಸುತ್ತ ಹೋಗುತ್ತದೆ. ರೂಪಾಂತರ ಗೊಳ್ಳುವುದು ವೈರಸ್‌ನ ಸಹಜ ಗುಣ. ಈ ಹಿಂದೆ ಅಲ್ಫಾ, ಬೀಟಾ, ಕಪ್ಪ ರೂಪಾಂತರ ಬಂತು. ಆ ಬಳಿಕ ಡೆಲ್ಟಾ ರೂಪಾಂತರ ಬಂತು. ಈಗ ಒಮಿಕ್ರೋನ್ ಬಂದಿದೆ. ಒಮಿಕ್ರೋನ್ ವೇಗವಾಗಿ ಹರಡುತ್ತದೆ ಆದರೆ ತೀವ್ರತೆ ಕಡಿಮೆ ಇದೆ. ಒಮಿಕ್ರೋನ್ ಪ್ರಕರಣಗಳು ಹೆಚ್ಚು ಪತ್ತೆಯಾಗಿರುವ ದಕ್ಷಿಣ ಆಫ್ರಿಕಾದಲ್ಲಿಯೂ(South Africa) ಸಾವಿನ ಪ್ರಮಾಣ, ಐಸಿಯು ದಾಖಲಾತಿ ಹೆಚ್ಚಾಗಿಲ್ಲ. ರಾಜ್ಯದ ಇಬ್ಬರು ಸೋಂಕಿತರು ಕೂಡ ಗುಣಮುಖರಾಗಿದ್ದಾರೆ. ಆದ್ದರಿಂದ ಜನರು ಗಾಬರಿ ಪಡುವ ಅಗತ್ಯವಿಲ್ಲ. ಆದರೆ ಕೋವಿಡ್ ಮುನ್ಚೆಚ್ಚರಿಕೆ ಕ್ರಮಗಳನ್ನು ತಪ್ಪದೆ ಪಾಲಿಸಬೇಕು ಎಂದು ಅವರು ಹೇಳಿದ್ದಾರೆ.