ಎಸ್ಕಾಂಗಳಿಗೆ ಸರ್ಕಾರದಿಂದಲೇ 5,975 ಕೋಟಿ ಬಾಕಿ..!

By Kannadaprabha NewsFirst Published Nov 15, 2021, 7:14 AM IST
Highlights

*   ಬೆಸ್ಕಾಂಗೆ ಅತಿಹೆಚ್ಚು 3752 ಕೋಟಿ ಬಾಕಿ
*   ಮೆಸ್ಕಾಂಗೆ 80, ಜೆಸ್ಕಾಂಗೆ 1800, ಚೆಸ್ಕಾಂಗೆ 343 ಕೋಟಿ ಬಾಕಿ
*   ವಿದ್ಯುತ್‌ ಕಡಿತದ ಎಚ್ಚರಿಕೆ
 

ಬೆಂಗಳೂರು(ನ.15):  ಬೆಂಗಳೂರು ಸೇರಿ 8 ಜಿಲ್ಲೆಗಳಿಗೆ ವಿದ್ಯುತ್‌ ವಿತರಿಸುವ ಬೆಸ್ಕಾಂ ಹಾಗೂ ಮೈಸೂರು, ದಕ್ಷಿಣ ಕನ್ನಡ, ಕಲಬುರಗಿ ಸೇರಿ 16 ಜಿಲ್ಲೆಗಳಲ್ಲಿ ವಿದ್ಯುತ್‌ ವಿತರಣೆ ಮಾಡುತ್ತಿರುವ ಮೆಸ್ಕಾಂ, ಜೆಸ್ಕಾಂ, ಚೆಸ್ಕಾಂಗಳಿಗೆ ಸರ್ಕಾರ ಸುಮಾರು 5975 ಕೋಟಿ ವಿದ್ಯುತ್‌ ಬಿಲ್‌ ಬಾಕಿ ಉಳಿಸಿಕೊಂಡಿದೆ. ಬಾಕಿ ವಸೂಲಿಗೆ ಈಗಾಗಲೇ ಕೆಲವೆಡೆ ಎಚ್ಚರಿಕೆ ನೀಡಿರುವ ವಿದ್ಯುತ್‌ ಸರಬರಾಜು ಕಂಪನಿಗಳು(Power Supply Companies), ಬಲವಂತದ ಬಾಕಿ ವಸೂಲಿ ಕ್ರಮಗಳಿಗೂ ಕೈಹಾಕಿವೆ.

ಕಲಬುರಗಿ, ಬೀದರ್‌, ರಾಯಚೂರು, ಬಳ್ಳಾರಿ, ವಿಜಯನಗರ, ಯಾದಗಿರಿ, ಕೊಪ್ಪಳ ಹೀಗೆ ಏಳು ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಗುಲ್ಬರ್ಗಾ ವಿದ್ಯುತ್‌ ವಿತರಣಾ ಕಂಪನಿ (GESCOM)ಗೆ ಸರ್ಕಾರ 1800 ಕೋಟಿ ವಿದ್ಯುತ್‌ ಬಿಲ್‌(Electricity Bill) ಬಾಕಿ ಉಳಿಸಿಕೊಂಡಿದೆ. ಇವುಗಳಲ್ಲಿ ವಿದ್ಯುತ್‌ ದೀಪ ಮತ್ತು ಕುಡಿಯುವ ನೀರಿನ ಬಿಲ್‌ ಸೇರಿ ಗ್ರಾಪಂ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಂದ ಒಟ್ಟಾರೆ ಅಂದಾಜು .700 ಕೋಟಿ ವಿದ್ಯುತ್‌ ಬಿಲ್‌ ಬಾಕಿ ಬರಬೇಕಿದೆ. ಇದರ ಜತೆಗೆ ಪಂಪ್‌ಸೆಟ್‌ ಸಬ್ಸಿಡಿ ಅಂದಾಜು 1100 ಕೋಟಿಗೂ ಹೆಚ್ಚು ಬಾಕಿ ಇದೆ.

15 ಕೋಟಿ ಬೆಸ್ಕಾಂ ಬಿಲ್‌ ಬಾಕಿ : ನೀರು, ಬೀದಿ ದೀಪ ಬಂದ್‌?

343.40 ಕೋಟಿ ಬಾಕಿ:

ಅದೇ ರೀತಿ ಮೈಸೂರು, ಚಾಮರಾಜನಗರ, ಕೊಡಗು, ಮಂಡ್ಯ, ಹಾಸನ ಜಿಲ್ಲೆಗಳಲ್ಲಿ ವಿದ್ಯುತ್‌ ಪೂರೈಕೆ ಮಾಡುತ್ತಿರುವ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮಕ್ಕೆ(CESCOM) ಗ್ರಾಪಂಗಳಿಂದ .276.14 ಕೋಟಿ ವಿದ್ಯುತ್‌ ಬಿಲ್‌ ಬಾಕಿ ಪಾವತಿಯಾಗಬೇಕಿದೆ. ನಗರಾಭಿವೃದ್ಧಿ ಇಲಾಖೆಯಿಂದ ವಿದ್ಯುತ್‌ ದೀಪ, ನೀರು ಪೂರೈಕೆಗೆ ಸಂಬಂಧಿಸಿದ ವಿದ್ಯುತ್‌ ಬಿಲ್‌ ಬಾಕಿ .67.26 ಕೋಟಿ ತಲುಪಿದೆ. ಒಟ್ಟಾರೆ ಗ್ರಾಪಂಗಳು ಮತ್ತು ನಗರಾಭಿವೃದ್ಧಿ ಇಲಾಖೆಯಿಂದ 343.40 ಕೋಟಿ ಬಾಕಿ ಪಾವತಿಯಾಗಬೇಕಿದೆ.

ಜೆಸ್ಕಾಂ ಮತ್ತು ಚೆಸ್ಕಾಂಗೆ ಹೋಲಿಸಿದರೆ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ ಮಂಗಳೂರು ವಿದ್ಯುತ್‌ ವಿತರಣಾ ಕಂಪನಿ(MESCOM)ಗೆ ಸರ್ಕಾರದಿಂದ ಬರಬೇಕಿರುವ ಬಾಕಿ ಕಡಿಮೆ ಇದೆ. ಗ್ರಾಪಂ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಬೀದಿದೀಪಗಳು, ಕುಡಿಯುವ ನೀರಿಗಾಗಿನ ವಿದ್ಯುತ್‌ ಬಿಲ್‌ನ ಬಾಕಿ ರೂಪದಲ್ಲಿ ಸುಮಾರು .80 ಕೋಟಿ ಸರ್ಕಾರದಿಂದ ಪಾವತಿಯಾಗಬೇಕಿದೆ.

ನೀರು, ಬೀದಿ ದೀಪದಿಂದಲೇ ಬೆಸ್ಕಾಂಗೆ 3310 ಕೋಟಿ ಬಾಕಿ

ಬೆಸ್ಕಾಂ(BESCOM) ಸಂಸ್ಥೆಗೆ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಬರೋಬ್ಬರಿ 3,752 ಕೋಟಿ ರು. ಮೊತ್ತದ ವಿದ್ಯುತ್‌ ಬಿಲ್‌ ಬಾಕಿ ಉಳಿಸಿಕೊಂಡಿವೆ. ಈ ಪೈಕಿ ಬೀದಿ ದೀಪ ಬೆಳಗಲು ಹಾಗೂ ಸಾರ್ವಜನಿಕರಿಗೆ ಕುಡಿಯುವ ನೀರು ಕಲ್ಪಿಸಲು ಪೂರೈಸಿರುವ ವಿದ್ಯುತ್‌ ಶುಲ್ಕವೇ ಬರೋಬ್ಬರಿ 3,310 ಕೋಟಿ ರು. ಇದೆ. ಬೆಸ್ಕಾಂ ವ್ಯಾಪ್ತಿಗೆ ಬರುವ ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿನ ಗ್ರಾಮ ಪಂಚಾಯಿತಿ ಕಚೇರಿಗಳ ವತಿಯಿಂದ 2,444 ಕೋಟಿ ರು. ಹಣ ಬಾಕಿ ಬರಬೇಕಿದೆ.

ಅರ್ಜಿ ಹಾಕಿದ 24 ತಾಸಿನೊಳಗೇ ವಿದ್ಯುತ್‌ ಸಂಪರ್ಕ

ಕೇಂದ್ರದಿಂದ 41.89 ಕೋಟಿ ಬಾಕಿ

ಕೇಂದ್ರದ ಇಲಾಖೆಗಳ ಪೈಕಿ ಟೆಲಿಫೋನ್‌ ಎಕ್ಸ್‌ಚೇಂಜ್‌ ಕಚೇರಿಗಳಿಂದ 10.92 ಕೋಟಿ ರು. ಬಾಕಿ ಉಳಿದುಕೊಂಡಿದೆ. ಬಂಗಾರಪೇಟೆ ಗೋಲ್ಡ್‌ ಮೈನ್ಸ್‌ನಿಂದ 25.58 ಕೋಟಿ ರು. ಸೇರಿ ವಿವಿಧ ಇಲಾಖೆಗಳಿಂದ ಒಟ್ಟು 42.89 ಕೋಟಿ ರು. ಬಾಕಿ ಇದೆ.

ವಿದ್ಯುತ್‌ ಕಡಿತದ ಎಚ್ಚರಿಕೆ

ವಿವಿಧ ಇಲಾಖೆಗಳಿಂದ ಬೆಸ್ಕಾಂಗೆ ಪಾವತಿ ಆಗಬೇಕಿರುವ ಮೊತ್ತದ ಬಗ್ಗೆ ಸೆಪ್ಟೆಂಬರ್‌ ಅಂತ್ಯದವರೆಗಿನ ಖಚಿತ ಮಾಹಿತಿ ಸಿದ್ಧಪಡಿಸಿದ್ದೇವೆ. ಕೆಲ ಇಲಾಖೆಗಳು ಪ್ರತಿ ತಿಂಗಳು ಪಾವತಿಸುತ್ತಿದ್ದರೂ ಒಟ್ಟು ಬಾಕಿಯಲ್ಲಿ ವ್ಯತ್ಯಾಸವಾಗುತ್ತಿಲ್ಲ. ಹೆಚ್ಚು ಮೊತ್ತ ಬಾಕಿ ಉಳಿಸಿಕೊಂಡಿರುವ ಸಂಸ್ಥೆಗಳಿಗೆ ಸ್ಥಳೀಯ ಬೆಸ್ಕಾಂ ವಿಭಾಗೀಯ ಕಚೇರಿಗಳಿಂದ ವಿದ್ಯುತ್‌ ಕಡಿತದ ನೋಟಿಸ್‌ ನೀಡಲಾಗಿದೆ ಎಂದು ಬೆಸ್ಕಾಂ ಹಣಕಾಸು ವಿಭಾಗದ ಮುಖ್ಯ ಹಣಕಾಸು ಅಧಿಕಾರಿ ಹಾಗೂ ನಿರ್ದೇಶಕ ಡಾ.ಆರ್‌.ಸಿ ಚೇತನ್‌ ತಿಳಿಸಿದ್ದಾರೆ.
 

click me!