Karnataka| ವರುಣನ ಅಬ್ಬರಕ್ಕೆ 4 ಬಲಿ: ಇಂದು, ನಾಳೆ ಭಾರೀ ಮಳೆ

By Kannadaprabha NewsFirst Published Nov 15, 2021, 6:34 AM IST
Highlights

*   ವಾಯುಭಾರ ಕುಸಿತ: 14ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ನಿರಂತರ ಮಳೆ
*   ಚಿತ್ರದುರ್ಗದಲ್ಲಿ ಮನೆ ಗೋಡೆ ಕುಸಿದು ಗರ್ಭಿಣಿ ಸೇರಿ 3 ಸಾವು
*   ಬೆಂಗಳೂರಲ್ಲಿ ಯಲ್ಲೋ ಅಲರ್ಟ್‌
 

ಬೆಂಗಳೂರು(ನ.15):  ಬಂಗಾಳಕೊಲ್ಲಿಯಲ್ಲಿ(Bay of Bengal) ವಾಯುಭಾರ ಕುಸಿತದ ಪರಿಣಾಮ ರಾಜ್ಯದ(Karnataka) 14ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ(Rain) ಸುರಿಯುತ್ತಿದ್ದು ಮನೆ ಗೋಡೆ ಕುಸಿದು ಒಂದೇ ಕುಟುಂಬದ ಮೂವರು ಸೇರಿ ಒಟ್ಟು ನಾಲ್ವರು ಬಲಿಯಾಗಿದ್ದಾರೆ. ಇದೇ ವೇಳೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ 15ಕ್ಕೂ ಹೆಚ್ಚು ಮನೆಗಳು ಶಿಥಿಲಗೊಂಡು ಕುಸಿದಿವೆ. ಭತ್ತ, ಕಾಫಿ ಬೆಳೆಗಳಿಗೆ ಅಪಾರ ಹಾನಿಯಾಗಿದ್ದು ಕೃಷಿಕರು ಕಂಗಾಲಾಗಿದ್ದಾರೆ.

ರಾಜ್ಯದ ಮಂಡ್ಯ, ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಕೊಡಗು, ಚಿತ್ರದುರ್ಗ, ದಾವಣಗೆರೆ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಕೆಲವೆಡೆ ನಿರಂತರವಾಗಿ ಮಳೆ ಸುರಿಯುತ್ತಿದೆ. ಅದರಲ್ಲೂ ಮಂಡ್ಯ ಜಿಲ್ಲೆಯ ಪಾಂಡಪುರ, ಕೆ.ಆರ್‌.ಪೇಟೆ, ಶ್ರೀರಂಗಪಟ್ಟಣ, ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ, ಹನೂರು, ಚಿತ್ರದುರ್ಗ ಜಿಲ್ಲೆಯ ಹಿರಿಯೂರುಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಬಳ್ಳಾರಿ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳಲ್ಲೂ ಸಾಧಾರಣ ಮಳೆಯಾಗಿದೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕಾರೋಬನಹಟ್ಟಿಯ ಹೋಚಿ ಬೋರಯ್ಯನಹಟ್ಟಿ ಬಡಾವಣೆಯಲ್ಲಿ ಭಾನುವಾರ ಬೆಳಗ್ಗೆ 4 ಗಂಟೆಗೆ ಪಕ್ಕದ ಮನೆ ಗೋಡೆ ಕುಸಿದು ಗರ್ಭಿಣಿ ಸೇರಿ ಒಂದೇ ಕುಟುಂಬದ ಮೂವರು ಮೃತಪಟ್ಟ(Death) ಘಟನೆ ನಡೆದಿದೆ. ಗರ್ಭಿಣಿಯಾಗಿದ್ದ ಸೌಮ್ಯ (20), ಚೆನ್ನಕೇಶವ (26), ಕ್ಯಾಸಪ್ಪ(55) ಮೃತರು.

ಜಿಟಿಜಿಟಿ ಮಳೆ, ಗಢಗಢ ಚಳಿ, ಜನ ಜೀವನ ಅಸ್ತವ್ಯಸ್ತ, ಬಿಸಿಲಿಗಾಗಿ ಎದುರು ನೋಡುತ್ತಿದ್ದಾರೆ ಜನ!

ಇನ್ನು ಮಂಡ್ಯ ಜಿಲ್ಲೆಯಲ್ಲಿ ಪಾಂಡವಪುರ ತಾಲೂಕಿನ ಹುಣಸನಹಳ್ಳಿ ಗ್ರಾಮದಲ್ಲಿ ಬೈಕ್‌ ಮೇಲೆ ಕುಳಿತಿದ್ದ 10 ವರ್ಷದ ಬಾಲಕ ಗಗನ್‌ ಮೇಲೆ ಮನೆ ಗೋಡೆ ಕುಸಿದು ಮತಪಟ್ಟ ಘಟನೆ ನಡೆದಿದೆ. ಘಟನೆಯಲ್ಲಿ ಎರಡು ಹಸು, ಎರಡು ಮೇಕೆಗಳೂ ಮೃತಪಟ್ಟಿವೆ. ಇನ್ನು ಒಟ್ಟಾರೆ ಜಿಲ್ಲೆಯಲ್ಲಿ ಹತ್ತಕ್ಕೂ ಹೆಚ್ಚು ಮನೆಗಳ ಗೋಡೆ ಕುಸಿದುಬಿದ್ದಿದೆ. ಹಳ್ಳ-ಕೊಳ್ಳಗಳು ತುಂಬಿ ಹರಿದ ಪರಿಣಾಮ ಹಲವು ಮನೆಗಳಿಗೆ ನೀರು ನುಗ್ಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ನೂರಾರು ಎಕರೆ ಜಮೀನು(Land) ಜಲಾವೃತವಾಗಿ ಕಬ್ಬು, ಭತ್ತ, ತೆಂಗು, ಅಡಕೆ ಬೆಳೆಗಳಿಗೆ(Corp) ಅಪಾರ ಹಾನಿ ಸಂಭವಿಸಿದೆ.

ಮಲೆ ಮಹದೇಶ್ವರ ಬೆಟ್ಟದಲ್ಲಿ ಭೂಕುಸಿತ

ಹನೂರು: ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದಲ್ಲಿ ಮಳೆಗೆ ಭೂ ಕುಸಿತ(Landslide) ಉಂಟಾಗುತ್ತಿದ್ದು, ಬಂಡೆಗಲ್ಲುಗಳು ರಸ್ತೆಗೆ ಉರುಳಿ ಬಿದ್ದಿರುವ ಘಟನೆ ನಡೆದಿದೆ. ಮಲೆಮಹದೇಶ್ವರ ಬೆಟ್ಟದ ವಡ್ಗಲ್ ರಂಗನಾಥಸ್ವಾಮಿ ದೇವಾಲಯ ಸಮೀಪದಲ್ಲಿ ತಡರಾತ್ರಿ ಸುರಿದ ಬಾರೀ ಮಳೆಗೆ ಭೂ ಕುಸಿತ ಉಂಟಾಗಿ ಎರಡು ಬಂಡೆಗಳು ರಸ್ತೆಗೆ ಉರುಳಿ ಬಿದ್ದಿದ್ದು, ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎನ್ನಲಾಗಿದೆ. ರಸ್ತೆಯ ಒಂದು ಬದಿಯಲ್ಲಿ ಬಂಡೆ ಇರುವುದರಿಂದ ಸಂಚಾರಕ್ಕೆ ಅಡಚಣೆ ಉಂಟಾಗಿದೆ.

11 ವರ್ಷ ಬಳಿಕ ಸುವರ್ಣಾವತಿ ಡ್ಯಾಂ ಭರ್ತಿ

ಚಾಮರಾಜನಗರ: ತಮಿಳುನಾಡಿನ(Tamil Nadu) ದಿಬ್ಬಂಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜಿಲ್ಲೆಯ ಅವಳಿ ಜಲಾಶಯಗಳೆಂದೇ ಕರೆಯಲಾಗುವ ಸುವರ್ಣಾವತಿ ಹಾಗೂ ಚಿಕ್ಕಹೊಳೆ ಜಲಾಶಯಗಳಲ್ಲಿ ನೀರಿನ ಮಟ್ಟದಲ್ಲಿ ಏರಿಕೆ ಕಂಡಿದೆ. ಅದರಲ್ಲೂ ಸುವರ್ಣಾವತಿ ಜಲಾಶಯ 11 ವರ್ಷಗಳ ಬಳಿಕ ಸಂಪೂರ್ಣ ಭರ್ತಿಯಾಗಿದ್ದು, ಭಾನುವಾರ 2 ಕ್ರಸ್ಟ್‌ಗೇಟ್‌ಗಳಿಂದ 900 ಕ್ಯುಸೆಕ್‌ ನೀರು ಬಿಡಲಾಗಿದೆ.
ಕರಾವಳಿ, ಮಲೆನಾಡಲ್ಲಿ ಮಳೆ: ಇಂದು, ನಾಳೆಯೂ ಎಚ್ಚರಿಕೆ

ರಾಜ್ಯದ ಕರಾವಳಿ(Coastal) ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಭಾನುವಾರ ಭಾರಿ ಮಳೆಯಾಗಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನ ಎಲ್ಲ ಜಿಲ್ಲೆಗಳು ಮತ್ತು ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ನವೆಂಬರ್‌ 15 ಮತ್ತು 16ರಂದು ಸಹ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ(Department of Meteorology) ನೀಡಿದೆ.

Bengaluru| ಮಳೆ-ಚಳಿ ಜುಗಲ್‌ ಬಂಧಿ, ಐಟಿ ಸಿಟೀಲಿ ಮಲ್ನಾಡ್‌ ಹವೆ..!

ಬೆಂಗಳೂರಲ್ಲಿ ಯಲ್ಲೋ ಅಲರ್ಟ್‌

ಬೆಂಗಳೂರು(Bengaluru) ನಗರದಲ್ಲಿ ಸೋಮವಾರ ಮತ್ತು ಮಂಗಳವಾರ ಭಾರೀ ಮಳೆ ಆಗುವ ಸಾಧ್ಯತೆಯಿದ್ದು, ‘ಯೆಲ್ಲೋ ಅಲರ್ಟ್‌’(Yellow Alert) ಎಚ್ಚರಿಕೆ ನೀಡಲಾಗಿದೆ. ಅರಬ್ಬಿ ಸಮುದ್ರ(Arabian Sea) ಮತ್ತು ಬಂಗಾಲ ಕೊಲ್ಲಿಯಲ್ಲಿನ ಮೇಲ್ಮೈ ಸುಳಿಗಾಳಿ, ವಾಯುಭಾರ ಕುಸಿತ ಬೆಂಗಳೂರಿನ ಹವೆಯ ಮೇಲೂ ಪರಿಣಾಮ ಬೀರುತ್ತಿದೆ.

ಕಳೆದ ನಾಲ್ಕೈದು ದಿನಗಳಿಂದ ಜಿಟಿಜಿಟಿ ಮಳೆ, ಶೀತಗಾಳಿ, ಚಳಿ ಮತ್ತು ಮೋಡ ಕವಿದ ವಾತಾವರಣವನ್ನೇ ಹೆಚ್ಚು ಕಂಡಿದ್ದ ನಗರದಲ್ಲಿ ಭಾನುವಾರ ಮಳೆಯ ಅಬ್ಬರ, ಮೈಕೊರೆಯುವ ಚಳಿ ಇರಲಿಲ್ಲ. ಬೆಳಗ್ಗೆ ಮೋಡವಿದ್ದರೂ ನಂತರ ಸೂರ್ಯನ ದರ್ಶನವಾಯಿತು. ಹೀಗಾಗಿ ಚಳಿಯ ವಾತಾವರಣ ಕಡಿಮೆಯಿತ್ತು.

ಜಿಟಿ ಜಿಟಿ ಮಳೆಯ ಇರದಿದ್ದರೂ ನಗರದ ಬಹುತೇಕ ಎಲ್ಲೆಡೆ ತುಂತುರು, ಹನಿ ಹನಿ ಮಳೆಯಾಗಿದೆ. ನಗರದಲ್ಲಿ ಸೋಮವಾರ ಮೋಡ ಕವಿದ ವಾತಾವರಣ ಇರಲಿದೆ. ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶ ಕ್ರಮವಾಗಿ 25 ರಿಂದ 20 ಡಿಗ್ರಿ ಸೆಲ್ಸಿಯಸ್‌ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
 

click me!