ಅರಣ್ಯ ಮತ್ತು ಕಂದಾಯ ಭೂಮಿಯ ಸಮಸ್ಯೆಗೆ ಜಂಟಿ ಸರ್ವೆ ಪರಿಹಾರವಾಗಿದೆ. ಭೂಮಾಪಕರ ಕೊರತೆಯಿಂದ ಇದು ತಡವಾಗಿದೆ. ಅಧಿವೇಶನದ ವೇಳೆ ಕಂದಾಯ ಸಚಿವರೊಂದಿಗೆ ಸಭೆ ನಡೆಸಿ, ಖಾಸಗಿ ಭೂಮಾಪಕರ ನೆರವು ಪಡೆದು ಆರು ತಿಂಗಳೊಳಗೆ ಜಂಟಿ ಸರ್ವೆ ಮಾಡಿಸಲು ಪ್ರಯತ್ನಿಸಲಾಗುವುದು: ಸಚಿವ ಈಶ್ವರ್ ಖಂಡ್ರೆ
ಬೆಂಗಳೂರು(ಜೂ.27): ಅರಣ್ಯ ವ್ಯಾಪ್ತಿಯಲ್ಲಿ ಯಾರೇ ಅಕ್ರಮವಾಗಿ ಮರ ಕಡಿದರೂ, ಅರಣ್ಯ ಭೂಮಿ ಒತ್ತುವರಿ ಮಾಡಿದರೂ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ಅರಣ್ಯ ಇಲಾಖೆಯ ಲಾಂಛನ ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ಅವರು, ಅರಣ್ಯ, ಸಸ್ಯಸಂಕುಲ, ಪ್ರಾಣಿ ಸಂಕುಲ, ಪಕ್ಷಿ ಸಂಕಲದ ಸಂರಕ್ಷಣೆಯೇ ಅರಣ್ಯ ಇಲಾಖೆಯ ಆದ್ಯ ಕರ್ತವ್ಯವಾಗಿದೆ. ಅರಣ್ಯ ವ್ಯಾಪ್ತಿಯಲ್ಲಿ ಕೆಲವೆಡೆ ಮರ ಕಡಿದು ಬುಡಕ್ಕೆ ಬೆಂಕಿ ಹಚ್ಚಿ, ಜೆಸಿಬಿಯಿಂದ ಭೂಮಿಮಟ್ಟ ಮಾಡಿ ಅರಣ್ಯ ಭೂಮಿ ಕಬಳಿಸಲಾಗುತ್ತಿದೆ ಎಂಬ ಆರೋಪ ಇದೆ. ಈ ಬಗ್ಗೆ ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಸಿದ್ದರಾಮಯ್ಯ ಸಿಎಂ ಎಂದು ಗುರುತಿಸಿ, ‘ಮೋದಿ’ಗೆ ರಾಷ್ಟ್ರಪತಿ ಎಂದ ಮಕ್ಕಳು!
ಮಾನವ ಮತ್ತು ಕಾಡುಮೃಗಗಳ ನಡುವಿನ ಸಂಘರ್ಷ ಸಹ ದೊಡ್ಡ ಸವಾಲಾಗಿದೆ. ರಾಜ್ಯದಲ್ಲಿ 2022-23ನೇ ಸಾಲಿನಲ್ಲಿ ವನ್ಯಮೃಗ ದಾಳಿಯಿಂದ 51 ಸಾವು ಸಂಭವಿಸಿದ್ದು, ಇದರಲ್ಲಿ 29 ಸಾವು ಆನೆಗಳಿಂದಲೇ ಆಗಿದೆ. ಆನೆಗಳು ನಾಡಿಗೆ ಬರುವುದರಿಂದ ಅಪಾಯ ಹೆಚ್ಚಿದ್ದು, ರಾಜ್ಯದಲ್ಲಿ ಸುಮಾರು 641 ಕಿ.ಮೀ. ರೈಲ್ವೆ ಬ್ಯಾರಿಕೇಡ್ ಅಳವಡಿಸಲು ಯೋಜನೆ ರೂಪಿಸಲಾಗಿದೆ. ಈ ಪೈಕಿ 310 ಕಿ.ಮೀ. ಪೂರ್ಣವಾಗಿದೆ. ಒಂದು ಕಿ.ಮೀ. ರೈಲ್ವೆ ಬ್ಯಾರಿಕೇಡ್ ಮಾಡಲು ಒಂದೂವರೆ ಕೋಟಿ ವೆಚ್ಚವಾಗುತ್ತದೆ. ಉಳಿದ ಕಾಮಗಾರಿ ಮಾಡಲು ಬಜೆಟ್‌ನಲ್ಲಿ ಹೆಚ್ಚಿನ ಹಣ ಕೋರಲಾಗಿದೆ. ಮೂರು ವರ್ಷದಲ್ಲಿ ಈ ಕಾಮಗಾರಿ ಪೂರ್ಣಗೊಳಿಸಲು ಕಾಲಮಿತಿ ಹಾಕಿಕೊಳ್ಳಲಾಗಿದೆ ಎಂದು ವಿವರಿಸಿದರು.
ಕಾಂಪಾ ನಿಧಿ ಬಳಸಿಕೊಂಡು ತಡೆಗೋಡೆ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ವಿಚಾರದಲ್ಲಿ ಕೇಂದ್ರ ಅರಣ್ಯ ಸಚಿವರಿಗೆ ಕೆಲವು ತಪ್ಪು ಕಲ್ಪನೆ ಇದ್ದು, ದೆಹಲಿಗೆ ಭೇಟಿ ನೀಡಿದ್ದ ವೇಳೆ ಇದನ್ನು ಪರಿಹರಿಸಲು ಪ್ರಯತ್ನಿಸಿದ್ದೇವೆ. ಮಾನವ ಜೀವ ಅಮೂಲ್ಯವಾದುದ್ದಾಗಿದ್ದು, ಆನೆಗಳು ಕಾಡಿನಿಂದ ನಾಡಿಗೆ ಬಾರದಂತೆ ತಡೆದರೆ ಈ ಅಮೂಲ್ಯ ಜೀವ ಉಳಿಸಬಹುದು ಎಂಬುದನ್ನು ಅವರಿಗೆ ಮನವರಿಕೆ ಮಾಡಿಸಿದ್ದೇವೆ ಎಂದು ಖಂಡ್ರೆ ಹೇಳಿದರು.
ಭೂ ಮಾಪಕರ ಕೊರತೆ:
ಅರಣ್ಯ ಮತ್ತು ಕಂದಾಯ ಭೂಮಿಯ ಸಮಸ್ಯೆಗೆ ಜಂಟಿ ಸರ್ವೆ ಪರಿಹಾರವಾಗಿದೆ. ಭೂಮಾಪಕರ ಕೊರತೆಯಿಂದ ಇದು ತಡವಾಗಿದೆ. ಅಧಿವೇಶನದ ವೇಳೆ ಕಂದಾಯ ಸಚಿವರೊಂದಿಗೆ ಸಭೆ ನಡೆಸಿ, ಖಾಸಗಿ ಭೂಮಾಪಕರ ನೆರವು ಪಡೆದು ಆರು ತಿಂಗಳೊಳಗೆ ಜಂಟಿ ಸರ್ವೆ ಮಾಡಿಸಲು ಪ್ರಯತ್ನಿಸಲಾಗುವುದು ಎಂದು ಸಚಿವರು ತಿಳಿಸಿದರು.