ರೈತರಿಗೆ ಸಂತಸ ಸುದ್ದಿ ನೀಡಿದ ಸಿದ್ದು ಸರ್ಕಾರ..!

Published : Jun 14, 2023, 07:01 AM IST
ರೈತರಿಗೆ ಸಂತಸ ಸುದ್ದಿ ನೀಡಿದ ಸಿದ್ದು ಸರ್ಕಾರ..!

ಸಾರಾಂಶ

ರೈತರಿಗೆ ಶೀಘ್ರ 5 ಲಕ್ಷ ಶೂನ್ಯ ಬಡ್ಡಿ ಸಾಲ, 3% ಬಡ್ಡಿ ದರದ ಮಧ್ಯಮಾವಧಿ ಸಾಲದ ಮೊತ್ತ 20 ಲಕ್ಷಕ್ಕೆ ಹೆಚ್ಚಳ, ಮುಂಗಾರು ಹಂಗಾಮಿನಲ್ಲೇ ಜಾರಿ, ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದ ಕಾಂಗ್ರೆಸ್‌

ಬೆಂಗಳೂರು(ಜೂ.14):  ಕಾಂಗ್ರೆಸ್‌ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ನೀಡಿದ್ದ ಮತ್ತೊಂದು ಭರವಸೆ ಇದೇ ವರ್ಷ ಸಾಕಾರಗೊಳ್ಳಲಿದೆ. ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ನೀಡುವ ಅಲ್ಪಾವಧಿ ಸಾಲದ ಮೊತ್ತವನ್ನು 5 ಲಕ್ಷ ರು.ಗೆ ಹಾಗೂ ಶೇ. 3ರ ಬಡ್ಡಿ ದರದಲ್ಲಿ ನೀಡುವ ಮಧ್ಯಮಾವಧಿ ಸಾಲದ ಪ್ರಮಾಣವನ್ನು 20 ಲಕ್ಷ ರು.ಗೆ ಹೆಚ್ಚಳ ಮಾಡಿ ಪ್ರಸಕ್ತ ವರ್ಷವೇ ಜಾರಿಗೊಳಿಸಲಾಗುವುದು ಎಂದು ಸಹಕಾರಿ ಸಚಿವ ಕೆ.ಎನ್‌. ರಾಜಣ್ಣ ತಿಳಿಸಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಶೂನ್ಯ ಬಡ್ಡಿದರದ ಸಾಲವನ್ನು 3 ಲಕ್ಷ ರು. ನಿಂದ ಐದು ಲಕ್ಷ ರು.ಗೆ ಹೆಚ್ಚಳ ಮಾಡುವುದಾಗಿ ಹಾಗೂ ಶೇ. 3ರ ಬಡ್ಡಿದರದಲ್ಲಿ ನೀಡುವ ಮಧ್ಯಮಾವಧಿ ಸಾಲದ ಪ್ರಮಾಣವನ್ನು 10 ಲಕ್ಷ ರು.ನಿಂದ 20 ಲಕ್ಷ ರು.ಗೆ ಹೆಚ್ಚಳ ಮಾಡುವುದಾಗಿ ಭರವಸೆ ನೀಡಿತ್ತು. ಈ ಭರವಸೆಯನ್ನು ಪ್ರಸಕ್ತ ಮುಂಗಾರು ಹಂಗಾಮಿನಲ್ಲೇ ಜಾರಿಗೊಳಿಸಿ ಅರ್ಹ ರೈತರಿಗೆ ಸಾಲ ನೀಡಲಾಗುವುದು ಎಂದು ಹೇಳಿದರು.

ಕೈ ಕೊಟ್ಟಮಳೆರಾಯ: ಆಕಾಶದತ್ತ ಮುಖ ಮಾಡಿದ ಗುಂಡ್ಲುಪೇಟೆ ರೈತರು!

ಸಾಮಾನ್ಯವಾಗಿ ರೈತರಿಗೆ ಗುರಿ ಮೀರಿ ಸಾಲ ನೀಡಲಾಗುತ್ತಿದೆ. ಕಳೆದ ವರ್ಷ 12 ಸಾವಿರ ಕೋಟಿ ರು. ಸಾಲ ನೀಡುವ ಗುರಿ ಹೊಂದಿದ್ದು, ಸುಮಾರು 20 ಸಾವಿರ ಕೋಟಿ ರು. ಸಾಲ ವಿತರಣೆ ಮಾಡಲಾಗಿತ್ತು. ಅದೇ ರೀತಿ ಈ ವರ್ಷವೂ ರೈತರಿಗೆ ಸಾಲ ವಿತರಣೆಯಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.

ಇನ್ನು ರೈತರಿಗೆ ಐವತ್ತು ಸಾವಿರ ಹಾಗೂ ಒಂದು ಲಕ್ಷ ರು.ವರೆಗಿನ ಸಾಲ ಮನ್ನಾ ಮಾಡುವ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಈ ಬಗ್ಗೆ ಶೀಘ್ರವೇ ಸಭೆ ನಡೆಸಿ ರೈತರ ಸಾಲ ಮನ್ನಾವನ್ನು ಸಮರ್ಪಕವಾಗಿ ಜಾರಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಡಿಸಿಸಿ ಬ್ಯಾಂಕ್‌ ಸ್ಥಿತಿಗತಿ ಪರಿಶೀಲನೆಗೆ ಸಭೆ:

ರಾಜ್ಯದಲ್ಲಿನ ಎಲ್ಲ ಡಿಸಿಸಿ ಬ್ಯಾಂಕ್‌ಗಳ ಸ್ಥಿತಿಗತಿ ಪರಿಶೀಲನೆ ಹಾಗೂ ನಡೆದಿರುವ ಅಕ್ರಮಗಳ ಬಗ್ಗೆ ಮಾಹಿತಿ ಪಡೆಯಲು ಜೂ. 16ರಂದು ರಾಜ್ಯಮಟ್ಟದ ಎಲ್ಲ ಡಿಸಿಸಿ ಬ್ಯಾಂಕ್‌ಗಳ ವ್ಯವಸ್ಥಾಪಕ ನಿರ್ದೇಶಕರು, ಜಿಲ್ಲಾ ಸಹಕಾರಿಗಳ ಸಭೆಯನ್ನು ಆಯೋಜಿಸಲಾಗಿದೆ. ಈ ಸಭೆಯಲ್ಲಿ ಸಮಗ್ರ ಮಾಹಿತಿ ಪಡೆದುಕೊಳ್ಳಲಾಗುವುದು. ಯಾವುದೇ ಜಿಲ್ಲಾ ಬ್ಯಾಂಕ್‌ಗಳಲ್ಲಿ ಅಕ್ರಮ ನಡೆದಿದ್ದರೆ ಆ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲಾ ಬ್ಯಾಂಕ್‌ಗಳಲ್ಲಿ ನಡೆದಿದೆ ಎನ್ನಲಾದ ಹಗರಣಗಳ ಬಗ್ಗೆ ಆಂತರಿಕ ತಪಾಸಣೆ ನಡೆದಿದೆ. ಆಂತರಿಕ ತನಿಖಾ ವರದಿಯು ನಬಾರ್ಡ್‌ ಹಾಗೂ ತನ್ಮೂಲಕ ಆರ್‌ಬಿಐಗೆ ತಲುಪುತ್ತದೆ. ಈ ಸಂಸ್ಥೆಗಳು ಸಹ ಅಕ್ರಮಗಳ ಮೇಲೆ ಕಣ್ಣಿಟ್ಟಿರುತ್ತವೆ ಎಂದರು.

ನಂದಿನಿ-ಅಮುಲ್‌ ವಿಲೀನ ಸಾಧ್ಯವೇ ಇಲ್ಲ

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ನಂದಿನಿ ಹಾಗೂ ಅಮುಲ್‌ ವಿಲೀನ ಸಾಧ್ಯವೇ ಇಲ್ಲ. ಅಂತಹ ಒಂದು ಪ್ರಯತ್ನ ನಡೆಯಲು ಅವಕಾಶವನ್ನೂ ನೀಡುವುದಿಲ್ಲ ಎಂದು ಸಚಿವ ರಾಜಣ್ಣ ಸ್ಪಷ್ಟಪಡಿಸಿದರು. ಕೆಎಂಎಫ್‌ಗೆ ಸದ್ಯದಲ್ಲೇ ಚುನಾವಣೆ ನಡೆಯಲಿದೆ. ಇದಾದ ನಂತರ ನಂದಿನಿಯನ್ನು ಮತ್ತಷ್ಟುಶಕ್ತಿಶಾಲಿ ಸಂಸ್ಥೆಯನ್ನಾಗಿ ಮಾಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಹಾಲು ಉತ್ಪಾದಕರಿಗೆ ಹಾಲಿನ ಸಬ್ಸಿಡಿ ಬಾಕಿಯಿದೆ. ಎಷ್ಟುಬಾಕಿಯಿದೆ ಎಂಬ ಬಗ್ಗೆ ಇನ್ನಷ್ಟೇ ಮಾಹಿತಿ ಪಡೆಯಬೇಕಿದೆ. ಎಷ್ಟೇ ಬಾಕಿಯಿದ್ದರೂ ಹಾಲು ಉತ್ಪಾದಕರಿಗೆ ಸಬ್ಸಿಡಿ ಮೊತ್ತ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ರೈತ ಆತ್ಮ​ಹ​ತ್ಯೆ: ಕುಟುಂಬ​ಗ​ಳಿಗೆ ಪರಿ​ಹಾರ ವಿಳಂಬ​ವಾ​ಗ​ದಂತೆ ಈಶ್ವರ್ ಖಂಡ್ರೆ ಖಡಕ್ ಸೂಚನೆ

ಹಿಂದಿನ ಸರ್ಕಾರ ತಪ್ಪು ಹುಡುಕುವುದಿಲ್ಲ: ಸಚಿವ

ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದ ತಪ್ಪುಗಳನ್ನು ಹುಡುಕುತ್ತಾ ಕೂರುವುದರಲ್ಲಿ ನನಗೆ ನಂಬಿಕೆಯಿಲ್ಲ. ರೈತರಿಗೆ ಹಾಗೂ ಸಹಕಾರಿಗಳಿಗೆ ಹೇಗೆ ನೆರವು ನೀಡಬಹುದು ಎಂಬ ಬಗ್ಗೆ ಮಾತ್ರ ನನ್ನ ಗಮನ ಎಂದು ಕೆ.ಎನ್‌. ರಾಜಣ್ಣ ಹೇಳಿದರು.

ಬಮೂಲ್‌ ಸೇರಿದಂತೆ ಕೆಲ ಸಹಕಾರಿ ಸಂಘಗಳ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ಅವರು, ಹಲವು ಸಹಕಾರಿ ಸಂಘಗಳಲ್ಲಿ ನೇಮಕಾತಿ ವೇಳೆ ಅಕ್ರಮ ನಡೆಸಲಾಗಿದೆ. ಆದರೆ, ನೇಮಕಾತಿ ನಡೆದು ಹಲವು ವರ್ಷಗಳಾಗಿವೆ. ಇಂತಹ ಸಂದರ್ಭದಲ್ಲಿ ನೇಮಕಗೊಂಡವರನ್ನು ಕೆಲಸದಿಂದ ತೆಗೆಯಲು ಮಾನವೀಯತೆಯ ಪ್ರಶ್ನೆ ಬರುತ್ತದೆ. ಹೀಗಾಗಿ ಹಿಂದಿನ ಸರ್ಕಾರದ ಅವಧಿಯ ತಪ್ಪುಗಳನ್ನು ಕೆದಕಲು ತಾವು ಹೋಗುವುದಿಲ್ಲ ಎಂದರು.
ಹಾಗಂತ ಅಕ್ರಮಗಳ ಬಗ್ಗೆ ಸರ್ಕಾರ ಕಣ್ಣು ಮುಚ್ಚಿ ಕೂರುತ್ತದೆ ಎಂದೂ ಅಲ್ಲ. ಇಂತಹ ಅಕ್ರಮಗಳ ಬಗ್ಗೆ ಅಧಿಕಾರಿಗಳು ತಮ್ಮ ಮಟ್ಟದಲ್ಲಿ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Karnataka News Live: ಮಾಟಗಾತಿಯ ಮಾತು ಕೇಳಿ ಗಂಡು ಮಗುವಿಗಾಗಿ ಪತ್ನಿಯ ತಲೆ ಕೂದಲು ಕತ್ತರಿಸಿದ ಪತಿ
ಸದನದ ಗೌರವ ಎತ್ತಿಹಿಡಿಯಿರಿ: ವಿಪಕ್ಷಕ್ಕೆ ಸಿಎಂ ಸಿದ್ದರಾಮಯ್ಯ ಕಿವಿಮಾತು