
ಶಿವಮೊಗ್ಗ (ಜೂ.08): ಕಾಡುಹಂದಿಗಳ ದಾಳಿಯಿಂದ ಗಾಯಗೊಂಡಿದ್ದ ಸುಮಾರು ನಾಲ್ಕು ವರ್ಷದ ಚಿರತೆ ಸಾವನಪ್ಪಿದ ಘಟನೆ ಶಿಕಾರಿಪುರ ತಾಲೂಕಿನ ಕವಲಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಅರಣ್ಯ ಇಲಾಖೆಯ ಡಿಸಿಎಫ್ ಸಂತೋಷ್ ಕೆಂಚಪ್ಪನವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು, ಜೀವಂತವಾಗಿ ಚಿರತೆ ಹಿಡಿಯಲು ಎರಡು ದಿನ ಕಾರ್ಯಾಚರಣೆ ನಡೆಸಿದರೂ ಫಲಕಾರಿಯಾಗಲಿಲ್ಲ.
ಕವಲಿ ಗ್ರಾಮದ ಸ್ಥಳೀಯರು ಚಿರತೆಯ ಇರುವಿಕೆಯ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ತಕ್ಷಣ ಶಿರಾಳಕೊಪ್ಪ ಅರಣ್ಯಾಧಿಕಾರಿ ಜಾವೇದ್ ಖಾನ್ ಮತ್ತು ತೊಗರ್ಸಿ ಅರಣ್ಯಾಧಿಕಾರಿ ಶಿವಕುಮಾರ್, ಪ್ರವೀಣ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಪೊದೆಯಲ್ಲಿ ಚಿರತೆ ಇರುವುದನ್ನು ಗಮನಿಸಿ ತಡರಾತ್ರಿಯವರೆಗೆ ಕಾರ್ಯಾಚರಣೆ ನಡೆಸಿದರೂ ಅದು ಹೊರಬರಲಿಲ್ಲ. ನಂತರ ಬೋನು ಇಟ್ಟು ಬಂದಿದ್ದಾರೆ. ಮುಂಜಾನೆ ಹೋದಾಗ ಚಿರತೆ ಸ್ಥಳ ಬದಲಾವಣೆ ಮಾಡಿ ಇನ್ನೊಂದು ಸ್ಥಳದಲ್ಲಿ ಅವಿತುಕೊಂಡಿತ್ತು.
ಕಾಂಗ್ರೆಸ್ ಗ್ಯಾರಂಟಿ ಯೋಜನೆಗೆ ಹಣ ಸಂಗ್ರಹಿಸಲು ಮದ್ಯಕ್ಕೆ ತೆರಿಗೆ?
ಬೆಳಗ್ಗೆ ಹನ್ನೊಂದರವರೆಗೆ ಕಾದರೂ ಏನೂ ಶಬ್ದ ಬಾರದಿದ್ದಾಗ ಪೊದೆಯಲ್ಲಿದ್ದ ಚಿರತೆಯ ಸಮೀಪ ಹೋಗಿ ನೋಡಿದಾಗ ಸಾವನ್ನಪ್ಪಿತ್ತು. ತ್ಯಾವರೆಕೊಪ್ಪದ ಲಯನ್ ಸಫಾರಿಯ ವೈದ್ಯ ಮುರಳೀಧರ್ ಚಿರತೆ ಪರಿಶೀಲಿಸಿ ಮೃತಪಟ್ಟಿದ್ದು ದೃಢೀಕರಿಸಿದರು. ಕಾಡುಹಂದಿಗಳ ಬೇಟೆಯಾಡುವಾಗ ಅವುಗಳ ಕೋರೆ ಹಲ್ಲಿನಿಂದ ಚಿರತೆ ಮೇಲೆ ನಡೆದ ದಾಳಿಯಿಂದ ಸೊಂಟ ಮುರಿದುಕೊಂಡು ಕಳೆದ ಐದಾರು ದಿನಗಳಿಂದ ಬೇಟೆಯಾಡಲೂ ಆಗದಷ್ಟು ನಿತ್ರಾಣವಾಗಿದೆ. ಕೊನೆಗೆ ಚಿರತೆಯು ಆಹಾರವಿಲ್ಲದೆ ಪ್ರಾಣ ಬಿಟ್ಟಿದೆ. ಎರಡು ದಿನಗಳ ಕಾರ್ಯಾಚರಣೆ ನಡೆಸಿದರೂ ಅರಣ್ಯ ಇಲಾಖೆಗೆ ಚಿರತೆಗೆ ಗಾಯವಾಗಿರುವ ಸಣ್ಣ ಸೂಚನೆಯೂ ಗೊತ್ತಾಗಿರಲಿಲ್ಲ.
ಉರುಳಿಗೆ ಸಿಲುಕಿ ಚಿರತೆ ಸಾವು: ಕಿನ್ನಿಗೋಳಿ ಸಮೀಪದ ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಳೆಪಾಡಿ ಮಿತ್ತಬೆಟ್ಟು ಬಳಿ ಉರುಳಿಗೆ ಸಿಲುಕಿ ಮೃತಪಟ್ಟಿರುವ ಘಟನೆ ಮಂಗಳವಾರ ನಡೆದಿದೆ. ಕಾಡುಪ್ರಾಣಿಗಳ ಹಾವಳಿ ತಡೆಯಲಾರದೆ ಸ್ಥಳೀಯರು ಉಳೆಪಾಡಿ ಮಿತ್ತಬೆಟ್ಟು ಬಳಿ ಗುಡ್ಡದಲ್ಲಿ ಉರುಳು ಇಟ್ಟಿದ್ದರು. ಈ ಉರುಳಿಗೆ ಚಿರತೆ ಸೋಮವಾರ ರಾತ್ರಿ ಬಿದ್ದಿದೆ. ಮಂಗಳವಾರ ಸ್ಥಳೀಯ ಮನೆಯವರು ಗುಡ್ಡೆಯಲ್ಲಿ ನಾಯಿ ಬೊಗಳುವ ಶಬ್ದ ಕೇಳಿ ಭಯಭೀತರಾಗಿ ಸ್ಥಳಕ್ಕೆ ಧಾವಿಸಿದಾಗ ಉರುಳಿಗೆ ಚಿರತೆ ಬಿದ್ದು ಒದ್ದಾಡುತ್ತಿರುವುದು ಕಂಡು ಬಂದಿದೆ. ಕೂಡಲೇ ಐಕಳ ಗ್ರಾಮ ಪಂಚಾಯಿತಿ ಸದಸ್ಯ ರಾಜೇಶ್ ಶೆಟ್ಟಿಮತ್ತು ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ವರ್ಷಾಂತ್ಯದ ಒಳಗೆ ಬಿಬಿಎಂಪಿಗೆ ಚುನಾವಣೆ ನಡೆಸಲು ಸಿದ್ಧ: ಸಿಎಂ ಸಿದ್ದರಾಮಯ್ಯ
ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬರುವಷ್ಟರಲ್ಲಿ ಚಿರತೆ ಉರುಳಿಗೆ ಸಿಕ್ಕಿಒದ್ದಾಡಿ ಪ್ರಾಣ ಬಿಟ್ಟಿದೆ ಎನ್ನಲಾಗಿದೆ. ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಳೆಪಾಡಿ ಪರಿಸರದಲ್ಲಿ ಕಳೆದ ಕೆಲವು ತಿಂಗಳಿನಿಂದ ಚಿರತೆಯ ಕಾಟ ವಿಪರೀತವಾಗಿದ್ದು ಸ್ಥಳೀಯರು ಭಯಬೀತರಾಗಿದ್ದರು. ಕಳೆದ ಕೆಲವು ತಿಂಗಳಿನಿಂದ ಸ್ಥಳೀಯರ ಅನೇಕ ಸಾಕು ನಾಯಿಗಳು ಚಿರತೆಗೆ ಆಹಾರವಾಗಿತ್ತು. ಐಕಳ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದಿವಾಕರ ಚೌಟ, ಮೂಡಬಿದಿರೆ ವಲಯ ಅರಣ್ಯಾಧಿಕಾರಿ ಹೇಮಗಿರಿ ಅಂಗಡಿ, ಎಸಿಎಫ್ ಸತೀಶ್, ಕಿನ್ನಿಗೋಳಿ ಬೀಟ್ ಫಾರೆಸ್ಟರ್ ರಾಜು, ಡಿಆರ್‌ಎಫ್ ನಾಗೇಶ್ ಬಿಲ್ಲವ, ಬೀಟ್ ಫಾರೆಸ್ಟರ್ ಸಂತೋಷ್ ಮತ್ತಿತರರು ಭೇಟಿ ನೀಡಿದ್ದು ಚಿರತೆಯ ಕಳೇಬರವನ್ನು ಮಹಜರು ಮಾಡಿ ವ್ಯೆದ್ಯಕೀಯ ಪರೀಕ್ಷೆ ನಡೆಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ