ನಾರಾಯಣಗುರು, ಭಗತ್‌ ಸಿಂಗ್‌ ಪಾಠ ತೆಗೆದಿಲ್ಲ: ಸಚಿವ ಸುನಿಲ್‌ ಕುಮಾರ್‌

By Govindaraj S  |  First Published May 20, 2022, 3:26 AM IST

ಶಾಲಾ ಪಠ್ಯದಿಂದ ನಾರಾಯಣ ಗುರು, ಭಗತ್‌ ಸಿಂಗ್‌ ಪಾಠಗಳನ್ನು ತೆಗೆದಿಲ್ಲ, ಕೆಲವರು ಸುಳ್ಳು ಸುದ್ದಿ ಹರಡುತ್ತಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವ ಸುನಿಲ್‌ ಕುಮಾರ್‌ ಹೇಳಿದ್ದಾರೆ. 


ಬೆಂಗಳೂರು (ಮೇ.20): ಶಾಲಾ ಪಠ್ಯದಿಂದ ನಾರಾಯಣ ಗುರು, ಭಗತ್‌ಸಿಂಗ್‌ ಪಾಠಗಳನ್ನು ತೆಗೆದಿಲ್ಲ, ಕೆಲವರು ಸುಳ್ಳು ಸುದ್ದಿ ಹರಡುತ್ತಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವ ಸುನಿಲ್‌ ಕುಮಾರ್‌ (V Sunil Kumar) ಹೇಳಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಈ ಇಬ್ಬರು ಮಹನೀಯರ ಪಾಠ ತೆಗೆದಿಲ್ಲ ಎಂಬುದನ್ನು ನಾನೇ ಶಿಕ್ಷಣ ಸಚಿವರು ಹಾಗೂ ಅಧಿಕಾರಿಗಳ ಜತೆ ಮಾತನಾಡಿ ಖಚಿತಪಡಿಸಿಕೊಂಡಿದ್ದೇನೆ. ಸಮಾಜ ಪುಸ್ತಕದಲ್ಲಿ ಇದ್ದ ವಿಷಯವನ್ನು ಕನ್ನಡ ಪುಸ್ತಕಕ್ಕೆ ಸೇರ್ಪಡೆ ಮಾಡಲಾಗಿದೆ’ ಎಂದರು. 

ಚಕ್ರವರ್ತಿ ಸೂಲಿಬೆಲೆ ಅವರು ಬರೆದಿರುವ ‘ತಾಯಿ ಭಾರತಿಗೆ ವಂದಿಸುವೆ’ ಲೇಖನ ಸೇರ್ಪಡೆ ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ‘ಸೂಲಿಬೆಲೆ ಬರೆಯಲಿ, ಬೇರೆಯವರು ಬರೆಯಲಿ, ತಾಯಿ ಭಾರತಿಯನ್ನು ವಂದಿಸುತ್ತೇನೆ ಎನ್ನುವ ವಿಷಯ ವಿರೋಧಿಸುವ ವಿಚಾರವಾಗಿದೆಯೇ? ತಾಯಿ ಭಾರತಿಯನ್ನು ವಿರೋಧಿಸುತ್ತೇನೆ ಎಂದರೆ ನೀವು ಯಾರನ್ನು ಬೆಂಬಲಿಸುತ್ತೀರಿ?’ ಎಂದು ತಿರುಗೇಟು ನೀಡಿದರು. ಆರ್‌ಎಸ್‌ಎಸ್‌ ಸಂಸ್ಥಾಪಕ ಹೆಡಗೇವಾರ್‌ ಅವರು ಮಾಡಿದ ಭಾಷಣವನ್ನು ಪಠ್ಯದಲ್ಲಿ ಸೇರ್ಪಡೆ ಮಾಡಿರುವುದನ್ನು ಬಲವಾಗಿ ಸಮರ್ಥಿಸಿಕೊಂಡ ಅವರು ಕಾಂಗ್ರೆಸ್‌ ಪಕ್ಷಕ್ಕೆ ಹೆಡಗೇವಾರ್‌ ಅವರನ್ನು ಕಂಡರೆ ಯಾಕೆ ಭಯ?’ ಎಂದು ಪ್ರಶ್ನಿಸಿದರು. 

Tap to resize

Latest Videos

ಭಗತ್ ಸಿಂಗ್ ಅವರ ಪಠ್ಯ ‌ಬಿಟ್ಟಿಲ್ಲ: ವಿವಾದಕ್ಕೆ ಸ್ಪಷ್ಟನೆ ನೀಡಿದ ಸಚಿವ ನಾಗೇಶ್‌

‘ಹೆಡಗೇವಾರ್‌ ಅವರ ಪ್ರೇರಣೆಯಿಂದಲೇ ಕೋಟ್ಯಂತರ ಜನರು ದೇಶದ ಪರ ಕೆಲಸ ಮಾಡುತ್ತಿದ್ದಾರೆ. ಈ ವಿಷಯದಲ್ಲಿ ನಮಗೆ ಬದ್ಧತೆ ಇದೆ. ದೇಶದ ಸ್ವಾಭಿಮಾನ, ಶೌರ್ಯದ ಬಗ್ಗೆ ಹೇಳಬೇಕು ಎನ್ನುವುದು ನಮ್ಮ ವಾದ. ಮೆಕಾಲೆ ಶಿಕ್ಷಣ ಬಿಟ್ಟು, ಭಾರತದ ಶಿಕ್ಷಣ ಇರಬೇಕು. ಭಾರತದ ಮಕ್ಕಳಿಗೆ ಮೊಗಲರ ಶಿಕ್ಷಣ, ಟಿಪ್ಪು, ಔರಂಗಜೇಬನ ಶಿಕ್ಷಣ ಬೇಕು ಎಂದು ವಾದ ಮಾಡುತ್ತಿಲ್ಲ. ನಮಗೆ ಬೇಕಾಗಿರುವುದು ಭಾರತದ ಶಿಕ್ಷಣ. ಈ ನಿಟ್ಟಿನಲ್ಲಿ ಪಠ್ಯ ಕ್ರಮ ರಚಿಸಲಾಗುತ್ತಿದೆ. ಶಿಕ್ಷಣ ತಜ್ಞರು, ಪಠ್ಯ ಪುಸ್ತಕ ಸಮಿತಿ ಒಪ್ಪಿ ಹೊಸ ಅಂಶ ಸೇರಿಸಲಾಗಿದೆ.

ಹಣ ಕೊಟ್ಟು ಸಚಿವರಾಗುವ ಸ್ಥಿತಿ ನಮ್ಮ ಪಕ್ಷದಲ್ಲಿಲ್ಲ: ಹಣ ಕೊಟ್ಟು ಸಚಿವರಾಗುವ ಸ್ಥಿತಿ ನಮ್ಮ ಪಕ್ಷದಲ್ಲಿಲ್ಲ, ನಮ್ಮಲ್ಲಿ ವಿಚಾರಕ್ಕೆ ಆದ್ಯತೆಯೇ ಹೊರತು ಹಣಕ್ಕಲ್ಲ ಎಂದು ಸಚಿವ ಸುನೀಲ್‌ ಕುಮಾರ್‌ ಹೇಳಿದರು. ಸಚಿವ ಸಂಪುಟ ವಿಸ್ತರಣೆಯೋ ಅಥವಾ ಪುನಾರಚನೆಯೋ ಅದು ಮುಖ್ಯಮಂತ್ರಿಗಳ ಪರಮಾಧಿಕಾರವಾಗಿದ್ದು, ರಾಜ್ಯಕ್ಕೆ ಒಳಿತಾಗುವ ನಿರ್ಧಾರವನ್ನೇ ಮುಖ್ಯಮಂತ್ರಿಗಳು ಕೈಗೊಳ್ಳುತ್ತಾರೆ. ನಮ್ಮ ವರಿಷ್ಠರಿಗೆ ದೂರದೃಷ್ಟಿಇದ್ದು, ಯಾವ ಸಮಯಕ್ಕೆ ಯಾವ ನಿರ್ಣಯ ಕೈಗೊಳ್ಳಬೇಕೆಂಬುದು ನಾಯಕರಿಗೆ ಗೊತ್ತಿದೆ ಎಂದರು.

ತುಳು ಲಿಪಿಯ ಯುನಿಕೋಡ್‌ ನಕಾಶೆಪಟ್ಟಿಗೆ ಅನುಮೋದನೆ ನೀಡಿ: ಸಚಿವ ಸುನಿಲ್‌ ಕುಮಾರ್‌

ಪಕ್ಷವು ನಮಗೆ ಎಲ್ಲವನ್ನೂ ಕೊಟ್ಟಿದ್ದು, ನಾವು ಪಕ್ಷಕ್ಕೆ ಏನನ್ನೂ ಕೊಟ್ಟಿಲ್ಲ. ನಮ್ಮ ಪಕ್ಷದಲ್ಲಿ ವಿಚಾರಕ್ಕೆ ಆದ್ಯತೆಯೇ ಹೊರತು, ಹಣಕ್ಕಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ನಾವು 2023ರ ವಿಧಾನಸಭೆ ಚುನಾವಣೆಗೆ ಹೋಗುತ್ತೇವೆ. ಕಾಂಗ್ರೆಸ್‌ ಪಕ್ಷದವರು ನಾಯಕರೇ ಇಲ್ಲದೆ ಅನಾಥರಂತೆ ಕೋಣೆಯಲ್ಲಿದ್ದಾರೆ ಎಂದರು. ರಾಜ್ಯದ ಜನತೆಗೆ ಭರವಸೆ ಇದ್ದರೆ ಅದು ಬಿಜೆಪಿ(BJP) ಮೇಲೆ ಹಾಗೂ ಪ್ರಧಾನಿ ಮೋದಿ ನಾಯಕತ್ವದ ಮೇಲೆ ಮಾತ್ರ ಎಂದು ಅವರು ಹೇಳಿದರು.

click me!