ಇನ್ನು 4-5 ವರ್ಷ ಕರ್ನಾಟಕದಲ್ಲಿ ಮಳೆ ಕೊರತೆ?

By Kannadaprabha NewsFirst Published Jun 24, 2023, 4:45 AM IST
Highlights

ಈಗ ಪೆಸಿಫಿಕ್‌ ಮಹಾಸಾಗರದಲ್ಲಿ ಉಷ್ಣಾಂಶ ಹೆಚ್ಚಾಗಿದ್ದು ಎಲ್‌ನಿನೋ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿಯೇ ಏಷ್ಯಾ ಮತ್ತು ಆಸ್ಪ್ರೇಲಿಯಾಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ಈ ಪರಿಸ್ಥಿತಿ ಇನ್ನೂ ನಾಲ್ಕೈದು ವರ್ಷಗಳವರೆಗೆ ಇರಲಿದ್ದು, ಅಷ್ಟೂ ವರ್ಷ ಮಳೆಯ ಪ್ರಮಾಣ ವಾಡಿಕೆಗಿಂತ ಕಡಿಮೆ ಸುರಿಯಲಿದೆ. ಹೀಗಾಗಿ ರಾಜ್ಯ ಮತ್ತು ದೇಶದಲ್ಲಿ ಕೃಷಿ ಚಟುವಟಿಕೆಯಲ್ಲಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.

ಗಿರೀಶ್‌ ಗರಗ

ಬೆಂಗಳೂರು(ಜೂ.24):  ಪೆಸಿಫಿಕ್‌ ಮಹಾಸಾಗರದಲ್ಲಿ ಉಂಟಾಗಿರುವ ಎಲ್‌ನಿನೋ ಪರಿಸ್ಥಿತಿಯಿಂದಾಗಿ ರಾಜ್ಯ ಮತ್ತು ದೇಶದಲ್ಲಿ ಮುಂದಿನ ನಾಲ್ಕೈದು ವರ್ಷ ಮಳೆಯ ಕೊರತೆ ಉಂಟಾಗಲಿದೆ. ಹೀಗಾಗಿ ಪ್ರಮುಖ ಕೃಷಿ ವಿಶ್ವವಿದ್ಯಾಲಯಗಳು ರೈತರನ್ನು ದೀರ್ಘಾವಧಿ ಬೆಳೆಗಳ ಬದಲು ಅಲ್ಪಾವಧಿ ಬೆಳೆಗಳತ್ತ ಸೆಳೆಯುವ ಕಾರ್ಯಕ್ಕೆ ಮುಂದಾಗಿವೆ.

ಪೆಸಿಫಿಕ್‌ ಮಹಾಸಾಗರದಲ್ಲಿನ ಪರಿಸ್ಥಿತಿ ಪ್ರಪಂಚದ ಬಹುತೇಕ ಭಾಗಗಳಲ್ಲಿ ಮಳೆಯ ಪ್ರಮಾಣವನ್ನು ನಿರ್ಧಾರ ಮಾಡುತ್ತದೆ. ಮಹಾಸಾಗರದ ಉಷ್ಣಾಂಶದಲ್ಲಾಗುವ ವ್ಯತ್ಯಾಸದಿಂದ ಉಂಟಾಗುವ ಎಲ್‌ನಿನೋ ಮತ್ತು ಲಾನಿನೋ ಪರಿಸ್ಥಿತಿಗಳು ಏಷ್ಯಾ, ಅಮೆರಿಕಾ, ಆಸ್ಪ್ರೇಲಿಯಾ ಖಂಡಗಳಲ್ಲಿ ಮಳೆಯ ಪ್ರಮಾಣ ಯಾವ ಮಟ್ಟದಲ್ಲಿರಲಿದೆ ಎಂಬುದನ್ನು ನಿರ್ಧರಿಸುತ್ತವೆ. ಪ್ರತಿ ನಾಲ್ಕರಿಂದ ಐದು ವರ್ಷಕ್ಕೊಮ್ಮೆ ಪೆಸಿಫಿಕ್‌ ಮಹಾಸಾಗರದಲ್ಲಿನ ಪರಿಸ್ಥಿತಿ ಬದಲಾಗುತ್ತದೆ.
ಈಗ ಪೆಸಿಫಿಕ್‌ ಮಹಾಸಾಗರದಲ್ಲಿ ಉಷ್ಣಾಂಶ ಹೆಚ್ಚಾಗಿದ್ದು ಎಲ್‌ನಿನೋ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿಯೇ ಏಷ್ಯಾ ಮತ್ತು ಆಸ್ಪ್ರೇಲಿಯಾಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ಈ ಪರಿಸ್ಥಿತಿ ಇನ್ನೂ ನಾಲ್ಕೈದು ವರ್ಷಗಳವರೆಗೆ ಇರಲಿದ್ದು, ಅಷ್ಟೂ ವರ್ಷ ಮಳೆಯ ಪ್ರಮಾಣ ವಾಡಿಕೆಗಿಂತ ಕಡಿಮೆ ಸುರಿಯಲಿದೆ. ಹೀಗಾಗಿ ರಾಜ್ಯ ಮತ್ತು ದೇಶದಲ್ಲಿ ಕೃಷಿ ಚಟುವಟಿಕೆಯಲ್ಲಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.

ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮುಂಗಾರು ಮಳೆ: ರೈತರ ಮೊಗದಲ್ಲಿ ಹರ್ಷ

ಪರ್ಯಾಯ ಕೃಷಿ:

ಮಳೆ ಕೊರತೆಯ ಮುನ್ಸೂಚನೆ ದೊರೆತ ಕಾರಣದಿಂದಾಗಿ ಕೃಷಿ ವಿಶ್ವವಿದ್ಯಾಲಯಗಳು ತಮ್ಮ ವ್ಯಾಪ್ತಿಯ ಜಿಲ್ಲೆಗಳಲ್ಲಿನ ರೈತರನ್ನು ದೀರ್ಘಾವಧಿ ಬೆಳೆಗಳಿಂದ ಅಲ್ಪಾವಧಿ ಬೆಳೆಗಳತ್ತ ಸೆಳೆಯಲು ಮುಂದಾಗಿವೆ. ಪ್ರಮುಖವಾಗಿ ಮಲೆನಾಡು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಮಳೆಯಾಧಾರಿತ ಕೃಷಿ ಮಾಡುವ ರೈತರನ್ನು ಸಂಪರ್ಕಿಸಿ ಮಳೆ ಕೊರತೆ ಬಗ್ಗೆ ಮಾಹಿತಿ ನೀಡುತ್ತಿವೆ. ಅಲ್ಲದೆ, ಭತ್ತ, ಕಬ್ಬು ಸೇರಿ ಇನ್ನಿತರ ಧೀರ್ಘಾವಧಿ ಬೆಳೆಗಳ ಬದಲು ಅಲ್ಪ ಕಾಲದಲ್ಲಿ ಫಸಲು ನೀಡುವ ಸಿರಿಧಾನ್ಯಗಳತ್ತ ಗಮನಹರಿಸುವ ಸೂಚಿಸಲಾಗುತ್ತಿದೆ. ಕೃಷಿ ವಿಜ್ಞಾನ ಕೇಂದ್ರಗಳ ಮೂಲಕ ರೈತರನ್ನು ಸಂಪರ್ಕಿ ಈ ರೀತಿಯ ಜಾಗೃತಿ ಮೂಡಿಸಲಾಗುತ್ತಿದೆ.

ಬೇರೆ ತಳಿಗಳ ಬೀಜ:

ದೀರ್ಘಾವಧಿ ಬೆಳೆಗಳನ್ನು ಮಾತ್ರ ಬೆಳೆಯುವ ಹಾಗೂ ಅಲ್ಪಾವಧಿ ಬೆಳೆಗಳನ್ನು ಬೆಳೆಯಲು ಸಾಧ್ಯವಿಲ್ಲದ ಪ್ರದೇಶಗಳ ರೈತರಿಗೆ ಪರ್ಯಾಯ ತಳಿಯ ಬೀಜಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಉದಾಹರಣೆಗೆ ರಾಗಿಯಲ್ಲಿ ಎಂಆರ್‌ 1, ಎಂಆರ್‌ 6 ತಳಿಗಳು ಫಸಲು ಬರಲು ಹೆಚ್ಚಿನ ಸಮಯ ಬೇಕಾಗಲಿದೆ. ಅದಕ್ಕಾಗಿ ರಾಗಿ ಬೆಳೆಗಾರರಿಗೆ ಕೆಎಂಆರ್‌ 303, 601ನಂತಹ ಅಲ್ಪಾವಧಿಯಲ್ಲಿ ಫಸಲು ಬರುವ ತಳಿಯ ಬೀಜಗಳ ಬಳಕೆಗೆ ಸೂಚಿಸಲಾಗುತ್ತಿದೆ.

ರೈತರಿಗೆ ಕಾರ್ಯಾಗಾರ:

ಕೃಷಿ ವಿಶ್ವವಿದ್ಯಾಲಯಗಳು ಕೃಷಿ ವಿಜ್ಞಾನ ಕೇಂದ್ರಗಳ ಮೂಲಕ ಮಳೆಯ ಪ್ರಮಾಣ, ಅದಕ್ಕೆ ತಕ್ಕಂತೆ ಯಾವ ಬೆಳೆಯನ್ನು ಬೆಳೆಯಬೇಕು ಎಂಬ ಬಗ್ಗೆ ರೈತರಿಗೆ ತರಬೇತಿ ನೀಡುತ್ತಿವೆ. ಯಾವ ರೀತಿಯ ಕೃಷಿಯನ್ನು ಅಳವಡಿಸಿಕೊಂಡರೆ ಉತ್ತಮ ಎಂಬುದನ್ನು ಹೇಳಲಾಗುತ್ತಿದೆ. ಜತೆಗೆ ಮಳೆ ಕಡಿಮೆಯಿದ್ದರೂ ಉತ್ತಮ ಫಸಲು ಪಡೆಯುವುದರ ಕುರಿತಂತೆ ತರಬೇತಿ ನೀಡಲಾಗುತ್ತಿದೆ.

ಸೆಪ್ಟೆಂಬರ್‌ನಲ್ಲಿ ತೀವ್ರ ಮಳೆ ಕೊರತೆ

ರಾಜ್ಯದಲ್ಲಿ ವಾರ್ಷಿಕ ಸರಾಸರಿ 1,200 ಮಿಮೀ ಮಳೆ ಸುರಿಯುತ್ತದೆ. ಈ ಪೈಕಿ ಮಳೆಗಾಲದಲ್ಲಿಯೇ 1 ಸಾವಿರ ಮಿ.ಮೀ. ಗಿಂತಲೂ ಹೆಚ್ಚಿನ ಮಳೆಯಾಗುತ್ತದೆ. ಆದರೆ, ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ. ಜೂನ್‌, ಜುಲೈ ಮತ್ತು ಆಗಸ್ಟ್‌ ತಿಂಗಳುಗಳಲ್ಲಿ ವಾಡಿಕೆಗಿಂತ ಶೇ.3 ರಿಂದ ಶೇ.4ರಷ್ಟುಕಡಿಮೆ ಮಳೆ ಸುರಿಯಲಿದೆ. ಸೆಪ್ಟೆಂಬರ್‌ನಲ್ಲಿ ಮಳೆಯ ಪ್ರಮಾಣ ತೀರಾ ಕಡಿಮೆಯಾಗುವ ಸಾಧ್ಯತೆಗಳಿವೆ.

Karnataka Monsoon: ಕೊಡಗಿನಲ್ಲಿ ಚುರುಕುಗೊಂಡ ಮಳೆ; ಕರಾವಳಿಯಲ್ಲಿ ಸಾಧಾರಣ

ಎಲ್‌ನಿನೋ ಎಂದರೇನು?

ಪೆಸಿಫಿಕ್‌ ಮಹಾಸಾಗರದಲ್ಲಿ ಉಷ್ಣಾಂಶ ಹೆಚ್ಚಾಗಿ, ಮಳೆಯ ಮಾರುತ ದಿಕ್ಕು ಬದಲಿಸುವ ಪರಿಸ್ಥಿತಿಯನ್ನು ಎಲ್‌ನಿನೋ ಎಂದು ಕರೆಯಲಾಗುತ್ತದೆ. ಈ ಪರಿಸ್ಥಿತಿಯಲ್ಲಿ ಮಳೆ ಮಾರುತಗಳು ಅಮೆರಿಕಾ ಕಡೆಗೆ ತೆರಳಲಿದ್ದು, ಏಷ್ಯಾ ಮತ್ತು ಆಸ್ಪ್ರೇಲಿಯಾ ಖಂಡಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುತ್ತದೆ. ಮುಂದಿನ ನಾಲ್ಕೈದು ವರ್ಷಗಳ ನಂತರ ಲಾನಿನೋ ಪರಿಸ್ಥಿತಿ ಸೃಷ್ಟಿಯಾಗಿ, ಉಷ್ಣಾಂಶದ ಪ್ರಮಾಣ ಕಡಿಮೆಯಾಗುತ್ತದೆ. ಆಗ ಮಳೆ ಮಾರುತಗಳು ಏಷ್ಯಾ ಮತ್ತು ಆಸ್ಟೇಲಿಯಾದತ್ತ ಬರಲಿದ್ದು, ಮಳೆಯ ಪ್ರಮಾಣ ತೀವ್ರವಾಗಿ ಹೆಚ್ಚಾಗಲಿದೆ. ಹೀಗಾಗಿ ಮುಂದಿನ ನಾಲ್ಕೈದು ವರ್ಷಗಳ ಕಾಲ ವಾಡಿಕೆಯಷ್ಟುಮಳೆಯಾಗುವುದು ಅನುಮಾನ ಎನ್ನುವಂತಾಗಿದೆ.

ಪೆಸಿಫಿಕ್‌ ಮಹಾಸಾಗರದಲ್ಲಿ ಎಲ್‌ನಿನೋ ಪರಿಸ್ಥಿತಿ ಉಂಟಾಗಿರುವ ಕಾರಣ, ರಾಜ್ಯದಲ್ಲಿ ಮುಂದಿನ ನಾಲ್ಕೈದು ವರ್ಷ ಮಳೆಯ ಪ್ರಮಾಣ ಕಡಿಮೆ ಇರಲಿದೆ. ಹೀಗಾಗಿ ರೈತರು ಕಡಿಮೆ ಅವಧಿಯಲ್ಲಿ ಫಸಲು ನೀಡುವ ಅಲ್ಪಾವಧಿ ಬೆಳೆಗಳತ್ತ ಗಮನಹರಿಸಬೇಕು. ಈ ಕುರಿತಂತೆ ಕೃಷಿ ವಿಶ್ವವಿದ್ಯಾಲಯ ಕೂಡ ರೈತರಿಗೆ ಅರಿವು ಮೂಡಿಸುತ್ತಿದ್ದು, ಅದಕ್ಕೆ ತಕ್ಕಂತೆ ಬೀಜ ವಿತರಣೆ ಮಾಡಲಾಗುತ್ತಿದೆ ಎಂದು ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಕೃಷಿ ಹವಾಮಾನ ವಿಭಾಗದ ಮುಖ್ಯಸ್ಥ ಡಾ. ತಿಮ್ಮೇಗೌಡ ತಿಳಿಸಿದ್ದಾರೆ. 

click me!