ಕಮಿಷನ್‌ ದಂಧೆಗೆ ಸಂಪೂರ್ಣ ಬ್ರೇಕ್‌: ಗುತ್ತಿಗೆದಾರರಿಗೆ ಸಿಎಂ ಭರವಸೆ

By Kannadaprabha NewsFirst Published Jun 24, 2023, 4:00 AM IST
Highlights

ಬಜೆಟ್‌ ಅಧಿವೇಶನದ ನಂತರ ಗುತ್ತಿಗೆದಾರರ 3,500 ಕೋಟಿ ರು. ಬಾಕಿ ಮೊತ್ತ ಬಿಡುಗಡೆಗೆ ಪರಿಶೀಲನೆ ನಡೆಸುತ್ತೇವೆ ಎಂದು ಭರವಸೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು(ಜೂ.24):  ‘ಬಿಜೆಪಿ ಸರ್ಕಾರದ ಆರ್ಥಿಕ ಅಶಿಸ್ತು ಮತ್ತು ಕಮಿಷನ್‌ ಹಾವಳಿಯಿಂದ ಸರ್ಕಾರ, ಗುತ್ತಿಗೆದಾರರಿಗೆ ಬಹಳ ಆರ್ಥಿಕ ಸಮಸ್ಯೆ ಆಗಿದೆ. ನಮ್ಮ ಅವಧಿಯಲ್ಲಿ ಕಮಿಷನ್‌ ದಂಧೆಗೆ ಸಂಪೂರ್ಣ ಕಡಿವಾಣ ಹಾಕುತ್ತೇವೆ. ಜತೆಗೆ ಬಜೆಟ್‌ ಅಧಿವೇಶನದ ನಂತರ ಗುತ್ತಿಗೆದಾರರ 3,500 ಕೋಟಿ ರು. ಬಾಕಿ ಮೊತ್ತ ಬಿಡುಗಡೆಗೆ ಪರಿಶೀಲನೆ ನಡೆಸುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಶುಕ್ರವಾರ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಡಿ.ಕೆಂಪಣ್ಣ ಅಧ್ಯಕ್ಷತೆಯ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ನಿಯೋಗವು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಮನವಿ ಸಲ್ಲಿಸಿತು.
ಈ ವೇಳೆ ಹಿಂದಿನ ಸರ್ಕಾರದ ಅವಧಿಯಲ್ಲಿ ಮಾಡಿರುವ ಕಾಮಗಾರಿಗಳ ಬಾಕಿ ಹಣ ಹಾಗೂ ತಡೆ ಹಿಡಿದಿರುವ ಹಣವನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದರು. ಬಿಬಿಎಂಪಿಯಲ್ಲಿ 2 ಸಾವಿರ ಕೋಟಿ ರು. ಹಾಗೂ ನಗರೋತ್ಥಾನ ಯೋಜನೆಯಡಿ 1,500 ಕೋಟಿ ರು. ಬಾಕಿ ಇದೆ. ಈ ಬಗ್ಗೆ ಪರಿಶೀಲಿಸಿ ನಿರಾಕ್ಷೇಪಣಾ ಪತ್ರ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿರುವುದಾಗಿ ತಿಳಿದುಬಂದಿದೆ.

Latest Videos

ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಕಮಿಷನ್‌ ದಂಧೆಗೆ ಕಡಿವಾಣ: ಕುಮಾರಸ್ವಾಮಿ

ಈಗ ಕಮಿಷನ್‌ ಕೇಳಿದ್ರೂ ಬಯಲಿಗೆಳೆವೆ: ಕೆಂಪಣ್ಣ

ನೂತನ ಸರ್ಕಾರ ಅಧಿಕಾರಕ್ಕೆ ಬಂದು ಒಂದು ತಿಂಗಳಾಗಿದೆ. ಈವರೆಗೆ ನನ್ನ ಬಳಿ ಯಾವುದೇ ಕಮಿಷನ್‌ ದೂರು ಬಂದಿಲ್ಲ. ಯಾರಾದರೂ ಗುತ್ತಿಗೆದಾರರ ಹಣ ಬಿಡುಗಡೆಗೆ ಕಮಿಷನ್‌ ಕೇಳಿರುವ ದೂರು ಬಂದರೆ ನಾನೇ ಬಹಿರಂಗ ಮಾಡುತ್ತೇನೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಹೇಳಿದರು. ಈ ಸರ್ಕಾರ ಕಮಿಷನ್‌ ಮುಕ್ತವೇ ಎಂಬ ಸುದ್ದಿಗಾರರ ಪ್ರಶ್ನೆಗೆ ಈ ಉತ್ತರವನ್ನು ಕೆಂಪಣ್ಣ ನೀಡಿದರು. ಬಾಕಿ ಬಿಲ್‌ಗಳ ಹಣ ಪಾವತಿ ಮಾಡುವಂತೆ ಕೋರಿದ್ದೇವೆ. ಜತೆಗೆ ಗುತ್ತಿಗೆಗಳಲ್ಲಿ 2013 ರಿಂದ 2018ರ ವರೆಗೆ ಇದ್ದ ಎಲ್‌ಒಸಿ (ಲೆಟರ್‌ ಆಫ್‌ ಕ್ರೆಡಿಟ್‌) ವ್ಯವಸ್ಥೆಯನ್ನೇ ಮತ್ತೆ ಜಾರಿಗೆ ತರಲು ಕೋರಿದ್ದೇವೆ.

ಬಿಜೆಪಿ ಸರ್ಕಾರದ ಅವಧಿಯ 40 ಪರ್ಸೆಂಟ್‌ ಕಮಿಷನ್‌ ಬಗ್ಗೆ ತನಿಖೆಗೆ ಒತ್ತಾಯಿಸಿದ್ದೀರಾ ಎಂಬ ಪ್ರಶ್ನೆಗೆ, ನಾವು ಅದರ ಬಗ್ಗೆ ಮುಖ್ಯಮಂತ್ರಿ ಜತೆ ಪ್ರಸ್ತಾಪ ಮಾಡಿಲ್ಲ. ಸಮಯ ಬಂದಾಗ ಪ್ರಸ್ತಾಪಿಸುತ್ತೇನೆ ಎಂದರು. ಎಲ್ಲಿ ಹೋಗಿದ್ದಾರೆ ಕೆಂಪಣ್ಣ ಎಂಬ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನೆಗೆ, ‘ನಾವು 40 ಪರ್ಸೆಂಟ್‌ ಕಮಿಷನ್‌ ಆರೋಪ ಮಾಡಿ ಸರ್ಕಾರಕ್ಕೆ ದೂರು ನೀಡಿದ್ದೇವೆ. ಮೂರು ವರ್ಷ ತಮ್ಮ ಅವಧಿಯಲ್ಲಿ ಬೊಮ್ಮಾಯಿ ಏನು ಮಾಡುತ್ತಿದ್ದರು’ ಎಂದು ಪ್ರಶ್ನಿಸಿದರು. 

ಸಚಿವರು ರೇಟ್ ಫಿಕ್ಸ್ ಮಾಡುತ್ತಿದ್ದಾರೆ, ಎಲ್ಲಿದ್ದೀರಿ ಕೆಂಪಣ್ಣ: ಬಸವರಾಜ ಬೊಮ್ಮಾಯಿ

ಬಜೆಟ್‌ ಬಳಿಕ ಪರಿಶೀಲನೆ:

ಇದಕ್ಕೆ ಸಿದ್ದರಾಮಯ್ಯ ಅವರು, ಪ್ರಸ್ತುತ ಜು.7 ರಂದು ಬಜೆಟ್‌ ಮಂಡನೆಯಿದ್ದು ಇದಕ್ಕಾಗಿ ಸಿದ್ಧತೆ ನಡೆಯುತ್ತಿದೆ. ಬಜೆಟ್‌ ಅಧಿವೇಶನದ ನಂತರ ಬಿಬಿಎಂಪಿ ಹಾಗೂ ಆರ್ಥಿಕ ಇಲಾಖೆ ಕಾರ್ಯದರ್ಶಿಗಳ ಸಭೆ ಕರೆದು ಬಾಕಿ ಹಣ ಬಿಡುಗಡೆ ಬಗ್ಗೆ ಪರಿಶೀಲಿಸಲಾಗುವುದು ಎಂದು ಹೇಳಿದರು. ಅಲ್ಲದೆ ನಮ್ಮ ಸರ್ಕಾರದ ಅವಧಿಯಲ್ಲಿ ಕಮಿಷನ್‌ ದಂಧೆಗೆ ಸಂಪೂರ್ಣ ಕಡಿವಾಣ ಹಾಕುತ್ತೇವೆ. ಯಾವುದೇ ರೀತಿಯಲ್ಲಿ ಪ್ರಾಮಾಣಿಕರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿರುವುದಾಗಿ ತಿಳಿದುಬಂದಿದೆ.

ಸಂಘದ ಪದಾಧಿಕಾರಿಗಳಾದ ಆರ್‌.ಅಂಬಿಕಾಪತಿ, ಜಿ.ಎಂ ರವೀಂದ್ರ, ಸಂಕಾಗೌಡ ಶಾನಿ, ನಾಗರಾಜ್‌, ಆರ್‌. ಮಂಜುನಾಥ್‌, ರಮೇಶ್‌ ಮೊದಲಾದವರು ಉಪಸ್ಥಿತರಿದ್ದರು.

click me!