- ಗಲಭೆಗೆ ಕುಮ್ಮಕ್ಕು ಆರೋಪ, ವಾಟ್ಸಾಪ್‌ನಲ್ಲಿ ಪ್ರಚೋದನೆ
- ಬಂಧಿತರ ಸಂಖ್ಯೆ 137ಕ್ಕೇರಿಕೆ, ಒಬ್ಬ ಹುಬ್ಬಳ್ಳಿ ಪಾಲಿಕೆ ಸದಸ್ಯ
- ವಾಟ್ಸಪ್ ಗ್ರೂಪ್ ಮೂಲಕ ಜನರನ್ನು ಸೇರಿಸಿದ ಆರೀಫ್
ಹುಬ್ಬಳ್ಳಿ(ಏ.24): ಹುಬ್ಬಳ್ಳಿ ಗಲಭೆಗೆ ಸಂಬಂಧಿಸಿದಂತೆ ಪಾಲಿಕೆ ಸದಸ್ಯನೂ ಸೇರಿದಂತೆ ಅಸಾದುದ್ದೀನ್ ಒವೈಸಿ ನೇತೃತ್ವದ ಎಐಎಂಐಎಂ ಪಕ್ಷದ ಇಬ್ಬರು ಪ್ರಮುಖರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಈ ಇಬ್ಬರು ಕೂಡ ವಾಟ್ಸಪ್ ಗ್ರೂಪ್ ಮೂಲಕ ಪ್ರಚೋದನೆ ನೀಡಿದ್ದರು ಎಂದು ಹೇಳಲಾಗಿದ್ದು, ಇದರಿಂದ ಎಐಎಂಐಎಂನ ಎಂಟು ಜನರನ್ನು ಬಂಧಿಸಿದಂತಾಗಿದೆ. ಈ ಇಬ್ಬರು ಸೇರಿದಂತೆ ಶನಿವಾರ ಒಟ್ಟು ಮೂವರನ್ನು ಬಂಧಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ಬಂಧಿತರಾದವರ ಸಂಖ್ಯೆ 137ಕ್ಕೆ ಏರಿಕೆಯಾಗಿದೆ. ಪಾಲಿಕೆ ಸದಸ್ಯ ನಜೀರ್ ಅಹ್ಮದ್ ಹೊನ್ಯಾಳ, ಮೊಹಮ್ಮದ ಆರೀಫ್ ಮತ್ತು ಭಾಷಾ ಹಯ್ಯತ್ ಸಾಬ್ ಬಂಧಿತರು.
ಬಂಧಿತರಲ್ಲಿ ನಜೀರ್ ಎಐಎಂಐಎಂನ ಪ್ರಮುಖ ನಾಯಕನಾಗಿದ್ದ. ಈ ಮೊದಲು ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಆತ 2 ವರ್ಷದ ಹಿಂದೆಯಷ್ಟೇ ಎಐಎಂಐಎಂ ಪಕ್ಷ ಸೇರಿದ್ದಾನೆ. ಕಳೆದ ಬಾರಿ ಕಾಂಗ್ರೆಸ್‌ನಿಂದ ಪಾಲಿಕೆಯ ನಾಮನಿರ್ದೇಶಿತ ಸದಸ್ಯ ಎರಡು ವರ್ಷಗಳ ಹಿಂದೆ ಎಐಎಂಐಎಂಗೆ ಸೇರಿ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾಧ್ಯಕ್ಷನಾಗಿದ್ದ. ಪಾಲಿಕೆ ಚುನಾವಣೆಯಲ್ಲಿ 71ನೇ ವಾರ್ಡ್‌ನಿಂದ ಕಣಕ್ಕಿಳಿದು ಗೆಲುವು ಕೂಡ ಸಾಧಿಸಿದ್ದಾನೆ. ಈ ನಡುವೆ ಬಯೋಡೀಸೆಲ್ ಅಕ್ರಮ ಮಾರಾಟದ ವೇಳೆ ಸಿಕ್ಕು ಬಿದ್ದಿದ್ದ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೇಲ್ ಮೇಲೆ ಹೊರಗೆ ಬಂದಿದ್ದ ಎಂದು ಮೂಲಗಳು ತಿಳಿಸಿವೆ.
ಹುಬ್ಬಳ್ಳಿ ಗಲಭೆ ಹಿಂದೆ ಮುಸ್ಲಿಂ ಸಂಘಟನೆ ರಝಾ ಕೈವಾಡ ಕುರಿತು ತನಿಖೆ!
ಹೈದರಾಬಾದ್‌ಗೆ ಪರಾರಿ:
ಗಲಭೆ ಬಳಿಕ ನಜೀರ್ ಹೈದರಾಬಾದ್‌ಗೆ ತೆರಳಿದ್ದನಂತೆ. ಶನಿವಾರವಷ್ಟೇ ಅಲ್ಲಿಂದ ಹುಬ್ಬಳ್ಳಿಗೆ ಮರಳಿದ್ದನಂತೆ. ಅಲ್ಲಿಂದ ಬರುತ್ತಿದ್ದಂತೆ ಪೊಲೀಸರು ಆತನ ಮನೆಯಿಂದಲೇ ಬಂಧಿಸಿ ಕರೆದುಕೊಂಡು ಬಂದಿದ್ದಾರೆ. ಸುಮಾರು 4 ಗಂಟೆಗೂ ಅಧಿಕ ಕಾಲ ಈತನನ್ನು ವಿಚಾರಣೆಗೊಳಪಡಿಸಲಾಗಿದೆ. ಈತನಿಗೂ ವಸೀಂ ಪಠಾಣನ ಸಂಪರ್ಕವಿತ್ತು. ಅಂದು ಗಲಭೆ ನಡೆದ ವೇಳೆ ಈತ ಜನರನ್ನು ಸೇರಿಸಿದ್ದ. ಜತೆಗೆ ಅಂದು ಗಲಭೆ ವೇಳೆಯೂ ಸ್ಥಳದಲ್ಲಿದ್ದ. ಗಲಭೆಯಲ್ಲಿ ಈತನದು ಪ್ರಮುಖ ಪಾತ್ರವಿದೆ ಎಂದು ಹೇಳಲಾಗಿದೆ.
ವಾಟ್ಸಪ್ ಗ್ರೂಪ್:
ಇನ್ನು ಗಲಭೆ ಬಳಿಕ ನಾಪತ್ತೆಯಾಗಿದ್ದ ಮೊಹಮ್ಮದ ಆರೀಫನನ್ನು ಪೊಲೀಸರು ಶುಕ್ರವಾರ ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಈತನಿಗೂ ವಸೀಂ ಪಠಾಣಗೆ ಸಂಪರ್ಕವಿತ್ತು. ಆತ ಹೇಳಿದಂತೆ ಈತ ಕೇಳುತ್ತಿದ್ದನಂತೆ. ಅಂದು ವಾಟ್ಸಪ್ ಗ್ರೂಪ್ ಮೂಲಕ ಜನರನ್ನು ಸೇರಿಸುವಲ್ಲಿ ಈತನೂ ಪ್ರಮುಖ ಪಾತ್ರ ವಹಿಸಿದ್ದನಂತೆ. ಇದೇ ವೇಳೆ ಟೈಲರ್‌ನಾಗಿ ಕೆಲಸ ಮಾಡುತ್ತಿದ್ದ ಭಾಷಾ ಹಯ್ಯತ್ ಸಾಬ್‌ನನ್ನು ಬಂಧಿಸಲಾಗಿದೆ. ಗಲಭೆಯಲ್ಲಿ ಈ ಮೂವರು ಜನರನ್ನು ಸೇರಿಸಿ ಕರೆದುಕೊಂಡು ಬಂದಿದ್ದರು ಎಂದು ಹೇಳಲಾಗಿದೆ. ಇದರೊಂದಿಗೆ ಮತ್ತೇನು ಮಾಡಿದ್ದಾರೆ ಎಂಬುದರ ತನಿಖೆ ನಡೆಯುತ್ತಿದೆ. ವಿಚಾರಣೆಯೆಲ್ಲ ಮುಗಿಸಿ ಮೂವರನ್ನು ಕಿಮ್ಸ್‌ಗೆ ಕರೆದುಕೊಂಡು ಹೋಗಿ ಆರೋಗ್ಯ ತಪಾಸಣೆ ಮಾಡಿಸಿದ್ದಾರೆ. ಬಳಿಕ ನ್ಯಾಯಾಧೀಶರ ಎದುರಿಗೆ ಪೊಲೀಸರು ಹಾಜರು ಪಡಿಸಿದ್ದಾರೆ.
ಸ್ಫೋಟಕ ಮಾಹಿತಿ ಬಾಯ್ಬಿಟ್ಟ ಬಂಧಿತ ವಸೀಮ್ ಪಠಾಣ್!
ವಾಚ್, ಪರ್ಸ್ ಕೊಟ್ಟು ಹೋದ:
ನಜೀರ್‌ನನ್ನು ಮಧ್ಯಾಹ್ನ ವಶಕ್ಕೆ ಪಡೆದಿದ್ದ ಪೊಲೀಸರು, ವಿಚಾರಣೆ ನಡೆಸಿ ಬಳಿಕ ಬಂಧನಕ್ಕೊಳಪಡಿಸಿದರು. ಈ ವೇಳೆ ಆರೋಗ್ಯ ತಪಾಸಣೆಗೆ ತೆರಳುವ ಮುನ್ನ ಪರ್ಸ್ ಹಾಗೂ ವಾಚ್‌ನ್ನು ಕಳಚಿ ತನ್ನ ಆಪ್ತರ ಬಳಿ ನೀಡಿ ಪೊಲೀಸ್ ವಾಹನವನ್ನು ಹೊನ್ಯಾಳ ಏರಿದ.