
ಸುರಪುರ(ಏ.24): ಕಾಲೇಜಿನಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ಹೈಕೋರ್ಚ್ ಮೆಟ್ಟಿಲೇರಿದ್ದ ಉಡುಪಿ ಸರ್ಕಾರಿ ಬಾಲಕಿಯರ ಪಪೂ ಕಾಲೇಜಿನ ವಿಜ್ಞಾನ ವಿಭಾಗದ ಮೂವರು ವಿದ್ಯಾರ್ಥಿನಿಯರು ಶನಿವಾರ ನಡೆದ ಗಣಿತಶಾಸ್ತ್ರ ಪರೀಕ್ಷೆಗೆ ಹಾಜರಾಗಿಲ್ಲ.
ಅಲ್ಮಾಸ್ ಎ.ಎಚ್., ಹಝ್ರಾ ಶಿಫಾ, ಆಯಿಷಾ ಪಲ್ಲವ್ಕರ್ ಗೈರು ಹಾಜರಾದ ವಿದ್ಯಾರ್ಥಿನಿಯರು. ಅಲ್ಮಾಸ್ ಶುಕ್ರವಾರ ಸಂಜೆ ಕಾಲೇಜಿನಿಂದ ಹಾಲ್ ಟಿಕೆಟ್ ಪಡೆದುಕೊಂಡು ಹೋಗಿದ್ದರು. ಆದರೆ ಇನ್ನಿಬ್ಬರು ಹಾಲ್ ಟಿಕೆಟ್ ಸಹ ಪಡೆಯದೆ ಪರೀಕ್ಷೆಗೆ ಗೈರಾಗಿದ್ದಾರೆ.
ಹೈಕೋರ್ಚ್‌ಗೆ ಹೋಗಿದ್ದ ಇನ್ನಿಬ್ಬರು ವಿದ್ಯಾರ್ಥಿಗಳಾದ ಆಲಿಯಾ ಅಸ್ಸಾದಿ ಮತ್ತು ರೇಷಮ್ ಅವರು ಶುಕ್ರವಾರ ಬೆಳಗ್ಗೆ ಕೊನೆಯ ಕ್ಷಣದಲ್ಲಿ ಹಾಲ್ ಟಿಕೆಟ್ ಪಡೆದು, ಬುರ್ಕಾ ಮತ್ತು ಹಿಜಾಬ್ ಧರಿಸಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ, ಹಿಜಾಬ್ ಧರಿಸಿಯೇ ಪರೀಕ್ಷೆ ಬರೆಯುವುದಾಗಿ ವಾಗ್ವಾದ ನಡೆಸಿದ್ದರು. ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು ಸರ್ಕಾರದ ಸುತ್ತೋಲೆಯಂತೆ ಹಿಜಾಬ್ ಧರಿಸುವುದಕ್ಕೆ ಅವಕಾಶ ನೀಡದಿದ್ದಾಗ ಪರೀಕ್ಷೆ ಬಹಿಷ್ಕರಿಸಿ ಮನೆಗೆ ಹಿಂತೆರಳಿದ್ದರು.
ಈ ಘಟನೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಶಾಸಕ ರಘುಪತಿ ಭಟ್ಟರು, ಇನ್ನೊಮ್ಮೆ ಪರೀಕ್ಷಾ ಕೇಂದ್ರದಲ್ಲಿ ಹಿಜಾಬ್ ಡ್ರಾಮ ಮಾಡಿದರೆ ನ್ಯಾಯಾಂಗ ನಿಂದನೆ ಕೇಸು ಹಾಕುವುದಾಗಿ ಎಚ್ಚರಿಕೆ ನೀಡಿದ್ದರು.
ಶುಕ್ರವಾರ ಇಬ್ಬರು ಹಿಜಾಬ್ ವಿದ್ಯಾರ್ಥಿನಿಯರಿಗೆ ಪರೀಕ್ಷೆ ಬರೆಯುವುದಕ್ಕೆ ಅವಕಾಶ ನೀಡದಿರುವುದರಿಂದ ಮತ್ತು ಶಾಸಕರು ಕೇಸು ಹಾಕುವ ಎಚ್ಚರಿಕೆ ನೀಡಿದ್ದರಿಂದ ಉಳಿದ ಮೂವರು ವಿದ್ಯಾರ್ಥಿಗಳು ಶನಿವಾರ ಪರೀಕ್ಷೆಗೆ ಹಾಜರಾಗಿಲ್ಲ.
ದೇಶ ಎತ್ತ ಸಾಗುತ್ತಿದೆ ಎಂದು ಕೇಳಿದ ಆಲಿಯಾ
ಶುಕ್ರವಾರ ಹಿಜಾಬ್‌ಗಾಗಿ ಪರೀಕ್ಷೆಯನ್ನೇ ಬಹಿಷ್ಕರಿಸಿದ ಆಲಿಯಾ ಅಸ್ಸಾದಿ ಈ ಬಗ್ಗೆ ಟ್ವೀಟ್ ಮಾಡಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ನನಗೆ ಮತ್ತು ರೇಶಂಗೆ ಹಿಜಾಬ್ ಧರಿಸಿದ ಕಾರಣಕ್ಕೆ ಪರೀಕ್ಷೆ ಬರೆಯುವ ಅವಕಾಶ ನಿರಾಕರಿಸಲಾಗಿದೆ. ನಾವು ಮತ್ತೆ ಮತ್ತೆ ನಿರಾಸೆಗೊಳಗಾಗುತ್ತಿದ್ದೇವೆ. ನಾವು ಮತ್ತೆ ಪರೀಕ್ಷಾ ಕೇಂದ್ರಕ್ಕೆ ಹಾಜರಾದರೆ ಕ್ರಿಮಿನಲ್ ಕೇಸು ದಾಖಲಿಸುವುದಾಗಿ ಶಾಸಕ ರಘುಪತಿ ಭಟ್ ಬೆದರಿಕೆ ಹಾಕಿದ್ದಾರೆ. ಇಲ್ಲಿ ಅಂತಹ ಯಾವ ಅಪರಾಧ ನಡೆದಿದೆ? ನಮ್ಮ ದೇಶ ಎತ್ತ ಸಾಗುತ್ತಿದೆ? ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ