ರಾಜ್ಯದಲ್ಲಿ 5 ವರ್ಷಗಳಲ್ಲಿ 33 ಲಕ್ಷ ಉದ್ಯೋಗ ಸೃಜನೆ : ಸಿಎಂ ಬಸವರಾಜ ಬೊಮ್ಮಾಯಿ ಮಾಹಿತಿ

By Sathish Kumar KHFirst Published Mar 12, 2023, 9:13 PM IST
Highlights

ರಾಜ್ಯದಲ್ಲಿ ಪ್ರತಿ ವರ್ಷ ಸರಾಸರಿ 13 ಲಕ್ಷ ಕೆಲಸಗಳಂತೆ  ಕಳೆದ ಐದು ವರ್ಷಗಳಲ್ಲಿ ಸುಮಾರು 33 ಲಕ್ಷ ಉದ್ಯೋಗ ಸೃಜನೆ ಮಾಡಿರುವುದರ ಹಿಂದೆ ಕೇಂದ್ರ ಸರ್ಕಾರದ ಶಕ್ತಿ ಇದೆ.

ಧಾರವಾಡ (ಮಾ.12): ರಾಜ್ಯದಲ್ಲಿ ಪ್ರತಿ ವರ್ಷ ಸರಾಸರಿ 13 ಲಕ್ಷ ಕೆಲಸಗಳಂತೆ  ಕಳೆದ ಐದು ವರ್ಷಗಳಲ್ಲಿ ಸುಮಾರು 33 ಲಕ್ಷ ಉದ್ಯೋಗ ಸೃಜನೆ ಮಾಡಿರುವುದರ ಹಿಂದೆ ಕೇಂದ್ರ ಸರ್ಕಾರದ ಶಕ್ತಿ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 

ಧಾರವಾಡ  ಐಐಟಿ ಉದ್ಘಾಟನೆ, ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಯೋಜನೆ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳ ಶಿಲಾನ್ಯಾಸ ಸಮಾರಂಭದಲ್ಲಿ  ಪ್ರಧಾನಮಂತ್ರಿ ನರೇಂದ್ರ ಮೋದಿಯವರೊಂದಿಗೆ ಪಾಲ್ಗೊಂಡು ಮಾತನಾಡಿದರು. ದೇಶದಲ್ಲಿ ಅತಿ ಕಡಿಮೆ ನಿರುದ್ಯೋಗ ಇರುವ ರಾಜ್ಯ ಕರ್ನಾಟಕವಾಗಿದೆ. ರಾಜಕಾರಣಿಗಳ ಕಣ್ಣು ಮುಂದಿನ ಚುನಾವಣೆಗಳ ಮೇಲಿದ್ದರೆ, ಒಬ್ಬ ಮುತ್ಸದ್ಧಿಯ ಕಣ್ಣು ಮುಂದಿನ ಪೀಳಿಗೆಯ ಭವಿಷ್ಯದ ಮೇಲಿರುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಂತಹ ಮುತ್ಸದ್ಧಿತನ ಹೊಂದಿರುವ ನೇತಾರ.  ತಾಂತ್ರಿಕವಾಗಿ ದೇಶವನ್ನು ಸಶಕ್ತಗೊಳಿಸಲು ಧಾರವಾಡ ಐಐಟಿ ಸ್ಥಾಪಿಸಿದ್ದಾರೆ. ಹೊಸಪೇಟೆ -ಹುಬ್ಬಳ್ಳಿ- ತಿನೈಘಾಟ್ ರೈಲ್ವೇ ಮಾರ್ಗದ ವಿದ್ಯುದ್ದೀಕರಣ ಸೇರಿದಂತೆ ಅನೇಕ ಸುಧಾರಣೆಗಳನ್ನು ತಂದಿದ್ದಾರೆ ಎಂದರು.

ಧಾರವಾಡದಲ್ಲಿ 3,500 ಕೋಟಿ ವೆಚ್ಚದ ಕಾಮಗಾರಿಗಳಿಗೆ ನರೇಂದ್ರ ಮೋದಿ ಚಾಲನೆ: ಇಲ್ಲಿದೆ ಯೋಜನೆಗಳ ವಿವರ

ರೈಲ್ವೇ ಸುಧಾರಣೆಗೆ 7651 ಕೋಟಿ ಮೀಸಲು: ಪ್ರಸಕ್ತ ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕದ ರೈಲ್ವೇ ಸುಧಾರಣೆಗೆ 7651 ಕೋಟಿ ಮೀಸಲಿಟ್ಟಿರುವ ಡಬಲ್ ಇಂಜಿನ್ ಸರ್ಕಾರ ಇದಾಗಿದೆ. ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರ ಸಾಕಷ್ಟು ಪ್ರೋತ್ಸಾಹ ನೀಡಿದೆ. ಶಿಕ್ಷಣ, ಮೂಲಭೂತ ಸೌಕರ್ಯ, ಕೈಗಾರೀಕರಣದಂತಹ ಮಹತ್ವದ ಕಾರ್ಯಗಳು  ರಾಜ್ಯ ಮತ್ತು ಕೇಂದ್ರದಲ್ಲಿ ಏಕಕಾಲದಲ್ಲಿ ನಡೆಯುತ್ತಿವೆ ಎಂದರು. ಪೋರ್ಟ್ ನಿಂದ ಇನ್ ಲ್ಯಾಂಡ್ ವರೆಗೆ ಸಂಪರ್ಕ ಕಲ್ಪಿಸುವ ಕೆಲಸ ಮಾಡಿದ್ದಾರೆ‌. ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ದಿಗೆ ಹೆಚ್ಚಿನ ಒತ್ತು ಕೊಟ್ಟಿದ್ದಾರೆ. ಉತ್ತರ ಕರ್ನಾಟಕ ಹಿಂದೆಂದೂ ಇಲ್ಲದಷ್ಟು ಅಭಿವೃದಿಯಾಗುತ್ತಿದೆ ಎಂದರು. 

ದೇಶದ ಪ್ರತಿಯೊಬ್ಬರಿಗೂ ಉತ್ತಮ ಶಿಕ್ಷಣ ನೀಡುವ ಗುರಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾತನಾಡಿ, ಉತ್ತಮ ಶಿಕ್ಷಣವು ಪ್ರತಿಯೊಬ್ಬರಿಗೆ ದೊರಕಬೇಕಿದೆ. ಉತ್ತಮ ಶಿಕ್ಷಣ ಸಂಸ್ಥೆ ಆರಂಭಿಸಿದಷ್ಟು ಉತ್ತಮ ಶಿಕ್ಷಣ ದೊರಕುವುದು ಸಾಧ್ಯವಾಗಲಿದೆ. ಆದ್ದರಿಂದ ಉತ್ತಮ ಶಿಕ್ಷಣ ಸಂಸ್ಥೆ ಸ್ಥಾಪನೆಗೆ ಸರಕಾರ ಆದ್ಯತೆ ನೀಡಿದೆ.ದೇಶದಲ್ಲಿ ಕಳೆದ 9 ವರ್ಷಗಳಿಂದ ಆಧುನೀಕರಣಕ್ಕೆ ಒತ್ತು ನೀಡಲಾಗಿದೆ. ಗ್ರಾಮೀಣ ರಸ್ತೆ ಮಾತ್ರವಲ್ಲದೆ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ, ರೈಲು ಮಾರ್ಗಗಳ ವಿಸ್ತರಣೆ ಹಾಗೂ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದರು.

ರಾಜ್ಯದ ಸಮಗ್ರ ಅಭಿವೃದ್ಧಿಗೆ ಡಬಲ್‌ ಇಂಜಿನ್‌ ಸರ್ಕಾರ ಬದ್ಧ: ಡಬಲ್ ಎಂಜಿನ್ ಸರಕಾರವು ರಾಜ್ಯದ ಹಳ್ಳಿ ಹಳ್ಳಿಗಳ ಸಮಗ್ರ ಪ್ರಗತಿಗೆ ಬದ್ಧವಾಗಿದೆ. ಪ್ರಗತಿಯ ಹೊಸ ಶಕೆಯು ಇಡಿ ರಾಜ್ಯದ ಪ್ರಗತಿಗೆ ಮುನ್ನುಡಿ ಬರೆಯಲಿದೆ. ಮಲೆನಾಡು ಮತ್ತು ಬಯಲುಸೀಮೆಯ ನಡುವಿನ ದ್ವಾರಬಾಗಿಲು ಆಗಿರುವ ಈ ಭಾಗವು ಪ್ರತಿಯೊಬ್ಬರನ್ನು ಪ್ರಿತಿಯಿಂದ ಸ್ವಾಗತಿಸಿದೆ. ಧಾರವಾಡವು ಕರ್ನಾಟಕ ಮತ್ತು ಭಾರತದ ಜೀವಂತಿಕೆಯ ಪ್ರತಿಬಿಂಬವಾಗಿದೆ.ಧಾರವಾಡದ ಪರಿಚಯವು ದ.ರಾ.ಬೇಂದ್ರೆ, ಸಮೃದ್ಧ ಸಂಗೀತ ಭೀಮಸೇನ್ ಜೋಶಿ, ಗಂಗೂಬಾಯಿ ಹಾನಗಲ್, ಕುಮಾರ್ ಗಂಧರ್ವ,ಬಸವರಾಜ ರಾಜಗುರು,  ಮಲ್ಲಿಕಾರ್ಜುನ ಮನಸೂರ ಅವರಂತಹ ಸಂಗೀತ ದಿಗ್ಗಜರ ತವರೂರಾಗಿದೆ. ಧಾರವಾಡ ಪೇಢೆಯ ಸ್ವಾದವು ಮರೆಯಲಾರದಂತದು ಎಂದು ಹೇಳಿದರು.

Suvarna Focus:16 ಸಾವಿರ ಕೋಟಿ ಮೌಲ್ಯದ ಯೋಜನೆಗಳ ಉದ್ಘಾಟನೆ: ಹಲವು ಪ್ರಾಜೆಕ್ಟ್‌ಗಳ ಶಂಕುಸ್ಥಾಪನೆ

ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಗೋವಿಂದ ಕಾರಜೋಳ,ಸಿ.ಸಿ.ಪಾಟೀಲ, ವಿ.ಸೋಮಣ್ಣ, ಬಿ.ಎ.ಬಸವರಾಜ, ಶಂಕರ ಪಾಟೀಲ ಮುನೇನಕೊಪ್ಪ, ಮಾಜಿಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಶಾಸಕರಾದ ಸಿ.ಎಂ.ನಿಂಬಣ್ಣವರ, ಅರವಿಂದ ಬೆಲ್ಲದ, ಅಮೃತ ದೇಸಾಯಿ, ವಿಧಾನಪರಿಷತ್ ಸದಸ್ಯರಾದ ಪ್ರದೀಪ ಶೆಟ್ಟರ್, ಎಸ್.ವಿ.ಸಂಕನೂರ, ಮಹಾನಗರಪಾಲಿಕೆ ಮೇಯರ್ ಈರೇಶ್ ಅಂಚಟಗೇರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

click me!