ಧಾರವಾಡದಲ್ಲಿ 3,500 ಕೋಟಿ ವೆಚ್ಚದ ಕಾಮಗಾರಿಗಳಿಗೆ ನರೇಂದ್ರ ಮೋದಿ ಚಾಲನೆ: ಇಲ್ಲಿದೆ ಯೋಜನೆಗಳ ವಿವರ

By Sathish Kumar KHFirst Published Mar 12, 2023, 8:56 PM IST
Highlights

1,042 ಕೋಟಿ ರೂ.ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರು  ಯೋಜನೆ
250 ಕೋಟಿ ರೂ. ವೆಚ್ಚದಲ್ಲಿ ಜಯದೇವ ಹೃದ್ರೋಗಗಳ ಆಸ್ಪತ್ರೆಯ ಪ್ರಾದೇಶಿಕ ಕೇಂದ್ರ ಸ್ಥಾಪನೆ
150 ಕೋಟಿ ರೂ.ವೆಚ್ಚದಲ್ಲಿ ತುಪ್ಪರಿಹಳ್ಳ ಪ್ರವಾಹ ಹಾನಿ ತಡೆಗೆ ಯೋಜನೆ
 

ಧಾರವಾಡ (ಮಾ.12): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಧಾರವಾಡದಲ್ಲಿ 3,500 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳ ಲೋಕಾರ್ಪಣೆ ಹಾಗೂ ವಿವಿಧ ಯೋಜನೆಗಳಿಗೆ ಶಂಕು ಸ್ಥಾಪನೆ ನೆರವೇರಿಸಿದ್ದಾರೆ. ಯಾವ ಯೋಜನೆಗಳು ಎಷ್ಟು ವೆಚ್ಚ ಹಾಗೂ ಯೋಜನೆಗಳಿಂದ ಉಂಟಾಗುವ ಲಾಭದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಧಾರವಾಡ ಐಐಟಿ: ಸುಮಾರು 410 ಎಕರೆ ವಿಸ್ತೀರ್ಣದ ವಿಶಾಲ ನಿವೇಶನದಲ್ಲಿ 852 ಕೋಟಿ ರೂ. ಯೋಜನಾ ವೆಚ್ಚದಲ್ಲಿ ನಿರ್ಮಿಸಲಾದ ಧಾರವಾಡ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಮೊದಲ ಹಂತದ ಕಟ್ಟಡದ ಉದ್ಘಾಟನೆ ಮಾಡಲಾಗಿದೆ. ಪ್ರಸ್ತುತ ಈ ಸಂಸ್ಥೆಯಲ್ಲಿ 73 ಬೋಧಕರು, 35 ಸಿಬ್ಬಂದಿ ಹಾಗೂ 856 ವಿದ್ಯಾರ್ಥಿಗಳಿದ್ದಾರೆ. ಬಿ-ಟೆಕ್, ಬಿ.ಎಸ್, ಎಂ ಎಸ್, ಎಂ ಟೆಕ್ ಹಾಗೂ ಪಿಹೆಚ್‌ಡಿ ಪದವಿಗಳು ಈ ಐಐಟಿಯಲ್ಲಿ ಲಭ್ಯವಿವೆ.

ವಿಶ್ವದ ಅತಿ ಉದ್ದನೆಯ ರೈಲ್ವೇ ಪ್ಲಾಟ್ ಫಾರ್ಮ್:  ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿ ರೈಲ್ವೇ ನಿಲ್ದಾಣದಲ್ಲಿ 20 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಿರುವ ಪಾದಚಾರಿ ಕೆಳಸೇತುವೆ ಹಾಗೂ 1507 ಮೀ.ಉದ್ದದ ವಿಶ್ವದ ಅತಿ ಉದ್ದನೆಯ ರೈಲ್ವೇ ಪ್ಲಾಟ್ ಫಾರ್ಮ್ ಅನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದ್ದಾರೆ. 

Suvarna Focus:16 ಸಾವಿರ ಕೋಟಿ ಮೌಲ್ಯದ ಯೋಜನೆಗಳ ಉದ್ಘಾಟನೆ: ಹಲವು ಪ್ರಾಜೆಕ್ಟ್‌ಗಳ ಶಂಕುಸ್ಥಾಪನೆ

ಹೊಸಪೇಟೆ- ತಿನೈಘಾಟ್ ರೈಲು ಮಾರ್ಗ ವಿದ್ಯುದೀಕರಣ: ಇನ್ನು ಹೊಸಪೇಟೆ-ಹುಬ್ಬಳ್ಳಿ-ತಿನೈಘಾಟ್ ರೈಲ್ವೇ ಮಾರ್ಗದ ವಿದ್ಯುದೀಕರಣ ಮಾರ್ಗವನ್ನು ಉದ್ಘಾಟನೆ ಮಾಡಿದ್ದಾರೆ. ಈ ಮಾರ್ಗವು ವಿಜಯನಗರ, ಕೊಪ್ಪಳ, ಗದಗ, ಧಾರವಾಡ, ಉತ್ತರ ಕನ್ನಡ ಹಾಗೂ ಬೆಳಗಾವಿ ಜಿಲ್ಲೆಗಳ ಮೂಲಕ ಹಾದು ಹೋಗಲಿದೆ.  ಒಟ್ಟು 245 ರೈಲ್ವೇ ಕಿ.ಮೀ. ಉದ್ದದ ಹೊಸಪೇಟೆ-ಹುಬ್ಬಳ್ಳಿ-ತಿನೈಘಾಟ್ ರೈಲ್ವೇ ಮಾರ್ಗದ ವಿದ್ಯುದೀಕರಣ ಕಾಮಗಾರಿ 519 ಕೋಟಿ ರೂ.ವೆಚ್ಚದಲ್ಲಿ ಪೂರ್ಣಗೊಂಡಿದೆ‌.

ಉನ್ನತೀಕರಣಗೊಂಡ ಹೊಸಪೇಟೆ ರೈಲು ನಿಲ್ದಾಣ: ವಿಜಯನಗರ ಜಿಲ್ಲಾ ಕೇಂದ್ರವಾದ ಹೊಸಪೇಟೆ ನಗರದಲ್ಲಿರುವ ರೈಲು ನಿಲ್ದಾಣವನ್ನು ವಿಶ್ವಪ್ರಸಿದ್ಧ ಹಂಪಿ ಸ್ಮಾರಕಗಳನ್ನು ಒಳಗೊಂಡ ವಿವಿಧ ಕಲೆಗಳ ಶೈಲಿಯಲ್ಲಿ ಅಭಿವೃದ್ಧಿ ಮಾಡಲಾಗಿದೆ. ಒಟ್ಟು 13 ಕೋಟಿ ರೂ. ವೆಚ್ಚದಲ್ಲಿ ಉನ್ನತೀಕರಣಗೊಂಡಿರುವ ಹೊಸಪೇಟೆ ರೈಲ್ವೇ ನಿಲ್ದಾಣವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಿದರು. 

353 ಕೋಟಿ ರೂ.ಗಳ ಸ್ಮಾರ್ಟ್ ಸಿಟಿ ಯೋಜನೆಗಳು: ಹುಬ್ಬಳ್ಳಿ ಧಾರವಾಡ ನಾಗರಿಕರ ಜೀವನ ಮಟ್ಟ ಸುಧಾರಣೆಗೆ ಅನುಕೂಲ ಆಗುವಂತೆ ಕೇಂದ್ರ ಸರ್ಕಾರ ನಗರಾಭಿವೃದ್ಧಿ ಸಚಿವಾಲಯದ ಅಂಗ ಸಂಸ್ಥೆಯಾದ ಸ್ಮಾರ್ಟ್ ಸಿಟಿ ಯೋಜನೆಯಡಿ 353 ಕೋಟಿ ರೂ.ವೆಚ್ಚದಲ್ಲಿ ವಿವಿಧ ಯೋಜನೆಗಳ ಉದ್ಘಾಟನೆ ಮಾಡಲಾಯಿತು. ಇದರಲ್ಲಿ ರಸ್ತೆ, ತ್ಯಾಜ್ಯ ನೀರು ಸಂಸ್ಕರಣಾ ಘಟಕ, ಉದ್ಯಾನಗಳು ಹಾಗೂ ಇತರೆ ಮೂಲ ಸೌಕರ್ಯ ಕಾಮಗಾರಿಗಳನ್ನು ಉದ್ಘಾಟನೆ ಮಾಡಲಾಯಿತು.

ಶಂಕುಸ್ಥಾಪನೆಗೊಂಡ ಯೋಜನೆಗಳು:
ಬಹುಗ್ರಾಮ ಕುಡಿಯುವ ನೀರು ಯೋಜನೆ: ಕೇಂದ್ರ ಸರ್ಕಾರದ ಯೋಜನೆ ಅಡಿಯಲ್ಲಿ 1,042 ಕೋಟಿ ರೂ.ವೆಚ್ಚದಲ್ಲಿ ಜಲಜೀವನ ಮಿಷನ್ ಬಹುಗ್ರಾಮ ಕುಡಿಯುವ ನೀರು  ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಾಯಿತು. 86 ಎಂಎಲ್‌ಡಿ ನೀರು ಸಂಸ್ಕರಣಾ ಘಟಕ ನಿರ್ಮಾಣ ಮಾಡುವುದು. ಮಲಪ್ರಭಾ ನದಿಯ ರೇಣುಕಾಸಾಗರ ಜಲಾಶಯದಿಂದ 2 ಲಕ್ಷ ಮನೆಗಳಿಗೆ ಶುದ್ಧೀಕರಿಸಿದ ಕುಡಿಯುವ ನೀರು ಸರಬರಾಜು. ಜಿಲ್ಲೆಯ 396 ಗ್ರಾಮೀಣ ವಸತಿ ಪ್ರದೇಶಗಳು ಹಾಗೂ ಒಂದು ಪಟ್ಟಣಕ್ಕೆ ಸುಸ್ಥಿರ ಹಾಗೂ ಶುದ್ಧ ಕುಡಿಯುವ ನೀರು ಪೂರೈಕೆ ಯೋಜನೆಗೆ ಶಂಕುಸ್ಥಾಪನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನೆರವೇರಿಸಿದರು.

ರಾಷ್ಟ್ರಮಟ್ಟದ ಕ್ರೀಡಾ ಸಂಕೀರ್ಣ: ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಯಡಿ 166 ಕೋಟಿ ರೂ.ವೆಚ್ಚದಲ್ಲಿ ಕ್ರೀಡಾ ಸಂಕೀರ್ಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಈ ಮೂಲಕ ಕ್ರೀಡಾಪಟುಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆಗೆ ಸಜ್ಜುಗೊಳಿಸಲು ಅನುಕೂಲ ಆಗಲಿದೆ. ಇನ್ನು ಕರ್ನಾಟಕದಿಂದ ಕ್ರೀಡಾಪಟುಗಳನ್ನು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆ ಅಣಿಗೊಳಿಸಲು ಬೆಂಗಳೂರು ಹಾಗೂ ಮೈಸೂರು ಸೇರಿದಂತೆ ಇತರೆ ನಗರಗಳೊಂದಿಗೆ ಹುಬ್ಬಳ್ಳಿ- ಧಾರವಾಡ ಅವಳಿ ನಗರ ಕೂಡ ಪೈಪೋಟಿ ನೀಡಲಿದೆ.

ಧಾರವಾಡದ ಪ್ರಯತ್ನದಲ್ಲೂ ವಿಫಲ, ಪ್ರಧಾನಿ ಮೋದಿಗೆ ಗಿಫ್ಟ್ ನೀಡಲು ಬಂದ ಯುವತಿಗೆ ಮತ್ತೆ ನಿರಾಸೆ!

ಜಯದೇವ ಹೃದ್ರೋಗಗಳ ಆಸ್ಪತ್ರೆ ಶಾಖೆ: ಹುಬ್ಬಳ್ಳಿಯ ರಾಯನಾಳ ಬಳಿ 11.36 ಎಕರೆ ಪ್ರದೇಶದಲ್ಲಿ 250 ಕೋಟಿ ರೂ.ವೆಚ್ಚದಲ್ಲಿ ಜಯದೇವ ಹೃದ್ರೋಗಗಳ ಆಸ್ಪತ್ರೆಯ ಪ್ರಾದೇಶಿಕ ಕೇಂದ್ರ ಸ್ಥಾಪನೆಗೆ ಶಂಕುಸ್ಥಾಪನೆ ಮಾಡಲಾಯಿತು. ಈ ಮೂಲಕ ಹೃದ್ರೋಗ ಚಿಕಿತ್ಸೆ ಬೆಂಗಳೂರು ಸೇರಿ ವಿವಿಧ ನಗರ ಪ್ರದೇಶಗಳಿಗೆ ಜನರು ಹೋಗುವುದನ್ನು ತಡೆಯುವುದು ಹಾಗೂ ಗೋಲ್ಡನ್‌ ಅವರ್‌ನಲ್ಲಿ ಚಿಕಿತ್ಸೆ ಲಭ್ಯವಾಗುವಂತೆ ಮಾಡಲು ಈ ಹೃದ್ರೋಗ ಆಸ್ಪತ್ರೆಯ ಶಾಖೆ ಅತ್ಯಂತ ಅನುಕೂಲರ ಆಗಲಿದೆ. ಉತ್ತರ ಕರ್ನಾಟಕದ ಬಹುತೇಕ ಜನರಿಗೆ ಜಯದೇವ ಹೃದ್ರೋಗ ಆಸ್ಪತ್ರೆಯ ಶಾಖೆ ಅತ್ಯಮೂಲ್ಯವಾಗಲಿದೆ. 

ತುಪ್ಪರಿಹಳ್ಳ ಪ್ರವಾಹ ನಿಯಂತ್ರಣ ಯೋಜನೆ: ಹುಬ್ಬಳ್ಳಿ ಧಾರವಾಡ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿಯನ್ನು ನಿರ್ಮಾಣ ಮಾಡುತ್ತಿದ್ದ ತುಪ್ಪರಿಹಳ್ಳ ಪ್ರವಾಹ ನಿಯಂತ್ರಣಕ್ಕೆ ಕಾಮಗಾರಿ ಮಾಡುವಂತೆ ಸ್ಥಳೀಯ ನಾಗರಿಕರಿಂದ ಬಹುದಿನಗಳ ಬೇಡಿಕೆ ಬಂದಿತ್ತು. ಇದಕ್ಕೆ ಮುಕ್ತಿ ಹಾಡುವ ನಿಟ್ಟಿನಲ್ಲಿ 150 ಕೋಟಿ ರೂ.ವೆಚ್ಚದಲ್ಲಿ ತುಪ್ಪರಿಹಳ್ಳ  ಪ್ರವಾಹ ಹಾನಿ ತಡೆಯಲು, ಆಯ್ದ ಭಾಗಗಳಲ್ಲಿ ತಡೆಗೋಡೆ ಹಾಗೂ ವಡ್ಡುಗಳನ್ನು ನಿರ್ಮಾಣಕ್ಕೆ ಚಾಲನೆ ಪ್ರಧಾನಿಯವರು ವೇದಿಕೆಯ ಮೂಲಕ ಅಧಿಕೃತವಾಗಿ ಚಾಲನೆ ನೀಡಿದರು.

click me!