Karnataka MLCs: ಮೇಲ್ಮನೆಯ 20 ಸದಸ್ಯರಿಂದ ಶಪಥಗ್ರಹಣ:‌ ಸೂರಜ್‌ ರೇವಣ್ಣ, ನಾಲ್ವರು ಗೈರು

By Kannadaprabha NewsFirst Published Jan 7, 2022, 5:15 AM IST
Highlights

*ಅಭಿಮಾನಿಗಳು, ಕಾರ್ಯಕರ್ತರ ಘೋಷಣೆ, ಸಂಭ್ರಮದ ಮಧ್ಯೆ ಕಾರ್ಯಕ್ರಮ
*ಭಗವಂತ, ತಂದೆ- ತಾಯಿ ಹೆಸರಲ್ಲಿ ಪ್ರಮಾಣ: ಸೂರಜ್‌ ರೇವಣ್ಣ, ನಾಲ್ವರು ಗೈರು
*ಲಖನ್‌ ಬೆನ್ನು ತಟ್ಟಿದ ಸಿದ್ದು, ಅಶ್ವತ್ಥ್‌ಥಗೆ ಕೈ ಮುಗಿದ ಡಿಕೆ ಶಿವಕುಮಾರ್
 

ಬೆಂಗಳೂರು: ಕುಟುಂಬ ಸದಸ್ಯರು, ಹಿರಿಯ ನಾಯಕರ ಸಮ್ಮುಖದಲ್ಲಿ ಅಭಿಮಾನಿಗಳು ಹಾಗೂ ಕಾರ್ಯಕರ್ತರ ಘೋಷಣೆ, ಸಂಭ್ರಮದ ನಡುವೆ ಇತ್ತೀಚೆಗೆ ನಡೆದ ವಿಧಾನ ಪರಿಷತ್‌ ಚುನಾವಣೆಯಲ್ಲಿ (MLC election) ಆಯ್ಕೆಯಾದ ನೂತನ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು. ಗುರುವಾರ ವಿಧಾನಸೌಧದ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಯ್ಕೆಯಾದ 25 ಸದಸ್ಯರ ಪೈಕಿ 20 ಜನರಿಗೆ ಪ್ರಮಾಣ ವಚನ ಬೋಧಿಸಲಾಯಿತು.

ವೇದಿಕೆ ಮೇಲಿದ್ದ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೂತನ ಸದಸ್ಯರನ್ನು ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಸಚಿವರಾದ ಆರಗ ಜ್ಞಾನೇಂದ್ರ, ಡಾ. ಸಿ.ಎನ್‌. ಅಶ್ವತ್ಥನಾರಾಯಣ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.ನೂತನ ಸದಸ್ಯರು ದೇವರು, ಭಗವಂತ, ತಂದೆ-ತಾಯಿ, ಮನೆ ದೇವರು, ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು ವಿಶೇಷವಾಗಿತ್ತು.

ಇದನ್ನೂ ಓದಿTerm End of 25 MLCs: ಅವಧಿ ಮುಗಿದ ಪರಿಷತ್ ಸದಸ್ಯರಿಗೆ ಬೀಳ್ಕೊಡುಗೆ!

ಪುನರಾಯ್ಕೆಗೊಂಡಿರುವ ಎಂ.ಕೆ. ಪ್ರಾಣೇಶ್‌, ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ, ಕಾಂಗ್ರೆಸ್‌ನ ಎಸ್‌.ರವಿ, ಪ್ರದೀಪ್‌ ಶೆಟ್ಟರ್‌ ಸೇರಿದಂತೆ ಬಿ.ಜಿ. ಪಾಟೀಲ್‌, ಚನ್ನರಾಜ ಹಟ್ಟಿಹೊಳಿ, ಲಖನ್‌ ಜಾರಕಿಹೊಳಿ, ಸಲೀಂ ಅಹಮದ್‌, ಶರಣಗೌಡ ಬಯ್ಯಾಪುರ, ವೈ.ಎಂ. ಸತೀಶ್‌, ಕೆ.ಎಸ್‌. ನವೀನ್‌, ಡಿ.ಎಸ್‌. ಅರುಣ್‌, ಮಂಜುನಾಥ್‌ ಭಂಡಾರಿ, ಎಚ್‌.ಎಸ್‌. ಗೋಪಿನಾಥ್‌, ಸುಜಾ ಕುಶಾಲಪ್ಪ, ಬಿ. ತಿಮ್ಮಯ್ಯ, ಮಂಜೇಗೌಡ, ದಿನೇಶ್‌ ಗೂಳಿಗೌಡ, ರಾಜೇಂದ್ರ ರಾಜಣ್ಣ ಅವರು ಮೇಲ್ಮನೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆದರೆ ಸೂರಜ್‌ ರೇವಣ್ಣ, ಭೀಮರಾವ್‌ ಬಸವರಾಜ ಪಾಟೀಲ್‌, ಸುನೀಲಗೌಡ ಪಾಟೀಲ್‌, ಪಿ.ಎಚ್‌. ಪೂಜಾರ ಹಾಗೂ ಅನಿಲಕುಮಾರ್‌ ಪ್ರಮಾಣ ವಚನ ಸ್ವೀಕಾರಕ್ಕೆ ಆಗಮಿಸಿರಲಿಲ್ಲ.

ಲಖನ್‌ ಬೆನ್ನು ತಟ್ಟಿದ ಸಿದ್ದು, ಅಶ್ವತ್ಥ್‌ಥಗೆ ಕೈ ಮುಗಿದ ಡಿಕೆಶಿ

ಪಕ್ಷೇತರ ಸದಸ್ಯರಾಗಿ ಆಯ್ಕೆಯಾದ ಲಖನ್‌ ಜಾರಕಿಹೊಳಿ ಅವರನ್ನು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಬೆನ್ನು ತಟ್ಟಿಶುಭಾಶಯ ಕೋರಿದ್ದು ವಿಶೇಷವಾಗಿತ್ತು. ಆದರೆ ಡಿ.ಕೆ. ಶಿವಕುಮಾರ್‌ ಹಾಗೂ ಸೋದರ ಸತೀಶ್‌ ಜಾರಕಿಹೊಳಿ ಅವರ ಜೊತೆ ಲಖನ್‌ರ ಯಾವುದೇ ಮಾತುಕತೆ ನಡೆಯಲಿಲ್ಲ. ರಾಮನಗರದಲ್ಲಿ ನಡೆದ ಸಂಸದರು-ಸಚಿವರ ವಾಗ್ವಾದ ಘಟನೆ ನಂತರ ಸಚಿವ ಡಾ. ಸಿ.ಎನ್‌.ಅಶ್ವತ್‌್ಥನಾರಾಯಣ ಹಾಗೂ ಡಿ.ಕೆ. ಶಿವಕುಮಾರ್‌ ಮುಖಾಮುಖಿಯಾದರು. ಸಚಿವ ಅಶ್ವತ್‌್ಥನಾರಾಯಣ ಅವರನ್ನು ನೋಡಿದ ಶಿವಕುಮಾರ್‌ ತಲೆಬಾಗಿ ಕೈ ಮುಗಿದ ರೀತಿ ವಿಭಿನ್ನವಾಗಿತ್ತು. ಕೊಡಗಿನ ಸುಜಾ ಕುಶಾಲಪ್ಪ ಕೊಡವ ಸಂಪ್ರದಾಯದ ಧಿರಿಸು ಧರಿಸಿದ್ದು ಗಮನ ಸೆಳೆಯಿತು.

ಇದನ್ನೂ ಓದಿTerm End of 25 MLCs: ಮೇಲ್ಮನೆಯ 25 ಸದಸ್ಯರು ನಿವೃತ್ತಿ, 20 ಹೊಸ ಎಂಟ್ರಿ: ಇಲ್ಲಿದೆ ಪಟ್ಟಿ!

ಫೋಟೋಕ್ಕೆ ನೂಕು ನುಗ್ಗಲು

ಪ್ರಮಾಣ ವಚನ ಸ್ವೀಕಾರ ಸಮಾರಂಭ ಮುಗಿಯುತ್ತಿದ್ದಂತೆ ನೂತನ ಸದಸ್ಯರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಭಾಪತಿ ಬಸವರಾಜ ಹೊರಟ್ಟಿಅವರ ಜೊತೆ ತಮ್ಮ ಕುಟುಂಬದ ಎಲ್ಲ ಸದಸ್ಯರೊಂದಿಗೆ ಗ್ರೂಪ್‌ ಫೋಟೋ ತೆಗೆಸಿಕೊಳ್ಳಲು ಮುಗಿಬಿದ್ದರು. ವೇದಿಕೆಯ ಮತ್ತೊಂದು ಕಡೆ ನೂತನ ಸದಸ್ಯರು ತಮ್ಮ ಬೆಂಬಲಿಗರು, ಅಭಿಮಾನಿಗಳ ಜೊತೆ ಫೋಟೊ ತೆಗೆಸಿಕೊಳ್ಳುವಲ್ಲಿ ಮಗ್ನರಾಗಿದ್ದರು. ವೇದಿಕೆ ಕೆಳಗೆ ಇಳಿದು ಬಂದ ಅನೇಕ ಸದಸ್ಯರಿಗೆ ಕಾರ್ಯಕರ್ತರು ಹೂ ಗುಚ್ಛ, ಶಾಲು ಹೊದಿಸಿ ಅಭಿನಂದಿಸುತ್ತಿದ್ದರು.

ಬ್ಯಾಂಕ್ವೆಟ್‌ ಹಾಲ್‌ ಭರ್ತಿ

ಸಮಾರಂಭಕ್ಕೆ ನೂತನ ಸದಸ್ಯರ ಕುಟುಂಬದ ಸದಸ್ಯರು, ಅಭಿಮಾನಿಗಳು, ಸ್ನೇಹಿತರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು, ಹೀಗಾಗಿ ಬ್ಯಾಂಕ್ವೆಟ್‌ ಸಭಾಂಗಣ ತುಂಬಿತ್ತು. ಪ್ರಮಾಣ ವಚನ ಸ್ವೀಕರಿಸಲು ಸದಸ್ಯರು ವೇದಿಕೆಗೆ ಆಗಮಿಸುತ್ತಿದ್ದಂತೆ ಬೆಂಬಲಿಗರು ಘೋಷಣೆ, ಜೈಕಾರ ಕೂಗಿ ಸಂಭ್ರಮಿಸಿದರು. ಕಾರ್ಯಕ್ರಮದ ನಂತರವೂ ಕೋವಿಡ್‌ ಭಯ ಇಲ್ಲದೆ ಗುಂಪು ಗುಂಪಾಗಿ ತಮ್ಮ ನಾಯಕರು, ಮುಖಂಡರ ಜೊತೆ ಫೋಟೊ ತೆಗೆಸಿಕೊಳ್ಳುತ್ತಿದ್ದರು. ಯಾವುದೇ ಕೋವಿಡ್‌ ನಿಯಮ ಪಾಲನೆಯಾಗಿದ್ದು ಕಂಡು ಬರಲಿಲ್ಲ.

click me!