Mekedatu Padayatreಗೆ ಬನ್ನಿ: ವಚನಾನಂದ ಶ್ರೀಗೆ ಡಿಕೆಶಿ ಆಹ್ವಾನ!

Published : Jan 07, 2022, 04:32 AM IST
Mekedatu Padayatreಗೆ ಬನ್ನಿ: ವಚನಾನಂದ ಶ್ರೀಗೆ ಡಿಕೆಶಿ ಆಹ್ವಾನ!

ಸಾರಾಂಶ

*ಕಾಂಗ್ರೆಸ್‌ ನಡಿಗೆಗೆ ಶುಭ ಹಾರೈಸಿದ ಪಂಚಮಸಾಲಿ ಶ್ರೀ *ನೀರಿನ ಸದ್ಬಳಕೆಯಿಂದ 400 ಮೆಗಾವ್ಯಾಟ್‌ವಿದ್ಯುತ್‌  *ಪಂಜಾಬ್‌ ಘಟನೆ ಒಕ್ಕೂಟ ವ್ಯವಸ್ಥೆಗೆ ಧಕ್ಕೆ:  ಶ್ರೀ

ಬೆಂಗಳೂರು (ಜ. 7): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ (DK Shivakumar) ಅವರು ಗುರುವಾರ ಬೆಂಗಳೂರಿನ ಶ್ವಾಸಯೋಗ ಪೀಠಕ್ಕೆ ಭೇಟಿ ನೀಡಿ ಶ್ವಾಸಗುರು ಹಾಗೂ ಹರಿಹರ ಪಂಚಮಸಾಲಿ ಪೀಠಾಧ್ಯಕ್ಷರಾದ ವಚನಾನಂದ ಸ್ವಾಮೀಜಿ (Vachananand Swamiji) ಅವರಿಗೆ ಮೇಕೆದಾಟು ಪಾದಯಾತ್ರೆಯಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಿದ್ದಾರೆ.ಜ.9ರಿಂದ ಜ.19ರವರೆಗೆ ಮೇಕೆದಾಟುವಿನಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಯಲಿದೆ. ‘ನಮ್ಮ ನೀರು-ನಮ್ಮ ಹಕ್ಕು’ ಘೋಷಣೆಯಡಿ ನಡೆಯುತ್ತಿರುವ ಪಾದಯಾತ್ರೆಯಲ್ಲಿ ಭಾಗವಹಿಸುವಂತೆ ವಚನಾನಂದ ಸ್ವಾಮೀಜಿಗೆ ಆಹ್ವಾನ ನೀಡಿ ಯೋಜನೆಯ ಅನಿವಾರ್ಯತೆಯನ್ನು ವಿವರಿಸಿದರು.

ಕಾವೇರಿ ನದಿ ಪಾತ್ರದಲ್ಲಿ ಹರಿಯುವ ನೀರು ಅನುಪಯುಕ್ತವಾಗಿ ಸಮುದ್ರ ಸೇರುತ್ತಿದೆ. ಸುಮಾರು 66 ಟಿಎಂಸಿ ನೀರಿನ ಸದ್ಬಳಕೆಯಿಂದ 400 ಮೆಗಾವ್ಯಾಟ್‌ನಷ್ಟುವಿದ್ಯುತ್‌ ಉತ್ಪಾದನೆ ಮಾಡಬಹುದು. ಜತೆಗೆ ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಬವಣೆಯನ್ನು ತಪ್ಪಿಸಬಹುದಾಗಿದೆ ಎಂದು ಡಿ.ಕೆ.ಶಿವಕುಮಾರ್‌ ಮಾಹಿತಿ ನೀಡಿದರು. ಈ ವೇಳೆ ವಚನಾನಂದ ಸ್ವಾಮೀಜಿಗಳು ಡಿ.ಕೆ. ಶಿವಕುಮಾರ್‌ ಹಾಗೂ ಕಾಂಗ್ರೆಸ್‌ ಹಮ್ಮಿಕೊಂಡಿರುವ ಮೇಕೆದಾಟು ಪಾದಯಾತ್ರೆಗೆ ಶುಭ ಹಾರೈಸಿದರು.

ಪಂಜಾಬ್‌ ಘಟನೆಯಿಂದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ: ವಚನಾನಂದ ಶ್ರೀ

ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್‌ಗೆ ಭೇಟಿ ನೀಡಿದ ವೇಳೆ ನಡೆದ ಘಟನೆ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವಂತಹದ್ದಾಗಿದೆ. ಈ ಬೆಳವಣಿಗೆ ನಿಜಕ್ಕೂ ಅಪಾಯಕಾರಿ ಎಂದು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ. 

ಇದನ್ನೂ ಓದಿ: PM Modi Security Breach: ಪ್ರಧಾನ ಮಂತ್ರಿ ಘನತೆ ಕಾಪಾಡುವುದು ಪ್ರತಿ ಸರ್ಕಾರದ ಕರ್ತವ್ಯ: ಪಟ್ನಾಯಕ್‌

ನಮ್ಮದು ಒಕ್ಕೂಟ ವ್ಯವಸ್ಥೆ. ರಾಜ್ಯಗಳ ಅಭಿವೃದ್ಧಿಗೆ ಕೇಂದ್ರ ಹಾಗೂ ಕೇಂದ್ರದ ಸುಗಮ ಆಡಳಿತಕ್ಕೆ ರಾಜ್ಯ ಸರ್ಕಾರಗಳು ಸಹಕಾರ ನೀಡಬೇಕು. ಇಂತಹ ಒಕ್ಕೂಟ ವ್ಯವಸ್ಥೆಯ ಮುಖ್ಯಸ್ಥರು ಈ ದೇಶದ ಪ್ರಧಾನಿಗಳಾಗಿರುತ್ತಾರೆ. ಹೀಗಿರುವಾಗ ಮೊನ್ನೆ ಪಂಜಾಬ್‌ನಲ್ಲಿ ನಡೆದ ಘಟನೆ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವಂತಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಆರೋಗ್ಯವಾಗಿರಲಿ, ದೇಶಕ್ಕೆ ಇನ್ನಷ್ಟುಉತ್ತಮ ಆಡಳಿತ ನೀಡಲಿ ಎಂದು ಶ್ರೀಗಳು ಹಾರೈಸಿದ್ದಾರೆ.

ಮೇಕೆದಾಟು ಹೋರಾಟ ಏಕೆ ಬೇಕಿತ್ತು?

ನಮ್ಮದು ರಾಜಕೀಯ ಪಕ್ಷ. ಹೋರಾಟದಿಂದಲೇ ರಾಜಕೀಯ ಪಕ್ಷಗಳು ನಡೆಯುವುದು. ಹೀಗಾಗಿ ಜನರ ಹಿತ ಕಾಯುವ ಹೋರಾಟಗಳನ್ನು ನಡೆಸಲೇಬೇಕಾಗುತ್ತದೆ. ದೆಹಲಿಯಲ್ಲಿ ರೈತರ ಹೋರಾಟ ಹೇಗಿತ್ತು? 700 ಮಂದಿ ರೈತರು ಪ್ರಾಣ ಬಿಟ್ಟರು. ಹಾಗಂತ ರೈತರು ಹೆದರಿಕೊಂಡರಾ? ಹೋರಾಟ ಮುಂದುವರೆಸಲಿಲ್ಲವಾ? ರೈತರ ಹೋರಾಟವನ್ನು ಇದೇ ಮುಖ್ಯಮಂತ್ರಿ ಕಾಂಗ್ರೆಸ್‌ ಕೃಪಾಪೋಷಿತ ಹೋರಾಟ ಎಂದು ಬಿಂಬಿಸಿದರು. ಆದರೂ ರೈತರ ಹೋರಾಟ ನಡೆದು ಗಮ್ಯ ಮುಟ್ಟಲಿಲ್ಲವೇ? 

ಇದನ್ನೂ ಓದಿMekedatu Padayatra ಮೇಕೆದಾಟು ಪಾದಯಾತ್ರೆ, ಸಿದ್ದು-ಡಿಕೆಶಿ ಜಂಟಿ ಸುದ್ದಿಗೋಷ್ಠಿಯ ಮುಖ್ಯಾಂಶಗಳು

ಇದು ಕಾಂಗ್ರೆಸ್‌ ಪಕ್ಷದ ಬದ್ಧತೆಯ ವಿಷಯ. ಬೆಂಗಳೂರು ಹಾಗೂ ಕಾವೇರಿ ಜಲಾನಯನ ಪ್ರದೇಶದ ಜನರ ಜೀವನದ ವಿಚಾರವಿದು. ಈ ಮಹತ್ವದ ಯೋಜನೆ ಜಾರಿಗೊಳಿಸುವ ಭರವಸೆಯನ್ನು ಕಾಂಗ್ರೆಸ್‌ ಪಕ್ಷ 2013 ಹಾಗೂ 2018ರ ತನ್ನ ಪ್ರಣಾಳಿಕೆಯಲ್ಲಿ ನೀಡಿತ್ತು. ಅದರಂತೆ ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ಯೋಜನೆಯ ಡಿಪಿಆರ್‌ ರೂಪಿಸಿದ್ದೆವು. ಇದಕ್ಕೆ ಕೇಂದ್ರ ಸರ್ಕಾರ ಕೂಡ ತಾತ್ವಿಕ ಒಪ್ಪಿಗೆ ನೀಡಿತ್ತು. ಈಗ ಯೋಜನೆಗೆ ಪರಿಸರ ಇಲಾಖೆಯ ಒಪ್ಪಿಗೆ ಮಾತ್ರ ಪಡೆಯಬೇಕಿದೆ. ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅರ್ಥಾತ್‌ ಡಬಲ್‌ ಎಂಜಿನ್‌ ಸರ್ಕಾರವಿದೆ. ಇವರು ಜಾರಿ ಮಾಡಬೇಕಿತ್ತು. ಆದರೆ, ಹಿಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯೋಜನೆ ಜಾರಿಗೆ ಯಾವುದೇ ಆಸಕ್ತಿ ತೋರಲಿಲ್ಲ. ಹೀಗಾಗಿ ಸರ್ಕಾರವನ್ನು ಎಚ್ಚರಿಸಲು ಈ ಹೋರಾಟ ಎಂದು ಡಿಕೆ ಶಿವಕುಮಾರ್‌ ಹೇಳಿದ್ದಾರೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್