PM Modi In Mangaluru: ಕರಾವಳಿಯಲ್ಲಿ ಪ್ರಧಾನಿ ಮೋದಿಗೆ 2 ಲಕ್ಷ ಜನರ ಸ್ವಾಗತ

By Govindaraj SFirst Published Sep 3, 2022, 4:30 AM IST
Highlights

3,800 ಕೋಟಿಯ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲು ಮಂಗಳೂರಿಗೆ ಆಗಮಿಸಿದ ಮೋದಿ ಅವ​ರಿ​ಗೆ ​ಕ​ರಾ​ವಳಿಯಲ್ಲಿ ಅಭೂತಪೂರ್ವ ಸ್ವಾಗತ ಸಿಕ್ಕಿತು. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಂದ 2 ಲಕ್ಷಕ್ಕೂ ಹೆಚ್ಚು ಮಂದಿ ಮೋದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಭಿಮಾನ ಮೆರೆದರು.

ಮಂಗ​ಳೂ​ರು (ಸೆ.03): 3,800 ಕೋಟಿಯ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲು ಮಂಗಳೂರಿಗೆ ಆಗಮಿಸಿದ ಮೋದಿ ಅವ​ರಿ​ಗೆ ​ಕ​ರಾ​ವಳಿಯಲ್ಲಿ ಅಭೂತಪೂರ್ವ ಸ್ವಾಗತ ಸಿಕ್ಕಿತು. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಂದ 2 ಲಕ್ಷಕ್ಕೂ ಹೆಚ್ಚು ಮಂದಿ ಮೋದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಭಿಮಾನ ಮೆರೆದರು. ಮಂಗಳೂರು ಹೊರವಲಯದ ಬಂಗ್ರ ಕೂಳೂರಿನ ಗೋಲ್ಡ್‌ ಫಿಂಚ್‌ ಮೈದಾನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಂಗಳೂರು ವಿಮಾನ ನಿಲ್ದಾಣದಿಂದ ಕಾಪ್ಟರ್‌ ಮೂಲಕ ಎನ್‌​ಎಂಪಿ​ಎಯಲ್ಲಿ ಬಂದಿಳಿದ ಮೋದಿ ಅವರು ನಂತರ ರಸ್ತೆ ಮಾರ್ಗದ ಮೂಲಕ ಆಗಮಿಸಿದರು. 

ಈ ವೇಳೆ ದಾರಿಯುದ್ದಕ್ಕೂ ರಸ್ತೆ ಇಕ್ಕೆ​ಲ​ಗ​ಳಲ್ಲಿ ಒಂದೂವರೆ ಕಿ.ಮೀ.ವರೆಗೆ ಭಾರೀ ಸಂಖ್ಯೆಯಲ್ಲಿ ಶಿಸ್ತುಬದ್ಧವಾಗಿ ಸೇರಿದ್ದ ಜನ ಮೋದಿ ಅವರಿಗೆ ಅದ್ಧೂರಿ ಸ್ವಾಗತ ನೀಡಿದ್ದಾರೆ. ಕಾರ್ಯಕ್ರಮ ಮುಗಿಸಿ ಸಂಜೆ ರಸ್ತೆ ಮೂಲಕ ವಿಮಾನ ನಿಲ್ದಾ​ಣಕ್ಕೆ ಹೋಗುವಾಗಲೂ ದಾರಿ​ಯು​ದ್ದಕ್ಕೂ ಜನ​ ಕಿಕ್ಕಿರಿದು ನಿಂತು ಮೋದಿಗೆ ಜೈಕಾರ ಹಾಕಿದರು. ರಸ್ತೆ ಬದಿಗಳಲ್ಲಿ ನಿಂತು ಸ್ವಾಗತ ಕೋರಿದ ಜನರಿಗೆ ಮೋದಿ ಕೂಡ ಖುಷಿಯಿಂದ ಕೈಬೀಸಿದರು.

ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ,  ಪ್ರಧಾನಿ ಭೇಟಿಗೆ ಅವಕಾಶ ಕೋರಿದ ಮುಸ್ಲಿಂ ವೇದಿಕೆ

ಟ್ರಾಫಿಕ್‌ ಜಾಮ್‌: ಮೋದಿ ಸಮಾ​ವೇ​ಶಕ್ಕೆ ಶುಕ್ರ​ವಾರ ಬೆಳ​ಗ್ಗಿ​ನಿಂದಲೇ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಮೂಲೆ ಮೂಲೆ​ಗ​ಳಿಂದ ಜನ​ಸಾ​ಗರ ಹರಿದು​ಬಂದ ಹಿನ್ನೆಲೆಯಲ್ಲಿ ಉಡುಪಿ-ಮಂಗಳೂರು ರಾಷ್ಟ್ರೀಯ ಹೆದ್ದಾ​ರಿ​ಯು​ದ್ದಕ್ಕೂ ಸಂಜೆ​ವ​ರೆಗೂ ಟ್ರಾಫಿಕ್‌ ಜಾಂ ಉಂಟಾ​ಗಿ​ತ್ತು. ಕಾರ್ಯ​ಕ್ರಮ 1.30ಕ್ಕೆ ನಿಗ​ದಿ​ಯಾ​ಗಿ​ದ್ದರೂ ಕಾರ್ಯ​ಕ​ರ್ತರು ಬೆಳಗ್ಗೆ 9 ಗಂಟೆ​ಯಿಂದಲೇ ಆಗ​ಮಿ​ಸ​ತೊ​ಡ​ಗಿ​ದ್ದರು. ಕಾರ್ಯ​ಕ್ರಮ ಮುಗಿದ ಬಳಿ​ಕವೂ ರಸ್ತೆ ಖಾಲಿ​ಯಾ​ಗಲು ಎರಡ್ಮೂರು ತಾಸೇ ಹಿಡಿ​ಯಿ​ತು. ಕೆಎಸ್‌ಆರ್‌ಟಿಸಿ ಬಸ್ಸು​ಗಳಲ್ಲದೆ, ಖಾಸಗಿ ಬಸ್ಸುಗಳು, ಟ್ಯಾಕ್ಸಿಗಳು ಮತ್ತು ಮಿನಿಬಸ್‌ಗಳು ಮೋದಿ ಸಮಾ​ವೇ​ಶ​ಕ್ಕೆ ನಿಯೋ​ಜ​ನೆ​ಯಾ​ಗಿ​ದ್ದ​ರಿಂದ ಸಾರ್ವಜನಿಕ ಸಾರಿಗೆಯ ಕೊರತೆಯಿಂದಾಗಿ ಸಾಮಾನ್ಯ ಪ್ರಯಾಣಿಕರು ಪ್ರಯಾ​ಣಿ​ಸಲು ಸಾಧ್ಯ​ವಾ​ಗದೆ ತೀವ್ರ ಬವ​ಣೆ​ಪ​ಟ್ಟರು.

ಮೂರ್ನಾಲ್ಕು ಕಿ.ಮೀ. ನಡೆ​ದೇ ಬಂದ ಕಾರ್ಯ​ಕ​ರ್ತ​ರು!: ಸಮಾ​ವೇ​ಶದ ಹಿನ್ನೆ​ಲೆ​ಯ​ಲ್ಲಿ 15 ವಿವಿಧ ಕಡೆ​ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿ​ಸ​ಲಾ​ಗಿತ್ತು. ಕೆಲ ಪಾರ್ಕಿಂಗ್‌ ಸ್ಥಳ​ಗಳು ಸಮಾ​ವೇ​ಶದ ಜಾಗ​ದಿಂದ 3-4 ಕಿ.ಮೀ. ದೂರ​ವಿ​ತ್ತು. ಆದರೂ ಉತ್ಸಾಹಗುಂದದ ಕಾರ್ಯ​ಕ​ರ್ತರು ಸುಡು ಬಿಸಿಲನ್ನೂ ಲೆಕ್ಕಿ​ಸದೆ ಪ್ರವಾ​ಹೋ​ಪಾ​ದಿ​ಯಲ್ಲಿ ಬಿಜೆಪಿ ಬಾವುಟ, ಕೇಸರು ಶಾಲು ಹಾಕಿ, ಮೋದಿಗೆ ಜೈಕಾರ ಕೂಗುತ್ತ ಜೋಷ್‌​ನಲ್ಲಿ ಕಾರ್ಯ​ಕ್ರಮಕ್ಕೆ ಆಗ​ಮಿ​ಸಿ​ದರು. ಸಣ್ಣ ಮಕ್ಕಳು, ಹಿರಿಯ ನಾಗ​ರಿ​ಕ​ರೆ​ನ್ನದೆ ಕಾಲ್ನ​ಡಿ​ಗೆ​ಯಲ್ಲೇ ಸಮಾ​ವೇ​ಶ​ದತ್ತ ಹೆಜ್ಜೆ ಹಾಕಿದ್ದು ವಿಶೇ​ಷ​ವಾ​ಗಿತ್ತು. ಹೆದ್ದಾ​ರಿಯ ಒಂದು ಬದಿ​ಯಲ್ಲಿ ಕಾರ್ಯ​ಕ​ರ್ತರು, ಫಲಾ​ನು​ಭ​ವಿ​ಗಳ ವಾಹ​ನ​ಗಳು ಸಾಗು​ತ್ತಿ​ದ್ದರೆ, ಇನ್ನೊಂದು ಬದಿ​ಯಲ್ಲಿ ಕಾಲ್ನ​ಡಿ​ಗೆ​ಯಲ್ಲೇ ಜನಸಾಗರವೇ ಹರಿದುಬರುತ್ತಿತ್ತು.

ಕರಾವಳಿ ಬಿಜೆಪಿಗೆ ಹೊಸ ಚೈತನ್ಯ: ಆಂತರಿಕ ಬೇಗುದಿ, ನಾಯಕರ ನಡವಳಿಕೆಯಿಂದ ಬೇಸತ್ತು ಹೋಗಿದ್ದ ಕರಾವಳಿ ಬಿಜೆಪಿಗೆ ಮೋದಿ ಕಾರ್ಯಕ್ರಮ ಅಕ್ಷರಶಃ ಹೊಸ ಚೈತನ್ಯ ನೀಡಿದೆ. ಕಾರ್ಯಕರ್ತರಲ್ಲಿನ ಅಸಮಾಧಾನ ತೊಡೆದು ಹಾಕುವ ಸಲುವಾಗಿಯೇ ದಿಢೀರ್‌ ಆಗಿ ಮಂಗಳೂರಿನಲ್ಲಿ ಇಂಥ ಸಮಾವೇಶ ಏರ್ಪಡಿಸುವ ನಿರ್ಧಾರಕ್ಕೆ ರಾಜ್ಯ ನಾಯಕರು ಬಂದಿದ್ದರು. ಪ್ರವೀಣ್‌ ನೆಟ್ಟಾರು ಹತ್ಯೆ ಬಳಿಕ ಕರಾವಳಿಯಲ್ಲಿ ಪಕ್ಷದ ನಾಯಕರ ವಿರುದ್ಧ ಕಾರ್ಯಕರ್ತರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು.

PM Modi In Mangaluru: ಪ್ರಧಾನಿ ಮೋದಿ ಸಮಾವೇಶದ ವೇಳೆ ಗೊಂದಲ ಸೃಷ್ಟಿಸುವ ಪ್ರಯತ್ನ, 2 ಕೇಸ್‌ ದಾಖಲು!

ಇಂಥ ಪರಿಸ್ಥಿತಿಯಲ್ಲಿ ಮುಂಬರುವ ಚುನಾವಣೆ ದೃಷ್ಟಿಯಿಂದ ಕರಾವಳಿಯಲ್ಲಿ ಬಿಜೆಪಿ ಹಾಗೂ ಹಿಂದುತ್ವದ ಶಕ್ತಿ ಪ್ರದರ್ಶನ ಅನಿವಾರ್ಯವಾಗಿತ್ತು. ಅದನ್ನು ಸಾಕಾರಗೊಳಿಸುವಲ್ಲಿ ಈ ಸಮಾವೇಶ ಯಶಸ್ವಿಯಾಗಿದೆ ಎಂಬುದು ಪಕ್ಷ ನಾಯಕರ ಅಭಿಪ್ರಾಯ. ಸರ್ಕಾರಿ ಪ್ರಯೋಜಿತ ಸಮಾವೇಶವಾದರೂ ಸಭಾಂಗಣ ಪೂರ್ತಿ ಹಾಗೂ ಹೊರಗೆ ಬಿಜೆಪಿ ಕಾರ್ಯಕರ್ತರಿಂದ ತುಂಬಿ ತುಳುಕಿತ್ತು. ತಲೆಗೆ ಕೇಸರಿ ರುಮಾಲು, ಕೈಯಲ್ಲಿ ಪಕ್ಷದ ಬಾವುಟ ಬೀಸುತ್ತಾ ಮೋದಿ, ಮೋದಿ ಎಂದು ಆಗಾಗ ಕಾರ್ಯಕರ್ತರು ಘೋಷಣೆ ಕೂಗುತ್ತಿದ್ದುದು ಬಿಜೆಪಿ ಮತ್ತೆ ಕರಾವಳಿಯಲ್ಲಿ ಮೋದಿ ಹವಾ ಇರುವುದನ್ನು ಮತ್ತೆ ಸಾಬೀತುಪಡಿಸಿತು.

click me!