ನೋಬಲ್ ಶಾಲೆ ಪರೀಕ್ಷಾ ಕೇಂದ್ರದಲ್ಲಿ ನಡೆದಿರುವ ಬ್ಲೂಟೂತ್ ಬಳಸಿ ಪಿಸ್‌ಐ ನೇಮಕಾತಿ ಪರೀಕ್ಷೆಯಲ್ಲಿನ ಹಗರಣದ ವಿಚಾರಣೆ ನಡೆಸುತ್ತಿರುವ ಸಿಐಡಿ ತಂಡ ಗುರುವಾರ 1ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಸಲ್ಲಿಸಿರುವ 2,060 ಪುಟಗಳ ಮಧ್ಯಂತರ ಆರೋಪ ಪಟ್ಟಿಯಲ್ಲಿ ಇಂತಹ ಹಲವು ಸ್ವಾರಸ್ಯಕರ ವಿಷಯಗಳು ದಾಖಲಾಗಿವೆ.
ಶೇಷಮೂರ್ತಿ ಅವಧಾನಿ
ಕಲಬುರಗಿ (ಸೆ.03): ಪರೀಕ್ಷೆ ಯಾವುದೇ ಇರಲಿ ಅಭ್ಯರ್ಥಿಗಳು ಪರೀಕ್ಷೆ ಮುನ್ನಾ ದಿನ ಓದಿ ಪೂರ್ವ ತಯಾರಿ ಮಾಡುವುದು ಸರ್ವೇಸಾಮಾನ್ಯ. ಆದರೆ ಪೊಲೀಸ್ ಇಲಾಖೆ 2021ರ ಅ.3ರಂದು ನಡೆಸಿದ್ದ ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳಾಗಿದ್ದ ಕಾನ್‌ಸ್ಟೇಬಲ್ ಇಸ್ಮಾಯಿಲ್ ಖಾದರ್, ಮಾಜಿ ಸೈನಿಕ ವಿಶ್ವನಾಥ ಮಾನೆ ಅ.2ರಂದು ಮಧ್ಯಾಹ್ನದ ಹೊತ್ತಿಗೆ ಬ್ಲೂಟೂತ್ ತಮ್ಮ ಕೈ ಸೇರಿದ್ದೇ ತಡ ‘ಪಿಎಸ್‌ಐ ಆಗೇಬಿಟ್ವಿ’ ಎಂದು ತಮ್ಮ ಗೆಳೆಯರೊಂದಿಗೆ ಕೂಡಿಕೊಂಡು ಪರೀಕ್ಷೆ ಮುನ್ನಾದಿನವೇ ಗುಂಡುಪಾರ್ಟಿ ನಡೆಸಿ, ಹಾಡು ಕುಣಿತದಲ್ಲೇ ಕಾಲ ಕಳೆದರು ಎಂಬ ಸಂಗತಿ ಸಿಐಡಿ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಇಲ್ಲಿನ ನೋಬಲ್ ಶಾಲೆ ಪರೀಕ್ಷಾ ಕೇಂದ್ರದಲ್ಲಿ ನಡೆದಿರುವ ಬ್ಲೂಟೂತ್ ಬಳಸಿ ಪಿಸ್‌ಐ ನೇಮಕಾತಿ ಪರೀಕ್ಷೆಯಲ್ಲಿನ ಹಗರಣದ ವಿಚಾರಣೆ ನಡೆಸುತ್ತಿರುವ ಸಿಐಡಿ ತಂಡ ಗುರುವಾರ 1ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಸಲ್ಲಿಸಿರುವ 2,060 ಪುಟಗಳ ಮಧ್ಯಂತರ ಆರೋಪ ಪಟ್ಟಿಯಲ್ಲಿ ಇಂತಹ ಹಲವು ಸ್ವಾರಸ್ಯಕರ ವಿಷಯಗಳು ದಾಖಲಾಗಿವೆ.
PSI Recruitment Scam: ಸಿಐಡಿಯಿಂದ ಕೋರ್ಟ್‌ಗೆ 3ನೇ ಆರೋಪ ಪಟ್ಟಿ ಸಲ್ಲಿಕೆ
ಬ್ಲೂಟೂತೇ ಮಂತ್ರದಂಡ: ಜೈಲಲ್ಲಿರುವ ಅಫಜಲ್ಪುರ ತಾಲೂಕಿನ ಕಾನ್‌ಸ್ಟೇಬಲ್ ಇಸ್ಮಾಯಿಲ್ ಖಾದರ್, ಸೈನಿಕನಾಗಿ ಲೇಹ್-ಲಡಾಕ್ ಗಡಿಯಲ್ಲಿ 10 ವರ್ಷ ಸೇವೆ ಸಲ್ಲಿಸಿ ನಿವೃತ್ತನಾಗಿರುವ ವಿಶ್ವನಾಥ ಮಾನೆ, ಇವರಿಬ್ಬರಿಗೆ ಬ್ಲೂಟೂತ್ ಉಪಕರಣ ಮತ್ತು ಸರಿ ಉತ್ತರ ಪೂರೈಸಿದ್ದ ಅಸ್ಲಂಭಾಷಾ, ಮುನಾಫ್ ಇವರೆಲ್ಲರೂ ಅ.2ರಂದು ಕಲಬುರಗಿಯಲ್ಲಿ ಸೇರಿ ವಿದೇಶಿ ಮದ್ಯ ತಂದು ಪಾರ್ಟಿ ಮಾಡುತ್ತಾರೆ. ನಂತರ ತಾವು ಅ.3ರಂದು ನಗರದ ಬಸ್ ನಿಲ್ದಾಣ ರಸ್ತೆಯಲ್ಲಿರುವ ಲಾಡ್ಜ್‌ಗೆ ಹೋಗಿ ತಂಗುತ್ತಾರೆ.
2021ರ ಅ.1ರಂದೇ ಧಾರವಾಡದಿಂದ ಹೊರಡುವ ಇಸ್ಮಾಯಿಲ್ ಖಾದರ್ ಇಂಡಿ ಮೂಲಕ ತನ್ನೂರು ಕರಜಗಿಗೆ ಬಂದು ಅಲ್ಲಿಂದ ಕಲಬುರಗಿ ತಲುಪುತ್ತಾನೆ. ಬಳಿಕ ಲಾಲಗೇರಿ ಕ್ರಾಸ್‌ನಲ್ಲಿರುವ ಮಳಿಗೆಯೊಂದರಿಂದ 2 ಸಿಮ್ ಖರೀದಿಸುತ್ತಾನೆ. ಅ.2ರಂದು ಈತನ ಕೈಗೆ ಬ್ಲೂಟೂತ್ ಡಿವೈಸ್ ಬಂದು ಸೇರುತ್ತದೆ. ಈಗ ಈತನ ಜೊತೆಗೇ ಮಾಜಿ ಸೈನಿಕ ವಿಶ್ವನಾಥ ಮಾನೆ ಕೂಡಿಕೊಳ್ಳುತ್ತಾನೆ.
PSI Scam: ಒಂದುವರೆ ತಿಂಗ್ಳಿಂದ ಸಿಐಡಿಯನ್ನೇ ಆಟ ಆಡಿಸಿ ಬಲೆಗೆ ಬಿದ್ದ ಫಸ್ಟ್ ರ‍್ಯಾಂಕ್ ರಚನಾ!
ಬೆಳಗ್ಗೆ 3 ಗಂಟೆಗೆ ಎದ್ದರು!: 2021ರ ಅ.3ರಂದು ಪಿಎಸ್‌ಐ ನೇಮಕಾತಿ ಪರೀಕ್ಷೆ. ಮುನ್ನಾ ದಿನವೇ ಗುಂಡುಪಾರ್ಟಿ ಮಾಡಿದ್ದರೂ ಉತ್ಸಾಹದಲ್ಲಿದ್ದ ಇಸ್ಮಾಯಿಲ್ ಮತ್ತವನ ತಂಡ ಅ.3ರಂದು ಬೆಳಗಿನ ಜಾವ 3 ಗಂಟೆಗೆ ಎದ್ದೇಳುತ್ತದೆ. ಪೊಲೀಸರು, ಭದ್ರತಾ ಸಿಬ್ಬಂದಿ ಪರೀಕ್ಷಾ ಕೇಂದ್ರದೊಳಗೆ ಕಾಲಿಡುವ ಮುನ್ನವೇ ಇವರು ಉಪಾಯವಾಗಿ ಕೇಂದ್ರ ಹೊಕ್ಕು ಅಲ್ಲಿರುವ ಟಾಯ್ಲೆಟ್ ಕೋಣೆಯಲ್ಲಿ ಬ್ಲೂಟೂತ್ ಬಚ್ಚಿಡುವಲ್ಲಿ ಯಶಸ್ವಿಯಾಗುತ್ತಾರೆ. ಅದೇ ದಿನ ಎಂದನಂತೆ ಎಲ್ಲರ ಜೊತೆಗೇ ಪರೀಕ್ಷೆ ಕೇಂದ್ರ ಪ್ರವೇಶಿಸಿ ಬ್ಲೂಟೂತ್ ಟಾಯ್ಲೆಟ್ ಕೋಣೆಯಿಂದ ಪಡೆದುಕೊಂಡು ಸರಿ ಉತ್ತರಗಳನ್ನು ಬರೆಯುವಲ್ಲಿ ವಿಶ್ವನಾಥ ಮಾನೆ ಹಾಗೂ ಇಸ್ಮಾಯಿಲ್ ಖಾದರ್ ಅದು ಹೇಗೆ ಯಶಸ್ವಿಯಾಗುತ್ತಾರೆಂಬ ವಿಚಾರ ಸಿಐಡಿ ತನ್ನ ಚಾಜ್‌ರ್‍ಶೀಟ್‌ನಲ್ಲಿ ಎಳೆಎಳೆಯಾಗಿ ದಾಖಲಿಸಿದೆ.