New year : ಹೊಸ ವರ್ಷದ ಸಂಭ್ರಮಾಚರಣೆಗೆ 2 ಬಲಿ

By Kannadaprabha NewsFirst Published Jan 2, 2023, 8:10 AM IST
Highlights

ಸ್ನೇಹಿತರಿಗೆ ಹೊಸ ವರ್ಷ ಶುಭಾಶಯ ಹೇಳಲು ಬರುವಾಗ ಮಿನಿ ಲಾರಿ ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ಮೃತಪಟ್ಟು, ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ಚಿಕ್ಕಪೇಟೆ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರು (ಜ.2) : ಸ್ನೇಹಿತರಿಗೆ ಹೊಸ ವರ್ಷ ಶುಭಾಶಯ ಹೇಳಲು ಬರುವಾಗ ಮಿನಿ ಲಾರಿ ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ಮೃತಪಟ್ಟು, ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ಚಿಕ್ಕಪೇಟೆ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಪಿಇಎಸ್‌ ಕಾಲೇಜಿ(PES collage )ನ ನಿರ್ಮಾಣ ಹಂತದ ಕಟ್ಟಡದ ನಿವಾಸಿ ದೇವರಾಜು(21) ಮೃತ ಸವಾರ. ಹಿಂಬದಿ ಸವಾರ ದೇವೇಂದ್ರಪ್ಪ(19) ಎರಡು ಕಾಲುಗಳಿಗೆ ಗಂಭೀರ ಗಾಯವಾಗಿದ್ದು ಚಿಕಿತ್ಸೆ ಮುಂದುವರೆದಿದೆ. ಭಾನುವಾರ ನಸುಕಿನ 5.15ರ ಸುಮಾರಿಗೆ ಗುಡ್ಡದಹಳ್ಳಿ ಕಡೆಯಿಂದ ಕೆ.ಆರ್‌.ಮಾರ್ಕೆಟ್‌ಗೆ ತೆರಳುವಾಗ ಮಾರ್ಗ ಮಧ್ಯೆ ಗೋಪಾಲನ್‌ ಮಾಲ್‌ ಸಮೀಪದ ಬಸ್‌ ನಿಲ್ದಾಣದ ಬಳಿ ಈ ದುರ್ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಾದಗಿರಿ(Yadgir) ಮೂಲದ ದೇವರಾಜು ಮತ್ತು ದೇವೇಂದ್ರಪ್ಪ ಗಾರೆ ಕೆಲಸಗಾರರಾಗಿದ್ದು, ಪಿಇಎಸ್‌ ಕಾಲೇಜಿನ ನಿರ್ಮಾಣ ಹಂತದ ಕಟ್ಟಡದಲ್ಲೇ ನೆಲೆಸಿದ್ದರು. ಹೊಸ ವರ್ಷದ(New year) ಹಿನ್ನೆಲೆಯಲ್ಲಿ ಶನಿವಾರ ತಡರಾತ್ರಿವರೆಗೂ ಸ್ನೇಹಿತರ ಜತೆಗೆ ಪಾರ್ಟಿ ಮಾಡಿದ್ದಾರೆ. ಸ್ನೇಹಿತರಿಗೆ ಹೊಸವರ್ಷದ ಶುಭಾಶಯ ಹೇಳುವ ಸಲುವಾಗಿ ದೇವರಾಜು, ದೇವೇಂದ್ರಪ್ಪನನ್ನು ಕರೆದುಕೊಂಡು ದ್ವಿಚಕ್ರ ವಾಹನದಲ್ಲಿ ಗುಡ್ಡದಹಳ್ಳಿಗೆ ತೆರಳುತ್ತಿದ್ದ. ಗೋಪಾಲನ್‌ ಬಳಿಯ ಬಸ್‌ ನಿಲ್ದಾಣದ ಬಳಿ ಹೋಗುವಾಗ ಹಿಂದಿನಿಂದ ವೇಗವಾಗಿ ಬಂದ ಮಿನಿ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನ ಸಹಿತ ರಸ್ತೆಗೆ ಬಿದ್ದ ದೇವರಾಜು ಮತ್ತು ದೇವೇಂದ್ರಪ್ಪ ಇಬ್ಬರಿಗೂ ಗಂಭೀರ ಪೆಟ್ಟು ಬಿದ್ದಿದೆ.

ಈ ವೇಳೆ ಸ್ಥಳೀಯರು ಇಬ್ಬರು ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಹೊಟ್ಟೆಭಾಗಕ್ಕೆ ಗಂಭೀರ ಗಾಯವಾಗಿದ್ದ ಸವಾರ ದೇವರಾಜು ಮಾರ್ಗ ಮಧ್ಯೆಯೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಹಿಂಬದಿ ಸವಾರ ದೇವೇಂದ್ರಪ್ಪನ ಎರಡು ಕಾಲುಗಳಿಗೆ ಗಂಭೀರ ಪೆಟ್ಟು ಬಿದ್ದಿದ್ದು, ಚಿಕಿತ್ಸೆ ಮುಂದುವರೆದಿದೆ. ಘಟನೆ ಬಳಿಕ ಮಿನಿ ಲಾರಿ ಚಾಲಕ ವಾಹನದೊಂದಿಗೆ ಪರಾರಿಯಾಗಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ. ಚಿಕ್ಕಪೇಟೆ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು ಐಕಿಯಾದಲ್ಲಿ ಹೃದಯಾಘಾತ: ಶಾಪಿಂಗ್ ಬಂದ ವೈದ್ಯರಿಂದ ವ್ಯಕ್ತಿಯ ರಕ್ಷಣೆ

ಪಕ್ಕದ ಕಟ್ಟಡಕ್ಕೆ ಜಿಗಿಯುವಾಗ ಬಿದ್ದು ಪಾನಮತ್ತ ವ್ಯಕ್ತಿ ಸಾವು

ಬೆಂಗಳೂರು: ಹೊಸ ವರ್ಷದ ಆಚರಣೆ ವೇಳೆ ಮದ್ಯದ ಅಮಲಿನಲ್ಲಿ ಪಕ್ಕದ ಕಟ್ಟಡಕ್ಕೆ ಜಿಗಿಯಲು ಹೋಗಿ ಆಯತಪ್ಪಿ ಮೂರನೇ ಮಹಡಿಯಿಂದ ಕೆಳಗೆ ಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಒಡಿಶಾ ಮೂಲದ ಬಾಪಿ (29) ಮೃತ ದುರ್ದೈವಿ. ಕೆಲವು ವರ್ಷಗಳ ಹಿಂದೆ ಉದ್ಯೋಗ ಅರಸಿ ನಗರಕ್ಕೆ ಬಂದಿದ್ದ ಬಾಪಿ, ಕೊಟ್ಟಿಗೆಪಾಳ್ಯದಲ್ಲಿ ಸಹೋದರ ಮತ್ತು ಸ್ನೇಹಿತರ ಜತೆಗೆ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ಕಾಮಾಕ್ಷಿಪಾಳ್ಯದಲ್ಲಿ ಖಾಸಗಿ ಕಂಪನಿಯಲ್ಲಿ ಮಷಿನ್‌ ಆಪರೇಟರ್‌ ಆಗಿದ್ದ. ಬಾಪಿ ಕಟ್ಟಡದ ಮೂರನೇ ಮಹಡಿಯಲ್ಲಿ ನೆಲೆಸಿದ್ದ. ಈ ಕಟ್ಟಡದ ಪಕ್ಕದ ಕಟ್ಟಡದಲ್ಲಿ ಸ್ನೇಹಿತರು ನೆಲೆಸಿದ್ದರು. ಮೂರು ಅಂತಸ್ತಿನ ಕಟ್ಟಡ ಇಳಿದು ಹತ್ತುವ ಬದಲು ಬಾಪಿ ಅಡುಗೆ ಮನೆ ಕಿಟಕಿ ಮೂಲಕ ಎರಡು ಅಡಿ ಅಂತರದಲ್ಲಿದ್ದ ಸ್ನೇಹಿತರ ಕಟ್ಟಡದ ಟೆರೇಸ್‌ಗೆ ಹೋಗಿ ಬರುತ್ತಿದ್ದ ಎಂದು ತಿಳಿದು ಬಂದಿದೆ.

ಸ್ನೇಹಿತರು ಶನಿವಾರ ತಡರಾತ್ರಿ 1.30ರ ಸುಮಾರಿಗೆ ಕಟ್ಟಡದ ಟೆರೇಸ್‌ ಮೇಲೆ ಹೊಸ ವರ್ಷಾಚರಣೆ ಪಾರ್ಟಿ ಮಾಡುತ್ತಿದ್ದರು. ಇದಕ್ಕೂ ಮುನ್ನ ಬಾಪಿ, ಹೊರಗಡೆ ಹೋಗಿ ಪಾರ್ಟಿ ಮಾಡಿಕೊಂಡು ಕಂಠಮಟ್ಟಮದ್ಯ ಕುಡಿದು ಮನೆಗೆ ಬಂದಿದ್ದ. ಸ್ನೇಹಿತರ ಕಟ್ಟಡದ ಟೆರೇಸ್‌ ಮೇಲೆ ಪಾರ್ಟಿ ಮಾಡುತ್ತಿದ್ದರಿಂದ ಅಲ್ಲಿಗೆ ಕಿಟಕಿ ಮೂಲಕ ತೆರಳಲು ಯತ್ನಿಸಿದಾಗ ಮದ್ಯದ ನಶೆಯಲ್ಲಿ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ತಕ್ಷಣ ಸ್ನೇಹಿತರು ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ

ಅಮಲಿನಲ್ಲಿ ತಾಯಿಗೆ ಬೈದ ಗೆಳೆಯನಿಗೆ ಇರಿದ ಸ್ನೇಹಿತ

ಬೆಂಗಳೂರು: ಹೊಸ ವರ್ಷದ ಪಾರ್ಟಿ ವೇಳೆ ಮದ್ಯದ ಅಮಲಿನಲ್ಲಿ ತಾಯಿಯ ಬಗ್ಗೆ ಕೆಟ್ಟದಾಗಿ ಬೈದ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಸ್ನೇಹಿತನಿಗೆ ಚಾಕುವಿನಿಂದ ಇರಿದಿರುವ ಘಟನೆ ಪೀಣ್ಯ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪೀಣ್ಯ 4ನೇ ಬ್ಲಾಕ್‌ ನಿವಾಸಿ ಪ್ರಶಾಂತ್‌(30) ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಭಾನುವಾರ ಮುಂಜಾನೆ 1.30ರ ಸುಮಾರಿಗೆ ಈ ಘಟನೆ ನಡೆದಿದೆ. ಈ ಸಂಬಂಧ ಆರೋಪಿ ಪ್ರಶಾಂತ್‌(31) ಎಂಬಾತನನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

Bengaluru: ಹೊಸ ವರ್ಷದ ಪಾರ್ಟಿಗೆಂದು ತಂದಿದ್ದ 2 ಕ್ವಿಂಟಲ್‌ ಡ್ರಗ್ಸ್‌ ವಶ: ಇಬ್ಬರ ಬಂಧನ

ಗಾಯಾಳು ಹಾಗೂ ಆರೋಪಿ ಇಬ್ಬರು ಅಕ್ಕಪಕ್ಕದ ನಿವಾಸಿಗಳಾಗಿದ್ದು, ಸ್ನೇಹಿತರಾಗಿರುವ ಇವರು ಪೇಯಿಂಟ್‌ ಕೆಲಸ ಮಾಡುತ್ತಿದ್ದರು. ಹೊಸ ವರ್ಷದ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ಆರೋಪಿ ಪ್ರಶಾಂತ್‌ ಮನೆ ಬಳಿ ಇಬ್ಬರು ಮದ್ಯ ಸೇವಿಸಿ ಪಾರ್ಟಿ ಮಾಡಿದ್ದಾರೆ. ಮದ್ಯದ ಅಮಲಿನಲ್ಲಿ ಮಾತನಾಡುವಾಗ ಪ್ರಶಾಂತ್‌, ಆರೋಪಿ ಪ್ರಶಾಂತ್‌ ತಾಯಿ ಬಗ್ಗೆ ಅವಾಚ್ಯ ಶಬ್ದದಿಂದ ಬೈದಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಜಗಳ ಶುರುವಾಗಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಆರೋಪಿ ಪ್ರಶಾಂತ್‌, ತನ್ನ ಬಳಿಯಿದ್ದ ಚಾಕು ತೆಗೆದು ಪ್ರಶಾಂತ್‌ ಮುಖಕ್ಕೆ ಇರಿದು ಪರಾರಿಯಾಗಿದ್ದಾನೆ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. ಪೀಣ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!