ಬಜೆಟ್‌ ಅಧಿವೇಶನದಲ್ಲಿ ಎನ್‌ಪಿಎಸ್‌ ಚರ್ಚೆ: ಸಚಿವ ಸುಧಾಕರ್‌

By Govindaraj SFirst Published Jan 2, 2023, 3:40 AM IST
Highlights

ಮುಂದಿನ ಬಜೆಟ್‌ ಅಧಿವೇಶನದ ವೇಳೆ ಎನ್‌ಪಿಎಸ್‌ ರದ್ದತಿ ಹಾಗೂ ಒಪಿಎಸ್‌ ಮರು ಜಾರಿ ಕುರಿತ ನೌಕರರ ಬೇಡಿಕೆ ಬಗ್ಗೆ ಚರ್ಚಿಸಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಸರ್ಕಾರದ ಪರವಾಗಿ ಹೋರಾಟಗಾರರಿಗೆ ಭರವಸೆ ನೀಡಿದ್ದಾರೆ. 

ಬೆಂಗಳೂರು (ಜ.02): ಮುಂದಿನ ಬಜೆಟ್‌ ಅಧಿವೇಶನದ ವೇಳೆ ಎನ್‌ಪಿಎಸ್‌ ರದ್ದತಿ ಹಾಗೂ ಒಪಿಎಸ್‌ ಮರು ಜಾರಿ ಕುರಿತ ನೌಕರರ ಬೇಡಿಕೆ ಬಗ್ಗೆ ಚರ್ಚಿಸಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಸರ್ಕಾರದ ಪರವಾಗಿ ಹೋರಾಟಗಾರರಿಗೆ ಭರವಸೆ ನೀಡಿದ್ದಾರೆ. ಅವರು ಭಾನುವಾರ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನೇತೃತ್ವದಲ್ಲಿ ಎನ್‌ಪಿಎಸ್‌ ರದ್ದತಿಗೆ ಒತ್ತಾಯಿಸಿ 14 ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವ ಹೋರಾಟಗಾರರನ್ನು ಭೇಟಿ ಮಾಡಿ ಮಾತನಾಡಿದರು.

ಮುಖ್ಯಮಂತ್ರಿಗಳು ಸರ್ಕಾರಿ ನೌಕರರ ಸ್ಥಿತಿಗತಿ ಅರ್ಥೈಸಿಕೊಂಡು ಈಗಾಗಲೆ 7ನೇ ವೇತನ ಆಯೋಗ ರಚನೆ ಮಾಡಿದ್ದಾರೆ. ಅದರ ಶಿಫಾರಸ್ಸಿನ ಬಳಿಕ ನೌಕರರಿಗೆ ಹೆಚ್ಚಿನ ಅನುಕೂಲ ಆಗಲಿದೆ. ಮುಂದಿನ ಬಜೆಟ್‌ ಅಧಿವೇಶನ ಅಥವಾ ರಾಜ್ಯಪಾಲರ ಭಾಷಣದ ಮೇರೆಗೆ ನಡೆಯುವ ಸದನ ಸಭೆಯಲ್ಲಿ ಮುಖ್ಯಮಂತ್ರಿಗಳು ಎನ್‌ಪಿಎಸ್‌ ವಿಚಾರದ ಬಗ್ಗೆ ಚರ್ಚೆ ನಡೆಸಲಾಗುವುದು. ಅದನ್ನು ಹೊರತುಪಡಿಸಿ ಸಂಘದ ಪದಾಧಿಕಾರಿಗಳ ಜೊತೆ ಮಾತನಾಡುವುದಾಗಿ ತಿಳಿಸಿದ್ದಾರೆ ಎಂದರು.

ಕೋವಿಡ್‌ ಹೆಸರಿನಲ್ಲಿ ಯಾವುದೇ ಆರ್ಥಿಕ ಚಟುವಟಿಕೆಗಿಲ್ಲ ನಿರ್ಬಂಧ: ಸಚಿವ ಸುಧಾಕರ್‌

ಎಲ್ಲ ಪಕ್ಷಗಳ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಸದ್ಯದ ಆರ್ಥಿಕ ಸ್ಥಿತಿಗತಿಗಳು ಹಾಗೂ ಒಪಿಎಸ್‌ ಜಾರಿ ಕುರಿತ ಕಾರ್ಯಸಾಧು ಕುರಿತು ಚರ್ಚಿಸಲಾಗುವುದು. ಜೊತೆಗೆ ರಾಷ್ಟ್ರೀಯ ಮಟ್ಟದಲ್ಲಿ ಯಾವ ರೀತಿ ಮಾತುಕತೆ ನಡೆಸಬೇಕು ಎಂಬುದರ ಬಗ್ಗೆ ಮುಂದಿನ ಸದನದಲ್ಲಿ ಮಾತುಕತೆ ನಡೆಸಲಿದ್ದೇವೆ. ಸರ್ಕಾರ ನೌಕರರ ಪರವಾಗಿದ್ದು, ಧರಣಿ ಕೈ ಬಿಟ್ಟು ಆಡಳಿತ ಯಂತ್ರ ಸುಗಮವಾಗಿ ನಡೆಯುವಂತೆ ಅವಕಾಶ ನೀಡಬೇಕು. ಚರ್ಚೆಗೆ ಅವಕಾಶ ಕೊಟ್ಟು ಸಹಕಾರ ನೀಡಬೇಕು ಎಂದರು.

ರಾಜ್ಯದಲ್ಲಿ ಆರೂವರೆ ಕೋಟಿಗಿಂತ ಹೆಚ್ಚು ಜನಸಂಖ್ಯೆ ಇರುವ ನಮ್ಮ ರಾಜ್ಯದಲ್ಲಿ ಬಜೆಟ್‌ ಗಾತ್ರ ಎರಡೂವರೆ ಲಕ್ಷ ಕೋಟಿ ರು. ಇದೆ. ಇದರಲ್ಲಿ ಸರ್ಕಾರಿ ನೌಕರರಿಗೆ ನೀಡುವ ವೇತನ ಶೇ.50 ರಷ್ಟಿದೆ. ಹೀಗಿರುವಾಗ ಅಭಿವೃದ್ಧಿ ಕಾರ್ಯಗಳಿಗೆ ಪ್ರಾಶಸ್ತ್ಯ ನೀಡುವುದು ಹೇಗೆ ಎಂಬ ಪ್ರಶ್ನೆಯೂ ಇದೆ. ಒಂದೆರಡು ರಾಜ್ಯದಲ್ಲಿ ಒಪಿಎಸ್‌ ಮರು ಜಾರಿಗೆ ಆದೇಶ ಆಗಿದ್ದರೂ ಅನುಷ್ಠಾನ ಆಗಿರುವ ಬಗ್ಗೆ ಪರಾಮರ್ಶೆ ಆಗಬೇಕಿದೆ ಎಂದರು.

ಜೆಡಿಎಸ್‌, ಕಾಂಗ್ರೆಸ್‌ ಯಾತ್ರೆಗೆ ತೊಂದರೆ ಮಾಡಲ್ಲ: ಸಚಿವ ಸುಧಾಕರ್‌

ಜನಾರ್ದನ ರೆಡ್ಡಿ ಭೇಟಿ: ಮಾಜಿ ಸಚಿವ ಜನಾರ್ದನ ರೆಡ್ಡಿ ಆಗಮಿಸಿ ಮುಂದಿನ ಚುನಾವಣೆಯಲ್ಲಿ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ನೌಕರರ ಬೇಡಿಕೆಯನ್ನು ಸೇರ್ಪಡೆ ಮಾಡುತ್ತೇನೆ ಎಂದು ಬೆಂಬಲ ನೀಡಿದರು. ವಿಧಾನಪರಿಷತ್‌ ಸದಸ್ಯ ಆಯನೂರು ಮಂಜುನಾಥ ಮಾತನಾಡಿದರು. ಎನ್‌ಪಿಎಸ್‌ ನೌಕರರ ಸಂಘದ ಅಧ್ಯಕ್ಷ ಶಾಂತಾರಾಮ, ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ಗುರುಸ್ವಾಮಿ, ಪಿಯು ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ನಿಂಗೇಗೌಡರು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಚಂದ್ರಶೇಖರ್‌ ನುಗ್ಲಿ, ಸಿದ್ದಪ್ಪ ಸಂಗಣ್ಣ, ನಾಗನಗೌಡ ಸೇರಿ ಇತರರಿದ್ದರು.

click me!