
ಬೆಂಗಳೂರು (ಸೆ.6): ಆರೋಗ್ಯ ವಿಮೆಯ ಮೇಲಿನ ಶೇ 18 ರಷ್ಟು ಜಿ.ಎಸ್.ಟಿಯನ್ನ ಮರು ಪರಿಶೀಲಿಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಒತ್ತಾಯಿಸಿದ್ದಾರೆ.
ಸೆಪ್ಟೆಂಬರ್ 9 ರಂದು ಸಭೆ ಸೇರಲಿರುವ GST ಕೌನ್ಸಿಲ್‌ಗೆ ಮಧ್ಯಮ ಮತ್ತು ಕಡಿಮೆ ಆದಾಯದ ಪಾಲಿಸಿದಾರರಿಗೆ ಆರೋಗ್ಯ ವಿಮೆಯ ಮೇಲಿನ 18% ತೆರಿಗೆಯನ್ನು ಮರು ಪರಿಶೀಲಿಸುವಂತೆ ಶಿಫಾರಸು ಮಾಡುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಕೋಲಾರದ ಸೊಪ್ಪು, ತರಕಾರಿಗಳಲ್ಲಿ ರಾಸಾಯನಿಕ ಅಂಶಗಳಿಲ್ಲ: ದಿನೇಶ್ ಗುಂಡೂರಾವ್
ಆರೋಗ್ಯ ವಿಮೆ ಮೇಲೂ ಶೇ 18 ರಷ್ಟು ಜಿಎಸ್.ಟಿ ತೆರಿಗೆ ಹಾಕುವುದು ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ರಿದೆ. ಹೆಚ್ಚಿನ ತೆರಿಗೆಯಿಂದಾಗಿ ಹೆಲ್ತ್ ಇನ್ಸೂರೆನ್ಸ್ ಪ್ರೀಮಿಯಂ ದುಬಾರಿಯಾಗಿದ್ದು, ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಸಿಗುತ್ತಿಲ್ಲ. ಬಹುತೇಕ ಮಧ್ಯಮ ವರ್ಗದವರು ಇಂದು ಆರೋಗ್ಯ ವಿಮೆಗಳಿಂದ ದೂರವೇ ಉಳಿಯುತ್ತಿದ್ದಾರೆ. ಆದರೆ ವೈದ್ಯಕೀಯ ತುರ್ತು ಪರಿಸ್ಥಿತಿಗಳ ಸಂದರ್ಭಗಳಲ್ಲಿ ಆರೋಗ್ಯ ವಿಮೆಯ ರಕ್ಷಣೆ ಸಿಗದೆ ಇಡೀ ಕುಟುಂಬ ವರ್ಗವೇ ಆರ್ಥಿಕ ಸಂಕಷ್ಟಕ್ಕೆ ಸಿಲುಕುವುದನ್ನ ನಾವು ಕಾಣುತ್ತಿದ್ದೇವೆ ಎಂದು ಸಚಿವ ದಿನೇಶ್ ಗುಂಡೂರಾವ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸಾರ್ವತ್ರಿಕ ಆರೋಗ್ಯ ರಕ್ಷಣೆಗೆ ಸರ್ಕಾರಗಳು ಸತತ ಪ್ರಯತ್ನಗಳನ್ನ ಮುಂದುವರಿಸಿವೆ. ದೇಶದಲ್ಲಿ ಆಯುಷ್ಮಾನ್ ಭಾರತ್ ಯೋಜನೆ ಜಾರಿಗೆ ಬರುವ ಮೊದಲೇ ಕರ್ನಾಟಕದಲ್ಲಿ ನಾವು 2018 ರಲ್ಲೇ ಆರೋಗ್ಯ ಕರ್ನಾಟಕ ಯೋಜನೆಯನ್ನ ಜಾರಿಗೊಳಿಸಿದ್ದೆವು. ಕೇಂದ್ರ ಸರ್ಕಾರವು "2047 ರ ವೇಳೆಗೆ ಸಾರ್ವತ್ರಿಕ ವಿಮಾ ಕವರೇಜ್" ಗುರಿಯೊಂದಿಗೆ ರಾಷ್ಟ್ರವ್ಯಾಪಿ ಮಿಷನ್ ಪ್ರಾರಂಭಿಸಿದೆ.. ಆದರೆ ಆರೋಗ್ಯ ವಿಮೆಯನ್ನು ಸಂಪೂರ್ಣವಾಗಿ ನಿರಾಕರಿಸುವಷ್ಟು ಹೆಚ್ಚಿನ ದರದಲ್ಲಿ ತೆರಿಗೆ ವಿಧಿಸುವುದು ವಿಪರ್ಯಾಸ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
2017 ರಿಂದಲೂ ಆರೋಗ್ಯ ವಿಮೆಯ ಮೇಲೆ ಶೇ 18 ರಷ್ಟು ಜಿಎಸ್.ಟಿ ಹೇರಲಾಗಿದೆ. GST ಯ ಹೆಚ್ಚಿನ ದರವು ಪ್ರೀಮಿಯಂಗಳ ವೆಚ್ಚದ ಮೇಲೆ ನೇರ ಪರಿಣಾಮ ಬೀರುತ್ತದೆ.
ಪರಿಣಾಮ ಆರೋಗ್ಯ ವಿಮೆಯು ಈಗ ಹೆಚ್ಚು ದುಬಾರಿಯಾಗಿದೆ. ಹೆಚ್ಚುತ್ತಿರುವ ವೆಚ್ಚವು ಆರ್ಥಿಕ ದುರ್ಬಲ ವರ್ಗಗಳ ಮೇಲೆ ವಿನಾಶಕಾರಿ ಪರಿಣಾಮವನ್ನು ಬೀರುತ್ತದೆ, ಅವರಿಗೆ ಪ್ರೀಮಿಯಂನಲ್ಲಿ ಸ್ವಲ್ಪ ಹೆಚ್ಚಳವಾದರೂ ಅದನ್ನು ಖರೀದಿಸಲು ಸಾಧ್ಯವಿಲ್ಲ. ಹೀಗಾಗಿ ಆರೋಗ್ಯ ವಿಮೆಗಳನ್ನ ಜನರು ತಿರಸ್ಕರಿಸುತ್ತಿದ್ದಾರೆ. ವಿಮಾ ರಕ್ಷಣೆಯಿಂದ ವಂಚಿತರಾಗುತ್ತಿದ್ದಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ರಾಜ್ಯಪಾಲರು ಕರ್ನಾಟಕದ ಜನತೆ ಮೇಲೆ ಮಾಡಿರುವ ರಾಜಕೀಯ ದಾಳಿಯನ್ನು ಖಂಡಿಸಬಾರದಾ?: ಸಚಿವ ಗುಂಡೂರಾವ್
ಆರೋಗ್ಯ ವಿಚಾರಗಳಲ್ಲಿ ತೆರಿಗೆ ನೀತಿಗಳು ಜನಪರವಾಗಿರಬೇಕು.. ತೆರಿಗೆ ಪ್ರಮಾಣವನ್ನ ಕಡಿತಗೊಳಿಸುವುದರಿಂದ ಹೆಚ್ಚಿನ ಸಂಖ್ಯೆಯ ಜನರು ಆರೋಗ್ಯ ವಿಮೆಯ ರಕ್ಷಣೆ ಪಡೆಯುವಂತೆ ಪ್ರೋತ್ಸಾಹಿಸಬಹುದು. ಇದರಿಂದ ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗಗಳ ಆರ್ಥಿಕ ಸ್ಥಿತಿಯನ್ನು ಕಾಪಾಡಬಹುದಾಗಿದೆ.. 2047 ರ ವೇಳೆಗೆ ಯುನಿವರ್ಸಲ್ ಇನ್ಸೂರೆನ್ಸ್ ಎಂಬ ಆಶಯವನ್ನ ಸಾಧಿಸುವತ್ತ ಧನಾತ್ಮಕ ಹೆಜ್ಜೆ ಇಡಬೇಕೆಂದು ಸಚಿವ ದಿನೇಶ್ ಗುಂಡೂರಾವ್ ಪತ್ರದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ